ಬೆಂಗಳೂರು, (ಮಾರ್ಚ್ 22): ಲೋಕಸಭಾ ಚುನಾವಣೆಗೆ (Loksabha Elections 2024) ಕರ್ನಾಟಕದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಕಾಂಗ್ರೆಸ್, ಬಿಜೆಪಿ ಈಗಾಗಲೇ ರಾಜ್ಯದ ಪ್ರಮುಖ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದು, ಎರಡೂ ಪಕ್ಷದ ನಾಯಕರು ಮತಬೇಟೆಗೆ ಇಳಿದಿದ್ದಾರೆ. ಬಿಜೆಪಿ ಮೊದಲ ಪಟ್ಟಿಯಲ್ಲೇ ಕರ್ನಾಟಕದ 20 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು, ಇನ್ನೂ ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿದೆ. ಇನ್ನು ಕಾಂಗ್ರೆಸ್ ಎರಡು ಪಟ್ಟಿಯನ್ನು ಪ್ರಕಟಿಸಿದ್ದು, ಒಟ್ಟು 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.ಇದೀಗ ಬಾಕಿ ಉಳಿದಿರುವ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಫೈನಲ್ ಆಗಿದ್ದು, ಕೊನೆಯ ಸುತ್ತಿನ ಚರ್ಚೆ ಮಾತ್ರ ಬಾಕಿ ಉಳಿದಿದೆ.
ಬಾಕಿ ಉಳಿದಿದ್ದ ಚಾಮರಾಜನಗರ, ಕೋಲಾರ, ಬಳ್ಳಾರಿ, ಚಿಕ್ಕಬಳ್ಳಾಪುರದ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿದ್ದು, ಇಂದು ರಾತ್ರಿ ಇಲ್ಲ ನಾಳೆ(ಮಾರ್ಚ್ 23) ನಾಲ್ಕು ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಕೋಲಾರದಲ್ಲಿ ಬಣ ಬಡಿದಾಟದಿಂದ ಕಗ್ಗಂಟು ಏರ್ಪಟ್ಟಿದ್ದರಿಂದ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದೀಗ ಅಂತಿಮ ಹಂತಕ್ಕೆ ಬಂದಿದೆ ಎಂದು ತಿಳಿದಬಂದಿದೆ.
ಕೋಲಾರ ಟಿಕೆಟ್ ವಿಚಾರಕ್ಕೆ ಸಚಿವ ಕೆ.ಹೆಚ್. ಮುನಿಯಪ್ಪನವರು ಡಿಸಿಎಂ ಶಿವಕುಮಾರ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿದ್ದಾರೆ. ನನ್ನ ಅಳಿಯನಿಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದೇನೆ. ಮಾಜಿ ಸಚಿವ ರಮೇಶ್ ಕುಮಾರ್ ಸೇರಿದಂತೆ ಯಾರ ವಿರುದ್ಧವೂ ನಾನು ಮಾತಾಡಿಲ್ಲ. ಭಿನ್ನಾಭಿಪ್ರಾಯ ಸರಿ ಮಾಡ್ಕೊಂಡು ಹೋಗ್ತೇವೆ ಎಂದು ಮುನಿಯಪ್ಪ ಹೇಳಿದ್ದಾರೆ.
ಚಾಮರಾಜನಗರಕ್ಕೆ ಸಚಿವ ಮಹಾದೇವಪ್ಪ ಪುತ್ರ ಸುನಿಲ್ ಬೋಸ್, ಕೋಲಾರಕ್ಕೆ ಎಲ್. ಹನುಮಂತಯ್ಯ, ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ ಹಾಗೂ ಬಳ್ಳಾರಿಗೆ ತುಕಾರಾಂ ಹೆಸರು ಅಂತಿಮವಾಗುವ ಸಾಧ್ಯತೆ ಇದ್ದು, ಕೊನೆಯ ಸುತ್ತಿನ ಚರ್ಚೆ ಮಾತ್ರ ಬಾಕಿ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.