ಬರದ ನಾಡಿನಲ್ಲಿ ರೈತನ ವಿನೂತನ ಪ್ರಯೋಗ: ಕಡಿಮೆ ಹಣದಲ್ಲಿ ದೊಡ್ಡ ಬೆಳೆ ತೆಗೆದ ರೈತ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 10, 2020 | 3:50 PM

ಕೋಲಾರದ ಬಡ ರೈತನೊಬ್ಬ ಸಿದ್ಧಪಡಿಸಿದ ನ್ಯೂಸ್​ ಪೇಪರ್​ ಪ್ಲ್ಯಾನ್ ಈಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇದು ದುಬಾರಿ ಕೃಷಿಯಿಂದ ರೈತರನ್ನು ಪಾರುಮಾಡುವ ವಿಧಾನ ಎಂದೂ ಕರೆಯಲ್ಪಡುತ್ತಿದೆ. ಹಾಗಾದರೆ, ಏನದು ಹೊಸ ವಿಧಾನ? ಇಲ್ಲಿದೆ ಮಾಹಿತಿ.

ಬರದ ನಾಡಿನಲ್ಲಿ ರೈತನ ವಿನೂತನ ಪ್ರಯೋಗ: ಕಡಿಮೆ ಹಣದಲ್ಲಿ ದೊಡ್ಡ ಬೆಳೆ ತೆಗೆದ ರೈತ
ಹೊಸ ವಿಧಾನ ಆವಷ್ಕರಿಸಿದ ಕೋಲಾರದ ರೈತ
Follow us on

ಕೋಲಾರ: ಕೋಲಾರ ಅಂದರೆ ನದಿ ನಾಲೆಗಳಿಲ್ಲದ ಮಳೆ ಆಧಾರಿತ ಜಿಲ್ಲೆ.ಇಲ್ಲಿನ ರೈತರು ಬೋರ್​ವೆಲ್​ಗಳ ಮೇಲೆ, ಮಳೆಯ ಮೇಲೆ ಅವಲಂಬಿತರಾಗಿ ಕೃಷಿ ಮಾಡುತ್ತಾ ಬಂದಿದ್ದಾರೆ. ಹಾಗಾಗಿ ಹನಿ ಹನಿ ನೀರಿಗೂ ಇಲ್ಲಿ ಬೆಲೆ ಇದೆ. ಅದಕ್ಕಾಗಿಯೇ ಕೋಲಾರ ತಾಲ್ಲೂಕು ಜನ್ನಘಟ್ಟ ಗ್ರಾಮದ ರೈತ ಚಂದ್ರಪ್ಪ ತಮ್ಮ ಗದ್ದೆಯಲ್ಲಿ ಹೊಸದೊಂದು ಪ್ರಯೋಗ ಮಾಡಿದ್ದಾರೆ.

ನದಿ ನಾಲೆಗಳಿಲ್ಲದೆ, ಅಂತರ್ಜಲ ಪಾತಾಳ ಸೇರಿರುವ ಕೋಲಾರ ಜಿಲ್ಲೆಯಲ್ಲಿ ಹನಿ ಹನಿ ನೀರಿಗೂ ರೈತರು ಪರದಾಡುವ ಪರಿಸ್ಥಿತಿ ಇದೆ. ಹೀಗಿರುವಾಗ, ಅಲ್ಪ ನೀರಲ್ಲಿ ಮಾದರಿ ಕೃಷಿ ಮಾಡುತ್ತಿರುವ ರೈತ ಚಂದ್ರಪ್ಪ ಹೊಸದೊಂದು ಕೃಷಿ ವಿಧಾನವನ್ನು ಆವಿಷ್ಕಾರ ಮಾಡಿದ್ದಾರೆ.

ಬಯಲು ಸೀಮೆ ಜಿಲ್ಲೆಯಲ್ಲಿ ಬೆಳೆಗಳಿಗೆ ಹಾಯಿಸಿದ ನೀರು ಬೇಗ ಇಂಗದಂತೆ, ಬೆಳೆಗಳ ಮಧ್ಯೆ ಕಳೆ ಬಾರದಂತೆ, ಪೊಷಕಾಂಶಗಳು ಸಮರ್ಪಕವಾಗಿ ಬಳಕೆಯಾಗಲು ದುಬಾರಿ ಪ್ಲಾಸ್ಟಿಕ್​ ಮಲ್ಚಿಂಗ್​ ಪೇಪರ್​ ಬಳಸುತ್ತಾರೆ. ಆದರೆ, ಚಂದ್ರಪ್ಪ ಇದರ ಬದಲಾಗಿ, ನ್ಯೂಸ್​ ಪೇಪರ್​ ಬಳಕೆ ಮಾಡಿ ಕಡಿಮೆ ಹಣದಲ್ಲಿ ಹೆಚ್ಚು ಬೆಳೆ ಬೆಳೆಯುವ ಮೂಲಕ ಹೊಸ ಆವಿಷ್ಕಾರಕ್ಕೆ ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ: ಬರದ ತವರು ಕೋಲಾರದಲ್ಲಿ ನೀರಾ‘ವರಿ’ ಇಲ್ಲದೆ ಬಂಗಾರದಂಥ ಬೆಳೆ ತೆಗೆಯುತ್ತಿರುವ ಕೃಷಿಕ!

ಹಣ ಉಳಿತಾಯ: ಮಲ್ಚಿಂಗ್​ ಪೇಪರ್​ ಹಾಕಿದರೆ ಎಕರೆ ಒಂದಕ್ಕೆ ಸುಮಾರು 18-20 ಸಾವಿರ ಖರ್ಚು ಬರುತ್ತದೆ. ಅದೇ ಜಾಗದಲ್ಲಿ ನ್ಯೂಸ್​ ಪೇಪರ್​ ಬಳಸಿದರೆ ಕೇವಲ ಮೂರು ಸಾವಿರ ರೂಪಾಯಿಯಲ್ಲಿ ಕೆಲಸ ಮುಗಿದು ಬಿಡುತ್ತದೆ ಅನ್ನೋದು ರೈತ ಚಂದ್ರಪ್ಪ ಅವರ ಅಭಿಪ್ರಾಯ.

ಪೇಪರ್​​ ಬಳಕೆಯಿಂದ ಇದೆ ಲಾಭ: ಅಧಿಕ ಬಂಡವಾಳ ಹಾಕಿ ಬೆಳೆ ಬೆಳೆದು ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕುವ ಸಾಕಷ್ಟು ರೈತರಿದ್ದಾರೆ. ಆದರೆ, ಪೇಪರ್​ ಬಳಕೆಯಿಂದ ಹಣ ಕಡಿಮೆ ಖರ್ಚಾಗುತ್ತದೆ. ಜೊತೆಗೆ ಪೇಪರ್​ ಬಳಕೆಯಿಂದ ಭೂಮಿ ಕಲುಶಿತವಾಗುವುದಿಲ್ಲ. ಬೆಳೆ ಮುಗಿದ ನಂತರ ಪೇಪರ್​ ಅದೇ ಮಣ್ಣಿನಲ್ಲಿ ಗೊಬ್ಬರವಾಗಿ ಪರಿವರ್ತನೆ ಯಾಗುತ್ತದೆ. ಇದರಿಂದ ರೈತರಿಗೆ ಒಂದಲ್ಲ ಎರಡಲ್ಲ ಹತ್ತಾರು ಅನುಕೂಲಗಳ ಜೊತೆಗೆ ಒಳ್ಳೆಯ ಬೆಳೆ ಬರುತ್ತದೆ ಅನ್ನೋದು ರೈತರು ಹಾಗೂ ಅಧಿಕಾರಿಗಳ ಅಭಿಪ್ರಾಯ.

ನೀರಿಲ್ಲದೆ ಬರದ ನಾಡಲ್ಲೂ ಕೃಷಿ ಮಾಡುತ್ತಿರುವ ರೈತರು ಪ್ರಕೃತಿಗೆ ಸವಾಲಾಗಿ ಸಾಹಸ ಕೃಷಿಯನ್ನು ಮಾಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಈ ರೈತನ ಆವಿಷ್ಕಾರ ನೋಡುಗರಿಗೆ ಸಣ್ಣದೆನಿಸಿದರೂ ಇದರ ಪ್ರಯೋಜನ ಮಾತ್ರ ಬಹಳ ದೊಡ್ಡದಿದೆ.

ಇದನ್ನೂ ಓದಿ: ನಿಟ್ಟೂರು ಸ್ವರ್ಣ ಭತ್ತ: ಸುವರ್ಣ ಸಂಭ್ರಮದಲ್ಲಿದ್ದ ಪ್ರೌಢಶಾಲೆಯು ಮಾಡಿದ ಅನನ್ಯ ಸಾಧನೆ ಇದು..

‘ಕಲರ್​ಫುಲ್​​’​ ಭತ್ತ! 5 ಎಕರೆ ಗದ್ದೆಯಲ್ಲಿ ಲಕ್ಷಾಂತರ ಹಣ ಗಳಿಸಿದ ರೈತನ ಸಾಧನೆ ಇದು

Published On - 3:48 pm, Thu, 10 December 20