ಇದು ಜೀವನ | ಬದುಕಿನ ಬಂಡಿ ಎಳೆಯೋಕೆ ತಾಯಿ ಮಗನ ಹರ ಸಾಹಸ: ವಿಜಯಪುರದಲ್ಲೊಂದು ಮನಕಲಕುವ ಕತೆ

ಇಂಥ ಅಪಾಯಕರವಾದ ಪ್ರಯಾಣವನ್ನು ನಿತ್ಯ ಇವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಡುತ್ತಾರೆ. ಸ್ವಲ್ಪ ಆಯತಪ್ಪಿ ಬಿದ್ದರೂ ಜೀವಕ್ಕೆ ಅಪಾಯವಾಗೋದು ಗ್ಯಾರಂಟಿ.

ಇದು ಜೀವನ | ಬದುಕಿನ ಬಂಡಿ ಎಳೆಯೋಕೆ ತಾಯಿ ಮಗನ ಹರ ಸಾಹಸ: ವಿಜಯಪುರದಲ್ಲೊಂದು ಮನಕಲಕುವ ಕತೆ
ಬೈಕ್​ನಲ್ಲಿ ಸಾಗುತ್ತಿರುವ ಅಮ್ಮ-ಮಗ
Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 10, 2020 | 5:00 PM

ವಿಜಯಪುರ: ನಿತ್ಯ ಬದುಕಲು ಸಕಲ ಜೀವಿಗಳು ಸದಾ ಶ್ರಮಿಸುತ್ತಲೇ ಇರುತ್ತವೆ. ಕ್ಷಣಕ್ಷಣವೂ ಹೋರಾಟವನ್ನೂ ಮಾಡುತ್ತವೆ. ಹೊತ್ತಿನ ಚೀಲ ತುಂಬಿಸಿಕೊಳ್ಳಲು ಈ ಹೋರಾಟ ಅನಿವಾರ್ಯ.  ಈ ರೀತಿ ಹೋರಾಟದಲ್ಲಿ ಗುಳೆ ಹೋಗುವವರ ಜಿಲ್ಲೆ ಎಂಬ ಕುಖ್ಯಾತಿ ವಿಜಯಪುರ ಜಿಲ್ಲೆಗಿದೆ.

ಕೆಲಸ ಇಲ್ಲದೆ ಇರುವಾಗ ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಹೆಚ್ಚಿನ ಸಂಖ್ಯೆಯ ಜನರು ಕೂಲಿ ಅರಸಿ ಹೋಗುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇನ್ನು ಕೆಲವರು ಗುಳೆ ಹೋಗದೇ ಇಲ್ಲಿಯೇ ಕಷ್ಟಪಟ್ಟು ಜೀವನ ಮಾಡುತ್ತಾರೆ. ಈ ಸಾಲಿಗೆ ನಿಡಗುಂದಿ ತಾಲೂಕಿನ ಗೋನಾಳ ಗ್ರಾಮದ ತಾಯಿ ಮತ್ತು ಮಗ ಕೂಡ ಸೇರುತ್ತಾರೆ. ಸಂತೋಷ ಶಿರೂರ ಹಾಗೂ ಆತನ ತಾಯಿ ಮಾಯವ್ವ ಶಿರೂರ ಬದುಕನ್ನೇ ಅಡ ಇಟ್ಟಂತೆ ಕೆಲಸ ಮಾಡುತ್ತಿದ್ದಾರೆ.

ಸಂತೋಷ ಶಿರೂರ ಅವರ ಇಡೀ ಕುಟುಂಬ ಕೂಲಿ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದೆ. ಇವರಿಗೆ ಹರಕಲು ಮನೆ ಬಿಟ್ಟರೆ ಉಳುಮೆ ಮಾಡಲು ತುಂಡು ಜಮೀನು ಕೂಡ ಇಲ್ಲ. ಕೊರೊನಾ ಕಾರಣದಿಂದ ಸರಿಯಾಗಿ ಕೆಲಸವೂ ಸಿಗುತ್ತಿಲ್ಲ.

ಜೀವನ ನಡೆಸಲು ಕುರಿ ಹಾಗೂ ಮೇಕೆಗಳನ್ನು ಸಾಕಿದ್ದಾರೆ. ಹಾಲಿಗಾಗಿ ಒಂದೆರಡು ಹಸುಗಳನ್ನು ಕಟ್ಟಿದ್ದರೆ. ಇವೆಲ್ಲಾ ಜಾನುವಾರುಗಳಿಗೆ ಮೇವಿನ ಅವಶ್ಯಕತೆಯಿದೆ. ಸ್ವಂತ ಜಮೀನಿದ್ದರೆ ಮೇವು ಬೆಳೆದು ಹಾಕಬಹುದಿತ್ತು. ಆದರೆ ಸಂತೋಷ ಅವರಿಗೆ ಜಮೀನು ಇಲ್ಲಾ. ಹೀಗಾಗಿ ದಿನಂಪ್ರತಿ ಕುರಿಗಳಿಗೆ, ಮೇಕೆಗಳಿಗೆ, ಹಸುಗಳಿಗೆ ಮೇವು ಮಾಡಲು ಇವರು ಗ್ರಾಮದಿಂದ ನಾಲ್ಕಾರು ಕಿಲೋ ಮೀಟರ್ ದೂರದಲ್ಲಿರುವ ಗೋಮಾಳು ಜಾಗಕ್ಕೆ ತೆರಳುತ್ತಾರೆ. ಅಲ್ಲಿ ಹಸಿ ಹುಲ್ಲನ್ನು ಕತ್ತರಿಸಿ ಹೊರೆಯನ್ನು ಕಟ್ಟಿ ತರುತ್ತಾರೆ.

ಈ ರೀತಿ ಕುರಿಗಳನ್ನು ಮೇಕೆಗಳನ್ನು ಬೆಳೆಸಿ ಮಾರಾಟ ಮಾಡಿ ಅದರಿಂದ ಬರುವ ಹಣದಲ್ಲಿ ಇವರ ಕುಟುಂಬದ ಬಂಡಿ ಸಾಗುತ್ತಿದೆ. ಇನ್ನು ಹಸುವಿನ ಹಾಲು ಇವರಿಗೆ ಆಧಾರವಾಗಿದೆ. ಜಮೀನು ಇಲ್ಲದಿದ್ದರೂ ಈ ರೀತಿ ಕಷ್ಟಪಟ್ಟು ಜಾನುವಾರುಗಳನ್ನು ಸಾಕುವುದು ಮೂಲಕ ಸ್ವಾವಲಂಬಿ ಉದ್ಯೋಗ ಕಟ್ಟಿಕೊಂಡಿದೆ ಈ ಶಿರೂರ ಅವರ ಕುಟುಂಬ.

ಸುಲಭವಿಲ್ಲ ಜೀವನ: ಜಾನುವಾರುಗಳನ್ನು ಸಾಕಲು ತಾಯಿ ಹಾಗೂ ಮಗ ಇಬ್ಬರೂ ತುಂಬಾ ಕಷ್ಟಪಟ್ಟು ಹುಲ್ಲನ್ನು ತರುತ್ತಾರೆ. ನಿತ್ಯ ಬೆಳಿಗ್ಗೆ 5-30 ಕ್ಕೆ ಮನೆಯಿಂದ ಹೊರಟು ಐದಾರು ಕಿಲೋ ಮೀಟರ್​​ ದೂರದಲ್ಲಿನ ಗೋಮಾಳಕ್ಕೆ ಹೋಗುತ್ತಾರೆ. ಅಲ್ಲಿ ಸಿಕ್ಕಂತ ಹುಲ್ಲನ್ನು ಕತ್ತರಿಸಿ ಹೊರೆ ಕಟ್ಟಿದ ಬಳಿಕ ಅವುಗಳನ್ನ ಬೈಕ್​ನಲ್ಲಿ ಕಟ್ಟುತ್ತಾರೆ. ಮೂರ್ನಾಲ್ಕು ಹುಲ್ಲಿನ ಹೊರೆಗಳನ್ನು ಕಟ್ಟಿ ಅದರ ಮೇಲೆ ಮಾಯವ್ವ ಕುಳಿತರೆ ಆಕೆಯ ಪುತ್ರ ಸಂತೋಷ ಬೈಕ್ ಓಡಿಸುತ್ತಾರೆ. ರಸ್ತೆಯಲ್ಲಿ ಇವರು ಈ ರೀತಿ ಹುಲ್ಲಿನ ಹೊರೆಗಳನ್ನು ತರುತ್ತಿದ್ದರೆ ರಸ್ತೆಯಲ್ಲಿ ಸಾಗುತ್ತಿದ್ದವರ ದೃಷ್ಟಿ ಇವರ ಮೇಲೆ ಇರುತ್ತದೆ.

ಸ್ವಲ್ಪ ಆಯತಪ್ಪಿ ಬಿದ್ದರೂ ಜೀವಕ್ಕೆ ಅಪಾಯವಾಗೋದು ಗ್ಯಾರಂಟಿ. ಇಂಥ ಅಪಾಯಕರವಾದ ಪ್ರಯಾಣವನ್ನು ನಿತ್ಯ ಇವರು ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಮಾಡುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಇಲ್ಲಿ ಸಂಚಾರ ಮಾಡುತ್ತಾವೆ. ಬೃಹತ್ ಗಾತ್ರದ ವಾಹನಗಳು ಇಲ್ಲಿ ಓಡಾಡುತ್ತವೆ. ಅಂಥವುಗಳ ನಡುವೆ ಹುಲ್ಲಿನ ಹೊರೆಯ ಮೇಲೆ ತಾಯಿ ಕುಳಿತು ಮಗಾ ಬೈಕ್ ಓಡಿಸೋ ಕೆಲಸ ಮಾಡುತ್ತಾರೆ.  ಹೊಟ್ಟೆಪಾಡಿಗೆ ಇದು ಅನಿವಾರ್ಯ: ಇಷ್ಟು ಅಪಾಯಕರವಾದ ಪ್ರಯಾಣ ಮಾಡುವುದು ಏಕೆ ಎಂದು ನಾವು ಪ್ರಶ್ನೆ ಮಾಡಿದರೆ, ಜೀವನ ಮಾಡಲು ಇದು ಅನಿವಾರ್ಯ. ಹೊಟ್ಟೆ ಪಾಡಿಗಾಗಿ ನಾವು ಇಂಥ ರಿಸ್ಕ್ ತೆಗೆದುಕೊಳ್ಳುತ್ತೇವೆ. ನಾವು ಸಾಕಿನ ಕುರಿ, ಮೇಕೆ, ಹಸುಗಳಿಗೆ ಆಹಾರ ಹಾಕಬೇಕು. ಅವುಗಳೇ ನಮ್ಮ ಬದುಕು. ನಿತ್ಯ ಇದೇ ರೀತಿ ನಾವು ಹುಲ್ಲನ್ನು ಕೊಯ್ದುಕೊಂಡು ಬರುತ್ತೇವೆ. ಜಾನುವಾರುಗಳಿಗೆ ಹಾಕುತ್ತೇವೆ. ಇದೆಲ್ಲಾ ನಮಗೆ ಭಯ ಅನ್ನಿಸಲ್ಲಾ. ಬಡತನ ನಮಗೆ ದೈರ್ಯ ನೀಡಿದೆ ಎನ್ನುತ್ತಾರೆ ಸಂತೋಷ ಶಿರೂರ ಹಾಗೂ ಆತನ ತಾಯಿ ಮಾಯವ್ವ.

ಬದುಕು ನೀಡಿದ ಲವ್ ಬರ್ಡ್ಸ್.. ಬರ್ಡ್ಸ್ ಸಾಕಾಣಿಕೆ ಮಾಡಿದ ಮಲ್ಲಪ್ಪನ ಜೇಬು ತುಂಬ ಈಗ ಕಾಂಚಾಣ

ಬರದ ನಾಡಿನಲ್ಲಿ ರೈತನ ವಿನೂತನ ಪ್ರಯೋಗ: ಕಡಿಮೆ ಹಣದಲ್ಲಿ ದೊಡ್ಡ ಬೆಳೆ ತೆಗೆದ ರೈತ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada