ಚಿಟ್ಟೆಗಳ ಬೆನ್ನತ್ತಿ: ‘ಕರ್ವಾಲೋ’ದಿಂದ ಪ್ರೇರಣೆ ಪಡೆದವರ ಕ್ಯಾಮರಾದಲ್ಲಿ ಅಮೋಘ ಪಾತರಗಿತ್ತಿ ಸೆರೆ
ನವೆಂಬರ್ ತಿಂಗಳಿಗೆ ಬಂದು ಜನವರಿಗೆ ಹೊರಟು ಹೋಗುವಂತಹ ವಿಶೇಷ ಚಿಟ್ಟೆಯೊಂದರ ಬೆನ್ನತ್ತಿದ ವನ್ಯಜೀವಿ ಛಾಯಾಗ್ರಾಹಕ ಪಾಂಡುರಂಗ ಆಶ್ರೀತ ಈ ಸೋಜಿಗವನ್ನು ತಮ್ಮ ಕ್ಯಾಮಾರದಲ್ಲಿ ಸೆರೆಹಿಡಿದಿದ್ದಾರೆ.
ಕೊಪ್ಪಳ : ಹಾರುವ ಹೂವು ಎಂದು ಕರೆಯಲಾಗುವ ಚಿಟ್ಟೆ ಅಥವಾ ಪಾತರಗಿತ್ತಿಗಳು ಅದ್ಭುತ ಜೀವ ವೈವಿಧ್ಯತೆ ಹೊಂದಿದೆ. ಚಿಟ್ಟೆಗಳಲ್ಲಿ ಹಲವು ಪ್ರಭೇದಗಳಿದ್ದು, ಅವುಗಳಲ್ಲಿ ನವೆಂಬರ್ ತಿಂಗಳಿಗೆ ಬಂದು ಜನವರಿಗೆ ಹೊರಟು ಹೋಗುವಂತಹ ವಿಶೇಷ ಚಿಟ್ಟೆಯೊಂದರ ಬೆನ್ನತ್ತಿದ ವನ್ಯಜೀವಿ ಛಾಯಾಗ್ರಾಹಕ ಪಾಂಡುರಂಗ ಆಶ್ರೀತ ಈ ಸೋಜಿಗವನ್ನು ತಮ್ಮ ಕ್ಯಾಮಾರದಲ್ಲಿ ಸೆರೆಹಿಡಿದಿದ್ದಾರೆ.
ಅಂದ ಹಾಗೆ, ಈ ಚಿಟ್ಟೆಯ ಜೀವಿತಾವಧಿ ಕೇವಲ ಒಂದೆರಡು ವಾರ ಮಾತ್ರ. ಬಣ್ಣಗಳಿಂದ ಕೂಡಿರುವ ವೈವಿಧ್ಯಮಯ ಚಿತ್ರದಂತೆ ಹೋಲುವ ತನ್ನ ರೆಕ್ಕೆಗಳನ್ನು ಬಡಿಯುತ್ತಾ, ಹೂವಿನ ಮಕರಂದ ಹೀರುತ್ತಾ ಎಲ್ಲೆಡೆ ಚಂಚಲತೆಯಿಂದ ಕೂಡಿರುವ ಯುವತಿಯಂತೆ ಹಾರುವ ಈ ಚಿಟ್ಟೆ ಕಣ್ಮನ ಸೆಳೆಯುತ್ತದೆ.
ಕೊಪ್ಪಳದಲ್ಲಿದೆ ಚಿಟ್ಟೆಗಳ ನೂರಾರು ಪ್ರಭೇದ ಅಂದ ಹಾಗೆ, ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನೂರಕ್ಕೂ ಅಧಿಕ ಪ್ರಭೇದಗಳ ಚಿಟ್ಟೆಗಳನ್ನು ನೋಡಬಹುದು. ಇಲ್ಲಿನ ವನ್ಯಜೀವಿ ಛಾಯಾಗ್ರಾಹಕ ಪಾಂಡುರಂಗ ಆಶ್ರೀತ 50ಕ್ಕೂ ಹೆಚ್ಚು ಪ್ರಭೇದಗಳನ್ನು ಗುರುತಿಸಿದ್ದಾರೆ. ಕಾಮನ್ಗಲ್, ಕಾಮನ್ ಬುಶ್ ಬ್ರೌನ್, ಬ್ಲೂಫ್ಯಾನ್ಸಿ, ಬ್ಲೂ ಟೈಗರ್, ಕ್ರಿಮ್ಸನ್ ರೋಸ್, ಯೆಲ್ಲೋ ಆರೆಂಜ್ ಟಿಪ್, ಕಾಮನ್ ಸಿಲ್ವರ್ ಲೈನ್ , ಡಬಲ್ ಬ್ಯಾಂಡೆಡ್ ಕ್ರೋ, ಒಲಿಯಾಂಡರ್ ಹಾಕ್ ಮಾತ್, ಕಾಮನ್ ವಂಡರ್,ಕ್ರಿಮ್ಸನ್ ಟಿಪ್, ಆರೆಂಜ್ ಟಿಪ್, ಡ್ಯಾನೈಡ್ ಎಗ್ ಪೈ, ಲೆಮನ್ ಫ್ಯಾನ್ಸಿ ಮುಂತಾದ ಚಿಟ್ಟೆಗಳ ಸೌಂದರ್ಯವನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ. ಇದಲ್ಲದೆ, ತಾವು ಕ್ಲಿಕ್ಕಿಸಿದ ಛಾಯಾಚಿತ್ರಗಳು ಇತರರಲ್ಲೂ ಆಸಕ್ತಿ ಹುಟ್ಟಿಸಲಿ ಎಂಬ ಆಸೆಯಿಂದ ಪಾಂಡುರಂಗ ಸಾಮಾಜಿಕ ಜಾಲತಾಣದಲ್ಲಿ ಇವುಗಳ ಮೂಲ ಹೆಸರು ಹಾಗೂ ಅವುಗಳ ವಿವರಣೆ ನೀಡಿ ಇತರರಿಗೆ ಆಸಕ್ತಿ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಇವರಿಗೆ ಪೂರ್ಣಚಂದ್ರ ತೇಜಸ್ವಿರವರ ಕರ್ವಾಲೋ ಪುಸ್ತಕವೇ ಸ್ಫೂರ್ತಿ ಅಷ್ಟೇ ಅಲ್ಲ, ಪಾಂಡುರಂಗ ಸಮುದ್ರದಾಳಕ್ಕೆ ಇಳಿದು ಜಲಚರಗಳ ಫೋಟೋ ಸಹ ಕ್ಲಿಕ್ಕಿಸಿದ್ದಾರೆ. ವನ್ಯಜೀವಿಗಳ ಸೆರೆ ಹಿಡಿಯಲು ಕಬಿನಿ, ಮಂಗಳೂರು, ಶಿರಸಿ, ಯಲ್ಲಾಪುರ ಕಡೆ ಹೋಗಿ ಛಾಯಾಗ್ರಹಣ ಮಾಡಿದ್ದಾರೆ. ಅಂದ ಹಾಗೆ, ಪಾಂಡುರಂಗರಿಗೆ ವನ್ಯಜೀವಿ ಫೋಟೋ ತಗೆಯಲು ಪೂರ್ಣಚಂದ್ರ ತೇಜಸ್ವಿರವರು ಬರೆದ ಕರ್ವಾಲೋ ಪುಸ್ತಕವೇ ಸ್ಫೂರ್ತಿ. ಕರ್ವಾಲೋ ಓದಿದ ನಂತರ ಪಾಂಡುರಂಗಗೆ ಕಾಡಿನ ಬಗ್ಗೆ ವಿಶೇಷ ಒಲವು ಹುಟ್ಟಿ ಅದೇ ಕಾರಣಕ್ಕೆ ಅವರು ವನ್ಯಜೀವಿ ಛಾಯಾಗ್ರಾಹಕರಾದರು.
ಪಾತರಗಿತ್ತಿಯ ಛಾಯಾಚಿತ್ರ ಸೆರೆಹಿಡಿಯುವುದು ಸವಾಲಿನ ಕೆಲಸ. ಅವುಗಳ ಕಣ್ಣು ಮತ್ತು ಕೊಂಡಿ ಫೋಕಸ್ ಸೆರೆಹಿಡಿದರೆ ಪರಿಪೂರ್ಣ ಛಾಯಾಚಿತ್ರ ಸೆರೆಹಿಡಿಯಬಹುದಾಗಿದೆ. ಚದರಂಗಿ ಹಾಗೂ ತುಂಬೆ ಗಿಡಗಳ ಮೇಲೆ ಈ ಮೋಹಕ ಜೀವಿಗಳು ಹೆಚ್ಚಾಗಿ ಕಂಡುಬರುತ್ತದೆ ಎಂದು ಪಾಂಡುರಂಗ ಆಶ್ರೀತ ಮಾಹಿತಿ ನೀಡಿದ್ದಾರೆ. -ಶಿವಕುಮಾರ್ ಪತ್ತರ್