ಪೀಣ್ಯ ಬಸ್ ನಿಲ್ದಾಣದ ಬಗ್ಗೆ ನಮ್ಮನ್ನು ಪ್ರಶ್ನಿಸಲು ನಿಮಗೆ ನಾಚಿಕೆಯಿಲ್ಲವೇ? ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ
ಬೆಂಗಳೂರಿನ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣವನ್ನು ಖಾಸಗಿ ವ್ಯವಹಾರಗಳಿಗೆ ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಈ 3 ಅಂತಸ್ತಿನ ಕಟ್ಟಡದ ಇ-ಟೆಂಡರ್ ಕರೆದಿದೆ. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇದೀಗ ಸ್ಪಷ್ಟನೆಯನ್ನು ನೀಡಿದೆ. ಅಲ್ಲದೆ, ಬಿಜೆಪಿಗೆ ಕೆಲವು ಪ್ರಶ್ನೆಗಳನ್ನು ಕೂಡ ಹಾಕಿದೆ.
ಬೆಂಗಳೂರು: ಬೆಂಗಳೂರಿನ ಪೀಣ್ಯದಲ್ಲಿರುವ ಶ್ರೀ ಬಸವೇಶ್ವರ ಬಸ್ ನಿಲ್ದಾಣವನ್ನು ಖಾಸಗಿ ವ್ಯವಹಾರಗಳಿಗೆ ನೀಡಲು ಟೆಂಡರ್ ಕರೆಯಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಇಂದು ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದೆ. ಕೋಟ್ಯಂತರ ರೂ. ಖರ್ಚು ಮಾಡಿ ಬಸವೇಶ್ವರ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದರೂ ಪ್ರಯಾಣಿಕರು ಬಾರದೆ ಸಾಕಷ್ಟು ನಷ್ಟವಾಗಿತ್ತು. ಪ್ರಯಾಣಿಕರನ್ನು ಸೆಳೆಯಲು ರಿಯಾಯಿತಿ ದರದಲ್ಲಿ ಬಸ್ ಸೌಕರ್ಯವನ್ನು ಒದಗಿಸಿದ್ದರೂ ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರು ಆಸಕ್ತಿ ತೋರಲಿಲ್ಲ. ಆ ನಷ್ಟವನ್ನು ಭರಿಸಲು ಈ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಮಳಿಗೆಗಳಿಗೆ ಟೆಂಡರ್ ಕರೆಯಲಾಗುತ್ತಿದೆಯೇ ವಿನಃ ಯಾವುದೇ ರೀತಿಯ ಲೀಸ್ ನೀಡುವ ಪ್ರಸ್ತಾಪವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಇದರ ಜೊತೆ ಬಿಜೆಪಿಗೆ ಕೆಲವು ಪ್ರಶ್ನೆಗಳನ್ನು ಹಾಕಿರುವ ಕಾಂಗ್ರೆಸ್, ಅವೈಜ್ಞಾನಿಕವಾಗಿ, ಯಾವುದೇ ದೂರದೃಷ್ಟಿ ಇಲ್ಲದೆ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿ ಜನರ ಮತ್ತು ಸಾರಿಗೆ ನೌಕರರ ಹಣವನ್ನು ಅನ್ಯಾಯವಾಗಿ ಲೂಟಿ ಮಾಡಿ ಹೋಗಿರುವ ನಿಮಗೆ ನಮ್ಮನ್ನು ಪ್ರಶ್ನಿಸಲು ನಾಚಿಕೆ ಇಲ್ಲವೇ? ಅಥವಾ ಆ ಪದಕ್ಕೆ ಅರ್ಥವಾದರೂ ತಿಳಿದಿದೆಯೇ? ಕೋಟಿ ಕೋಟಿ ಹಣ ಲೂಟಿ ಮಾಡಿ, ಸರ್ವ ಪ್ರಯತ್ನಗಳ ನಡುವೆಯೂ ಕೆಲಸಕ್ಕೆ ಬಾರದ ರೀತಿ ಬಸ್ ನಿಲ್ದಾಣ ನಿರ್ಮಾಣ ಮಾಡಿ, ಜನರ ಮುಂದೆ ಹೋಗಿ ಮಾತನಾಡುವ ಯಾವ ನೈತಿಕತೆ ನಿಮಗಿದೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪೀಣ್ಯದಲ್ಲಿರುವ ಶ್ರೀ ಬಸವೇಶ್ವರ ಬಸ್ ನಿಲ್ದಾಣವು 08 ಎಕರೆ 06 ಗುಂಟೆ ವಿಸ್ತೀರ್ಣದಲ್ಲಿ, ಸುಮಾರು ರೂ. 39.28 ಕೋಟಿ ವೆಚ್ಚದಲ್ಲಿ 2011ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಿ, 2013ರಲ್ಲಿ ನಿರ್ಮಾಣ ಕಾರ್ಯ ಮುಕ್ತಾಯವಾಗಿರುತ್ತದೆ.
ಪೀಣ್ಯ ಬಸ್ ನಿಲ್ದಾಣವನ್ನು ನಮ್ಮ ಸರ್ಕಾರವಿದ್ದಾಗ ಉದ್ಘಾಟಿಸಿ ಶ್ರೀ ಬಸವೇಶ್ವರ… pic.twitter.com/EqkpKcq4SV
— Karnataka Congress (@INCKarnataka) January 4, 2025
8 ಎಕರೆ 6 ಗುಂಟೆ ವಿಸ್ತೀರ್ಣದಲ್ಲಿ ಸುಮಾರು 39.28 ಕೋಟಿ ರೂ. ವೆಚ್ಚದಲ್ಲಿ 2011ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಿ 2013ರಲ್ಲಿ ನಿರ್ಮಾಣ ಕಾರ್ಯ ಮುಕ್ತಾಯವಾಗಿರುತ್ತದೆ. ಪೀಣ್ಯ ಬಸ್ ನಿಲ್ದಾಣವನ್ನು ನಮ್ಮ ಸರ್ಕಾರವಿದ್ದಾಗ ಉದ್ಘಾಟಿಸಿ ಶ್ರೀ ಬಸವೇಶ್ವರ ಬಸ್ ನಿಲ್ದಾಣವೆಂದು ನಾಮಕರಣ ಮಾಡಿ 2014ರಿಂದ ಸಾರ್ವಜನಿಕರ ಬಳಕೆಗೆ ನೀಡಲಾಯಿತು. ಬಸ್ ನಿಲ್ದಾಣದಿಂದ ಉತ್ತರ ಕರ್ನಾಟಕದ ಭಾಗಗಳಿಗೆ ಹಾಗೂ ತುಮಕೂರು, ಹಾಸನ ಮುಖೇನ ಕಾರ್ಯಾಚರಣೆಯಾಗುವ ವಾಹನಗಳ ಕಾರ್ಯಾಚರಣೆಗೆ ಯೋಜಿಸಲಾಗಿ, ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆಯಿಂದ 1.4 ಕಿ.ಮೀ ಒಳಗಿರುವ ಕಾರಣ ನಗರದ ವಿವಿಧ ಪ್ರದೇಶಗಳಿಗೆ ಸಂಪರ್ಕದ ಕೊರತೆಯ ಕಾರಣದಿಂದ ಪ್ರಯಾಣಿಕರು ಈ ಬಸ್ ನಿಲ್ದಾಣಕ್ಕೆ ಬರಲು ಆಸಕ್ತಿ ತೋರಲಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: Video: ಬೆಂಗಳೂರು, ನಾಗಸಂದ್ರದಿಂದ ಪೀಣ್ಯ ಇಂಡಸ್ಟ್ರಿ ಮಧ್ಯೆ ಮೆಟ್ರೋ ಇಲ್ಲದೆ ಪ್ರಯಾಣಿಕರ ಪರದಾಟ
ಪ್ರಯಾಣಿಕರ ಬೇಡಿಕೆಯನ್ನು ಹೆಚ್ಚಿಸಲು ಮುಖ್ಯ ರಸ್ತೆಯಿಂದಲೂ ಸಹ ನೇರವಾಗಿ ಸಂಪರ್ಕ ಕಲ್ಪಿಸಲು ಸಂಪರ್ಕ ಬಸ್ ಸೌಕರ್ಯವನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗಿತ್ತು. ರಾತ್ರಿ ವೇಳೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರು ಆಸಕ್ತಿ ತೋರದ ಕಾರಣದಿಂದ ಈ ನಿಲ್ದಾಣದಿಂದ ನಗರಕ್ಕೆ ಆಗಮಿಸುವ ಬಸ್ಗಳನ್ನು ಅಲ್ಲಿಂದಲೇ ಆರಂಭಿಸುವ ಮತ್ತು ಮುಕ್ತಾಯ ಮಾಡುವ ರೀತಿಯಲ್ಲಿ ಅನುಸೂಚಿಗಳನ್ನು ಸಹ ಪ್ರಾರಂಭಿಸಲಾಗಿತ್ತು.
— Karnataka Congress (@INCKarnataka) January 4, 2025
ಕೆಂಪೇಗೌಡ ಬಸ್ ನಿಲ್ದಾಣದಿಂದ ಪ್ರಾರಂಭಿಸಿ ಬಸವೇಶ್ವರ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಕಾರ್ಯಾಚರಣೆಯನ್ನು ಮುಂದುವರೆಸಲು ಯೋಜಿಸಿ ಕಾರ್ಯಾರೂಪಕ್ಕೆ ತಂದಿದ್ದು, ಆದರೆ ಯಾವುದೇ ಪ್ರಯತ್ನಗಳು ಫಲಕಾರಿಯಾಗಿರುವುದಿಲ್ಲ. ಹೀಗಾಗಿ, ಮೇಲ್ಕಂಡ ರೀತಿಯಲ್ಲಿ ಹಲವಾರು ಬಾರಿ ಪ್ರಯತ್ನಗಳನ್ನು ಮಾಡಿದ ನಂತರವು ನಿಗಮಕ್ಕೆ ತೀವ್ರ ಆದಾಯ ನಷ್ಟವಾಯಿತು. ಸಂಸ್ಥೆಯ ವಾಹನಗಳು ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದ ಒಳಕ್ಕೆ ತೆರಳಿ ಪುನಃ ಮುಖ್ಯ ರಸ್ತೆಗೆ ಬಂದು ಕಾರ್ಯಾಚರಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪ್ರಯಾಣ ಸಮಯದ ಬಗ್ಗೆ ಸಾರ್ವಜನಿಕರು ಹಾಗೂ ಮಾಧ್ಯಮಗಳಲ್ಲಿ ತೀವ್ರ ಆಕ್ಷೇಪಣೆ ಮತ್ತು ನೇರ ಪ್ರಯಾಣಿಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬಸ್ ನಿಲ್ದಾಣದಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಮಾದರಿಯಲ್ಲೇ ಆಂಧ್ರದಲ್ಲೂ ಶಕ್ತಿ ಯೋಜನೆ ಜಾರಿಗೆ ಚಿಂತನೆ, ಬೆಂಗಳೂರಿನಲ್ಲಿ ಅಧ್ಯಯನ
ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಬಸ್ ನಿಲ್ದಾಣವನ್ನು ಪುನರಾಂಭಿಸಲು ಸಾಧ್ಯವಾಗಿರುವುದಿಲ್ಲ. ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳ ಪರವಾನಿಗೆದಾರರ ಆಯ್ಕೆ ಪ್ರಕ್ರಿಯೆಯು ನಿಗಮದ ನಿಯಮಾವಳಿಗಳ ಪ್ರಕಾರ ನಿರಂತರವಾಗಿ ಟೆಂಡರ್/ ಸಂಧಾನ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಮೇಲ್ಕಂಡ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಚಟುವಟಿಕೆಗಳು ಇರದ ಕಾರಣ ಯಾರು ಆಸಕ್ತಿದಾಯಕವಾಗಿ ಭಾಗವಹಿಸದೇ ಇದ್ದು ವಾಣಿಜ್ಯ ಮಳಿಗೆಗಳು ದೀರ್ಘ ಕಾಲದಿಂದ ಖಾಲಿ ಇದೆ ಎಂದು ಕಾಂಗ್ರೆಸ್ ಹೇಳಿದೆ.
ಆಯ್ಕೆ ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ದಿನಾಂಕ 2024ರ ಡಿಸೆಂಬರ್ 2ರಂದು ಟೆಂಡರ್/ ಸಂಧಾನ ಪ್ರಕ್ರಿಯೆಯ ಪ್ರಕಟಣೆ ಸಂಖ್ಯೆ 05/540/2024-25ರಂತೆ ಕೆಂಪೇಗೌಡ ಬಸ್ ನಿಲ್ದಾಣ ವಿಭಾಗದ ವತಿಯಿಂದ ಹೊರಡಿಸಲಾಗಿದ್ದು, ಈ ಆಯ್ಕೆ ಪ್ರಕ್ರಿಯೆ ಡಿಸೆಂಬರ್ 30ರಂದು ಮುಕ್ತಾಯಗೊಂಡಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿಯೂ ಯಾವ ಆಸಕ್ತ ಬಿಡ್‌ದಾರರು ಭಾಗವಹಿಸಿರುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಮೇಲ್ಕಂಡ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳಿಗೆ ಪರವಾನಿಗೆದಾರರ ಆಯ್ಕೆಗೆ ನಿರಂತರವಾಗಿ ಟೆಂಡರ್/ ಸಂಧಾನ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಇದರಲ್ಲಿ ಈ ಹಿಂದಿನಿಂದ ಚಾಲನೆಯಲ್ಲಿದ್ದ ಷರತ್ತು ಮತ್ತು ನಿಬಂಧನೆಗಳನ್ವಯ ಟೆಂಡರ್ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಯಾವುದೇ ಷರತ್ತು/ ನಿಬಂಧನೆಗಳ ಮಾರ್ಪಾಡನ್ನು ಮೇಲ್ಕಂಡ ಟೆಂಡರ್/ ಸಂಧಾನ ಪ್ರಕಟಣೆಯಲ್ಲಿ ಮಾಡಿರುವುದಿಲ್ಲ.
ತಾವು ಹೇಳಿರುವುದೆಲ್ಲಾ ಬರೀ ಸುಳ್ಳು ಯಾವುದೇ ಲೀಸ್ ಪ್ರಸ್ತಾಪವೇ ಇರುವುದಿಲ್ಲ. ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವ ಮತ್ತೊಂದು ವಿಫಲ ಯತ್ನ ಇದಾಗಿದೆ ಎಂದಿರುವ ಕಾಂಗ್ರೆಸ್ ಆಯ್ಕೆ ಪ್ರಕ್ರಿಯೆಗೆ ಹೊರಡಿಸಲಾದ ಟೆಂಡರ್ ಪ್ರಕಟಣೆ ಸಂಖ್ಯೆ 05/840/2024-25 ದಿ: 02.12.2024 ಅನ್ನು ಲಗತ್ತಿಸಿದೆ.
2014ರಲ್ಲಿ ಸುಮಾರು 44 ಕೋಟಿ ರೂ.ಗಳ ವೆಚ್ಚದಲ್ಲಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿತ್ತು. ಬಸ್ ನಿಲ್ದಾಣ ಉದ್ಘಾಟನೆಯಾಗಿ ಬಸ್ ಬಂದರೂ ಜನ ಮಾತ್ರ ಬಸ್ ನಿಲ್ದಾಣಕ್ಕೆ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ. ಶಕ್ತಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಗುಸು ಗುಸು ಕೇಳಿ ಬರುತ್ತಿರುವ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಸದ್ಯ ಸಂಪೂರ್ಣ ಕಟ್ಟಡವನ್ನು ಖಾಸಗಿಯವರಿಗೆ ಬಾಡಿಗೆಗೆ ಕೊಡಲು ತಯಾರಿ ಮಾಡಿಕೊಂಡಿದೆ ಎಂಬ ಸುದ್ದಿ ಹರಿದಾಡಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ