ಮಳೆ ನೀರು ಹರಿಯಲು ಬಿಟ್ಟ ವಿಚಾರಕ್ಕೆ ಅಣ್ತಮ್ಮಾಸ್ ಮಧ್ಯೆ ಗಲಾಟೆ! ತಮ್ಮನ ಹತ್ಯೆ
ಟೊಮ್ಯಾಟೊ ತೋಟದಲ್ಲಿ ಮಳೆ ನೀರು ಹರಿಯಲು ಬಿಟ್ಟ ವಿಚಾರಕ್ಕೆ ಜಗಳ ಶುರುವಾಗಿದೆ. ಅಣ್ಣಂದಿರಾದ ಯಲ್ಲಪ್ಪ ಮತ್ತು ರಾಮಪ್ಪ ರಾತ್ರಿ ವೇಳೆ ನಾಗಪ್ಪನ ಮೇಲೆ ಹಲ್ಲೆ ಗೈದಿದ್ದರು. ಕುಡಿದ ಅಮಲಿನಲ್ಲಿ ನಾಗಪ್ಪ ಮನೆಯ ಮುಂದೆ ಮಳೆಯಲ್ಲೇ ಮಲಗಿದ್ದ. ಆದ್ರೆ
ಕೋಲಾರ: ಅದು ಹೇಳಿಕೇಳಿ ಬಯಲು ಸೀಮೆ, ಬರದ ನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆ. ಪರಿಣಾಮ 2 ದಶಕಗಳಿಂದ ಮಳೆಯಿಲ್ಲದೆ ನೀರಿಗಾಗಿ ಅದೆಷ್ಟೋ ಗಲಾಟೆಗಳು ನಡೆದಿವೆ. ಆದ್ರೆ ಇತ್ತೀಚೆಗೆ ವರುಣನ ಕೃಪೆಯಿಂದ ಜಿಲ್ಲೆಯಲ್ಲಿ ಮಳೆಯೋ ಮಳೆ ಕೆರೆ ಕಟ್ಟೆಗಳೆಲ್ಲಾ ತುಂಬಿ ಹರಿಯುತ್ತಿವೆ ಈಗ ನೀರು ಹೆಚ್ಚಾಗಿ ಅಣ್ಣನ ಹೊಲದ ನೀರನ್ನು ತಮ್ಮನ ಹೊಲಕ್ಕೆ ಬಿಟ್ಟಿದ್ದನ್ನ ಕೇಳಿದ್ದಕ್ಕೆ ಅಲ್ಲೊಂದು ಕೊಲೆಯೇ ನಡೆದು ಹೋಗಿದೆ…
ಹೀಗೆ ತಂದೆ ಸಮಾಧಿ ಎದುರು ಕಣ್ಣೀರಾಕುತ್ತಿರುವ ಮಕ್ಕಳು, ಪತಿಯನ್ನ ಕಳೆದುಕೊಂಡು ದಿಗ್ಬ್ರಾಂತರಾಗಿರುವ ಪತ್ನಿ, ಮತ್ತೊಂದೆಡೆ ಮನೆ ಖಾಲಿ ಮಾಡಿರುವ ದಾಯಾದಿಗಳು, ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಜಿನಗತಿಮ್ಮನಹಳ್ಳಿ ಗ್ರಾಮದಲ್ಲಿ. ಹೌದು ಕಳೆದ ಹತ್ತು ದಿನಗಳಿಂದ ಜಿಲ್ಲೆಯಲ್ಲಿ ನಿಲ್ಲದೆ ನಿರಂತ ಮಳೆ ಸುರಿಯುತ್ತಿದೆ ಹೀಗಿರುವಾಗ ನಿನ್ನೆ ಜಮೀನಿನಲ್ಲಿ ನೀರು ಹರಿಬಿಟ್ಟ ಎಂಬ ವಿಚಾರವಾಗಿ ಇಬ್ಬರು ಅಣ್ಣಂದಿರಿಂದಲೇ ತಮ್ಮನ ಕೊಲೆ ನಡೆದು ಹೋಗಿದೆ.ಅಷ್ಟಕ್ಕೂ ಆಗಿದ್ದೇನು ಎಂದು ನೋಡೋದಾದ್ರೆ ಭಾನುವಾರ ಸಂಜೆ ರಾಮಪ್ಪ ಹಾಗೂ ಯಲ್ಲಪ್ಪ ಎಂಬುವರು ವಿಪರೀತ ಮಳೆಯಾಗಿದ್ದ ಕಾರಣ ಅವರ ಟೊಮ್ಯಾಟೋದಲ್ಲಿ ನಿಂತಿದ್ದ ನೀರನ್ನು ತಮ್ಮನಾದ ನಾಗಪ್ಪನ ಹೊಲಕ್ಕೆ ನೀರನ್ನು ಹರಿಬಿಟ್ಟಿದ್ದಾರೆ.
ನೀರು ಹರಿಬಿಟ್ಟಿದ್ದನ್ನು ನಾಗಪ್ಪ ಪ್ರಶ್ನೆ ಮಾಡಿದ್ದಾನೆ ಇದರಿಂದ ಕೋಪಗೊಂಡಿದ್ದ ರಾಮಪ್ಪ ಹಾಗೂ ಯಲ್ಲಪ್ಪ ಇಬ್ಬರೂ ತಮ್ಮ ಚಿಕ್ಕಪ್ಪನ ಮಗ ಅಂದ್ರೆ ತಮ್ಮ ನಾಗಪ್ಪನನ್ನು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಭಾನುವಾರ ಸಂಜೆ ಜೋರು ಮಳೆಯಾದ ಹಿನ್ನೆಲೆ ಯಲ್ಲಪ್ಪ ಟೊಮ್ಯಾಟೊ ತೋಟದಲ್ಲಿದ್ದ ನೀರನ್ನ ನಾಗಪ್ಪ ಜಮೀನಿನಲ್ಲಿ ಹರಿ ಬಿಟ್ಟಿದ್ದಾನೆ, ಈ ವೇಳೆ ನಾಗಪ್ಪ ಅಣ್ಣನನ್ನ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೆರಳಿದ ಅಣ್ಣಂದಿರು ಟೊಮ್ಯಾಟೊ ತೋಟದಲ್ಲಿದ್ದ ಟೊಮ್ಯಾಟೊ ದೊಣ್ಣೆಗಳಿಂದ ತಮ್ಮ ನಾಗಪ್ಪ ಹಾಗೂ ತಮ್ಮನ ಹೆಂಡತಿ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ಈ ವೇಳೆ ಕನಕಮ್ಮ ಮೇಲೆ ಹಲ್ಲೆ ಮಾಡಿದ ಹಿನ್ನೆಲೆ ಮೈಯೆಲ್ಲಾ ಬಾಸುಂಡೆ ಬಂದಿದ್ದು ಆಕೆ ತಪ್ಪಿಸಿಕೊಂಡು ಪಕ್ಕದೂರಿಗೆ ಹೋಗಿದ್ದಾಳೆ. ಆದ್ರೆ ನಾಗಪ್ಪಗೆ ತಲೆ ಹಾಗೂ ಮೈ ಕೈಯೆಲ್ಲಾ ಗಾಯಗಳಾದ ಪರಿಣಾಮ ನಾಗಪ್ಪ ಭಾನುವಾರ ಇಡೀ ದಿನ ರಾತ್ರಿ ಮಳೆಯಲ್ಲಿ ನೆಂದು ಬೆಳಗಿನ ಜಾವ ನೋಡುವಷ್ಟರಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಕೊಲೆಯಾದ ನಾಗಪ್ಪ ಹಾಗೂ ಕೊಲೆ ಮಾಡಿದ ರಾಮಪ್ಪ ಮತ್ತು ಯಲ್ಲಪ್ಪ ಇಬ್ಬರೂ ದಾಯಾದಿಗಳು, ಇಬ್ಬರ ನಡುವೆ ಕಳೆದ ಹಲವು ವರ್ಷಗಳಿಂದ ಜಮೀನು ವಿವಾದ ನಡೆಯುತಿತ್ತು. ಹಾಗಾಗಿ ಪದೆ ಪದೆ ನಾಗಪ್ಪ ಹಾಗೂ ಅಣ್ಣಂದಿರ ನಡುವೆ ಗಲಾಟೆ ನಡೆಯುತ್ತಲೆ ಇತ್ತು. ಅದರಂತೆ ಭಾನುವಾರ ರಾತ್ರಿ ಮಳೆ ನೀರು ಹರಿಬಿಟ್ಟ ವಿಚಾರವಾಗಿ ತಮ್ಮನನ್ನ ಹಿಗ್ಗಾಮುಗ್ಗಾ ಥಳಿಸಿದ್ದಾರೆ, ಆಗ ಮನೆ ಮುಂದೆ ಮಲಗಿದ್ದಾನೆ ಎಂದು ಸುಮ್ಮನಾಗಿದ್ದಾರೆ ಆದ್ರೆ ಬೆಳಗಾಗುವಷ್ಟರಲ್ಲಿ ಮೃತಪಟ್ಟಿರುವುದು ದೃಡವಾಗಿದೆ. ಇನ್ನೂ ನಾಗಪ್ಪನಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು, ಮೂರು ಜನ ಮಕ್ಕಳಿಗೂ ಮದುವೆ ಮಾಡಿದ್ದಾನೆ.
ಆದ್ರೆ ತಂದೆ ಸಾವಿನ ಸುದ್ದಿ ತಿಳಿದು ಮನೆ ಬಳಿ ಬಂದು ನೋಡಿದ್ರೆ ತಂದೆಯನ್ನ ತಮ್ಮ ದೊಡ್ಡಪ್ಪನವರೆ ಕೊಲೆ ಮಾಡಿದ್ದಾರೆ. ನೊಂದ ಮಕ್ಕಳು ತಂದೆಯ ಸಮಾಧಿ ಬಳಿ ತಂದೆಯನ್ನ ನೆನೆದು ಕಣ್ಣೀರಾಕಿದ್ದಾರೆ. ಕೈ ಮುಗಿದು ನಾವು ಮೊದಲೆ ಅನಾಥರು, ಈ ಮಧ್ಯೆ ತಂದೆಯನ್ನ ಕೊಲೆ ಮಾಡಿ ನಮ್ಮನ್ನ ನಮ್ಮ ತಾಯಿಯನ್ನ ಅನಾಥ ಮಾಡಿದ್ದಾರೆ ಅನ್ನೋ ಗೋಳಾಟ ಹೆಣ್ಣು ಮಕ್ಕಳದ್ದು.ಸಧ್ಯ ಮಾಸ್ತಿ ಪೊಲೀಸರು ಇಬ್ಬರು ಜನ ಆರೋಪಿಗಳನ್ನ ಬಂಧಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ತಂದೆ ಸಾವಿಗೆ ನ್ಯಾಯ ಸಿಗಬೇಕು ಇಲ್ಲವಾದಲ್ಲಿ ನಮ್ಮನ್ನು ಸಹ ಕೊಲೆ ಮಾಡುವುದರಲ್ಲಿ ಯಾವುದೆ ಅನುಮಾನ ಇಲ್ಲ ಅನ್ನೋದು ಮಕ್ಕಳ ಅಳಲಾಗಿತ್ತು.
ಒಟ್ನಲ್ಲಿ ಬೆಳೆ ಬೆಳೆಯಲು ನೀರಿಲ್ಲ ಎಂದಾಗ ತಮಗಿರುವ ಕೊಳವೆ ಬಾವಿಗೋ ಇಲ್ಲ ತಂದೆ ಕೊರಿಸಿದ್ದ ಬಾವಿ ನೀರಿಗೂ ಗಲಾಟೆ ನಡೆಯುತ್ತಿತ್ತು, ಆದ್ರೆ ಈಗ ಮಳೆ ನೀರು ಹೆಚ್ಚಾಗಿದ್ದು ಅದಕ್ಕೂ ಹೀಗೆ ದಾಯಾದಿ ಅಣ್ಣತಮ್ಮಂದಿರುವ ಗಲಾಟೆ ಮಾಡಿಕೊಂಡು ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.. ವರದಿ – ರಾಜೇಂದ್ರ ಸಿಂಹ
Published On - 3:53 pm, Tue, 6 September 22