ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಆಕಾಂಕ್ಷಿಗಳ ದಂಡು; ಸ್ಪರ್ಧೆಯಲ್ಲಿ ಗೆಲುವು ಯಾರಿಗೆ?

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಮೀಸಲು ಕ್ಷೇತ್ರಗಳಾಗಿದ್ದು, ಮೂರು ಸಾಮಾನ್ಯ ಕ್ಷೇತ್ರಗಳಿವೆ. ಅದರಲ್ಲಿಯೂ ಪ್ರಮುಖವಾಗಿ ಜಿಲ್ಲಾ ಕೇಂದ್ರ ಒಳಗೊಳ್ಳುವ ಕೋಲಾರದಿಂದ ಆಯ್ಕೆಯಾಗಲು ಹಲವರು ಪ್ರಯತ್ನಿಸುತ್ತಿದ್ದು, ಚುನಾವಣೆಗೆ ಮೊದಲೇ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆಗಳು ಜೋರಾಗಿದೆ.

ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಆಕಾಂಕ್ಷಿಗಳ ದಂಡು; ಸ್ಪರ್ಧೆಯಲ್ಲಿ ಗೆಲುವು ಯಾರಿಗೆ?
ಕೊತ್ತೂರು ಮಂಜುನಾಥ್, ಶ್ರೀನಿವಾಸಗೌಡ ಮತ್ತು ಸಿ.ಆರ್.ಮನೋಹರ್

ಕೋಲಾರ: ವಿಧಾನಸಭಾ ಚುನಾವಣೆಗೆ ಇನ್ನು ಒಂದೂವರೆ ವರ್ಷ ಬಾಕಿ ಇದೆ. ಹೀಗಿರುವಾಗಲೇ ಬೆಂಗಳೂರಿಗೆ ಕೂದಲಳತೆ ದೂರದಲ್ಲಿರುವ ಕೋಲಾರ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಹತ್ತಾರು ಆಕಾಂಕ್ಷಿಗಳ ದಂಡು ಕ್ಷೇತ್ರದಲ್ಲಿ ಒಂದು ಸುತ್ತು ಹಾಕುತ್ತಿದ್ದಾರೆ. ಸದ್ಯದ ಕೋಲಾರ ಪರಿಸ್ಥಿತಿಯನ್ನು ನೋಡೋದಾದ್ರೆ ಚುನಾವಣೆಯಲ್ಲಿ ಗೆಲ್ಲೋದಕ್ಕಿಂತ ಮೊದಲು ಆಕಾಂಕ್ಷಿಗಳ ಸ್ಪರ್ಧೆಯಲ್ಲಿ ಗೆದ್ದರೆ ಸಾಕು ಎನ್ನುವಂತಾಗಿದೆ. ಕೋಲಾರ ಕ್ಷೇತ್ರದಿಂದ ಚುನಾವಣೆ ಎದುರಿಸಲು ಮಾಜಿ ಶಾಸಕ ವರ್ತೂರ್ ಪ್ರಕಾಶ್ ಹಾಗೂ ಹಾಲಿ ಶಾಸಕ ಶ್ರೀನಿವಾಸಗೌಡ ಬೇಕಾದ ತಯಾರಿ ನಡೆಸುತ್ತಿರುವುದು ಒಂದೆಡೆಯಾದರೆ, ಅವರನ್ನು ಮೀರಿ ಹೊಸ ಮುಖಗಳು ಕ್ಷೇತ್ರದಲ್ಲಿ ಸಂಚಾರ ಆರಂಭ ಮಾಡಿದ್ದಾರೆ.

ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಕೋಲಾರಕ್ಕೆ ಹೆಚ್ಚಿನ ಬೇಡಿಕೆ
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಮೀಸಲು ಕ್ಷೇತ್ರಗಳಾಗಿದ್ದು, ಮೂರು ಸಾಮಾನ್ಯ ಕ್ಷೇತ್ರಗಳಿವೆ. ಅದರಲ್ಲಿಯೂ ಪ್ರಮುಖವಾಗಿ ಜಿಲ್ಲಾ ಕೇಂದ್ರ ಒಳಗೊಳ್ಳುವ ಕೋಲಾರದಿಂದ ಆಯ್ಕೆಯಾಗಲು ಹಲವರು ಪ್ರಯತ್ನಿಸುತ್ತಿದ್ದು, ಚುನಾವಣೆಗೆ ಮೊದಲೇ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆಗಳು ಜೋರಾಗಿದೆ. ಜೆಡಿಎಸ್ ತೊರೆದಿರುವ ಹಾಲಿ ಶಾಸಕ ಕೆ.ಶ್ರೀನಿವಾಸಗೌಡ ಅವರು ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದು, ಅವಕಾಶ ಸಿಕ್ಕರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್ನಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ನು ಕಳೆದ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವ ವರ್ತೂರು ಪ್ರಕಾಶ್ ಗೆಲುವಿಗಾಗಿ ಈಗಾಗಲೇ ಸಾಕಷ್ಟು ತಯಾರಿಯಲ್ಲಿ ತೊಡಗಿದ್ದಾರೆ.

ಕ್ಷೇತ್ರಕ್ಕೆ ಹೈಪ್ರೊಪೈಲ್ ಅಭ್ಯರ್ಥಿಗಳ ಅಬ್ಬರವೇ ಹೆಚ್ಚು!
ಹಾಲಿ ಮಾಜಿ ಶಾಸಕರುಗಳ ಜೊತೆಗೆ ಹೈಪ್ರೊಪೈಲ್ ಅಭ್ಯರ್ಥಿ ಹಾಗೂ ಕಳೆದ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿ ಕೊನೆಯ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದಿದ್ದ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸಹ ಕೋಲಾರ ಕ್ಷೇತ್ರದಿಂದ ಚುನಾವಣೆ ಎದುರಿಸಲು ತಯಾರಿ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ದೊರೆಯದಿದ್ದ ಸಂದರ್ಭದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಎದುರಿಸುವುದಾಗಿ ತಮ್ಮ ಆತ್ಮೀಯರ ಬಳಿ ಹೇಳಿಕೊಂಡಿದ್ದಾರೆ.
ಇನ್ನು ಮತ್ತೊಬ್ಬ ಹೈಪ್ರೊಪೈಲ್ ಅಭ್ಯರ್ಥಿ ಹಾಗೂ ಹಾಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿರುವಂತಹ ಸಿ.ಆರ್.ಮನೋಹರ್ ಅವರು ಸಹ ಕೋಲಾರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈಗಾಗಲೇ ಕೋಲಾರ ಕ್ಷೇತ್ರದಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಜೆಡಿಎಸ್‌ನಲ್ಲಿದ್ದರೂ ಇವರು ಕಾಂಗ್ರೇಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಹಾಲಿ ಶಾಸಕ ಶ್ರೀನಿವಾಸಗೌಡರು ಜೆಡಿಎಸ್ ತೊರೆದಿರುವ ಹಿನ್ನೆಲೆ ಹಾಲಿ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಅವರು ಜೆಡಿಎಸ್ನಿಂದ ಕಣಕ್ಕಿಳಿಯುವ ಎಲ್ಲಾ ಸಾಧ್ಯತೆಗಳು ತಳ್ಳಿಹಾಕುವಂತಿಲ್ಲ.

ಅಭ್ಯರ್ಥಿಗಳ ನಡುವೆ ಕಾಂಗ್ರೆಸ್ ಟಿಕೆಟ್‌ಗೆ ತೀವ್ರ ಪೈಪೋಟಿ
ಕೋಲಾರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಂಡಿರುವ ಬಹುತೇಕ ಆಕಾಂಕ್ಷಿಗಳು ಕಾಂಗ್ರೆಸ್‌ನಿಂದ ಬಿ ಫಾರಂ ಪಡೆದುಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುವುದು ತೀವ್ರ ಕುತುಕೂಲ ಮೂಡಿಸಿದೆ. ಜೆಡಿಎಸ್ ತೊರೆದಿರುವ ಕೆ.ಶ್ರೀನಿವಾಸಗೌಡ, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್ ಹಾಗೂ ಸಿ.ಆರ್.ಮನೋಹರ್ ಅವರು ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯಲು ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರು ಸಹ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದರೆ ಏನು ಲಾಭ, ಕಾಂಗ್ರೇಸ್ ಟಿಕೆಟ್ಗೆ ಯಾಕಿಷ್ಟು ಬೇಡಿಕೆ?
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 40 ಸಾವಿರಕ್ಕೂ ಹೆಚ್ಚಿನ ಅಲ್ಪಸಂಖ್ಯಾತ ಸಮುದಾಯದವರ ಮತಗಳಿದ್ದು, ಪ್ರತಿ ಚುನಾವಣೆಯಲ್ಲಿಯೂ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಅಭ್ಯರ್ಥಿಯ ಪರ ಚಲಾವಣೆಯಾಗಿದೆ. ಹೀಗಾಗಿ ಅಲ್ಪಸಂಖ್ಯಾತರಲ್ಲದವರು ಕಾಂಗ್ರೆಸ್‌ನಿಂದ ಟಿಕೆಟ್ ಪಡೆದರೆ ಅಲ್ಪಸಂಖ್ಯಾತರ ಮತಗಳ ಜತೆಗೆ ಇತರೆ ಸಮುದಾಯದ ಮತಗಳನ್ನು ಪಡೆದು ಸುಲಭವಾಗಿ ಗೆಲುವು ಸಾಧಿಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಂಡು ಕಾಂಗ್ರೆಸ್ ಟಿಕೆಟ್ಗೆ ದುಂಬಾಲು ಬೀಳುತ್ತಿದ್ದು, ಕಾಂಗ್ರೇಸ್ ಟಿಕೆಟ್ ಸಿಕ್ಕರೆ ಗೆಲುವು ಸುಲಭ ಎನ್ನುವುದು ಆಕಾಂಕ್ಷಿಗಳಲ್ಲಿದೆ.

ಕೋಲಾರ ಕ್ಷೇತ್ರಕ್ಕೆ ಹೊಸ ಮುಖಗಳ ಪಾದಾರ್ಪಣೆ!
ಹಾಲಿ-ಮಾಜಿ ಶಾಸಕರುಗಳ ಜತೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಹೆಚ್ಚಿನ ಸಂಖ್ಯೆಯ ಹೊಸ ಆಕಾಂಕ್ಷಿಗಳು ಆಸಕ್ತಿ ತೋರಿರುವುದು ಕಂಡುಬಂದಿದೆ. ಅದರಂತೆ ಮಂಜುನಾಥಗೌಡ ಎಂಬುವವರು ಕಾಂಗ್ರೆಸ್‌ನಿಂದ ಅಥವಾ ಪಕ್ಷೇತರರಾಗಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಕ್ಷೇತ್ರದಲ್ಲಿ ಸಂಚಾರ ಶುರುಮಾಡಿದ್ದಾರೆ. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಸಜ್ಜಾಗಿರುವ ಸಿಎಂಆರ್ ಮಂಡಿ ಮಾಲೀಕ ಶ್ರೀನಾಥ್ ಈಗಾಗಲೇ ಸಮಾಜ ಸೇವಾ ಕಾರ್ಯಗಳಲ ಮೂಲಕ ಗುರುತಿಸಿಕೊಂಡಿದ್ದಾರೆ.

ಮಾಜಿ ಎಪಿಎಂಸಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಸಹ ಜೆಡಿಎಸ್‌ನಿಂದ ಟಿಕೆಟ್ಗೆ ಹೆಚ್ಡಿಕೆ ಬಳಿ ಮನವಿ ಮಾಡಿದ್ದಾರೆ. ಇನ್ನು ಸಮಾಜ ಸೇವೆಯ ಹೆಸರಿನಲ್ಲಿ ಕ್ಷೇತ್ರ ಪ್ರವೇಶಿಸಿರುವ ಉದ್ಯಮಿ ಕೆಜಿಎಫ್ ಬಾಬು, ಕಾಂಗ್ರೇಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾದರೆ. ಮತ್ತೊಬ್ಬ ಚಂದನ್ಗೌಡ ಎಂಬುವವರು ಕ್ಷೇತ್ರದಲ್ಲಿ ಸಮಾಜ ಸೇವಾ ಕಾರ್ಯಕಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಉಪ ಆಯುಕ್ತರಾಗಿ ನಿವೃತ್ತರಾಗಿದ್ದ ಎಲ್.ಎ.ಮಂಜುನಾಥ್ ಸಹ ಕಾಂಗ್ರೇಸ್​ನಿಂದ ಟಿಕೆಟ್​ಗೆ ಪ್ರಯತ್ನ ನಡೆಸಿದ್ದಾರೆ. ಒಟ್ಟಾರೆ ಕೋಲಾರ ಕ್ಷೇತ್ರದಲ್ಲಿ ಪಕ್ಷಗಳ ಕಾರ್ಯಕರ್ತರಿಗಿಂತ ಹೆಚ್ಚಾಗಿ ಟಿಕೆಟ್ ಆಕಾಂಕ್ಷಿಗಳೇ ಹೆಚ್ಚಾಗಿದ್ದು, ಅಂತಿಮವಾಗಿ ಯಾರು ಕಾರ್ಯಕರ್ತರಾಗುತ್ತಾರೆ? ಯಾರಿಗೆ ಟಿಕೆಟ್ ಸಿಗುತ್ತೆ ಎನ್ನುವುದು ಕುತೂಹಲ ಕೆರಳಿಸಿದೆ.

ವರದಿ : ರಾಜೇಂದ್ರಸಿಂಹ

ಇದನ್ನೂ ಓದಿ:
ಉಪ ಚುನಾವಣೆ ಅಭ್ಯರ್ಥಿಗಳ ಪಟ್ಟಿ ರಾಜ್ಯಾಧ್ಯಕ್ಷರಿಗೆ, ಉಮೇದುವಾರಿಕೆ ಬಗ್ಗೆ ಹೈಕಮಾಂಡ್ ತೀರ್ಮಾನ: ಸಿಟಿ ರವಿ

ಸಿಂದಗಿ ಉಪ ಚುನಾವಣೆಗೆ ಮಹೂರ್ತ ನಿಗದಿ: ಇಲ್ಲಿದೆ ಕ್ಷೇತ್ರದ ಸಂಪೂರ್ಣ ವಿವರ; ಪಕ್ಷಗಳ ಲೆಕ್ಕಾಚಾರ

 

Click on your DTH Provider to Add TV9 Kannada