ಕೋಲಾರ: ಅದು ತರಕಾರಿ ಬೆಳೆಗೆ ಫೇಮಸ್ ಆಗಿರೋ ಜಿಲ್ಲೆ. ಮಾವಿನ ಹಣ್ಣಿಗೂ ಅಷ್ಟೇ ಪ್ರಸಿದ್ದಿ ಪಡೆದಿದೆ. ಆದ್ರೆ ಅದೇ ಜಿಲ್ಲೆಯ ರೈತನೊಬ್ಬ ಈಗ ಹೊಸ ಹಣ್ಣಿನ ಬೆಳೆ ಬೆಳೆದಿದ್ದಾನೆ. ಬಿಸಿಲಿನಲ್ಲೂ ಉತ್ತಮ ಫಸಲು ತೆಗೆದಿದ್ದಾನೆ. ಅಷ್ಟಕ್ಕೂ ಸ್ಟ್ರಾಬೆರಿಯಲ್ಲಿ ಶ್ರೀಮಂತನಾಗೋಕೆ ಹೊರಟಿರೋ ರೈತನ ಕತೆ ಇಲ್ಲಿದೆ.
ತರಕಾರಿ ಬಿಟ್ಟು ಹಣ್ಣಿನ ಮೊರೆಹೋದ ರೈತ
ಟೋಮ್ಯಾಟೊ, ಕ್ಯಾರೆಟ್, ಬೀನ್ಸ್, ಹೂಕೋಸು ಹೀಗೆ ತರಕಾರಿ ಬೆಳೆಗಳೇ ಬೆಳೆಯುತ್ತಿದ್ದ ಅಲ್ಲಿನ ರೈತರು ಮಾವು ಬೆಳೆಯಲ್ಲೂ ಎತ್ತಿದ ಕೈ. ಆದ್ರೆ ಅದೇ ಜಿಲ್ಲೆಯ ರೈತರು ಈಗ ಮತ್ತೊಂದು ಹಣ್ಣಿನ ಬೆಳೆಯ ಮೊರೆ ಹೋಗಿದ್ದಾರೆ. ಟೊಮ್ಯಾಟೋ ಸೇರಿದಂತೆ ಹತ್ತಾರು ಬಗೆಯ ತರಕಾರಿಗಳನ್ನು ಬೆಳೆದು ಇಡೀ ದೇಶ-ವಿದೇಶಕ್ಕೆ ರಪ್ತು ಮಾಡುವ ಹೆಗ್ಗಳಿಗೆ ಕೋಲಾರ ಜಿಲ್ಲೆಯ ರೈತರಿಗಿದೆ. ಆದ್ರೆ ಅದೇ ಜಿಲ್ಲೆಯ ಸಂತೇಕಲ್ಲಹಳ್ಳಿಯಲ್ಲಿ ರೈತನೊಬ್ಬ ಈಗ ಸ್ಟ್ರಾಬೆರೆ ಮೊರೆ ಹೋಗಿದ್ದಾನೆ. ಬಿಸಿಲು ಕಡಿಮೆ ಇರೋ ಕಡೆ ಈ ಬೆಳೆ ಬೆಳೆಯಲಾಗುತ್ತೆ. ಆದ್ರೆ ಬಿಸಿಲು ಹೆಚ್ಚಿರೋ ಕೋಲಾರದಲ್ಲೂ ಈ ಬೆಳೆಯ ಮೊರೆ ಹೋದ ಸಂತೆಕಲ್ಲಹಳ್ಳಿಯ ರೈತ ಮಂಜುನಾಥ್, ತನ್ನ ಒಂದು ಎಕರೆ ಜಮೀನಿನಲ್ಲಿ ಈ ಬೆಳೆ ಬೆಳೆದು ಈಗ ಭರ್ಜರಿ ಫಸಲು ತೆಗೆದಿದ್ದಾರೆ.
ಇನ್ನು ಒಂದು ಎಕರೆಯಲ್ಲಿ 8 ಸಾವಿರ ಸ್ಟ್ರಾಬೆರಿ ಗಿಡಗಳನ್ನ ಬೆಳೆಸಿದ್ದು ಮೂರು ತಿಂಗಳಿಗೆ ಹಣ್ಣು ಬಿಡೋಕೆ ಶುರುವಾಗಿದೆ. ಗಿಡ, ಔಷಧ, ಕೂಲಿ ಅಂತಾ ಈಗಾಗಲೇ ರೈತ ಮೂರು ಲಕ್ಷ ಹಣ ಖರ್ಚು ಮಾಡಿದ್ದು, ಈಗಷ್ಟು ಫಸಲು ಆರಂಭವಾಗಿರೋದ್ರಿಂದ ರೈತ ಮಂಜುನಾಥ್ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾನೆ. ಕಳೆದ ಹದಿನೈದು ದಿನಗಳಿಂದ ಹಣ್ಣು ಬಿಡಲಾರಂಭಿಸಿದ್ದು, ದಿನವೊಂದಕ್ಕೆ ಸರಾಸರಿ 200 ರಿಂದ 500 ಬಾಕ್ಸ್ ಸ್ಟ್ರಾಬೆರಿ ಸಿಗ್ತ್ತಿದೆ. ಒಂದು ಬಾಕ್ಸ್ ನಲ್ಲಿ 200 ಗ್ರಾಂ ಸ್ಟ್ರಾಬೆರಿ ಹಣ್ಣುಗಳನ್ನು ಹಾಕಿ ಪ್ಯಾಕ್ ಮಾಡಲಾಗುತ್ತಿದೆ. ಸದ್ಯ ಒಂದು ಬಾಕ್ಸ್ ಸ್ಟ್ರಾಬೆರಿ ಬಾಕ್ಸ್ 50 ರಿಂದ 60 ರೂಪಾಯಿಗೆ ಮಾರಾಟವಾಗುತ್ತಿದೆ.
ಒಟ್ನಲ್ಲಿ ತರಕಾರಿಗಳಲ್ಲಿ ಹೊಸ ಹೊಸ ಪ್ರಯೋಗ ಮಾಡೋ ಕೋಲಾದ ರೈತರು ಈಗ ಸ್ಟ್ರಾಬೆರಿ ಬೆಳೆದು ಒಳ್ಳೆ ಫಸಲು ತೆಗೆದಿದ್ದಾರೆ. ಆರಂಭದಲ್ಲೇ ಉತ್ತಮ ಇಳುವರಿ ಬರ್ತಿರೋದ್ರಿಂದ ಲಾಭ ಸಿಗುತ್ತೇ ಅನ್ನೋ ಆಶಯ ರೈತನದ್ದು.
ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ
ಇದನ್ನೂ ಓದಿ: ಚಿಕ್ಕಮಗಳೂರು: ರಾಗಿ ಬೆಳೆದ ರೈತರಿಗೆ ಸರ್ಕಾರದ ನಿರ್ಧಾರದಿಂದ ಹೆಚ್ಚಿದ ಸಂಕಷ್ಟ; ವಿಶೇಷ ವರದಿ ಇಲ್ಲಿದೆ