ಸಿದ್ದರಾಮಯ್ಯ ಟಮಟೆಗೆ ತಕ್ಕಂತೆ ಹೆಜ್ಜೆ ಹಾಕ್ತಾರೆ, ಆದರೆ ಸರ್ಕಾರ ತಾಳ ತಪ್ಪಿದೆ: ಮಾಜಿ ಸಚಿವ ಸಿಟಿ ರವಿ ಕಿಡಿ

ನ.1ರಂದು ಹಂಪಿಯಲ್ಲಿ ಸಿಎಂ ಸಿದ್ದರಾಮಯ್ಯ ತಾಳ ತಪ್ಪದಂತೆ ಹೆಜ್ಜೆ ಹಾಕಿದ್ದರು. ಡಿಸಿಎಂ ಆಗಿ, 2ನೇ ಬಾರಿ ಸಿಎಂ ಆದರೂ ಅವರ ಸರ್ಕಾರ ತಾಳ ತಪ್ಪಿದೆ. ಅಧಿಕಾರಕ್ಕೆ ಬಂದು 5 ತಿಂಗಳಲ್ಲಿ ತಾಳ ತಪ್ಪಿ ಕೈತಪ್ಪಿದ ದಾರಿಯಲ್ಲಿ ನಡೀತಿದೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ವಾಗ್ದಾಳಿ ಮಾಡಿದ್ದಾರೆ.

Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 05, 2023 | 8:39 PM

ಕೋಲಾರ, ನವೆಂಬರ್​​ 05: ನ.1ರಂದು ಹಂಪಿಯಲ್ಲಿ ಸಿಎಂ ಸಿದ್ದರಾಮಯ್ಯ (CT Ravi) ತಾಳ ತಪ್ಪದಂತೆ ಹೆಜ್ಜೆ ಹಾಕಿದ್ದರು. ಡಿಸಿಎಂ ಆಗಿ, 2ನೇ ಬಾರಿ ಸಿಎಂ ಆದರೂ ಅವರ ಸರ್ಕಾರ ತಾಳ ತಪ್ಪಿದೆ. ಅಧಿಕಾರಕ್ಕೆ ಬಂದು 5 ತಿಂಗಳಲ್ಲಿ ತಾಳ ತಪ್ಪಿ ಕೈತಪ್ಪಿದ ದಾರಿಯಲ್ಲಿ ನಡೀತಿದೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 5 ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೆ ಅಂದುಕೊಂಡಿದ್ದೆವು. ನನಗೆಷ್ಟು ವರ್ಷ, ನಿನಗೆಷ್ಟು ವರ್ಷ ಅಂತಾ ಅನ್ನೋದು ಮೊದಲಿಗೆ ಬಂತು. ಬಳಿಕ ಐವರು ಉಪಮುಖ್ಯಮಂತ್ರಿಗಳು ಇರಬೇಕೆಂದು ಮುನ್ನೆಲೆಗೆ ಬಂತು ಎಂದಿದ್ದಾರೆ.

ಇದರೊಂದಿಗೆ ಕಾಂಗ್ರೆಸ್​ ಶಾಸಕರನ್ನು ಕರೆದುಕೊಂಡು ಪ್ರವಾಸಕ್ಕೆ ಹೊರಟಿದ್ದರು. ಈಗ ಡಿಸಿಎಂ ಡಿಕೆ ಶಿವಕುಮಾರ್​ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡಬೇಕೆಂಬ ಕೂಗು ಶುರುವಾಗಿದೆ. ಇದೆಲ್ಲಾ ನೋಡಿದಾಗ ರಾಜ್ಯ ಸರ್ಕಾರ ತಾಳ ತಪ್ಪಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ 7 ಗಂಟೆ ಕರೆಂಟ್ ನೀಡುತ್ತಿದ್ದೆವು. ಈಗ ಕಾಂಗ್ರೆಸ್​ನವರಿಗೆ 7 ಗಂಟೆ ವಿದ್ಯುತ್ ಕೊಡಲು ಯೋಗ್ಯತೆ ಇಲ್ಲ. ಬದಲಾಗಿ 5 ತಾಸು ವಿದ್ಯುತ್ ಕೊಡುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

2028ರಲ್ಲಿ ನಿಮ್ಮನ್ನು‌ ಸೋಲಿಸಿ ಅಧಿಕಾರಕ್ಕೆ ಬರುತ್ತೇವೆ

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬ್ರೇಕ್​ಫಾಸ್ಟ್​​ ಮೇಲೆ ಆಸಕ್ತಿ ಇದೆ. ಅವರಿಗೆ ಡಿನ್ನರ್ ಹಾಗೂ ಬ್ರೇಕ್​ಫಾಸ್ಟ್ ಮೀಟಿಂಗ್​ನಲ್ಲಿ ಆಸಕ್ತಿ ಇದೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿಎಂ ಸಭೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಬಳಿ ರಾಜ್ಯ ಸರ್ಕಾರ ಪರಿಹಾರ ಕೇಳಿರುವುದು ಸರಿ. ಆದರೆ ನೀವೆಷ್ಟು ಬಿಡುಗಡೆಗೊಳಿಸಿದ್ದೀರಾ. ಖಜಾನೆ ಬೀಗ ಸುರ್ಜೇವಾಲ ಮತ್ತು ವೇಣುಗೋಪಾಲ್​ಗೆ ಕೊಟ್ಟಿದ್ದೀರಾ? ನಾವ್ಯಾರು ನಿಮ್ಮ ಕುರ್ಚಿ ಮೇಲೆ ಕಣ್ಣಿಟ್ಟಿಲ್ಲ. 2028ರಲ್ಲಿ ನಿಮ್ಮನ್ನು‌ ಸೋಲಿಸಿ ಅಧಿಕಾರಕ್ಕೆ ಬರುತ್ತೇವೆ ಎಂದು ಸಿಎಂಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಸಿಎಂ ಆಗುವ ಎಲ್ಲ ಅರ್ಹತೆ ಇದೆ: ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

ನವೆಂಬರ್‌ ತಿಂಗಳಲ್ಲೇ ಬರದ ಭೀಕರತೆ ಅನುಭವಕ್ಕೆ ಬರುತ್ತಿದೆ. ಬರ ಹಿನ್ನೆಲೆಯಲ್ಲಿ ಮುಂದಿನ ದಿನಗಳ ಬಗ್ಗೆ ಭಯ ಕಾಡುತ್ತಿದೆ. ಈಗ ರೈತರ ನೆರವಿಗೆ ಬರಬೇಕಾದ್ದು ರಾಜ್ಯ ಸರ್ಕಾರದ ಕರ್ತವ್ಯ. ಆದರೆ ಈ ಮುನ್ಸೂಚನೆ ರಾಜ್ಯ ಸರ್ಕಾರದಿಂದ ಕಾಣಿಸುತ್ತಿಲ್ಲ ಎಂದಿದ್ದಾರೆ.

ಇಂತಹ ಸಂಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿ ಮನೆಯ ಪೀಠೋಪಕರಣ ಖರೀದಿಗೆ ಮೂರು ಕೋಟಿ ರೂ. ಖರ್ಚು ಮಾಡಿದ್ದಾರೆ. ರಾಜ್ಯದ ಜನ ಸಂಕಷ್ಟದಲ್ಲಿ ಮುಖ್ಯಮಂತ್ರಿ ಸಂತಸದ ಹೆಜ್ಜೆ ಹಾಕುತ್ತಾರೆ ಎಂದು ಶಿವಾನಂದ ಪಾಟೀಲ್ ಹೇಳುತ್ತಾರೆ. ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅಪಮಾನ‌ ಮಾತಾಡಿದ್ದರು.

ಇದನ್ನೂ ಓದಿ: ಜೆಡಿಎಸ್​ನ ಬರ ಅಧ್ಯಯನಕ್ಕೆ ಸಿದ್ದರಾಮಯ್ಯ ಸ್ವಾಗತ, ಬಿಜೆಪಿಗೆ ಟಾಂಗ್​​

ಹೈದರಾಬಾದ್‌ನಲ್ಲಿ ನಮ್ಮ ದೇಶದ ನೋಟು ಎಸೆದದ್ದನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಾರೆ. ನಮ್ಮ ಕೃಷಿ ಸಚಿವ ಚಲುವರಾಯಸ್ವಾಮಿಯವರು ಬೆಳೆ‌ಯನ್ನೇ ಬೆಳೆಯಬೇಡಿ‌ ಎನ್ನುವ ಸಲಹೆ ನೀಡುತ್ತಾರೆ. ಈಗ ಮೂರು ತಿಂಗಳ ಅವಧಿಯಲ್ಲಿ 250 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪರಿಹಾರ ನೀಡಲು ಮನವಿ‌ ಮಾಡಿದ್ದಾರೆ. ನಾವು ಬರಪ್ರವಾಸ ಹೊರಟಿದ್ದು ನೋಡಿ ಅಲ್ಲೊಂದು ಇಲ್ಲೊಂದು ಪ್ರವಾಸ ಮಾಡುತಿದ್ದಾರೆ ಎಂದರು.

ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆ ಎನ್ನುವಂತೆ ಮುಖ್ಯಮಂತ್ರಿಯಂತೆಯೇ ಎಲ್ಲ ಸಚಿವರೂ ಕೂಡ ಆಗಿದ್ದಾರೆ. ಮೊದಲೇ ಬರದ ಸಮಸ್ಯೆಯಿಂದ ಬಳಲುತ್ತಿರುವ ರೈತರಿಗೆ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಪಂಪ್ ಸೆಟ್ ಹಾಕಿಕೊಳ್ಳಲು ಲಂಚ‌ ಕೊಡುವುದನ್ನು ಬಿಟ್ಟು ಎರಡು‌ ಲಕ್ಷ ಸರ್ಕಾರಕ್ಕೆ ಕಟ್ಟಬೇಕು ಎನ್ನುವ ಕಾನೂನು ತಂದಿದ್ದಾರೆ. ಇದು ಗಾಯದ‌ ಮೇಲೆ ಬರೆ ಎಳದಂತೆ. ರೈತರಿಗೆ ವಿಶ್ವಾಸ ತುಂಬುವ ಕೆಲಸ‌ ಮಾಡಬೇಕಿದೆ. ಈ ಹಿನ್ನಲೆಯಲ್ಲಿ ಪ್ರವಾಸ ಮಾಡುತಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.