ಸಿಎಂ ಆಗುವ ಎಲ್ಲ ಅರ್ಹತೆ ಇದೆ: ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

ಸಚಿವ ಸತೀಶ ಜಾರಕಿಹೊಳಿ ಅವರಿಗೆ ಎಲ್ಲ ರೀತಿಯಲ್ಲಿ ನಾಡಿನ ಸಿಎಂ ಆಗಲು ಅರ್ಹತೆಗಳಿವೆ ಎಂಬ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಸಿಎಂ ಆಗುವುದಕ್ಕೆ ಕಾಯಬೇಕಾಗುತ್ತದೆ, ಅದಕ್ಕೆ ಪಕ್ಷವಿದೆ, ಶಾಸಕರು ಇದ್ದಾರೆ. ಪಕ್ಷದ ತೀರ್ಮಾನ ಅಂತಿಮ ಎಂದು ಹೇಳಿದ್ದಾರೆ.

Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 05, 2023 | 6:37 PM

ಬಾಗಲಕೋಟೆ, ನವೆಂಬರ್​​​ 05: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ತಾರಕಕ್ಕೇರಿದಾಗಲೇ ರಾಜನಹಳ್ಳಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ದಲಿತ ಸಿಎಂ ಕೂಗೆಬ್ಬಿಸಿದ್ದಾರೆ. ಸಚಿವ ಸತೀಶ ಜಾರಕಿಹೊಳಿ (satish jarkiholi) ಅವರಿಗೆ ಎಲ್ಲ ರೀತಿಯಲ್ಲಿ ನಾಡಿನ ಸಿಎಂ ಆಗಲು ಅರ್ಹತೆಗಳಿವೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಸತೀಶ ಜಾರಕಿಹೊಳಿ, ಪ್ರಸನ್ನಾನಂದ ಸ್ವಾಮೀಜಿ ಸ್ವಲ್ಪ ಕಾಯಬೇಕು ಅಂತಾ ಕೂಡ ಹೇಳಿದ್ದಾರೆ. ಎಲ್ಲ ಕೂಡಿ ಬಂದಾಗ ಮಾತ್ರ ಮುಖ್ಯಮಂತ್ರಿ ಆಗುವ ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ.

ಜಿಲ್ಲಾ ವಾಲ್ಮೀಕಿ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಆಗುವುದಕ್ಕೆ ಕಾಯಬೇಕಾಗುತ್ತದೆ, ಅದಕ್ಕೆ ಪಕ್ಷವಿದೆ, ಶಾಸಕರು ಇದ್ದಾರೆ. ನಮ್ಮ ಆಶಯ ಹಾಗೂ ಸಮುದಾಯ ಆಶಯ ಇರಬಹುದು ಅದು ಬೇರೆ ವಿಷಯ. ಆದರೆ ಕಾಂಗ್ರೆಸ್ ಪಕ್ಷ ಇಲ್ಲಿ ಬಹಳ ಮುಖ್ಯ, ಪಕ್ಷದ ತೀರ್ಮಾನ ಅಂತಿಮ. ಸಿಎಂ ಆಗುವ ಸಮಯ ಯಾವಾಗ ಕೂಡಿ ಬರುತ್ತೆ ಅಂತಾ ಹೇಳಕ್ಕಾಗಲ್ಲ ಎಂದಿದ್ದಾರೆ.

ಇದನ್ನೂ ಓದಿ: ಸಿಎಂ ಅಧಿಕಾರ ಹಂಚಿಕೆ ಚರ್ಚೆ ಬೆನ್ನಲ್ಲೇ ದಲಿತ ಮುಖ್ಯಮಂತ್ರಿ ಕೂಗು ಎಬ್ಬಿಸಿದ ಸ್ವಾಮೀಜಿ!

ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್​ ನಾಯಕರ ಗೊಂದಲ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ. ನಾನೇ ಇರ್ತೀನಿ ಅಂತಾ ಹೇಳಿದ್ದಾರೆ, ಮ್ಯಾಟರ್ ಕ್ಲೋಸ್‌ ಆಗಿದೆ. ಆ ಸಂದರ್ಭ ಉದ್ಭವ ಆದಾಗ ನೋಡೋಣ ಎಂದು ಹೇಳಿದ್ದಾರೆ.

ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಸತೀಶ್ ಜಾರಕಿಹೊಳಿ ತಿರುಗೇಟು

ಕಾಂಗ್ರೆಸ್ ಶಾಸಕರ ಜೊತೆ ದುಬೈ ಪ್ರವಾಸ ಯಾವುದೂ ಇಲ್ಲ. ಆದರೆ ಮಾಜಿ ಶಾಸಕರ ಜೊತೆ ಟೂರ್ ಹೋಗುವುದು ನೋಡೋಣ. ಅವರು ಯಾವಾಗ ಹೇಳುತ್ತಾರೆ ನೋಡೋಣ. ನಮ್ಮ ಪಕ್ಷದಲ್ಲಿ ಎಲ್ಲರೂ ಒಂದಾಗಿದ್ದೇವೆ. ಮಹಾರಾಷ್ಟ್ರ ಪರಿಸ್ಥಿತಿ ಕರ್ನಾಟಕದಲ್ಲಿ ಉದ್ಭವವಾಗುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರ: ಪ್ರಸನ್ನಾನಂದ ಸ್ವಾಮೀಜಿ 

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಸಿಎಂ ಸಿದ್ದರಾಮಯ್ಯನವರ ಬಗ್ಗೆ ನಮಗೆ ಬಹಳ ಗೌರವ ಇದೆ. ಅವರು ಸಾಮಾಜಿಕ ನ್ಯಾಯದ ಹರಿಕಾರ. ಒಂದು ವೇಳೆ ರಾಜ್ಯದಲ್ಲಿ ಏನಾದ್ರು ಬೆಳವಣಿಗೆ ಆದರೆ ಸತೀಶ ಜಾರಕಿಹೊಳಿ ಮುಖ್ಯಮಂತ್ರಿಯಾಗಲಿ ಎನ್ನುವ ಆಶಯ ವ್ಯಕ್ತಪಡಿಸಿದ್ದಾರೆ.

ಜಾತಿಯಾಧಾರಿತ ತಾರತಮ್ಯ ಬಗ್ಗೆ ಮಾತನಾಡುತ್ತಾ, ರಾಜಕಾರಣ ಅಂತ ಬಂದರೆ ಸತೀಶ್ ಜಾರಕಿಹೊಳಿ ಅವರು ಈ ನಾಡಿನ ದೊರೆ ಆಗುವ ಶಕ್ತಿ ಇದೆ. ಬರುವ ದಿನಮಾನದಲ್ಲಿ ನಾವೆಲ್ಲ ಅವರಿಗೆ ಗಟ್ಟಿಯಾಗಿ ನಿಲ್ಲುತ್ತೇವೆ ಅಂದ ಶಾಸಕರಿಗೆ ಧನ್ಯವಾದ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.