ಕಳಪೆ ಟೊಮೇಟೊ ಸಸಿ ಮಾರಾಟ! ಬರಗಾಲದ ನಡುವೆ ಬೆಳೆದಿದ್ದ ಬೆಳೆ ಸಂಪೂರ್ಣ ಹಾಳು

ಅದು ಬರಗಾಲದ ಕಾಲದಲ್ಲೂ ರೈತರು, ನೀರಿಗೆ ಬದಲು ತಮ್ಮ ಬೆವರು ಹರಿಸಿ ಬೆಳೆದಿದ್ದ ಬೆಳೆ. ಈ ವರ್ಷ ಮಳೆ ಕೈಕೊಟ್ಟ ಕಾರಣ ಬರಗಾಲ ರೈತರನ್ನು ಸಂಕಷ್ಟಕ್ಕೀಡು ಮಾಡಿತ್ತು. ಈ ನಡುವೆ ಧೃತಿಗೆಡದ ರೈತ, ಬೋರ್​ವೆಲ್​ನಲ್ಲಿದ್ದ ನೀರು ಬಸಿದು ಬೆಳೆದಿದ್ದ ಟೊಮೇಟೊ ಕೂಡ ಕಳಪೆ ಸಸಿ ಮಾರಾಟ ಮಾಡಿದ ಹಿನ್ನೆಲೆ ರೈತನಿಗೆ ಕೈಕೊಟ್ಟಿದೆ.

ಕಳಪೆ ಟೊಮೇಟೊ ಸಸಿ ಮಾರಾಟ! ಬರಗಾಲದ ನಡುವೆ ಬೆಳೆದಿದ್ದ ಬೆಳೆ ಸಂಪೂರ್ಣ ಹಾಳು
ಕೋಲಾರದಲ್ಲಿ ಕಳಪೆ ಟೊಮೇಟೊ ಸಸಿ ಮಾರಾಟ! ರೈತ ಕಣ್ಣೀರು
Updated By: ಕಿರಣ್ ಹನುಮಂತ್​ ಮಾದಾರ್

Updated on: May 26, 2024 | 3:31 PM

ಕೋಲಾರ, ಮೇ.26: ಕೋಲಾರ(Kolar) ತಾಲ್ಲೂಕಿನ ಹೊದಲವಾಡಿ ಗ್ರಾಮದ ರೈತ ಮಾಣಿಕ್​ರಾವ್ ಎಂಬುವವರು ತಮ್ಮ ಎರಡು ಎಕರೆ ಭೂಮಿಯಲ್ಲಿ ಟೊಮೇಟೊ ಬೆಳೆ(Tomato Crop)ಬೆಳೆದಿದ್ದರು. ಕಳೆದ ವರ್ಷ ಬರಗಾಲ ಆವರಿಸಿದ್ದ ಹಿನ್ನೆಲೆಯಲ್ಲಿ ಬೆಳೆಯಂತೂ ಕೈಕೊಟ್ಟಿತ್ತು. ಹಾಗಾಗಿ ಬೋರ್​ವೆಲ್​ನಲ್ಲಿ ಇದ್ದ ಅಲ್ಪಸ್ವಲ್ಪ ನೀರನ್ನೇ ಬಸಿದು, ಕೊನೆ ಪಕ್ಷ ತಮಗಿರುವ ಎರಡು ಎಕರೆ ಭೂಮಿಯಲ್ಲಿ ಟೊಮೇಟೊ ಆದರೂ ಬೆಳೆಯೋಣ ಎಂದು ನಿರ್ಧರಿಸಿ, ಗದ್ದೆಕಣ್ಣುರು ಗ್ರಾಮದ ಮಾರುತಿ ನರ್ಸರಿಯವರ ಸಲಹೆ ಮೇರೆಗೆ ಸಾಹೋ ಕಂಪನಿಯ ಟೊಮೇಟೊ ಸಸಿಗಳನ್ನು ತಂದು ನಾಟಿ ಮಾಡಿದ್ದರು.

ಕಳಪೆ ಸಸಿ ಎಫೆಕ್ಟ್​! ಗೋಡಂಬಿ ಹಣ್ಣಿನ ರೀತಿಯಲ್ಲಿ ಟೊಮೇಟೊ

ಟೊಮೇಟೊ ಸಸಿ ನಾಟಿ ಮಾಡಿದ ನಂತರದಲ್ಲಿ ಉತ್ತಮವಾಗಿ ಹಾರೈಕೆ ಮಾಡಿ ಬೆಳೆಸಲಾಗಿತ್ತು. ಆದರೆ, ಗಿಡಗಳು ಹಣ್ಣು ಬಿಡುವ ಕಾಲಕ್ಕೆ ಸರಿಯಾಗಿ ಟೊಮೇಟೊ ಸಸಿ ಕಳಪೆಯಾಗಿರುವ ಪರಿಣಾಮ, ಗೋಡಂಬಿ ಹಣ್ಣು ರೀತಿಯಲ್ಲಿ ಟೊಮೇಟೊ ಹಣ್ಣುಗಳು ಬಿಡುತ್ತಿದ್ದು, ಸಂಪೂರ್ಣ ಕಳಪೆಯಾಗಿದೆ. ಇದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗದೆ, ಇತ್ತ ಗಿಡಗಳನ್ನು ತೋಟದಲ್ಲೂ ಉಳಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ರೈತ ಮಾಣಿಕ್​ರಾವ್ ಇದ್ದಾರೆ.
ಇದನ್ನೂ ಓದಿ:ಪಪ್ಪಾಯ ಬೆಳೆದು ಕೈ ಸುಟ್ಟುಕೊಂಡ ಯುವ ರೈತ; ಬ್ಯುಸಿನೆಸ್ ಬಿಟ್ಟು ಕೃಷಿಗೆ ಇಳಿದ ಯುವಕ ಕಂಗಾಲು!

ಐದು ಲಕ್ಷ ರೂ. ಹಣ ಖರ್ಚು, ರೈತ ಕಣ್ಣೀರು

ಎರಡು ಎಕರೆ ಟೊಮೇಟೊ ಬೆಳೆ ಬೆಳೆಯಲು ಸುಮಾರು ಐದು ಲಕ್ಷ ರೂ ಹಣ ಖರ್ಚು ಮಾಡಲಾಗಿದೆ. ಆದರೆ, ಈಗ ಕಳಪೆ ಸಸಿ ಮಾರಾಟ ಮಾಡಿರುವ ಹಿನ್ನೆಲೆ ಒಂದು ರೂಪಾಯಿ ಆದಾಯ ಇಲ್ಲದೆ ಸಂಪೂರ್ಣ ನಷ್ಟ ಅನುಭವಿಸುವ ಸ್ಥಿತಿ ಎದುರಾಗಿ ಎಂದು ರೈತರ ಮಾಣಿಕ್​ರಾವ್ ಕಣ್ಣೀರಾಕುತ್ತಿದ್ದಾನೆ. ಸಾಹೋ ಕಂಪನಿಯ ಕಳಪೆ ಗುಣಮಟ್ಟದ ಟೊಮೇಟೊ ಸಸಿಗಳನ್ನು ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ರೈತ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾನೆ. ಎರಡು ತಿಂಗಳು ಕಾಲ ಟೊಮೇಟೊ ತೋಟವನ್ನು ಮಗುವಿನಂತೆ ಹಾರೈಕೆ ಮಾಡಿ ಬೆಳೆಯಲಾಗಿತ್ತು. ಈಗ ನೋಡಿದ್ರೆ ಟೊಮೇಟೊ ಕಳಪೆಯಾಗಿ ಸಂಪೂರ್ಣ ಬೆಳೆ ಕೈಕೊಟ್ಟಿದೆ. ಅಲ್ಲದೆ ಹಾಕಿದ್ದ ಬಂಡವಾಳ ಕೂಡ ನೀರಿನಲ್ಲಿ ಹೋಮ ಮಾಡಿದಂತಾಗಿರುವ ಹಿನ್ನೆಲೆಯಲ್ಲಿ ರೈತ ಮಾಣಿಕ್​ ರಾವ್​ ತೋಟಕ್ಕೆ ರೈತ ಸಂಘಟನೆಗಳ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ ಕಳಪೆ ಗುಣಮಟ್ಟದ ಟೊಮೇಟೊ ಸಸಿಗಳನ್ನು ವಿತರಣೆ ಮಾಡಿದ ಸಾಹೋ ಕಂಪನಿಯ ವಿರುದ್ದ ಹಾಗೂ ಕಳಪೆ ಗುಣಮಟ್ಟದ ಸಸಿ ವಿತರಣೆ ಮಾಡಿದ ಸರ್ಸರಿ ಮಾಲೀಕರಿಂದ ನಷ್ಟ ಅನುಭವಿಸಿರುವ ರೈತನಿಗೆ ಪರಿಹಾರ ನೀಡಬೇಕು. ಜೊತೆಗೆ ಈ ರೀತಿ ಕಳಪೆ ಕಂಪನಿಗಳಿಗೆ ಕಡಿವಾಣ ಹಾಕಬೇಕು ಎಂದು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ. ಒಟ್ಟಾರೆ ಸಾಹೋ ಕಂಪನಿ ಹಾಗೂ ನರ್ಸರಿಯವರು ಮಾಡಿರುವ ಎಡವಟ್ಟಿಗೆ ಇಂದು ರೈತರ ನಷ್ಟ ಅನುಭವಿಸುವಂತಾಗಿದ್ದು, ಕೂಡಲೇ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿರುವ ರೈತರಿಗೆ ಸಂಬಂಧಪಟ್ಟ ಕಂಪನಿಗಳಿಂದ ಸೂಕ್ತ ಪರಿಹಾರ ಕೊಡಿಸಬೇಕು ಎಂದು ರೈತ ಮುಖಂಡರು ಸೇರಿ ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ