ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ರಾಜಕೀಯ ಕೊಲೆಗಳಾಗಿದ್ವು: ಸಿದ್ದು ವಿರುದ್ಧ ಎಚ್ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ
ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಗಲಭೆಗಳು ಆಗಿರಲಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಎಷ್ಟೋ ರಾಜಕೀಯ ಕೊಲೆಗಳಾಗಿದ್ದವು ಎಂದು ದೂರಿದರು.
ಕೋಲಾರ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಗಲಭೆಗಳು ಆಗಿರಲಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಎಷ್ಟೋ ರಾಜಕೀಯ ಕೊಲೆಗಳಾಗಿದ್ದವು. ಕಾಂಗ್ರೆಸ್ನವರು ಜೆಡಿಎಸ್ ಪಕ್ಷವನ್ನು ಮುಗಿಸಲು ಹೊರಟಿದ್ದರು. ಆಗ ಬಿಜೆಪಿ ಜೊತೆ ಸೇರಿ ನಾನು ಸರ್ಕಾರ ರಚಿಸಿದೆ. ನನ್ನ ಅಧಿಕಾರ ಅವಧಿಯಲ್ಲಿ ಎಂದಿಗೂ ಕೋಮುವಾದಕ್ಕೆ ಬೆಂಬಲ ಕೊಟ್ಟಿರಲಿಲ್ಲ. ವಾಜಪೇಯಿ ಸರ್ಕಾರದಲ್ಲಿ ಮಮತಾ ಬ್ಯಾನರ್ಜಿ ಸಚಿವರಾಗಿರಲಿಲ್ಲವೇ? ಡಿಎಂಕೆ ಬೆಂಬಲ ಪಡೆದಿರಲಿಲ್ಲವೇ ಎಂದು ಪ್ರಶ್ನಿಸಿದರು. ಜಿಲ್ಲೆಯ ಬಂಗಾರಪೇಟೆಯಲ್ಲಿ ಯರಗೋಳ್ ಜಲಾಶಯ ವೀಕ್ಷಣೆ ಬಳಿಕ ಮಾತನಾಡಿದ ಅವರು, ನಮ್ಮ ಜಾತ್ಯತೀತ ತತ್ವವನ್ನು ಯಾರಿಗೂ ಮಾರಾಟ ಮಾಡಿಲ್ಲ. ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಹೊರಟಿದ್ದಾರೆ, ಅದು ಸಾಧ್ಯವಿಲ್ಲ ಎಂದರು. ನಮ್ಮ ತಂದೆ ಹೆಸರಿನಲ್ಲಿ ಮಾಡಿದ ಆಣೆ ಪ್ರಮಾಣದ ಬಗ್ಗೆ ಕೇಳ್ತಾರೆ. ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿದ್ದಾಗ ಇದ್ದಾಗ ಎಷ್ಟು ಕೊಲೆಗಳಾದವು ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ವೇಳೆ ನಡೆದಿರುವ ಅಕ್ರಮ ಕುರಿತು ಪ್ರತಿಕ್ರಿಯಿಸಿದ ಅವರು, ಗೃಹ ಇಲಾಖೆ ಮುಖ್ಯಸ್ಥರ ನಿರ್ಲಕ್ಷ್ಯದಿಂದ ಅಕ್ರಮ ಆಗಿರಬಹುದು ಎಂದು ಅನುಮಾನಿಸಿದರು. ನಾನು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಹೇಳಿಕೆ ನೀಡುವುದಿಲ್ಲ. ಯಾವುದೇ ಇಲಾಖೆಯ ನೇಮಕಾತಿಯಿದ್ದರೂ ಹಣ ನೀಡದೆ ಕೆಲಸ ಆಗುತ್ತಿಲ್ಲ. ನನ್ನ ಕಾಲದಲ್ಲಿ ಏನಾದರೂ ಅಕ್ರಮವಾಗಿದ್ದರೆ ಅದರ ತನಿಖೆ ನಡೆಯಲಿ. ನಾನು ಪಲಾಯನ ಮಾಡುವುದಿಲ್ಲ. ಸರ್ಕಾರ ನಾಟಕೀಯವಾಗಿ ನಾಲ್ಕು ದಿನ ತನಿಖೆ ನಡೆಸಿ ಪ್ರಕರಣವನ್ನು ಮುಚ್ಚಿಹಾಕಬಾರದು. 15 ದಿನ ಪ್ರಚಾರ ಕೊಟ್ಟು ನಂತರ ಕೋಲ್ಡ್ ಸ್ಟೋರೇಜ್ಗೆ ತಳ್ಳುತ್ತಾರೆ. ವ್ಯವಸ್ಥೆ ಹಾಳುಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಹಣ ತಿಂದವರನ್ನು ಆರಾಮಾಗಿ ಪೊಗದಸ್ತಾಗಿ ಬೆಳೆಯಲು ಬಿಟ್ಟಿದ್ದಾರೆ. ಸರ್ಕಾರ ಅಮಾಯಕರನ್ನು ಬಂಧಿಸಿ ಕ್ರಮಕೈಗೊಳ್ಳುವುದು ಬೇಡ ಎಂದರು.
ಈ ಹಿಂದೆ ಡ್ರಗ್ಸ್ ನಿರ್ಮೂಲನೆಗೆ ಹೋರಾಟ ಮಾಡುತ್ತೇವೆಂದು ಹೇಳಿದ್ದರು. ಕೆಲವು ದಿನಗಳ ನಂತರ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಸುಮ್ಮನೆ ಆರೋಪ ಮಾಡುತ್ತಾರೆ ಆಮೇಲೆ ಮಾತಾಡುವುದೇ ಇಲ್ಲ. ಆರಂಭದಲ್ಲಿ ಪ್ರಚಾರ ನೀಡಿ, ಆಮೇಲೆ ಗುಂಡಿಗೆ ಹಾಕುವುದು ಬೇಡ ಎಂದು ಸಲಹೆ ಮಾಡಿದರು.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಯರಗೋಳ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ನಂತರ, ಜನತಾ ಜಲಧಾರೆ ಕಾರ್ಯಕ್ರಮದ ಅಂಗವಾಗಿ ಜಲಾಶಯದ ನೀರು ಸಂಗ್ರಹಿಸಿಕೊಂಡರು. ಭೀಮಗಾನಹಳ್ಳಿ ಗ್ರಾಮದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಸ್ಥಳೀಯ ನಾಯಕರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಕುಮಾರಸ್ವಾಮಿಯೇ ಮುಂದಿನ ಮುಖ್ಯಮಂತ್ರಿ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ: ರೇವಣ್ಣ
ಇದನ್ನೂ ಓದಿ: ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಕುಟುಂಬಗಳಿಗೆ ಮನೆ, ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ಎಂದರು ಕುಮಾರಸ್ವಾಮಿ