
ಬೆಂಗಳೂರು/ಕೋಲಾರ, (ನವೆಂಬರ್ 04): ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಮಾಲೂರು ವಿಧಾನಸಭೆ ಕ್ಷೇತ್ರದ ( Malur Assembly Constituency )ಮರು ಮತ ಎಣಿಕೆಗೆ (votes recount) ದಿನಾಂಕ ನಿಗದಿ ಮಾಡಿ ಕರ್ನಾಟಕ ಚುನಾವಣಾ ಆಯೋಗ ಪತ್ರ ಬರೆದಿದೆ. ಇದೇ ನವೆಂಬರ್ 11ರಂದು ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತೆಣಿಕೆಗೆ ದಿನಾಂಕ ನಿಗದಿಪಡಿಸಿಕರ್ನಾಟಕ ಚುನಾವಣಾ ಆಯೋಗವು, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಕೋಲಾರ ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಸೂಚನೆ ನೀಡಿದೆ.
ಮಾಲೂರು ವಿಧಾನಸಭೆ ಕ್ಷೇತ್ರದ ಮರು ಮತ ಎಣಿಕೆಗೆ ಆಗ್ರಹಿಸಿ ಕೋರ್ಟ್ ಮೆಟ್ಟಿಲೇರಿದ್ದ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ, ತಹಶೀಲ್ದಾರ್ ಕೆಲ ಚುನಾವಣಾ ಸಾಮಗ್ರಿಗಳ ಅಕ್ರಮವಾಗಿ ವಶಕ್ಕೆ ಪಡೆದಿರುವ ಬಗ್ಗೆ ಧ್ವನಿ ಎತ್ತಿದ್ದರು. ಅಲ್ಲದೇ ಈ ಬಗ್ಗೆ ಪತ್ರ ಬರೆದು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದರು. ಇದರ ಬೆನ್ನಲ್ಲೇ ಇದೀಗ ಚುನಾವಣೆ ಆಯೋಗವು ಸಹ ಕೋಲಾರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ನವೆಂಬರ್ 11 ರಂದು ಮರ ಮತ ಎಣಿಕೆ ಮಾಡುವಂತೆ ಸೂಚಿಸಿದ್ದಾರೆ.
2023ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಂಜೇಗೌಡ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದ್ರೆ, ಮತ ಎಣಿಕೆ ಸರಿಯಾಗಿ ಆಗಿಲ್ಲ. ಹೀಗಾಗಿ ಕೆವೈ ನಂಜೇಗೌಡ ಅವರ ಶಾಸಕ ಸ್ಥಾನ ಅಸಿಂಧುಗೊಳಿಸುರವಂತೆ ಪರಾಜಿ ಅಭ್ಯರ್ಥಿ ಮಂಜುನಾಥ್ ಗೌಡ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನಂಜೇಗೌಡ ಆಯ್ಕೆ ಅಸಿಂಧುಗಳೊಸಿ ಆದೇಶ ಹೊರಡಿಸಿತ್ತು. ಅಲ್ಲದೇ ಮರುಮತ ಎಣಿಕೆಗೆ ಆದೇಶಿಸಿತ್ತು. ಆದ್ರೆ, ಇದಕ್ಕೆ ಪ್ರಶ್ನಿಸಿ ನಂಜೇಗೌಡ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಶಾಸಕ ಸ್ಥಾನ ಅಸಿಂಧು ಆದೇಶಕ್ಕೆ ತಡೆ ನೀಡಿತ್ತು. ಅಲ್ಲದೇ ಮರುಮತ ಎಣಿಕೆಗೆ ಸುಪ್ರೀಂಕೋರ್ಟ್ ಸಹ ಆದೇಶ ಹೊರಡಿಸಿತ್ತು.
2023ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕೋಲಾರ ನಗರದ ಕಾಲೇಜು ವೃತ್ತದಲ್ಲಿನ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ನಡೆದಿತ್ತು. ಆಗ, ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮಾಲೂರು ಆರಂಭದಿಂದಲೂ ಗಮನ ಸೆಳೆದಿತ್ತು. ಕಾರಣ ಮಾಲೂರಿನಲ್ಲಿ ಪ್ರಬಲವಾದ ತ್ರಿಕೋನ ಪೈಪೋಟಿ ಇತ್ತು. ಮಾಲೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಪ್ರಮುಖ ಮೂರು ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆರಂಭದಿಂದಲೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಂಜೇಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆದರೆ ಮಧ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸ್ವಾಭಿಮಾನಿ ಜನತಾ ಪಕ್ಷದ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಮುನ್ನಡೆ ಸಾಧಿಸಿದ್ದರು. ಆ ವೇಳೆ, ಹೂಡಿ ವಿಜಯ್ ಕುಮಾರ್ ಗೆಲುವು ಬಹುತೇಕ ಖಚಿತ ಎನ್ನುವಷ್ಟರ ಮಟ್ಟಿಗೆ ಅಲ್ಲಿ ವಾತಾವರಣ ನಿರ್ಮಾಣವಾಗಿತ್ತು. ಕಾಂಗ್ರೆಸ್ ಪಕ್ಷದ ಕೆಲವು ರಾಜ್ಯ ಮುಖಂಡರು ಪಕ್ಷೇತರ ಅಭ್ಯರ್ಥಿಯನ್ನು ಸಂಪರ್ಕ ಮಾಡುವ ಪ್ರಯತ್ನ ಸಹ ನಡೆಸಿದ್ದರು.
ಕೊನೆಯ ಮೂರು ಸುತ್ತು ಬಾಕಿ ಇರುವಾಗ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ಗೆ ಹಿನ್ನಡೆಯಾಗಿ ಮಂಜುನಾಥ ಗೌಡ ಹಾಗೂ ನಂಜೇಗೌಡ ನಡುವೆ ಪೈಪೋಟಿ ಶುರುವಾಗಿತ್ತು. ಇನ್ನೊಂದು ಸುತ್ತು ಬಾಕಿ ಇರುವಾಗಲೇ ಮಂಜುನಾಥ ಗೌಡ ಪರ ಕಾರ್ಯಕರ್ತರು ವಿಜಯೋತ್ಸವದ ಮೂಡ್ಗೆ ತೆರಳಿದ್ದರು. ಅಲ್ಲದೆ ಮತೆಣಿಕೆ ಕೇಂದ್ರದಿಂದ ದೂರದಲ್ಲಿದ್ದ ಮಂಜುನಾಥಗೌಡರಿಗೆ ಕರೆ ಮಾಡಿ, ನೀವೇ ಗೆದ್ದಿದ್ದು ಬನ್ನಿ ಎಂದಿದ್ದರು. ಆದರೆ ಅವರು ಮತ ಎಣಿಕೆ ಕೇಂದ್ರಕ್ಕೆ ಬರುವಷ್ಟರಲ್ಲಿ ಅಲ್ಲಿನ ಚಿತ್ರಣ ಬದಲಾಗಿತ್ತು! ಕೊನೆಯ ಸುತ್ತಿನ ಎಣಿಕೆಯಲ್ಲಿ ನಂಜೇಗೌಡ ಅವರೇ 248 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರೆ ಎಂಬ ಮಾಹಿತಿ ಸಿಗುತ್ತಿದ್ದಂತೆ, ಮಂಜುನಾಥಗೌಡ ಆದಿಯಾಗಿ ಅವರ ಬೆಂಬಲಿಗರು ಆಕ್ರೋಶ ಹೊರಹಾಕಿದ್ದರು.
Published On - 6:47 pm, Tue, 4 November 25