ಆಹಾರ ಚಕ್ರದಲ್ಲಿ ಒಂದಕ್ಕೊಂದು ಬದ್ದ ವೈರಿಗಳು; ಆದರಿಲ್ಲಿ ಎಲ್ಲರೂ ಒಂದಾಗಿ ಆಟ

ಅವು ತಮ್ಮ ಆಹಾರ ಚಕ್ರದಲ್ಲಿ ಒಂದಕ್ಕೊಂದು ಬದ್ದ ವೈರಿಗಳು, ಒಂದನ್ನೊಂದು ನೋಡಿದ್ರೆ ಸಾಕು ಕಚ್ಚಿ ಕೊಲ್ಲುವಷ್ಟು ದ್ವೇಷ, ಕೊಂದು ತಿನ್ನುವಂತಹ ಪ್ರಾಣಿಗಳು. ಆದ್ರೆ, ವಿಚಿತ್ರ ಅಂದ್ರೆ ಇಲ್ಲೊಬ್ಬ ರೈತನ ಮನೆಯಲ್ಲಿ ಅಂತಹ ಪ್ರಾಣಿಗಳೆಲ್ಲ ಒಂದಕ್ಕೊಂದು ಅನ್ಯೋನ್ಯವಾಗಿ ಜೀವನ ನಡೆಸುತ್ತಿವೆ. ಪ್ರಾಣಿಗಳೇ ಗುಣದಲ್ಲಿ ಮೇಲು ಮಾನವನದಕ್ಕಿಂತ ಕೀಳು ಅನ್ನೋ ಮಾತು ಇಲ್ಲಿ ನಿಜ ಎನಿಸುತ್ತಿದೆ.

ಆಹಾರ ಚಕ್ರದಲ್ಲಿ ಒಂದಕ್ಕೊಂದು ಬದ್ದ ವೈರಿಗಳು; ಆದರಿಲ್ಲಿ ಎಲ್ಲರೂ ಒಂದಾಗಿ ಆಟ
ಒಂದೇ ಮನೆಯಲ್ಲಿ ಬೆಕ್ಕು, ನಾಯಿ, ಕೋತಿ ಆಟ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 21, 2024 | 8:47 PM

ಕೋಲಾರ, ಮೇ.21: ಪ್ರಾಣಿಗಳು ಹಾಗೂ ಅವುಗಳ ಆಹಾರ ಪದ್ದತಿಗಳು ಒಂದಕ್ಕೊಂದು ವಿಭಿನ್ನವಾಗಿದೆ. ಹಾಗಾಗಿ ಒಂದು ಪ್ರಾಣಿಯನ್ನು ನೋಡಿದ್ರೆ, ಮತ್ತೊಂದು ಪ್ರಾಣಿಗೆ ಆಗಲ್ಲ. ಅದು ಮನುಷ್ಯನಿಗೂ ಅನ್ವಯಿಸುತ್ತದೆ. ಯಾಕಂದ್ರೆ ಹುಟ್ಟಿದ ಮನೆಯಲ್ಲೆ ಅಣ್ಣ-ತಮ್ಮಂದಿರೇ ಜಗಳವಾಡುತ್ತಾ ಹೆತ್ತವರನ್ನೇ ಮನೆಯಿಂದ ಹೊರಹಾಕುವ ಇಂದಿನ ಕಲಿಯುಗದಲ್ಲಿ ಇಲ್ಲೊಂದು ವಿಚಿತ್ರವಾದ ಕಥೆ ಆರಂಭವಾಗಿದೆ. ಒಂದು ಕೋತಿ(Monkey), ಮತ್ತೊಂದು ನಾಯಿ(Dog), ಇನ್ನೊಂದು ಬೆಕ್ಕು (Cat) ಇವು ಒಂದಕ್ಕೊಂದು ಒಳ್ಳೆಯ ಸ್ನೇಹಿತರು. ಒಂದನ್ನ ಮತ್ತೊಂದು ಬಿಟ್ಟಿರೋಲ್ಲ, ಬೆಕ್ಕು ಹೊರ ಬಂದರೆ ಕೋತಿಯೂ ಹೊರಬರುತ್ತೆ, ನಾಯಿಗೆ ಹಾಕಿದ ಊಟವನ್ನ ಕೋತಿ ಎಲ್ಲವೂ ಸೇರಿ ತಿನ್ನುತ್ತವೆ. ಬೆಕ್ಕಿಗೆ ಪಕ್ಕದಲ್ಲೆ ಊಟ ಹಾಕಬೇಕು, ಮುಂಜಾನೆಯ ಆರಂಭದಿಂದ ಸಂಜೆ ಕಳೆದು ಕತ್ತಲು ಆವರಿಸಿದರೂ ಇವು ಒಂದನ್ನೊಂದು ಬಿಟ್ಟು ಇರಲ್ಲ.

ಒಂದೇ ಮನೆಯಲ್ಲಿ ಬೆಕ್ಕು, ಕೋತಿ, ನಾಯಿ ಒಳ್ಳೆ ಸ್ನೇಹಿತರು

ಇದೊಂದು ವಿಚಿತ್ರ ಅಂದರೂ ಇದು ಸತ್ಯ. ಈ ವಿಚಿತ್ರ, ವಿಭಿನ್ನ ಪ್ರಾಣಿಗಳಿರೋದು ಕೊಲಾರ ತಾಲ್ಲೂಕಿನ ಮಟ್ನಹಳ್ಳಿ ಗ್ರಾಮದ ರೈತ ಶ್ರೀನಿವಾಗೌಡ ಎಂಬುವವರ ಮನೆಯಲ್ಲಿ. ನಾಯಿ ಮತ್ತು ಬೆಕ್ಕು ಸಾಮಾನ್ಯವಾಗಿ ಒಂದಕ್ಕೊಂದು ಹೊಂದಿಕೊಳ್ಳದ ಸ್ವಭಾವದ ಪ್ರಾಣಿಗಳು. ಆದ್ರೆ, ಇಲ್ಲಿ ಅವೂ ಕೂಡ ಪ್ರೀತಿ ಹಂಚಿಕೊಳ್ಳುವ ದೃಶ್ಯಗಳು ಕಾಣಬಹುದಾಗಿದೆ. ಇವರೆಡರ ಮಧ್ಯ ಬಾಂಧವ್ಯವನ್ನು ಬೆಸೆದ ಕೋತಿ ಮರಿ, ಇಡೀ ಮನೆಯಲ್ಲಿ ಚಿಟಿ ಪಿಟಿ ಎಂದು ಓಡಾಡಿಕೊಂಡು ತನ್ನಿಬ್ಬರು ಸ್ನೇಹಿತರೊಂದಿಗೆ ಆಟವಾಡುತ್ತಾ ತಮ್ಮ ಮನೆಯ ಮಾಲೀಕರಿಗೆ ಪ್ರೀತಿ ಕೊಡುವ ಮುದ್ದಿನ ಸ್ನೇಹಿತರಾಗಿದ್ದಾರೆ.

ಇದನ್ನೂ ಓದಿ:ವರ್ಷದ ಮೊದಲ ಮಳೆಗೆ ಬಂಡೀಪುರ ಫುಲ್ ಗ್ರೀನ್​; ಕೆರೆ ಕಟ್ಟೆಗಳು ಭರ್ತಿ, ವನ್ಯ ಪ್ರಾಣಿಗಳು ​ಖುಷ್​

ಕೋತಿಗೆ ಜಾರ್ಜ್ ಬುಷ್ , ನಾಯಿಗೆ ಡೊನಾಲ್ಡ್ ಟ್ರಂಪ್ ಎಂದು ನಾಮಕರಣ

ಇನ್ನು ರೈತ ಶ್ರೀನಿವಾಸಗೌಡ ಮನೆಯಲ್ಲಿ ಮೊದಲಿನಿಂದಲೂ ಪ್ರಾಣಿ ಪ್ರೀತಿ ಹೆಚ್ಚು, ಈ ಕುಟುಂಬದಲ್ಲಿ ಕೃಷಿ ಜೊತೆಗೆ ಕೃಷಿಗೆ ಅನುಕೂಲವಾಗುವ ಹಸು, ಎಮ್ಮೆ, ನಾಯಿ ಸಾಕುವುದು ಅಭ್ಯಾಸ. ಅದರಂತೆ ಕಳೆದ ಮೂರು ವರ್ಷದ ಹಿಂದೆ ಅನಾಥವಾಗಿದ್ದ ಒಂದು ಕೋತಿ ಮರಿ ಹಾಗೂ ಮನೆಯಲ್ಲೆ ಹುಟ್ಟಿದ ಬೆಕ್ಕನ್ನ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ ಶ್ರೀನಿವಾಸಗೌಡ ಮೂವರು ಸ್ನೇಹಿತರಿಗೂ ಹೆಸರುಗಳನ್ನು ನಾಮಕರಣ ಮಾಡಿದ್ದಾರೆ. ಜಾರ್ಜ್ ಬುಷ್ ಹುಟ್ಟಿದ ದಿನ ಸಿಕ್ಕಿದ ಕೋತಿ ಮರಿಗೆ ಈ ಹೆಸರಿಟ್ರೆ, ನಿಯತ್ತಿಗೆ ಹೆಸರಾದ ನಾಯಿಗೆ ಟ್ರಂಪ್ ಅಧಿಕಾರ ತ್ಯಾಗ ಮಾಡಿದ ದಿನದಲ್ಲಿ ಸಿಕ್ಕ ಹಿನ್ನೆಲೆ ಡೊನಾಲ್ಡ್ ಟ್ರಂಪ್ ಎಂದು ನಾಮಕರಣ ಮಾಡಿದ್ದಾರೆ.

ಇನ್ನು ಉಳಿದದ್ದು ಬೆಕ್ಕು ಸೈಬಿರಿಯನ್ ಬ್ರೀಡ್ ಕ್ಯಾಟ್, ಇದು ಮನೆಯ ಒಡತಿ ಅಂದಹಾಗೆ ಇದರ ಹೆಸರು ಗೌಡತಿ ಅಂತ. ಯಾಕಂದ್ರೆ ಕಿರಿಕ್ ಆರಂಭವಾದ್ರೆ ಇದರಿಂದಲೆ ಆರಂಭವಾಗಬೇಕು ಅನ್ನೋ ಕಾರಣಕ್ಕೆ ಗೌಡತಿ ಎಂದು ನಾಮಕರಣ ಮಾಡಲಾಗಿದೆ. ಈ ಮೂರು ಪ್ರಾಣಿಗಳೊಂದಿಗೆ ಈಗಲೂ ಮನೆಯಲ್ಲಿ ಹಸು, ಕುರಿ, ಮೇಕೆ, ಕೋಳಿ, ಪಾರಿವಾಳ ಹೀಗೆ ಹಲವು ಪ್ರಾಣಿಗಳಿವೆ. ಆ ಮನೆ ಮಂದಿಗೆಲ್ಲ ಪ್ರಾಣಿಗಳ ಮೇಲೆ ಆಗಾಧ ಪ್ರೀತಿ ಕೂಡ ಇದೆ. ಅದರಂತೆ ಮನೆಯ ಮಕ್ಕಳಂತೆ ಇವು ಸಹ ಅನ್ಯೋನ್ಯವಾಗಿರುವುದು ವಿಶೇಷವಾಗಿದೆ ಅನ್ನೋದು ಮನೆಯ ಸದಸ್ಯ ನಾಗರಾಜ್ ಅವರ ಮಾತು.

ಒಟ್ಟಾರೆ ಮನುಷ್ಯನೆ ಇವತ್ತಿನ ದಿನಗಳಲ್ಲಿ ದ್ವೇಷ, ಅಸೂಯೆ, ಮೇಲು-ಕೀಳು ಎಂದು ಪ್ರತಿನಿತ್ಯ ಕಿತ್ತಾಡುತ್ತಾ, ಒಂದೆ ತಾಯಿ ಮಕ್ಕಳು ದ್ವೇಷ ಕಾರುವ ಇವತ್ತಿನ ದಿನಗಳಲ್ಲಿ ಈ ಪ್ರಾಣಿಗಳ ಸ್ನೇಹ ಪ್ರೀತಿ ಅಪರೂಪದಲ್ಲಿ ಅಪರೂಪ ಎನ್ನಬಹುದಾಗಿದೆ. ಇಡೀ ನಾಗರೀಕ ಸಮಾಜವೇ ಅನಾಗರಿಕರಾಗಿರುವ ಇವತ್ತಿನ ದಿನಗಳಲ್ಲಿ ಈ ಮೂಕ ಪ್ರಾಣಿಗಳ ಸ್ನೇಹ ಸಂಬಂಧ ಮಾನವ ಸಮಾಜಕ್ಕೆ ಮಾದರಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ