ಕೋಲಾರದಲ್ಲಿ ಹೆಚ್ಚಾದ ಲೋಕಸಭಾ ಬೆಟ್ಟಿಂಗ್
ಕೋಲಾರ, ಮೇ.01: ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪಟ್ಟಿಗೆ ಸೇರಾಗಿದೆ. ಹೀಗಿರುವಾಗ ಕೋಲಾರ(
Kolar)ದಲ್ಲಿ ನಾಲ್ಕು ಜನರು ಸೇರಿದ್ರೆ ಮಾತು ಶುರುವಾಗೋದೆ ಚುನಾವಣೆ ಏನಾಗಬಹುದೆಂದು. ಈ ಬಾರಿ ಚುನಾವಣೆಯಲ್ಲಿ
ಯಾರು ಗೆಲ್ಲುತ್ತಾರೆ, ಯಾರು ಸೋಲ್ತಾರೆ, ಎನ್ನುವುದೊಂದೇ ಲೆಕ್ಕಾಚಾರ. ಅದರಲ್ಲೂ ತಮ್ಮ ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗಂತು ರಾತ್ರಿ ಹೊತ್ತು ನಿದ್ದೆ ಬರುತ್ತಿಲ್ಲ. ಅದರಲ್ಲೂ ಚುನಾವಣೆಯ ಫಲಿತಾಂಶಕ್ಕೆ ಬರೋಬ್ಬರಿ ಒಂದುವರೆ ತಿಂಗಳು ಕಾಯಬೇಕಾದ ಪರಿಸ್ಥಿತಿ ಇರುವ ಕಾರಣ ಕುತೂಹಲ ದುಪ್ಪಟ್ಟಾಗುತ್ತಿದ್ದು, ಬೆಟ್ಟಿಂಗ್(
Betting) ಆಗಿ ಪರಿವರ್ತನೆಯಾಗುತ್ತಿದೆ.
ಬೆಟ್ಟಿಂಗ್ಗೆ ವೇದಿಕೆಯಾದ ಲೋಕಸಭಾ ಚುನಾವಣೆ
ಚುನಾವಣೆ ಮುಗಿದು ಆರು ದಿನ ಕಳೆದಿದೆ ಈಗ ರಿಲ್ಯಾಕ್ಸ್ ಮೂಡ್ನಿಂದ ಹೊರ ಬಂದಿರುವ ಕಾರ್ಯಕರ್ತರು ಹಾಗೂ ಮುಖಂಡರಂತೂ ಎಲ್ಲೆಲ್ಲೂ ಒಂದೇ ಮಾತು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಗೆಲ್ತಾರಾ ಅಥವಾ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಗೆಲ್ಲುತ್ತಾರಾ ಎಂದು. ಈ ಹಿನ್ನಲೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಚುನಾವಣೆಯಲ್ಲಿ ತಮ್ಮ ತಮ್ಮ ಅಭ್ಯರ್ಥಿ ಪರವಾಗಿ ಬೆಟ್ಟಿಂಗ್ ಆಡೋದಕ್ಕೆ ಶುರುಮಾಡಿದ್ದಾರೆ.
ಬಾಜಿಯಲ್ಲಿವೆ ಕುರಿ, ಕೋಳಿ, ಜಮೀನು
ಇನ್ನು ಐಪಿಎಲ್ ಕ್ರಿಕೆಟ್ ಮ್ಯಾಚ್ಗಳಲ್ಲಿ ಬೆಟ್ಟಿಂಗ್ ಕಟ್ಟಲು ಪ್ರತ್ಯೇಕ ವೆಬ್ ಸೈಟ್, ಮೊಬೈಲ್ ಅಪ್ಲಿಕೇಷನ್ ಗಳು ಇರುತ್ತವೆ. ಆದರೆ, ಇಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡೆವೆ ನೇರಾನೇರ ಬೆಟ್ಟಿಂಗ್ ನಡೆಯುತ್ತದೆ. ಒಂದು ಗ್ರಾಮದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಬೆಟ್ಟಿಂಗ್ ಕಟ್ಟಿಕೊಳ್ಳುತ್ತಿದ್ದಾರೆ. ಪ್ರಮುಖವಾಗಿ ತಮ್ಮ ನೆಚ್ಚಿನ ನಾಯಕನ ಪರವಾಗಿ ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಈ ಬೆಟ್ಟಿಂಗ್ನಲ್ಲಿ ಕೇವಲ ಹಣವಷ್ಟೇ ಅಲ್ಲ, ಬೈಕ್, ಕಾರು, ಕುರಿ, ಕೋಳಿ, ಮೇಕೆ, ಹಸು, ಜೊತೆಗೆ ಬೆಲೆಬಾಳುವ ಭೂಮಿಯನ್ನು ಕೂಡ ಪಣಕ್ಕಿಡಲಾಗಿದೆಯಂತೆ.
ಕೇವಲ ಚುನಾವಣೆ ಸಂಬಂಧವೇ ಜಿಲ್ಲೆಯಾಧ್ಯಂತ ಕೋಟ್ಯಾಂತರ ರೂಪಾಯಿ ಬೆಟ್ಟಿಂಗ್ ಗುಪ್ತ ಗುಪ್ತಾಗಿ ನಡೆಯುತ್ತಿದೆ ಎನ್ನಲಾಗಿದೆ. ಚುಣಾವಣೆಗೆ ಮುನ್ನವೇ ಅಭ್ಯರ್ಥಿಗಳ ಪರವಾದ ಟ್ರೆಂಡ್ ನೋಡಿ ಬೆಟ್ಟಿಂಗ್ ಕಟ್ಟಲಾಗಿತ್ತಂತೆ. ಆದರೆ, ಈಗ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದ ನಂತರ ಯಾರು ಗೆಲ್ಲಬಹುದು ಎನ್ನುವ ಒಂದು ಲೆಕ್ಕಾಚಾರ ಸಿಕ್ಕಿದೆ. ಹಾಗಾಗಿ ಬೆಟ್ಟಿಂಗ್ ಕಟ್ಟುವವರ ಸಂಖ್ಯೆ ದುಪ್ಪಾಟ್ಟಾಗಿದೆ. ಇದು ಗುಟ್ಟು ಗುಟ್ಟಾಗಿ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ನಡೆಯುವ ಬೆಟ್ಟಿಂಗ್ ಆಗಿದೆ.
ನಗರ ಪ್ರದೇಶದಲ್ಲಿ ಹಣ ವಾಹನ, ಚಿನ್ನ ಬೆಳ್ಳಿ, ಮೊಬೈಲ್ ಈ ರೀತಿ ಬೆಟ್ಟಿಂಗ್ ನಡೆಯುತ್ತಿದ್ರೆ, ಗ್ರಾಮೀಣ ಭಾಗಗಳಲ್ಲಂತೂ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಕುರಿ, ಕೋಳಿ, ಹಸು, ಎಮ್ಮೆ ಇಲ್ಲಾ ಹಣವನ್ನು ಅಡವಿಟ್ಟು ಬೆಟ್ಟಿಂಗ್ ನಡೆಯುತ್ತಿದೆ ಎನ್ನಲಾಗುತ್ತಿದೆ. ಇನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡ ಈ ಬೆಟ್ಟಿಂಗ್ ನಿಯಂತ್ರಣ ಮಾಡೋದು ಕಷ್ಟದ ಕೆಲಸವಾಗಿದೆ. ಹೌದು, ಬೆಟ್ಟಿಂಗ್ ಆಡುವವರು ತಾವು ವೈಯಕ್ತಿಕವಾಗಿ ಬೆಟ್ಟಿಂಗ್ ಕಟ್ಟಿಕೊಂಡಿರುತ್ತಾರೆ, ಹಾಗಾಗಿ ಯಾವುದೇ ಸಾಕ್ಷಿ, ಪುರಾವೆ ಸಿಗೋದಿಲ್ಲ ಎನ್ನಲಾಗುತ್ತಿದೆ. ಆದರೂ ಪೊಲೀಸ್ ಇಲಾಖೆ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಾರ್ವಜನಿಕರ ಮನವಿ ಮಾಡಿದ್ದಾರೆ.
ಒಟ್ಟಾರೆ ಬೆಟ್ಟಿಂಗ್ ಕಾನೂನು ಬಾಹಿರವಾದರೂ ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯಕರ್ತರು ತಮ್ಮ ನಾಯಕನ ಗೆಲುವಿನ ಲೆಕ್ಕಾಚಾರ ಹಾಗೂ ಕುತೂಹಲದಲ್ಲಿ ಮುಳುಗಿದ್ದು, ಕಾರ್ಯಕರ್ತರ ಕುತೂಹಲಕ್ಕೆ ತೆರೆ ಬೀಳಲು ಇನ್ನು 34 ದಿನ ಬಾಕಿ ಇದ್ದು, ಯಾರು ಗೆಲ್ಲುತ್ತಾರೆ, ಯಾರು ಸೋಲ್ತಾರೆ, ಯಾರಿಗೆ ಲಾಭ, ಯಾರಿಗೆ ನಷ್ಟ ಎನ್ನುವುದು ತಿಳಿಯಲು ಮತಎಣಿಕೆ ಮುಗಿಯುವವರೆಗೆ ಕಾಯಲೇ ಬೇಕಿದೆ.