ಕೋಲಾರ ಕೃಷಿ ಇಲಾಖೆಯಲ್ಲಿ ಕೋಟ್ಯಾಂತರ ಹಣದ ಅವ್ಯವಹಾರ ಆರೋಪ; ದೂರು ನೀಡಿದವರಿಗೇ ತಿರುಗುಬಾಣ!

ಬಿಲ್‌ ಮತ್ತು ಓಚರ್‌ಗಳ ನೈಜತೆ ಪರಿಶೀಲಿಸದ ಖಜಾನೆ ಅಧಿಕಾರಿಗಳು ಕೃಷಿ ಇಲಾಖೆ ಖಾತೆಯಿಂದ ಎಂ.ಎ ಎಂಟರ್‌ಪ್ರೈಸಸ್‌ ಕಂಪನಿ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಕೋಲಾರ ಕೃಷಿ ಇಲಾಖೆಯಲ್ಲಿ ಕೋಟ್ಯಾಂತರ ಹಣದ ಅವ್ಯವಹಾರ ಆರೋಪ; ದೂರು ನೀಡಿದವರಿಗೇ ತಿರುಗುಬಾಣ!
ಸಾಂಕೇತಿಕ ಚಿತ್ರ
Follow us
TV9 Web
| Updated By: guruganesh bhat

Updated on:Oct 06, 2021 | 9:58 PM

ಕೋಲಾರ: ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳೀಬಂದಿದ್ದು ಈ ಬಗ್ಗೆ ಕೋಲಾರ ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಇಲಾಖೆಯ ಹಿಂದಿನ ಜಂಟಿ ನಿರ್ದೇಶಕರಾಗಿ ಕೆಲಸ ಮಾಡಿದ್ದ ಎಚ್‌.ಕೆ.ಶಿವಕುಮಾರ್‌ ಅವರ ಕೈವಾಡವಿರುವುದು ಉನ್ನತ ಅಧಿಕಾರಿಗಳ ವಿಶೇಷ ಲೆಕ್ಕ ತಪಾಸಣೆಯಲ್ಲಿ ಬಯಲಾಗಿದೆ. ಸದ್ಯ ಕೃಷಿ ಇಲಾಖೆಯ ಜಾಗೃತ ಕೋಶದಲ್ಲಿ ಕೆಲಸ ಮಾಡುತ್ತಿರುವ ಶಿವಕುಮಾರ್‌ ಹಾಗೂ ಕೋಲಾರದಲ್ಲಿನ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಮಂಜುನಾಥ್‌ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಂಪ್ಯೂಟರ್‌ ಆಪರೇಟರ್‌ ಆದರ್ಶ್‌ ಎಂಬುವರು ಇದರಲ್ಲಿ ಪಾಲುದಾರರು ಎಂಬ ಆರೋಪದಡಿ ಈ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ? ಏನಿದು ಅವ್ಯವಹಾರ? ಜಿಲ್ಲೆಯಲ್ಲಿ ಸುಮಾರು 3 ವರ್ಷಗಳ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿ ಸೇವೆಯಲ್ಲಿದ್ದ ಶಿವಕುಮಾರ್‌ ಅವರು 2020ರ ಆಗಸ್ಟ್ 3ರಂದು ಕೃಷಿ ಇಲಾಖೆಯ ಜಾಗೃತ ಕೋಶಕ್ಕೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದರು. ಆ ನಂತರ ಅವರ ಹುದ್ದೆಗೆ ವರ್ಗಾವಣೆಯಾಗಿ ಬಂದ ವಿ.ಡಿ.ರೂಪಾದೇವಿ ಅವರು ಇಲಾಖೆಯ ಖರ್ಚು ವೆಚ್ಚ ಪರಿಶೀಲಿಸಿದಾಗ ಅಕ್ರಮ ಬೆಳಕಿಗೆ ಬಂದಿದೆ.

2020ರ ಜೂನ್‌ ಒಂದೇ ತಿಂಗಳಲ್ಲಿ ಹೊರ ಗುತ್ತಿಗೆ ನೌಕರರ ವೇತನಕ್ಕಾಗಿ ಇಲಾಖೆಯಿಂದ ₹ 15.99 ಲಕ್ಷ ಪಾವತಿಸಿರುವುದು ಗೊತ್ತಾಗಿತ್ತು. ಆದರೆ, ಅದಕ್ಕೆ ಸಂಬಂಧಪಟ್ಟ ದಾಖಲೆಪತ್ರಗಳು ಕಚೇರಿಯಲ್ಲಿ ಲಭ್ಯವಾಗಿರಲಿಲ್ಲ. ಇದರಿಂದ ಅನುಮಾನಗೊಂಡ ಹಾಲಿ ಕೋಲಾರ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾದೇವಿ ಅವರು ಅಕ್ರಮದ ಸಂಗತಿಯನ್ನು ಸೆಪ್ಟೆಂಬರ್ 29ರಂದು ಇಲಾಖೆ ನಿರ್ದೇಶಕರು ಮತ್ತು ಶಿವಕುಮಾರ್‌ರ ಗಮನಕ್ಕೆ ತಂದಿದ್ದರು. ಬಳಿಕ ಶಿವಕುಮಾರ್‌ ಅವರೇ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ನಿವೃತ್ತ ಸೂಪರಿಂಟೆಂಡೆಂಟ್‌ ಸತ್ಯನಾರಾಯಣ ಪ್ರಸಾದ್‌, ಹೊರ ಗುತ್ತಿಗೆ ನೌಕರ ನಯಾಜ್‌ ಅಹಮ್ಮದ್‌ ಮತ್ತು ಎಂ.ಎ ಎಂಟರ್‌ಪ್ರೈಸಸ್‌ ಮಾಲೀಕರಾದ ಮುಹಿಬ್‌ ಅಜ್ಮಿ ವಿರುದ್ಧ ಗಲ್‌ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ನಂತರ ಈಗ ಮತ್ತೆ ಪ್ರಕರಣದಲ್ಲಿ ಮತ್ತೆ ಮೂರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಹಿಂದಿನ ಕೃಷಿ ಇಲಾಖೆ ಜಂಟಿ ನಿರ್ದೇಶಕರು ನೀಡಿದ್ದ ದೂರಿನಲ್ಲೇನಿತ್ತು? ಕೃಷಿ ಇಲಾಖೆಯ ಅನುದಾನ ಬಳಕೆ, ದೈನಂದಿನ ಕಾರ್ಯ ನಿರ್ವಹಣೆ ಉದ್ದೇಶಕ್ಕೆ ಇಲಾಖೆಯಿಂದ ತಮಗೆ ನೀಡಿದ್ದ ಡಿಜಿಟಲ್‌ ಸಿಗ್ನೇಚರ್‌ ಸರ್ಟಿಫಿಕೇಟ್‌ ಕೀಯನ್ನು (ಡಿಎಸ್‌ಇ) ಸತ್ಯನಾರಾಯಣ ಪ್ರಸಾದ್‌ ಮತ್ತು ನಯಾಜ್‌ ಅಹಮ್ಮದ್‌ ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಿದ್ದಾರೆ. ಈ ಇಬ್ಬರು ತಮ್ಮ ಗಮನಕ್ಕೆ ಬಾರದಂತೆ ಡಿಜಿಟಲ್‌ ಕೀ ಬಳಸಿ ಎಂ.ಎ. ಎಂಟರ್‌ಪ್ರೈಸಸ್‌ ಕಂಪನಿಯ ಬ್ಯಾಂಕ್‌ ಖಾತೆಗೆ ಇಲಾಖೆಯ ಲಕ್ಷಾಂತರ ರೂಪಾಯಿ ಹಣ ಪಾವತಿಸಿದ್ದಾರೆ ಎಂದು ಶಿವಕುಮಾರ್‌ ದೂರಿನಲ್ಲಿ ಆರೋಪಿಸಿದ್ದರು. ಈ ದೂರು ಆಧರಿಸಿ ಪೊಲೀಸರು ಸತ್ಯನಾರಾಯಣ ಪ್ರಸಾದ್‌ ಮತ್ತು ನಯಾಜ್‌ರನ್ನು ಬಂಧಿಸಿದ್ದರು.

ದೂರು ನೀಡಿದ್ದ ಶಿವಕುಮಾರ್​ಗೆ ಪ್ರಕರಣ ತಿರುಗುಬಾಣವಾಗಿ ಪರಿಣಮಿಸಿದ್ದು ಹೇಗೆ? ಇಲಾಖೆಯಲ್ಲಿ ನಡೆದಿದ್ದ ಅಕ್ರಮದ ಸಂಬಂಧ ಉನ್ನತ ತನಿಖೆ ನಡೆಸಲು ಕೃಷಿ ಇಲಾಖೆ ಹಿರಿಯ ಅಧಿಕಾರಿಗಳ ತಂಡವೊಂದನ್ನು ಜಿಲ್ಲೆಗೆ ಕಳುಹಿಸಲಾಗಿತ್ತು. ಈ ತಂಡವು 2020ರ ಅ.7ರಿಂದ ಅ.10ರವರೆಗೆ ಶಿವಕುಮಾರ್‌ರ ಸೇವಾವಧಿಯ ಹಣಕಾಸು ವ್ಯವಹಾರದ ದಾಖಲೆಪತ್ರಗಳನ್ನು ಸಮಗ್ರವಾಗಿ ಪರಿಶೀಲಿಸಿತ್ತು. ಈ ತಂಡದ ಲೆಕ್ಕ ತಪಾಸಣೆಯಲ್ಲಿ ಸುಮಾರು ₹ 1.25 ಕೋಟಿ ಅಕ್ರಮ ನಡೆದಿರುವ ಸಂಗತಿ ಬಯಲಾಗಿತ್ತು. ಈ ಬಗ್ಗೆ ತಂಡವು ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಿತ್ತು. ಈ ನಡುವೆ ಜಾಮೀನಿನ ಮೇಲೆ ಬಿಡುಗಡೆಯಾದ ಸತ್ಯನಾರಾಯಣ ಪ್ರಸಾದ್‌ ಅವರು ಮಾಹಿತಿ ಹಕ್ಕು ಅಡಿಯಲ್ಲಿ ಕೃಷಿ ಆಯುಕ್ತರ ಕಚೇರಿಯಿಂದ ಪಡೆದ ವಿಶೇಷ ಲೆಕ್ಕ ತಪಾಸಣೆ ವರದಿಯೊಂದಿಗೆ ಗಲ್‌ಪೇಟೆ ಠಾಣೆಗೆ ಶಿವಕುಮಾರ್‌, ಮಂಜುನಾಥ್‌ ಮತ್ತು ಆದರ್ಶ್‌ ವಿರುದ್ಧ ದೂರು ಕೊಟ್ಟಿದ್ದರು. ಶಿವಕುಮಾರ್‌ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ನಕಲಿ ದಾಖಲೆಪತ್ರ ಸೃಷ್ಟಿಸಿ ಇಲಾಖೆಯಲ್ಲಿ ಅವ್ಯವಹಾರ ನಡೆಸಿದ್ದಾರೆ. ಇದಕ್ಕೆ ಮಂಜುನಾಥ್‌ ಮತ್ತು ಆದರ್ಶ್‌ ನೆರವು ನೀಡಿದ್ದಾರೆ. ಈ ಮೂವರು ಸಂಚು ರೂಪಿಸಿ ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಿದ್ದರು. ಅಲ್ಲದೇ, ತನಿಖೆ ವೇಳೆ ಸುಳ್ಳು ಮಾಹಿತಿ ಕೊಟ್ಟು ಪ್ರಕರಣದ ದಿಕ್ಕು ತಪ್ಪಿಸಿದ್ದಾರೆ ಎಂದು ಸತ್ಯನಾರಾಯಣ ಪ್ರಸಾದ್‌ ಆರೋಪಿಸಿದ್ದರು. ಶಿವಕುಮಾರ್‌ ಅವರು ಈ ಹಿಂದೆ ನೀಡಿದ್ದ ದೂರು ಇದೀಗ ಅವರಿಗೆ ತಿರುಗುಬಾಣವಾಗಿದೆ. ಪ್ರಕರಣವು ಮಹತ್ವದ ತಿರುವು ಪಡೆದಿದ್ದು, ಪೊಲೀಸರು ವಂಚನೆ, ಅಪರಾಧ ಸಂಚು, ವಂಚನೆ ಉದ್ದೇಶಕ್ಕೆ ನಕಲಿ ದಾಖಲೆಪತ್ರ ಸೃಷ್ಟಿ, ಡಿಜಿಟಲ್ ಉಪಕರಣದ ದುರ್ಬಳಕೆ, ಅಧಿಕಾರ ದುರುಪಯೋಗ, ಸರ್ಕಾರಿ ನೌಕರದ ದುರ್ನಡತೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಕೃಷಿ ಇಲಾಖೆಯಲ್ಲಿ ಅವ್ಯವಹಾರ ನಡೆದಿರೋದು ಎಲ್ಲಿ, ಹೇಗೆ? ಹೊರ ಗುತ್ತಿಗೆ ಸಿಬ್ಬಂದಿ ವೇತನ ಪಾವತಿ, ಕಂಪ್ಯೂಟರ್‌, ಪ್ರಯೋಗಾಲಯ ಉಪಕರಣ ಮತ್ತು ಲೇಖನಿ ಸಾಮಗ್ರಿ ಖರೀದಿ, ಮಾಧ್ಯಮಕ್ಕೆ ಜಾಹೀರಾತು ನೀಡಿಕೆ, ವಿದ್ಯುತ್‌ ಮತ್ತು ಪೆಟ್ರೋಲ್‌ ಬಿಲ್ ಪಾವತಿ, ಯೋಜನೇತರ ವೆಚ್ಚ ಸೇರಿದಂತೆ ಇಲಾಖೆಯ ದೈನಂದಿನ ಹಣಕಾಸು ವ್ಯವಹಾರದಲ್ಲಿ ಅಕ್ರಮ ನಡೆದಿದೆ ಇಲಾಖೆಯ ತನಿಖಾ ತಂಡದ ವರದಿಯಲ್ಲಿ ಹೇಳಲಾಗಿದೆ. ನಿಯಮದ ಪ್ರಕಾರ ಇಲಾಖೆಯ ಜಿಲ್ಲಾ ಕೇಂದ್ರದ ಕಚೇರಿಗೆ ಮಾತ್ರ ಹೊರ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಆದರೆ, ಜಿಲ್ಲೆಯ 6 ತಾಲ್ಲೂಕು ಕಚೇರಿಗಳಿಗೂ ಎಂ.ಎ. ಎಂಟರ್‌ಪ್ರೈಸಸ್‌ ಕಂಪನಿಯಿಂದ ಹೊರ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಂಡಿರುವುದಾಗಿ ನಕಲಿ ದಾಖಲೆಪತ್ರ ಸೃಷ್ಟಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವೇತನ ಪಾವತಿ ನೆಪದಲ್ಲಿ ಬಿಲ್‌, ಓಚರ್‌ಗಳನ್ನು ಸೃಷ್ಟಿಸಿ ಜಿಲ್ಲಾ ಖಜಾನೆಗೆ ಕಳುಹಿಸಲಾಗಿದೆ. ಈ ಬಿಲ್‌ ಮತ್ತು ಓಚರ್‌ಗಳ ನೈಜತೆ ಪರಿಶೀಲಿಸದ ಖಜಾನೆ ಅಧಿಕಾರಿಗಳು ಕೃಷಿ ಇಲಾಖೆ ಖಾತೆಯಿಂದ ಎಂ.ಎ ಎಂಟರ್‌ಪ್ರೈಸಸ್‌ ಕಂಪನಿ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ವರದಿ: ರಾಜೇಂದ್ರ ಸಿಂಹ ಟಿವಿ9 ಕೋಲಾರ

ಇದನ್ನೂ ಓದಿ: 

ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಆಕಾಂಕ್ಷಿಗಳ ದಂಡು; ಸ್ಪರ್ಧೆಯಲ್ಲಿ ಗೆಲುವು ಯಾರಿಗೆ?

ಸಿಎಂ ಚಾಮರಾಜನಗರ ಭೇಟಿ; ಅಧಿಕಾರ ಕಳೆದುಕೊಳ್ಳುವ ಮೌಢ್ಯ ಅಳಿಸಲು ಮುಂದಾದ ಬೊಮ್ಮಾಯಿ: ಇಲ್ಲಿದೆ ಇತಿಹಾಸ

Published On - 9:56 pm, Wed, 6 October 21