ಎಟಿಎಂಗೆ ಹಣ ತುಂಬುವ ನೌಕರರಿಂದ 3 ಕೋಟಿಗೂ ಹೆಚ್ಚು ವಂಚನೆ; ಮೂವರ ನ್ಯಾಯಾಂಗ ಬಂಧನ
Crime News: ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೊರ್ವ ಪ್ರಮುಖ ಆರೋಪಿಗಾಗಿ ಹುಡುಕಾಟ ನಡೆದಿದೆ.
ಕೋಲಾರ: ಎಟಿಎಂಗಳಿಗೆ ಹಣ ತುಂಬುವ ನೌಕರರಿಂದ 3 ಕೋಟಿಗೂ ಹೆಚ್ಚು ಹಣ ವಂಚನೆ ಆರೋಪ ಕೇಳಿಬಂದಿದೆ. ಎಟಿಎಂಗೆ ಹಣ ತುಂಬದೆ ವೈಯಕ್ತಿಕವಾಗಿ ಹಣ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ. ಕೋಲಾರ ಮೂಲದ ಗಂಗಾಧರ್, ಸುನೀಲ್ ಕುಮಾರ್, ಪವನ್ ಕುಮಾರ್, ಮುರಳಿ ಎಂಬುವರಿಂದ ವಂಚನೆ ಆಗಿದೆ ಎಂದು ತಿಳಿದುಬಂದಿದೆ. ಆರೋಪಿಗಳು, ಸೆಕ್ಯೂರ್ ವ್ಯಾಲ್ಯೂ ಎಂಬ ಖಾಸಗಿ ಕಂಪನಿಯಲ್ಲಿ ಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರು. ನೌಕರರ ಮೇಲೆ ಸುಮಾರು 3 ಕೋಟಿಯಷ್ಟು ಹಣವನ್ನು ತಮ್ಮ ಸ್ವಂತಕ್ಕೆ ಬಳಿಸಿಕೊಂಡು ಕಂಪನಿಗೆ ವಂಚಿಸಿದ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆಕ್ಸಿಸ್, ಎಸ್ಬಿಐ, ಎಚ್ಡಿಎಫ್ಸಿ, ಐಸಿಐಸಿ, ಯುಬಿಐ, ಇಂಡಿಯನ್ ಬ್ಯಾಂಕ್ ಸೇರಿದಂತೆ ಇತರೆ ಎಟಿಎಂಗಳಿಗೆ ಹಣ ತುಂಬುವ ಕಂಪನಿಯಲ್ಲಿ ಗುತ್ತಿಗೆ ನೌಕರರಾಗಿ ಇವರು ಕೆಲಸ ಮಾಡುತ್ತಿದ್ದರು. ಕಂಪನಿ ಆಡಿಟ್ ಮಾಡುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ಕಂಪನಿಯಿಂದ ಠಾಣೆಗೆ ದೂರು ನೀಡಲಾಗಿದೆ. ಎಸ್ಪಿ ಡೆಕ್ಕ ಕಿಶೋರ್ ಬಾಬು ಮಾರ್ಗದರ್ಶನದಲ್ಲಿ ಕೋಲಾರದ ಸಿಇಎನ್ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ. ಇದೀಗ, ಮೂವರು ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೊರ್ವ ಪ್ರಮುಖ ಆರೋಪಿಗಾಗಿ ಹುಡುಕಾಟ ನಡೆದಿದೆ.
ಚಾಮರಾಜನಗರ: ಚೀಟಿ ಹಣ ವಂಚನೆ ಪ್ರಕರಣ ಚೀಟಿ ನಡೆಸುತ್ತಿದ್ದ ವ್ಯಕ್ತಿ ಕೊರೊನಾಗೆ ಬಲಿಯಾದ ಹಿನ್ನೆಲೆ ಚೀಟಿದಾರರು ಕೊಳ್ಳೇಗಾಲ ಪೊಲೀಸ್ ಠಾಣೆ ಮೊರೆ ಹೋದ ಘಟನೆ ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆದಿದೆ. ಚೀಟಿ ನಡೆಸುತ್ತಿದ್ದ ವಜೀರ್ ಕೊರೊನಾಗೆ ಬಲಿಯಾಗಿದ್ದರು. ಹೀಗಾಗಿ ಚೀಟಿ ಹಣ ನೀಡುವಂತೆ ವಜೀರ್ ಮಕ್ಕಳನ್ನ ಕೇಳಿದ್ದರು. ಕಾರ್ಯ ಮುಗಿದ ಬಳಿಕ ಹಣ ನೀಡುವುದಾಗಿ ವಜೀರ್ ಮಕ್ಕಳು ಹೇಳಿದ್ದರು. ಆದರೆ, ಕೆಲ ದಿನಗಳ ಬಳಿಕ ವಜೀರ್ ಪುತ್ರರು ಉಲ್ಟಾ ಹೊಡೆದಿದ್ದರು. ಹೀಗಾಗಿ ಕೊಳ್ಳೇಗಾಲ ಟೌನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ವಜೀರ್ ಪುತ್ರರನ್ನು ಠಾಣೆಗೆ ಕರೆಸಿ ಪಿಎಸ್ಐ ವಾರ್ನಿಂಗ್ ಕೊಟ್ಟಿದ್ದಾರೆ. ಹಂತ ಹಂತವಾಗಿ ಚೀಟಿ ಹಣ ಹಿಂದಿರುಗಿಸುವಂತೆ ಸೂಚನೆ ನೀಡಿದ್ದಾರೆ.
ದಾವಣಗೆರೆ: ಕಾಂಗ್ರೆಸ್ ಪ್ರತಿಭಟನೆ ವೇಳೆ ಜೇಬುಗಳ್ಳತನ ಕಾಂಗ್ರೆಸ್ ಪ್ರತಿಭಟನೆ ವೇಳೆ ಜೇಬುಗಳ್ಳತನ ನಡೆದ ಘಟನೆ ದಾವಣಗೆರೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದಿದೆ. ಪ್ರತಿಭಟನೆ ವೇಳೆ ಕೈ ಮುಖಂಡರ ಜೇಬು ಕಳ್ಳತನ ಮಾಡಲು ಖದೀಮರು ಯತ್ನಿಸಿದ್ದಾರೆ. ಮೊದಲು, ಕೈ ಮುಖಂಡರ 50 ಸಾವಿರ ಎಗರಿಸಿದ ಕಳ್ಳರು ಮತ್ತೊಬ್ಬ ಕೈ ಮುಖಂಡನ ಜೇಬಿಗೆ ಕೈ ಹಾಕಿದ ವೇಳೆ ಸಿಕ್ಕಿ ಬಿದ್ದಿದ್ದಾರೆ. ಸಿಕ್ಕಿಬಿದ್ದ ಯುವಕನಿಗೆ ಸರಿಯಾಗಿ ಥಳಿಸಿದ ಪ್ರತಿಭಟನಾಕಾರರು ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಜಯನಗರ: ಲಂಚ ಸ್ವೀಕರಿಸುವ ವೇಳೆ ಎಸ್‌ಡಿಎ ಎಸಿಬಿ ಬಲೆಗೆ ಲಂಚ ಸ್ವೀಕರಿಸುತ್ತಿದ್ದ ಎಸ್‌ಡಿಎ ಎಸಿಬಿ ಬಲೆಗೆ ಬಿದ್ದ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯತ್ನಲ್ಲಿ ನಡೆದಿದೆ. ಎಸ್‌ಡಿಎ ಬಿಲಾಲ್ ಬಾಷಾ ಎಸಿಬಿ ಬಲೆಗೆ ಬಿದ್ದಿದ್ದಾನೆ. 5 ಸಾವಿರ ರೂಪಾಯಿ ಲಂಚ ಸ್ವೀಕಾರ ಮಾಡುವ ವೇಳೆಗೆ ಎಸಿಬಿ ಅಧಿಕಾರಿಗಳ ಬಲೆಗೆ ಎಸ್‌ಡಿಎ ಸಿಕ್ಕಿಬಿದ್ದಿದ್ದಾನೆ.
ಬೆಂಗಳೂರು: ಯುವಕ ಯುವತಿ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ: ಎಸ್ಪಿ ಪ್ರತಿಕ್ರಿಯೆ ಯುವಕ ಯುವತಿಯ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ.ಕೆ. ವಂಶಿಕೃಷ್ಣ ಹೇಳಿಕೆ ನೀಡಿದ್ದಾರೆ. ಹುಡುಗಿ ಹುಡುಗ ನಿರ್ಜನ ಪ್ರದೇಶದಲ್ಲಿ ಕುಳಿತಿದ್ರು. ಅಲ್ಲಿಗೆ ಐದು ಜನ ಹುಡುಗರು ಬಂದಿದ್ದಾರೆ. ಬಂದು ಐದು ಜನ ಹುಡುಗರು ದುಡ್ಡು ಕೊಡಬೇಕೆಂದು ಕೇಳಿದ್ದಾರೆ. ಯುವಕ, ಯುವತಿಯ ಮೊಬೈಲ್ ಕಿತ್ತುಕೊಂಡಿದ್ದಾರೆ. ಆಗ ಸೈಟ್ ಓನರ್ ಕೂಡ ಬಂದು ಅವರನ್ನು ಚದುರಿಸಿದ್ದಾರೆ. ಆರೋಪಿಗಳು ಹುಡುಗ, ಹುಡುಗಿಯರನ್ನ ಮುಟ್ಟಿದ್ದಾರೆ. ಈ ಆರೋಪಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದವರು. ಪೈಂಟಿಂಗ್, ಆಟೋ ಚಾಲನೆ ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ರು. ಆರೋಪಿಗಳಿಂದ ಮೊಬೈಲ್ ಸೀಜ್ ಮಾಡಿಕೊಂಡಿದ್ದೀವಿ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ತಿವಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ನೈಜೀರಿಯಾ ನಟನ ಬಂಧನ; ಈತ ಅಣ್ಣಾಬಾಂಡ್, ಪರಮಾತ್ಮ ಸಿನಿಮಾಗಳಲ್ಲೂ ನಟಿಸಿದ್ದ!
ಇದನ್ನೂ ಓದಿ: ಬೆಳಗಾವಿ: ಕೋರ್ಟ್ ಆವರಣದಲ್ಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ಕೈ, ಕಾಲು, ತಲೆ ಭಾಗಕ್ಕೆ ಮಚ್ಚಿನಿಂದ ಹೊಡೆದ ಪತಿ
Published On - 3:23 pm, Wed, 29 September 21