ಕೋಲಾರದಲ್ಲಿ ಕಾಂಗ್ರೆಸ್ ಶಾಸಕರ ರಾಜೀನಾಮೆ ನಿರ್ಧಾರಕ್ಕೆ ಖರ್ಗೆ ‘ಮಲತಾಯಿ ಧೋರಣೆ’ ಕಾರಣವಾಯ್ತಾ?

| Updated By: Rakesh Nayak Manchi

Updated on: Mar 28, 2024 | 10:26 AM

ಕೋಲಾರದಲ್ಲಿ ಕೆಹೆಚ್​ ಮುನಿಯಪ್ಪ ಅವರ ಕುಟುಂಬಕ್ಕೆ ಟಿಕೆಟ್ ನೀಡದಂತೆ ಒತ್ತಾಯಗಳು ಹೆಚ್ಚುತ್ತಿವೆ. ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕಿತ್ತಾಟ ತಾರಕಕ್ಕೇರುತ್ತಿದ್ದಂತೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅಖಾಡಕ್ಕಿಳಿದಿದ್ದಾರೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಲತಾಯಿ ಧೋರಣೆಯೇ ಈ ಕಿತ್ತಾಟಕ್ಕೆ ಕಾರಣವಾಯ್ತಾ?

ಕೋಲಾರದಲ್ಲಿ ಕಾಂಗ್ರೆಸ್ ಶಾಸಕರ ರಾಜೀನಾಮೆ ನಿರ್ಧಾರಕ್ಕೆ ಖರ್ಗೆ ಮಲತಾಯಿ ಧೋರಣೆ ಕಾರಣವಾಯ್ತಾ?
ಕೋಲಾರದ ಇತರೆ ನಾಯಕರನ್ನು ಕಡೆಗಣಿಸಿ ಕೇವಲ ಕೆಹೆಚ್​ ಮುನಿಯಪ್ಪ ಅವರೊಂದಿಗೆ ಮಾತುಕತೆ ನಡೆಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Follow us on

ಕೋಲಾರ, ಮಾ.28: ಲೋಕಸಭಾ ಕ್ಷೇತ್ರದ ಟಿಕೆಟ್ ಫೈಟ್ ತಾರಕಕ್ಕೀರಿದ್ದು, ಕೆಹೆಚ್​ ಮುನಿಯಪ್ಪ (KH Muniyappa) ಕುಟುಂಬಕ್ಕೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡದಂತೆ ವಿರೋಧಿ ಬಣ ಪಟ್ಟು ಹಿಡಿದಿದೆ. ಇದರ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅಖಾಡಕ್ಕಿಳಿದಿದ್ದಾರೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಮಲತಾಯಿ ಧೋರಣೆಯೇ ಈ ಕಿತ್ತಾಟಕ್ಕೆ ಕಾರಣವಾಯ್ತಾ ಎನ್ನುವ ಪ್ರಶ್ನೆಯೊಂದು ಉದ್ಭವವಾಗಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಗೊಂದಲ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ, ಕೋಲಾರದ ವಿಚಾರದಲ್ಲಿ ಕೇವಲ ಮುನಿಯಪ್ಪ ಅವರೊಂದಿಗೆ ಮಾತ್ರ ಪ್ರತ್ಯೇಕ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಇತರ ನಾಯಕರ ಅಭಿಪ್ರಾಯದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಸ್ಥಳೀಯ ನಾಯಕರನ್ನು ಕಡೆಗಣಿಸಿದ್ದೇ ಕೋಲಾರ ಜಿಲ್ಲೆಯ ಶಾಸಕರು ರಾಜೀನಾಮೆ ಸಲ್ಲಿಕೆಗೆ ಮುಂದಾಗುವಂತೆ ಮಾಡಿದೆ.

ಇದನ್ನೂ ಓದಿ: ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ ಸ್ಫೋಟ: ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ರಾಜೀನಾಮೆಗೆ ನಿರ್ಧಾರ

ಇತರ ನಾಯಕರ ರಾಜಕೀಯ ಭವಿಷ್ಯಕ್ಕೆ ಮುನಿಯಪ್ಪ ಅಡ್ಡಗಾಲು

ಕೆ ಎಚ್ ಮುನಿಯಪ್ಪ ಅವರು ಈಗಾಗಲೇ ದೇವನಹಳ್ಳಿಯಿಂದ ಆಯ್ಕೆಯಾಗಿ ಕೋಲಾರದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ಮುನಿಯಪ್ಪ ಅವರನ್ನು ಪೂರ್ಣ ಪ್ರಮಾಣದಲ್ಲಿ ಹೊರಗಿಟ್ಟರೆ ಮಾತ್ರ ತಮಗೆ ರಾಜಕೀಯ ಉಳಿಗಾಲ ಎಂದು ಕೋಲಾರ ಶಾಸಕರು ಭಾವಿಸಿದ್ದಾರೆ. ಮುನಿಯಪ್ಪ ಲೋಕಸಭೆಯಲ್ಲಿ ಗೆದ್ದು ಕೋಲಾರ ಹಿಡಿತ ಉಳಿಸಿಕೊಂಡರೆ ತಮ್ಮ ರಾಜಕೀಯ ಭವಿಷ್ಯಕ್ಕೆ ಕಂಟಕ ಎಂದು ಭಾವಿಸಿದ್ದಾರೆ. ಹೀಗೆ ವಿರೋಧಿ ಬಣ ಸೃಷ್ಟಿ ಆಗುತ್ತದೆ ಎಂಬ ಅರಿವಿದ್ದೇ ಕೊತ್ತೂರು ಮಂಜುನಾಥ್ ಹಾಗೂ ಎಂಸಿ ಸುಧಾಕರ್ ಕಾಂಗ್ರೆಸ್ ಸೇರ್ಪಡೆಗೆ ಮುನಿಯಪ್ಪ ಅವರು ತೀವ್ರ ಅಡ್ಡಗಾಲಾಗಿದ್ದರು.

ಇದನ್ನೂ ಓದಿ: ಕೋಲಾರ ಕೈ ಟಿಕೆಟ್ ಕೋಲಾಹಲ: ರಮೇಶ್ ಕುಮಾರ್ ಬಣಕ್ಕೆ ಮುನಿಯಪ್ಪ ಬಣದಿಂದ ಕೌಂಟರ್

ಯಾರೂ ರಾಜೀನಾಮೆ ಕೊಡಲ್ಲ: ಡಿಕೆ ಶಿವಕುಮಾರ್

ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡದಂತೆ ಪಟ್ಟು ಹಿಡಿದಿರುವ ಕೋಲಾರ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ಮುಂದಾಗಿರುವ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಯಾರು ಕೂಡ ರಾಜೀನಾಮೆ ನೀಡುವುದಿಲ್ಲ. ಜಿಲ್ಲೆಯ ನಾಯಕರಿಂದ ಒತ್ತಡ ಇದೆ ಅಷ್ಟೆ. ಇಂದು ಸಂಜೆಯೊಳಗೆ ತೀರ್ಮಾನ ಮಾಡುತ್ತೇವೆ. ಇನ್ನೂ ಅಭ್ಯರ್ಥಿ ಘೋಷಣೆ ಆಗಿಲ್ಲ, ಎಲ್ಲ ಸರಿ ಹೋಗುತ್ತದೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 am, Thu, 28 March 24