AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ ಕೈ ಟಿಕೆಟ್ ಕೋಲಾಹಲ: ರಮೇಶ್ ಕುಮಾರ್ ಬಣಕ್ಕೆ ಮುನಿಯಪ್ಪ ಬಣದಿಂದ ಕೌಂಟರ್

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಕೆಹೆಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವಿನ ಜಿದ್ದಾಜಿದ್ದಿ ಜೋರಾಗಿದ್ದು, ಎಡಗೈ ಸಮುದಾಯದ ಕೆಎಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಬಾರದು. ಒಂದು ವೇಳೆ ಟಿಕೆಟ್ ನೀಡಿದರೆ ರಾಜೀನಾಮೆ ನೀಡುತ್ತೇವೆ ಎಂದು ಕಾಂಗ್ರೆಸ್ ಶಾಸಕರು ಆಗ್ರಹಿಸಿದ್ದಾರೆ. 

ಕೋಲಾರ ಕೈ ಟಿಕೆಟ್ ಕೋಲಾಹಲ: ರಮೇಶ್ ಕುಮಾರ್ ಬಣಕ್ಕೆ ಮುನಿಯಪ್ಪ ಬಣದಿಂದ ಕೌಂಟರ್
ಕೆ.ಎಚ್ ಮುನಿಯಪ್ಪ ಬಣ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ|

Updated on: Mar 27, 2024 | 7:58 PM

Share

ಕೋಲಾರ, ಮಾರ್ಚ್​​ 27: ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಕೋಲಾರ ಕಾಳಗದ ಕೋಲಾಹಲ ಎದ್ದಿದೆ. ಟಿಕೆಟ್ ಘೋಷಣೆ ಆಗಬೇಕಿರುವ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವಿನ ಜಿದ್ದಾಜಿದ್ದಿ ಜೋರಾಗಿದ್ದು, ಎಡಗೈ ಸಮುದಾಯದ ಕೆಎಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಬಾರದು. ಒಂದು ವೇಳೆ ಟಿಕೆಟ್ ನೀಡಿದರೆ ರಾಜೀನಾಮೆ ನೀಡುತ್ತೇವೆ ಎಂದು ಕಾಂಗ್ರೆಸ್ ಶಾಸಕರು ಆಗ್ರಹಿಸಿದ್ದಾರೆ.

ಎಸ್ಸಿ ಎಡಗೈ ಸಮುದಾಯದ ಮುಖಂಡರಿಂದ ಕೆ.ಎಚ್ ಮುನಿಯಪ್ಪ ಪರವಾಗಿ ನಗರದಲ್ಲಿ ತುರ್ತು ಪತ್ರಿಕಾಗೋಷ್ಠಿ ಮಾಡಿದ್ದು, ಮೊದಲು ರಮೇಶ್ ಕುಮಾರ್ ಬಣದವರು ರಾಜೀನಾಮೆ ಕೊಟ್ಟು ಹೋಗಲಿ. ಚಿಕ್ಕಪೆದ್ದಣ್ಣಗೆ ಟಿಕೆಟ್​ ನೀಡಲಿಲ್ಲ ಅಂದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಎಸ್ಸಿ ಎಡಗೈ ಸಮುದಾಯಕ್ಕೆ ಕರೆ ಕೊಟ್ಟು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕೋಲಾರ ಕಾಂಗ್ರೆಸ್​ನಲ್ಲಿ ಕೋಲಾಹಲ: ಟಿಕೆಟ್‌ ಕಗ್ಗಂಟು ಬಿಡಿಸಲು ಅಖಾಡಕ್ಕಿಳಿದ ಸಿಎಂ, ಡಿಸಿಎಂ!

ರಮೇಶ್ ಕುಮಾರ್ ಬಣದಲ್ಲಿರುವ ಶಾಸಕರಿಗೆ ಹೋದಲ್ಲಿ ಬಂದಲ್ಲಿ ಘೇರಾವ್ ಹಾಕುತ್ತೇವೆ ಎಂದು ಶಾಸಕ ಕೊತ್ತೂರು ಮಂಜುನಾಥ್, ನಂಜೇಗೌಡ, ಅನಿಲ್ ಕುಮಾರ್​ಗೆ ಎಚ್ಚರಿಕೆ ನೀಡಲಾಗಿದೆ. ದಲಿತ ಪರ ಸಂಘಟನೆಗಳನ್ನು ಹಿಂದೆ ಲೆಲೇಖರ್​ ಶೂ ಗೆ ಕೊತ್ತೂರು ಮಂಜುನಾಥ್ ಹೋಲಿಕೆ ಮಾಡಿದ್ದರು. ಅಂತಹವರು ಈಗ ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟುತ್ತಿದ್ದಾರೆ. ಚಿಕ್ಕಪೆದ್ದಣ್ಣಗೆ ತಪ್ಪಿಸಿ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಿದರೆ ನಾವು ಒಪ್ಪಲ್ಲ ಎಂದು ಆಗ್ರಹಿಸಲಾಗಿದೆ.

ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಟಿಕೆಟ್ ಫೈನಲ್‌ ಮಾಡಿರುವ ಕಾಂಗ್ರೆಸ್‌ಗೆ ಕೋಲಾರ ಕ್ಷೇತ್ರವೇ ಕಗ್ಗಾಂಟಾಗಿದೆ. ಅಷ್ಟಕ್ಕೂ ಸೋಲಿಲ್ಲದ ಸರದಾರನಂತಿದ್ದ ಕೆ. ಹೆಚ್‌ ಮುನಿಯಪ್ಪ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಂಡಿಯೂರಿದ್ದರು. ಕಾಂಗ್ರೆಸ್‌ನಲ್ಲಿದ್ದ ಬಣ ರಾಜಕೀಯವೇ ಮುನಿಯಪ್ಪ ಸೋಲಿಗೆ ಕಾರಣ ಅನ್ನೋದು ಜಗಜ್ಜಾಹಿರಾಗಿತ್ತು. ಈ ಚುನಾವಣೆಯಲ್ಲೂ ಅದೇ ಬಣ ರಾಜಕೀಯ ಶುರುವಾಗಿದೆ. ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ನಡುವಿನ ತಿಕ್ಕಾಟವೇ ಇವತ್ತಿನ ಕೋಲಾರ ಕೋಲಾಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ನಜೀರ್ ಅಹ್ಮದ್ ಆಕ್ಷೇಪಾರ್ಹ ಹೇಳಿಕೆಗೆ ಸಚಿವ ಕೆಹೆಚ್​ ಮುನಿಯಪ್ಪ ಪ್ರತಿಕ್ರಿಯೆ ಹೀಗಿತ್ತು!

ರಾಜ್ಯ ರಾಜಕೀಯಕ್ಕೆ ಎಂಟ್ರಿಕೊಟ್ಟಿರೋ ಮುನಿಯಪ್ಪ, ಕೋಲಾರದಲ್ಲಿ ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್‌ ನೀಡುವಂತೆ ಕೋರಿದ್ದಾರೆ. ಆದ್ರೆ ಇದಕ್ಕೆ ರಮೇಶ್ ಕುಮಾರ ಬಣ ತೀವ್ರ ವಿರೋಧ ವ್ಯಕ್ತಪಡಿಸಿದೆ. ದಲಿತ ಬಲಗೈ ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ಶಾಸಕಿ ರೂಪಕಲಾ ಅಸಮಾಧಾನ

ಚಿಕ್ಕಬಳ್ಳಾಪುರದಲ್ಲಿ ಟಿವಿ9ಗೆ ಕೆಎಚ್.ಮುನಿಯಪ್ಪ ಪುತ್ರಿ ಶಾಸಕಿ ರೂಪಕಲಾ ಶಿಶಧರ್​ ಪ್ರತಿಕ್ರಿಯಿಸಿದ್ದು, ಅಸೂಯೆ ಹಾಗೂ ದ್ವೇಷಕ್ಕೆ ಬುದ್ಧಿ ಕೊಡುವುದು ಸರಿಯೇ? ದಯವಿಟ್ಟು ಬೀದಿಯಲ್ಲಿ ರಂಪಾಟ ಮಾಡಿ, ಪಕ್ಷಕ್ಕೆ ಮುಜುಗರ ತರಬೇಡಿ. ಇವತ್ತಿನ ಪರಿಸ್ಥಿತಿಯಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ತಲೆ ತಗ್ಗಿಸುವಂತೆ ಮಾಡಬೇಡಿ. ಟಿಕೆಟ್​ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಬಳಿ ಚರ್ಚಿಸೋಣ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.