ನಜೀರ್ ಅಹ್ಮದ್ ಆಕ್ಷೇಪಾರ್ಹ ಹೇಳಿಕೆಗೆ ಸಚಿವ ಕೆಹೆಚ್ ಮುನಿಯಪ್ಪ ಪ್ರತಿಕ್ರಿಯೆ ಹೀಗಿತ್ತು!
ಕೋಲಾರ ಕಾಂಗ್ರೆಸ್ ಭಿನ್ನಮತ ತಾರಕಕ್ಕೇರಿದ್ದು, ಪಕ್ಷದ ನಾಯಕರೇ ಪರಸ್ಪರ ಟೀಕಾ ಪ್ರಹಾರಕ್ಕೆ ಮುಂದಾಗಿದ್ದಾರೆ. ಆಹಾರ ಸಚಿವ ಕೆಹೆಚ್ ಮುನಿಯಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಆಕ್ಷೇಪಾರ್ಹ ಪದ ಬಳಸಿ ಟೀಕೆ ಮಾಡಿದ್ದಾರೆ. ಇದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ ಎಂದಿದ್ದಾರೆ.
ಬೆಂಗಳೂರು, ಮಾರ್ಚ್ 27: ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ ಸ್ಫೋಟಗೊಂಡ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (Siddaramaiah) ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ವಿರುದ್ಧ ಪುಟಗೋಸಿ ಪದ ಬಳಸಿ ಟೀಕಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುನಿಯಪ್ಪ, ನಜೀರ್ ಅಹ್ಮದ್ ಕೋಪದಲ್ಲಿ ಸಣ್ಣತನದ ಮಾತನಾಡಿದ್ದಾರೆ. ನಾನು ಅವರಷ್ಟು ಕೆಳಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ ಎಂದು ಹೇಳಿದರು.
ನಾನು ರಾಷ್ಟ್ರಮಟ್ಟದಲ್ಲಿ ರಾಜಕಾರಣ ಮಾಡಿದ್ದೇನೆ. ನಜೀರ್ ಅಹ್ಮದ್ರ ಯಾವುದೇ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಮುನಿಯಪ್ಪ ಹೇಳಿದರು. ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಲೋಕಸಭೆ ಚುನಾವಣೆಗೆ ಕೋಲಾರ ಕ್ಷೇತ್ರದ ಟಿಕೆಟ್ ನೀಡುವ ಸಂಬಂಧ ಕಾಂಗ್ರೆಸ್ನಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ನಜೀರ್ ಅಹ್ಮದ್, ಪರಿಷತ್ ಸದಸ್ಯ ಅನಿಲ್ ಕುಮಾರ್ ಹಾಗೂ ಇತರ ಮೂವರು ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ.
30 ವರ್ಷಗಳ ಕಾಲ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಸಿಎಂ, ಡಿಸಿಎಂ ಸಭೆಯಲ್ಲಿ ನಾನು ಮನವಿ ಮಾಡಿದ್ದೇನೆ. ಎಲ್ಲ ಅಸಮಾಧಾನ ಬದಿಗೊತ್ತಿ ಕೆಲಸ ಮಾಡೋಣ ಎಂದಿದ್ದೇನೆ. ಭಿನ್ನಾಭಿಪ್ರಾಯ ಆಗಾಗ ಬರುತ್ತವೆ, ಸರಿಪಡಿಸಿಕೊಳ್ಳಬೇಕು. ಸಭೆಯಲ್ಲಿ ನಾನು ಒಂದು ಬೇಡಿಕೆ ಇಟ್ಟಿದ್ದೆ. ಅವರು ಏಕೆ ಈ ರೀತಿ ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ನನ್ನ ಸೋಲಿಗೆ ನಾನು ಯಾರನ್ನೂ ಹೊಣೆ ಮಾಡುವುದಿಲ್ಲ ಎಂದು ಮುನಿಯಪ್ಪ ಹೇಳಿದರು.
ನಜೀರ್ ಅಹ್ಮದ್ ಹೇಳಿದ್ದೇನು?
ವಿಧಾನಪರಿಷತ್ ಸಭಾಪತಿ ಕಚೇರಿಯ ಬಳಿ ಮಾತನಾಡಿದ್ದ ನಜೀರ್ ಅಹ್ಮದ್, ನಾನು ಸಚಿವನಾಗಿದ್ದಾಗ ಮುನಿಯಪ್ಪ ಬ್ಯಾಗ್ ಹಿಡಿದುಕೊಂಡು ಬರುತ್ತಿದ್ದ. ಕೆಎಚ್ ಮುನಿಯಪ್ಪ ಒಬ್ಬ ಪುಟಗೋಸಿ. ಮುನಿಯಪ್ಪ ಪುಟಗೋಸಿ ಬ್ಯಾಗ್ ಹಿಡಿದುಕೊಂಡು ನನ್ ಹಿಂದೆ ಬರುತ್ತಿದ್ದ ಎಂದು ಹೇಳಿದ್ದರು.
ಇದನ್ನೂ ಓದಿ: ಮುನಿಯಪ್ಪ ಒಬ್ಬ ಪುಟಗೋಸಿ: ನಜೀರ್ ಅಹ್ಮದ್ ಕಿಡಿ
ಇನ್ನೂ ಕೋಲಾರ ಅಭ್ಯರ್ಥಿ ಘೋಷಣೆ ಆಗಿಲ್ಲ: ಡಿಕೆ ಶಿವಕುಮಾರ್
ಕೋಲಾರ ಭಿನ್ನಮತದ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಕೋಲಾರ ಕ್ಷೇತ್ರದ ಅಭ್ಯರ್ಥಿಯ ಘೋಷಣೆ ಇನ್ನೂ ಆಗಿಲ್ಲ ಎಂದರು. ಕೋಲಾರ ಕ್ಷೇತ್ರದ ಟಿಕೆಟ್ ಗೊಂದಲ ಬಗ್ಗೆ ತಿಳಿದುಕೊಂಡಿದ್ದೇನೆ. ಕೋಲಾರ ಅಭ್ಯರ್ಥಿ ಬಗ್ಗೆ ನಾನು, ಸಿಎಂ ಸಿದ್ದರಾಮಯ್ಯ ಚರ್ಚೆ ಮಾಡುತ್ತೇವೆ. ಪಕ್ಷದಲ್ಲಿ ಶಿಸ್ತು ಮುಖ್ಯ ಎಂದರು.
ಇನ್ನು ಈ ವಿಚಾರವಾಗಿ ಟೀಕೆ ಮಾಡಿದ ಬಿಜೆಪಿಗೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ಬಿಜೆಪಿಯವರು ಮೊದಲು ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವುದನ್ನು ನೋಡಿಕೊಳ್ಳಲಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ