ಉಪೇಂದ್ರ ಸೇರಿ ಹಲವು ನಟ, ನಟಿಯರಿಗೆ ಫಿಟ್ನೆಸ್ ತರಬೇತಿ ನೀಡಿದ್ದ ಕೋಲಾರದ ಸುರೇಶ್ ಫ್ಲೊರಿಡಾದಲ್ಲಿ ಕಾರು ಅಪಘಾತದಲ್ಲಿ ಸಾವು

ಮಾಡೆಲ್, ನಟ, ಫಿಟ್ನೆಸ್ ಟ್ರೈನರ್ ಆಗಿದ್ದ ಮತ್ತು ಉಪೇಂದ್ರ ಸೇರಿದಂತೆ ಹಲವು ಹಿರಿಯ ನಟ, ನಟಿಯರಿಗೆ ಫಿಟ್ನೆಸ್ ತರಬೇತಿ ನೀಡಿದ್ದ ಕೋಲಾರ ಮೂಲದ ಸುರೇಶ್ ಕುಮಾರ್ ಅಮೆರಿಕದ ಫ್ಲೊರಿಡಾದಲ್ಲಿ ಸಂಭವಿಸಿದ ರಸ್ತೆ ಅಫಘಾತದಲ್ಲಿ ಮೃತಪಟ್ಟಿದ್ದಾರೆ. ಇತ್ತ ಕೋಲಾರದಲ್ಲಿ ಅವರ ಕುಟುಂಬಸ್ಥರು ಕಣ್ಣೀರು ಹಾಕುವಂತಾಗಿದೆ.

ಉಪೇಂದ್ರ ಸೇರಿ ಹಲವು ನಟ, ನಟಿಯರಿಗೆ ಫಿಟ್ನೆಸ್ ತರಬೇತಿ ನೀಡಿದ್ದ ಕೋಲಾರದ ಸುರೇಶ್ ಫ್ಲೊರಿಡಾದಲ್ಲಿ ಕಾರು ಅಪಘಾತದಲ್ಲಿ ಸಾವು
ಸುರೇಶ್ ಕುಮಾರ್
Updated By: Ganapathi Sharma

Updated on: Sep 03, 2025 | 7:34 AM

ಕೋಲಾರ, ಸೆಪ್ಟೆಂಬರ್ 3: ಅಮೆರಿಕಾದಲ್ಲಿ ನೆಲೆಸಿದ್ದ ಕೋಲಾರದ (Kolar) ಗಾಂಧಿನಗರ ಮೂಲದ ಫಿಟ್ನೆಸ್ ಟ್ರೈನರ್, ಬಾಡಿ ಬಿಡ್ಡರ್, ಹಾಗೂ ಮಾಡೆಲ್​ ಸುರೇಶ್ ಕುಮಾರ್​ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಅಮೆರಿಕಾದ ಪ್ಲೋರಿಡಾದಿಂದ ಟೆಕ್ಸಾಸ್​ಗೆ ಹೋಗುವ ಮಾರ್ಗ ಮಧ್ಯದಲ್ಲಿ ನಡೆದ ಕಾರು​ ಅಪಘಾತದಲ್ಲಿ ಸುರೇಶ್​ ಬಾಬು ತೀವ್ರವಾಗಿ ಗಾಯಗೊಂಡು ಅಮೆರಿಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್​ಸೆ ಫಲಕಾರಿಯಾಗದೆ ಸುರೇಶ್ ಕುಮಾರ್ ಮೃತಪಟ್ಟಿದ್ದಾರೆ. ಸದ್ಯ ಅಮೆರಿಕಾದಲ್ಲಿ ಅಪಘಾತದ ಕುರಿತು ತನಿಖೆ ನಡೆಸಿ ನಂತರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಕುಟುಂಬಸ್ಥರು ಸುರೇಶ್ ಕುಮಾರ್ ಶವವನ್ನು ಭಾರತಕ್ಕೆ ತರಲು ಪ್ರಯತ್ನ ನಡೆಸುತ್ತಿದ್ದು, ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸುಮಾರು 42 ವರ್ಷ ವಯಸ್ಸಿನ ಸುರೇಶ್ ಕುಮಾರ್ ಹುಟ್ಟಿ ಬೆಳೆದಿದ್ದು ಕೋಲಾರದ ಗಾಂಧಿನಗರದಲ್ಲಿ. ಗಾಂಧಿನಗರದ ಚಲಪತಿ ಮುನಿಯಮ್ಮ ದಂಪತಿಯ ಮೊದಲ ಮಗನಾಗಿ ಬಡಕುಟುಂಬದಲ್ಲಿ ಜನಿಸಿದ್ದ ಸುರೇಶ್​ ಕೋಲಾರದಲ್ಲಿ ಕೆಲಕಾಲ ನೆಲೆಸಿದ್ದರು. ಆದರೆ, ಸಾಧನೆಯ ಹಠದೊಂದಿಗೆ ಬೆಂಗಳೂರು ಸೇರಿದ್ದ ಸುರೇಶ್​ ಬಾಡಿಬಿಲ್ಡರ್ ಆಗಿ ವೃತ್ತಿ ಜೀವನ ಆರಂಭಿಸಿ, ಉಪೇಂದ್ರ ಸೇರಿದಂತೆ ಹಲವಾರು ನಟ, ನಟಿಯರಿಗೆ ಫಿಟ್ನೆಸ್ ತರಬೇತಿ ನೀಡಿದ್ದರು.

ಮಾಡೆಲ್ ಆಗಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಸುರೇಶ್

ದೇಹಸೌಂದರ್ಯದಿಂದಲೇ ಆಕರ್ಷಿತರಾಗಿದ್ದ ಸುರೇಶ್ ಕುಮಾರ್ ನಂತರದಲ್ಲಿ ಮಾಡೆಲ್​ ಆಗಿ ಪ್ರೇಮಾ, ಪ್ರಿಯಾಮಣಿ ಸೇರಿದಂತೆ ಹಲವರ ಜೊತೆಗೆಯಲ್ಲಿ ಹಲವು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದರು.

ಉಪ್ಪಿ2 ಸಿನಿಮಾದಲ್ಲೂ ನಟಿಸಿದ್ದ ಸುರೇಶ್

ಉಪೇಂದ್ರ ಅಭಿನಯದ ಉಪ್ಪಿ2 ಸಿನಿಮಾದಲ್ಲೂ ಕೂಡಾ ಕಾಣಿಸಿಕೊಂಡಿದ್ದರು ಸುರೇಶ್ ಕುಮಾರ್. ದೆಹಲಿ ಮೂಲದ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ ಸುರೇಶ್ ಕುಮಾರ್ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಹಲವು ವರ್ಷಗಳ ಕಾಲ ಲಂಡನ್​ ನಲ್ಲಿ, ನಂತರ ಕಳೆದ ಏಳು ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿದ್ದ ಸುರೇಶ್,​ ಆಗಾಗ್ಗೆ ಕೋಲಾರಕ್ಕೆ ಬಂದು ಹೋಗುತ್ತಿದ್ದರು.

ಇದನ್ನೂ ಓದಿ: ಟೊಮೆಟೋ ಬೆಲೆ ದಿಢೀರ್ ಕುಸಿತ, ಕೋಲಾರ ರೈತರಿಗೆ ಕೈಕೊಟ್ಟ ಕೆಂಪು ಸುಂದರಿ

ಅಮೆರಿಕಾದಲ್ಲಿ ಪಿಜಿಯೋತೆರಪಿಸ್ಟ್​ ಆಗಿ ಕೆಲಸ ಮಾಡಿಕೊಂಡು ಪತ್ನಿ ಮಕ್ಕಳೊಂದಿಗೆ ನೆಲಸಿದ್ದರು. ಆಗಸ್ಟ್ 1 ರಂದು ಕೋಲಾರಕ್ಕೆ ಬಂದಿದ್ದ ಸುರೇಶ್​ ಆಗಸ್ಟ್​ 24 ರಂದು ಅಮೆರಿಕಾಕ್ಕೆ ವಾಪಸ್​ ತೆರಳಿದ್ದರು. ಅಮೆರಿಕಾಗೆ ಹೋಗುವ ಮೊದಲು ತನ್ನ ಇಡೀ ಕುಟುಂಬಸ್ಥರಿಗೆ ಕೋಲಾರದ ಅಂತರಗಂಗೆಯ ರೆಸಾರ್ಟ್​ನಲ್ಲಿಔತಣಕೂಟ ಏರ್ಪಡಿಸಿ ಕುಟುಂಬಸ್ಥರೊಂದಿಗೆ ಕಾಲಕಳೆದು ಸಂತೋಷದಿಂದ ತೆರಳಿದ್ದರು. ಅಮೆರಿಕಾಗೆ ತೆರಳಿದ ಕೆಲವೇ ದಿನಗಳಲ್ಲಿ ಅಪಘಾತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರಿಗೆ ಆಘಾತ ಉಂಟುಮಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 am, Wed, 3 September 25