ಕೋಲಾರ: ಅಲ್ಲಲ್ಲಿ ಬಿರುಕು, ಮೇಲ್ಛಾವಣಿ ಕುಸಿದಿರುವ 85 ವರ್ಷ ಹಳೆಯ ಈ ಸರ್ಕಾರಿ ಶಾಲೆಗೆ ಬೇಕಿದೆ ನೆರವು

ಅದು ಜಿಲ್ಲಾಕೇಂದ್ರದ ಹೃದಯ ಭಾಗದಲ್ಲಿರುವ ಸರ್ಕಾರಿ ಶಾಲೆ, ಈ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರ್ತಾರೆ. ಶಿಕ್ಷಕರು ಕೂಡಾ ಚೆನ್ನಾಗಿಯೇ ಪಾಠ ಹೇಳಿಕೊಡ್ತಾರೆ. ಹೀಗಿದ್ದರೂ ಆ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸೋದಕ್ಕೆ ಪೋಷಕರಿಗೆ ಆತಂಕ, ಶಾಲೆಗೆ ಬರುವ ಮಕ್ಕಳಿಗೂ ಭಯ. ಇನ್ನು ಶಿಕ್ಷಕರಿಗಂತೋ ಒಂದು ರೀತಿಯ ಪ್ರಾಣ ಸಂಕಟ. ಅಷ್ಟಕ್ಕೂ ಏನಾಗಿದೆ ಆ ಶಾಲೆಗೆ? ಈ ಸುದ್ದಿ ಓದಿ.

ಕೋಲಾರ: ಅಲ್ಲಲ್ಲಿ ಬಿರುಕು, ಮೇಲ್ಛಾವಣಿ ಕುಸಿದಿರುವ 85 ವರ್ಷ ಹಳೆಯ ಈ ಸರ್ಕಾರಿ ಶಾಲೆಗೆ ಬೇಕಿದೆ ನೆರವು
ಸರ್ಕಾರಿ ಶಾಲೆ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಆಯೇಷಾ ಬಾನು

Updated on:Sep 05, 2024 | 11:01 AM

ಕೋಲಾರ, ಸೆ.05: ಕೋಲಾರ ಜಿಲ್ಲಾ ಕೇಂದ್ರ ಹಾಗೂ ಕೋಲಾರ ನಗರದ ಹೃದಯಭಾಗದಲ್ಲಿರುವ ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ (Government School) ಶಿಥಿಲಾವಸ್ಥೆಗೆ ತಲುಪಿದೆ. ಮೇಲ್ಛಾವಣಿ ಕುಸಿದು ಬಿದ್ದಿದೆ, ಮಳೆಗೆ ಸೋರಿ ಸೋರಿ ಗೋಡೆಗಳು ಶಿಥಿಲಾವಸ್ಥೆ ತಲುಪಿವೆ. ಇಂತಹ ದುಸ್ಥಿತಿಯ ಕಟ್ಟಡದಲ್ಲೇ ಕುಳಿತು ಮಕ್ಕಳು ಪಾಠ ಕೇಳುತ್ತಿದ್ದಾರೆ.

ಸ್ವತಂತ್ರ್ಯ ಪೂರ್ವದಿಂದಲೂ ಇಲ್ಲಿ ಶಾಲೆ ಇದೆ. ಆರಂಭದಲ್ಲಿ ಈ ಶಾಲೆಗೆ 800-1000 ಮಕ್ಕಳು ಬರುತ್ತಿದ್ದರು. ಆಗ ಇಲ್ಲಿದ್ದ ಕಟ್ಟಡಗಳು ಸಾಕಾಗುತ್ತಿರಲಿಲ್ಲ. ಅಷ್ಟೊಂದು ಡಿಮ್ಯಾಂಡ್ ಈ ಶಾಲೆಗಿತ್ತು. ಆದರೆ ಖಾಸಗಿ ಶಾಲೆ ವ್ಯಾಮೋಹ, ನಮ್ಮ ಶಿಕ್ಷಣ ಇಲಾಖೆಯ ಎಡವಟ್ಟುಗಳು ಸೇರಿದಂತೆ ಹಲವು ಕಾರಣಗಳಿಂದ ಶಾಲೆ ಸೊರಗುತ್ತಿದೆ. ಸದ್ಯ ಶಾಲೆಯಲ್ಲಿ 120 ಮಕ್ಕಳಿದ್ದು ಎಲ್ಲರೂ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಆತಂಕ ಪಡುತ್ತಿದ್ದಾರೆ. ಜೀವ ಭಯದಲ್ಲೇ ಪಾಠ ಕಲಿಯುವ ಸ್ಥಿತಿ ಬಂದಿದೆ. ಕಾರಣ ಈ ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಶಾಲೆಯಲ್ಲಿದ್ದ 11 ಕೊಠಡಿಗಳ ಪೈಕಿ 6 ಕೊಠಡಿಗಳ ಕಿಟಕಿ ಬಾಗಿಲುಗಳು ಕಿತ್ತುಹೋಗಿವೆ.

ಮೇಲ್ಛಾವಣಿ ಕುಸಿದು ಬೀಳುತ್ತಿವೆ, ಮಳೆ ಬಂದರೆ ಸೋರುತ್ತದೆ. ಹಾಗಾಗಿ ಕೊಠಡಿ ಬಹುತೇಕ‌ ಹಾಳಾಗಿದ್ದು, ಕಟ್ಟಡ ಯಾವಾಗ ಬೀಳುತ್ತೆ ಎನ್ನುವ ಆತಂಕದಲ್ಲಿ ಮಕ್ಕಳು ಹಾಗೂ ಪೋಷಕರಿದ್ದಾರೆ. ಇಷ್ಟಾದರೂ ಇಂದಿಗೂ 120 ಜನ ಮಕ್ಕಳು ಈ ಶಾಲೆಗೆ ಬರ್ತಿದ್ದಾರೆ. ಕಾರಣ ನಮಗೆ ಬೇರೆ ಶಾಲೆಗೆ ಹೋಗುವ ಶಕ್ತಿ ಇಲ್ಲ ಎಂದು ಪುಟಾಣಿ ಮಕ್ಕಳಲ್ಲೇ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಎಸ್​ಐ ಪರಶುರಾಮ ಸಾವು ಕೇಸ್​: ರಾಜ್ಯ ಸರ್ಕಾರದಿಂದ ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ

ಇನ್ನೂ ಈ ಶಾಲೆಯಲ್ಲಿ ಕಳೆದ ಹತ್ತು-ಇಪ್ಪತ್ತು ವರ್ಷಗಳಿಂದಲೂ ಕೆಲವು ಶಿಕ್ಷಕರು ಕೆಲಸ ಮಾಡಿಕೊಂಡು ಬಂದಿದ್ದಾರೆ, ಇಂದಿಗೂ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಈ ಶಾಲೆಯಲ್ಲಿ ಮಕ್ಕಳು ದಾಖಲಾತಿ ಉತ್ತುಂಗದಲ್ಲಿತ್ತು. ಅತಿ ಹೆಚ್ಚು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಬಡ ಮಕ್ಕಳೇ ಹೆಚ್ಚಾಗಿ ಬರುವ ಈ ಶಾಲೆಯ ಇಂದಿನ ದುಸ್ಥಿತಿ ಮಾತ್ರ ಹೇಳತೀರದಂತಾಗಿದೆ. ಹಾಗಾಗಿ ಶಾಲೆಗೆ ಬರುವ ಮಕ್ಕಳು ಆತಂಕದಲ್ಲೇ ತಮ್ಮ ಜೀವ ಅಂಗೈಲಿಟ್ಟು ಕೊಂಡು ಪಾಠ ಕಲಿಯುವ ಪರಿಸ್ಥಿತಿ ಇಲ್ಲಿದೆ.

ಮಳೆ ಬಂದ್ರೆ ಶಾಲೆ ಸೋರುತ್ತದೆ, ಕುಸಿಯುವ ಹಂತದಲ್ಲಿರುವ ಈ ಶಾಲೆಗೆ ಮಕ್ಕಳು ನಿತ್ಯ ಭಯದಿಂದಲೇ ಬರುತ್ತಾರೆ. ಇನ್ನು ಮಕ್ಕಳ ಪೋಷಕರೂ ಕೂಡಾ ಶಾಲೆಗೆ ಹೋಗದಿದ್ರೂ ಬೇಡ ಈ ಶಾಲೆಗೆ ಮಾತ್ರ ಹೋಗಬೇಡ ಎಂದು ಮಕ್ಕಳನ್ನು ಶಾಲೆಗೆ ಕಳಿಸೋದಕ್ಕೆ ಹಿಂದು ಮುಂದು ನೋಡುವ ಪರಿಸ್ಥಿತಿ ಇದೆ. ಈ ಶಾಲೆಯನ್ನು ಕೋಲಾರ ನಗರ ನಿರ್ಮಾತೃ ಟಿ.ಚನ್ನಯ್ಯ ಅವರು ನಿರ್ಮಿಸಿದ್ದಾರೆ. ಸುಮಾರು 85 ವರ್ಷದಷ್ಟು ಹಳೆದಾದ ಈ ಶಾಲೆಗೆ ಕಾಯಕಲ್ಪ ಕೊಡಬೇಕಿದೆ. ಇನ್ನು ಕಳೆದ ಐದಾರು ವರ್ಷಗಳಿಂದಲೂ ಕೂಡಾ ಇಲ್ಲಿನ ಶಾಲಾ ಸಿಬ್ಬಂದಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಖಾಸಗಿ ಸಂಘ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಒಟ್ಟಾರೆ ಶಿಕ್ಷಣಕ್ಕಾಗಿ ಸರ್ಕಾರ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಹಣ ವ್ಯಯ ಮಾಡುತ್ತಿದೆ, ಆದ್ರೂ ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿ ಮಾತ್ರ ಸರಿಯೋಗಿಲ್ಲ ಅನ್ನೋ ಬೇಸರ. ವಿದ್ಯೆ ಕಲಿಯೋದಕ್ಕೆ ಮಕ್ಕಳು ತಮ್ಮ ಜೀವವನ್ನು ಪಣಕ್ಕಿಟ್ಟು ಬರಲು ಸಿದ್ದರಿದ್ದಾರೆ, ಆದರೆ ಮಕ್ಕಳಿಗೆ ಸೂಕ್ಷ ಶಿಕ್ಷಣ ಕೊಡಲು ಸರ್ಕಾರವೇ ಸಿದ್ದವಿಲ್ಲ ಅನ್ನೋದೆ ದುರಂತ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:10 am, Thu, 5 September 24