ಬಡವರ ಶಾಪ ತಟ್ಟುತ್ತೆ: ಕೋಲಾರ ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಮೇಲೆ ಶಾಸಕಿ ರೂಪಾ ವಾಗ್ದಾಳಿ
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ವಿಚಾರದಲ್ಲಿ ನಡೆಯುತ್ತಿರುವ ತೆರೆಮರೆಯ ಸಂಘರ್ಷ ದಿನಕಳೆದಂತೆ ಹೊಸ ಮಜಲು ಮುಟ್ಟುತ್ತಿದೆ.
ಕೋಲಾರ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ವಿಚಾರದಲ್ಲಿ ನಡೆಯುತ್ತಿರುವ ತೆರೆಮರೆಯ ಸಂಘರ್ಷ ದಿನಕಳೆದಂತೆ ಹೊಸ ಮಜಲು ಮುಟ್ಟುತ್ತಿದೆ. ನಗರದಲ್ಲಿ ಬುಧವಾರ ಶಾಸಕಿ ರೂಪಾ ಶಶಿಧರ್ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಇತರ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಘಟನೆ ನಡೆದಿದೆ. ‘ಡಿಸಿಸಿ ಬ್ಯಾಂಕ್ ಎಂಡಿಗೆ ಬಡವರ ಶಾಪ ತಟ್ಟುತ್ತದೆ. ಇವರೆಲ್ಲರೂ ಹಾಳಾಗಿ ಹೋಗುತ್ತಾರೆ’ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಶಾಸಕಿ ಹಿಡಿ ಶಾಪ ಹಾಕಿದರು. ಈ ಅಧಿಕಾರಿಗಳ ಮೂಲಕ ರಾಜಕಾರಣ ಮಾಡುತ್ತಿರುವ ಪ್ರಭಾವಿಗಳಿಗೂ ಇಂಥದ್ದೇ ಸ್ಥಿತಿ ಬರಬೇಕು, ಬರುತ್ತದೆ ಎಂದು ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇವರೆಲ್ಲರೂ ಹಾಳಾಗಿ ನೆಲ ಕಚ್ಚಿ ಹೋಗ್ತಾರೆ. ಅವರ ಹಿಂದೆ ಇರುವ ಪ್ರಭಾವಿಗಳಿಗೂ ಹೀನಾಯ ಸ್ಥಿತಿ ಬರುತ್ತೆ. ಶಿಕ್ಷೆ ಅನುಭವಿಸಿ, ಜಾಮೀನು ಪಡೆದು ಹೊರಗೆ ಬಂದವರು ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಬಡ ಹೆಣ್ಣುಮಕ್ಕಳ ವಿಚಾರದಲ್ಲಿ ತೊಂದರೆ ಕೊಡುವವರು ನೆಲಕಚ್ಚಬೇಕು ಎಂದು ಶಾಪ ಹಾಕಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಪರಿಶ್ರಮದಿಂದ ಕೆಲಸ ಮಾಡುತ್ತಿದ್ದಾರೆ. ಕಾಲಚಕ್ರ ಹೀಗೆಯೇ ಇರುವುದಿಲ್ಲ. ನಮಗೂ ಒಂದೂ ದಿನ ಅವಕಾಶ ಸಿಗುತ್ತದೆ. ಡಿಸಿಸಿ ಬ್ಯಾಂಕ್ ಉಳಿಸಿಕೊಳ್ಳಲು ನಾವು ಪರಿಶ್ರಮ ಹಾಕುತ್ತಿದ್ದೇವೆ. ಇವರೆಲ್ಲರೂ ನೆಲ ಕಚ್ಚುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮಾಡಿ ಸರ್ಕಾರಕ್ಕೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ರೈತರಿಗೆ ನೋವು ಕೊಡುತ್ತಾ, ಬ್ಯಾಂಕ್ ವ್ಯವಹಾರ ಹಾಳು ಮಾಡುತ್ತಿದ್ದಾರೆ. ಈ ಎಲ್ಲ ಕೆಲಸಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರ ಜೊತೆಗೆ ಯಾರದ್ದೋ ಕೈವಾಡವಿದೆ ಎಂದು ಅಭಿಪ್ರಾಯಪಟ್ಟರು. ಡಿಸಿಸಿ ಬ್ಯಾಂಕ್ನ ಆಡಳಿತ ಮಂಡಳಿಯ ತೀರ್ಮಾನವನ್ನು ವ್ಯವಸ್ಥಾಪಕ ನಿರ್ದೇಶಕರು ಪ್ರಶ್ನಿಸುವಂತಿಲ್ಲ. ನಿಯಮಗಳನ್ನು ಪಾಲನೆ ಮಾಡುವುದು ಮತ್ತು ಇತರ ಪಾಲನೆ ಮಾಡುತ್ತಿದ್ದಾರೆ ಎಂದು ಖಾತ್ರಿಪಡಿಸಿಕೊಳ್ಳುವುದಷ್ಟೇ ಅಧಿಕಾರಿಗಳ ಕೆಲಸ ಎಂದರು.
ಡಿಸಿಸಿ ಬ್ಯಾಂಕ್ನಲ್ಲಿ ಹಗರಣ ನಡೆದಿದೆ ಎಂಬ ಆರೋಗ್ಯ ಸಚಿವ ಸಚಿವ ಸುಧಾಕರ್ ಹಾಗೂ ಕೆಜಿಎಫ್ ಕ್ಷೇತ್ರದ ಮಾಜಿ ಶಾಸಕ ವೈ.ಸಂಪಂಗಿ ವಿರುದ್ಧ ರೂಪಾ ಪರೋಕ್ಷವಾಗಿ ಹರಿಹಾಯ್ದರು. ಪ್ರಸ್ತುತ ಶಾಸಕಿ ರೂಪಾ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಪರ ನಿಂತಿದ್ದಾರೆ. ಇತ್ತೀಚೆಗಷ್ಟೇ ಶ್ರೀನಿವಾಸಪುರ ಶಾಸಕ ರಮೇಶ್ಕುಮಾರ್ ಸಹ ಸಚಿವ ಸುಧಾಕರ್ ವಿರುದ್ಧ ಹರಿಹಾಯ್ದಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ಕೋಲಾರ ಡಿಸಿಸಿ ಬ್ಯಾಂಕ್ನಲ್ಲಿ ಭ್ರಷ್ಟಾಚಾರ ನಡೆದಿದೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇದನ್ನೂ ಓದಿ: ಕೋಲಾರ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ: ಜೋರು ಮಳೆ ನಿರೀಕ್ಷೆ