ಕೋಲಾರ, ಆಗಸ್ಟ್ 8: ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ನವ ವಧು ಹಾಗೂ ವರ ಬಡಿದಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರನೇ ವ್ಯಕ್ತಿಯ ಕೈವಾಡ ಇರುವ ಬಗ್ಗೆ ವಧು ಲಿಖಿತಶ್ರೀ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ವಧು ಲಿಖಿತಶ್ರೀಯ ತಾತ ಹಾಗೂ ತಂಗಿ ಮೂರನೇ ವ್ಯಕ್ತಿಯ ಕೈವಾಡದ ಬಗ್ಗೆ ಆರೋಪ ಮಾಡಿದ್ದಾರೆ.
ಇಬ್ಬರೂ ಬಹಳಷ್ಟು ಅನ್ಯೋನ್ಯವಾಗಿದ್ದವರು, ಪ್ರೀತಿಸಿ ಮದುವೆಯಾಗಿದ್ದವರು. ಇಬ್ಬರು ಹೊಡರದಾಡಿಕೊಂಡಿರುವುದು ಅನುಮಾನ. ಯಾರೋ ಮೂರನೇ ವ್ಯಕ್ತಿ ಇದರ ಹಿಂದೆ ಇದ್ದಾರೆ ಎಂದು ನವ ವಧು ವರನ ಸಾವಿನ ಬಗ್ಗೆ ಲಿಖಿತಶ್ರೀ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಾವು ಮದುವೆಗೆ ಹೋಗಿದ್ದೆವು. ಇಬ್ಬರೂ ತುಂಬಾ ಖುಷಿಯಾಗಿ ಇದ್ದರು. ಅವರು ಹೊಡೆದಾಡಿಕೊಂಡಿರುವುದು ಸುಳ್ಳು. ಇಬ್ಬರನ್ನೂ ಯಾರೋ ಹೊಡೆದಿರುವ ಅನುಮಾನ ಇದೆ ಎಂದು ಲಿಖಿತಶ್ರೀ ತಂಗಿ ಅರ್ಚನಾ ಹಾಗೂ ತಾತ ವೆಂಕಟರಮಣಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ಬುಧವಾರ ನವೀನ್ ಹಾಗೂ ಲಿಖಿತ ಶ್ರೀ ವಿವಾಹ ಅದ್ದೂರಿಯಾಗಿ ನೆರವೇರಿದೆ. ಚಂಬರಸನಹಳ್ಳಿ ಗ್ರಾಮದ ನವೀನ್ ಕೆಲವು ವರ್ಷಗಳಿಂದ ಆಂಧ್ರಪ್ರದೇಶದ ಬೈನಪಲ್ಲಿ ಗ್ರಾಮದ ಲಿಖಿತಶ್ರೀಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಸೇರಿ ಕಷ್ಟಪಟ್ಟು ಮನೆಯವರನ್ನು ಒಪ್ಪಿಸಿ ಗ್ರಾಮದಲ್ಲಿ ವಿವಾಹವಾಗಿದ್ದಾರೆ. ಆದರೆ, ಮದುವೆಯಾದ ಕೆಲವೇ ಗಂಟೆಗಳಲ್ಲಿ ಅನಾಹುತವೇ ನಡೆದುಹೋಗಿದೆ.
ಇದನ್ನೂ ಓದಿ: ಮದ್ವೆಯಾದ ಕೆಲವೇ ಗಂಟೆಗಳಲ್ಲಿ ನವದಂಪತಿ ಹೊಡೆದಾಟ: ವಧು ದುರಂತ ಸಾವು
ವಿವಾಹದ ನಂತರ ಕೊಠಡಿಗೆ ತೆರಳಿದ ಜೋಡಿ ಏಕಾಏಕಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಪರಿಣಾಮವಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರದೃಷ್ಟವಶಾತ್ ವಧು ಲಿಖಿತ ಶ್ರೀ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಗಂಭೀರವಾಗಿ ಗಾಯಗೊಂಡಿರುವ ವರ ನವೀನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಆತನೂ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Thu, 8 August 24