ಕೋಲಾರ, ಮೇ.14: ಸಾಲ ತೀರಿಸಲು ತಂದೆಯೇ ಗಂಡು ಮಗುವನ್ನು ಮಾರಾಟ ಮಾಡಿದ ಆರೋಪ ಕೋಲಾರ ಜಿಲ್ಲೆಯ ಬಂಗಾರಪೇಟೆ(Bangarapet)ಯಲ್ಲಿ ಕೇಳಿಬಂದಿದೆ. ಇದೀಗ ಮಗು ಮಾರಾಟ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಗಾರಪೇಟೆ ನಗರ ನಿವಾಸಿಗಳಾದ ಮುನಿರಾಜು ಹಾಗೂ ಪವಿತ್ರ ದಂಪತಿಗಳಿಗೆ 2023ರ ಜೂನ್ 21ರಂದು ಗಂಡು ಮಗು ಜನಿಸಿತ್ತು.
ಬಳಿಕ ಹಣದಾಸೆಗೆ ತಂದೆಯೇ ಕೆರೆಕೋಡಿ ನಿವಾಸಿಯ ವಲ್ಲಿ ಎಂಬ ಮಹಿಳೆಗೆ ಮಗುವನ್ನು ಮಾರಾಟ ಮಾಡಿರುವ ಆರೋಪದ ಹಿನ್ನಲೆ ಮಗುವಿನ ತಾಯಿ ಪವಿತ್ರಾ ಅವರು ಮಗುವನ್ನ ವಾಪಸ್ ಕೊಡಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ , ಮಹಿಳಾ ಆಯೋಗ ಮತ್ತು ಬಂಗಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ದುಶ್ಚಟಗಳ ದಾಸನಾಗಿರುವ ಭಿಕ್ಷುಕ ತಂದೆಯಿಂದ ಹೆಣ್ಣು ಮಗು ಮಾರಾಟ, ಭಿಕ್ಷುಕ ದಂಪತಿಯನ್ನು ವಶಕ್ಕೆ ಪಡೆದ ಪೊಲೀಸ್
ಇನ್ನು ಕಳೆದ ಜನವರಿ 4 ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ತಾಯಿಯೊಬ್ಬರು ತನಗೆ ಹುಟ್ಟಿದ ಗಂಡು ಮಗುವನ್ನ ಜನಿಸಿದ ಒಂದೇ ದಿನಕ್ಕೆ ಅದ್ಯಾರದೋ ಒತ್ತಡಕ್ಕೆ ಸಿಲುಕಿ ಮಾರಾಟ ಮಾಡಿದ್ದ ಘಟನೆ ನಡೆದಿತ್ತು. ಜೊತೆಗೆ ಈ ಪ್ರಕರಣದಲ್ಲಿ ತಾಯಿ, ಆಶಾಕಾರ್ಯಕರ್ತೆ ಸೇರಿ ಐವರನ್ನು ಬಂಧಿಸಲಾಗಿತ್ತು. ತಾಯಿಗೆ ಬೆದರಿಕೆ ಹಾಕಿ ಮಗುವನ್ನ ಮಾರಾಟ ಮಾಡಿದ ಬಗ್ಗೆಯೂ ಅನುಮಾನವಿದೆ ಎಂದು ಈ ಘಟನೆ ಕುರಿತು ಸಮಗ್ರ ತನಿಖೆಗೆ ಪೊಲೀಸರು ಮುಂದಾಗಿದ್ದರು.
ಇನ್ನು ಹೊಸಳ್ಳಿಯ ಸುಬ್ರಹ್ಮಣ್ಯ ಎಂಬುವವರ ಕಾಫಿ ತೋಟದ ಲೈನ್ ಮನೆಯಲ್ಲಿ ನೆಲೆಸಿದ್ದ ಮಹಿಳೆ ಗಿರಿಜಾ ಎಂಬುವವರಿಗೆ ನವೆಂಬರ್ 15ರಂದು ಹೆತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಗಂಡು ಮಗು ಜನಿಸಿತ್ತು. ಇದಾದ ಒಂದೇ ದಿನಕ್ಕೆ ಅಂದರೆ ನವೆಂಬರ್ 16ರಂದು ಚಿಕ್ಕಮಗಳೂರು ಮೂಲದ ಮಹಿಳೆಯೊಬ್ಬರಿಗೆ ಮಗುವನ್ನ ಮಾರಾಟ ಮಾಡಲಾಗಿದೆ ಎನ್ನೋ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹಾಸನದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ದೂರೊಂದು ಬಂದಿತ್ತು. ಈ ಕುರಿತು ಆರೋಪಿಗಳೆಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಗುವನ್ನ ಕಾನೂನು ಬಾಹಿರವಾಗಿ ಹಸ್ತಾಂತರ ಮಾಡಲಾಗಿರುವ ಪ್ರಕರಣ ಬಯಲಾಗಿತ್ತು. ಇದೀಗ ಇಂತಹ ಪ್ರಕರಣ ಕೋಲಾರದ ಬಂಗಾರಪೇಟೆಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Tue, 14 May 24