
ಕೋಲಾರ, ಜೂನ್ 09: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ (Chennai-Bengaluru Express) ಕಾರಿಡಾರ್ ಹೈವೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಓರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೋಲಾರ (Kolar) ಜಿಲ್ಲೆಯ ಕೆಜಿಎಫ್ ತಾಲೂಕಿನ ಕೃಷ್ಣಾವರಂ ಬಳಿ ಅಪಘಾತ ಸಂಭವಿಸಿದೆ. ಕೃಷ್ಣಾವರಂ ಗ್ರಾಮದ ಆಕಾಶ್ (33), ಜಾನ್ (22) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಅಪ್ಪು ಅಲಿಯಾಸ್ ಭಾಸ್ಕರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ತಮಿಳರಸನ್, ನಾಗರಾಜು ಎಂಬುವರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದಕ್ಕೂ ಮೊದಲು ಇದೇ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್ ಹೈವೆಯಲ್ಲಿ ಇಂದು (ಜೂ.09) ಬೆಳಿಗ್ಗೆ ಅಪಘಾತ ಸಂಭವಿಸಿತ್ತು. ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದ ಘಟನೆ ಮಾಲೂರು ತಾಲೂಕಿನ ಎಡಗಿನಬೆಲೆ ಟೋಲ್ ಬಳಿ ನಡೆದಿತ್ತು. ರಾಜಾಸ್ಥಾನ ಮೂಲದ ಅಶೋಕ್ (28) ಮತ್ತು ಮೋಹನ್ ಲಾಲ್(32) ಮೃತರು. ಘಟನಾ ಸ್ಥಳಕ್ಕೆ ಮಾಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೋಲಾರ ಜಿಲ್ಲೆಯಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತ ಸಂಭವಿಸಿದ್ದು ಐವರು ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಕಾಗತಿ ಗ್ರಾಮದ ಬಳಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಟ್ಟಿದ್ದಾರೆ. ಬೈಕ್ನಲ್ಲಿದ್ದ ಮಹಿಳೆ ಹಾಗೂ ಓರ್ವ ಪುರುಷ ಮೃತರು. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಂಗಳೂರು ಟು ಮೈಸೂರು ಹೆದ್ದಾರಿಯಲ್ಲಿ ಕಳೆದ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರು ಮೂಲದ ಇಬ್ಬರು ಸಾವನ್ನಪ್ಪಿದ್ದು, ಐವರಿಗೆ ಗಾಯವಾಗಿದೆ. ಮಸೂದ್ ಮತ್ತು ಅಯಾನ್ ಮೃತ ವ್ಯಕ್ತಿಗಳು.