ಬೆಂಕಿಯೂ ಬೇಡ ಬಿಸಿಲೂ ಬೇಡ, ಬಿಸಿಯಾಗುತ್ತದೆ ನೀರು! ಕೋಲಾರದ ಈ ಗ್ರಾಮದ ಜನರಿಗೆ ಶುರುವಾಗಿದೆ ತಲೆಬಿಸಿ

ಶೀಘ್ರದಲ್ಲಿ ಈಕುರಿತು ವಿಜ್ಞಾನಿಗಳು ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬೆಂಕಿಯೂ ಬೇಡ ಬಿಸಿಲೂ ಬೇಡ, ಬಿಸಿಯಾಗುತ್ತದೆ ನೀರು! ಕೋಲಾರದ ಈ ಗ್ರಾಮದ ಜನರಿಗೆ ಶುರುವಾಗಿದೆ ತಲೆಬಿಸಿ
ನೀರು ಬಿಸಿಯಾಗಲು ಕಾರಣವೇನು?

ಅಲ್ಲಿರುವ ನೀರು ಬಿಸಿಯಾಗಲು ಗ್ಯಾಸ್ ಬೇಕಿಲ್ಲ, ಬೆಂಕಿ ಬೇಕಿಲ್ಲ, ಸೂರ್ಯನ ಶಾಖವೂ ಬೇಕಿಲ್ಲ. ಆದರೂ ಅಲ್ಲಿನ ನೀರು ಬಿಸಿಯಾಗುತ್ತದೆ. ಹೀಗೆ ಕಾರಣವೇ ತಿಳಿಯದೇ ಬಿಸಿಯಾಗುತ್ತಿರುವ ನೀರು ಕೋಲಾರದ ಊರೊಂದರ ಜನರಿಗೆ ತಲೆಬಿಸಿ ಉಂಟುಮಾಡಿದೆ. ಅಷ್ಟಕ್ಕೂ ನೀರು ಬಿಸಿಯಾಗುತ್ತಿರುವುದು ಹೇಗೆ? ಎಂಬ ಆತಂಕದಲ್ಲಿ ಆ ಗ್ರಾಮದ ಜನರು ತಲೆಕೆಡಿಸಿಕೊಂಡಿದ್ದಾರೆ. ಕೋಲಾರ ತಾಲ್ಲೂಕು ಅಣ್ಣೇನಹಳ್ಳಿ ಗ್ರಾಮ ಕೆಲವೊಂದು ದಿನಗಳಿಂದ ಅಚ್ಚರಿಯ ಕೇಂದ್ರವಾಗಿ ಪರಿಣಮಿಸಿದೆ. ಅಣ್ಣೇನಹಳ್ಳಿ ಗ್ರಾಮದ ವೆಂಕಟರೆಡ್ಡಿ ಎಂಬುವರ ಮನೆ ಸದ್ಯ ಗ್ರಾಮದ ಕೌತುಕದ ಕೇಂದ್ರವಾಗಿದೆ. ಗ್ರಾಮದ ವೆಂಕಟರೆಡ್ಡಿ ಎಂಬುವವರು ಕಳೆದ ಎಂಟು ವರ್ಷಗಳ ಹಿಂದೆ ಮನೆಯ ಬಳಿ ನೀರಿನ ಸಂಪ್ ನಿರ್ಮಾಣ ಮಾಡಿದ್ದರು. ಮತ್ತು ನೀರನ್ನು ನಿರಂತರವಾಗಿ ಬಳಸುತ್ತಿದ್ದರು. ಕಳೆದ ಹದಿನೈದು ದಿನಗಳಿಂದ ಈ ಸಂಪ್​ನಲ್ಲಿ ನೀರು ಏಕಾಏಕಿ ಬಿಸಿಯಾಗುವ ಮೂಲಕ ಮನೆಯವರಲ್ಲಿ ಆತಂಕಕ್ಕೆ ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.

ಬೆಂಕಿಯೂ ಬೇಡ ಬಿಸಿಲೂ ಬೇಡ ಬಿಸಿಯಾಗುತ್ತಿದೆ ನೀರು..!
ಸಂಪ್​ನಲ್ಲಿರುವ ನೀರು ಸಾಮಾನ್ಯವಾಗಿ ಮಾಮೂಲಿಗಿಂತ ತಣ್ಣಗಿರುತ್ತದೆ. ಆದರೆ ವೆಂಕಟರೆಡ್ಡಿಯವರ ಮನೆಯ ಸಂಪ್ನಲ್ಲಿನ ನೀರು ಮಾತ್ರ ಬಿಸಿಯಾಗುತ್ತಿದೆ. ಬೆಂಕಿಯೂ ಬೇಡ, ಬಿಸಿಲೂ ಬೇಡ, ಇಲ್ಲವೇ ಗ್ಯಾಸ್ ಆಗಲೀ ಸೌದೆಯಾಗಲೀ ಬೇಡ. ಆದರೆ ನೀರು ಮಾತ್ರ ಬಿಸಿಯಾಗುತ್ತಿದೆ. ಸ್ನಾನ ಮಾಡಲು ಬಳಸುವಷ್ಟು ಬಿಸಿಯಾಗುತ್ತಿದೆ. ಹಾಗಾಗಿ ಸಂಪ್​ನಲ್ಲಿನ ನೀರು ಬಿಸಿಯಾಗುತ್ತಿರುವುದು ಏಕೆ ಎಂಬ ಕುತೂಹಲವನ್ನು ಎಲ್ಲರಲ್ಲೂ ಸೃಷ್ಟಿಸಿದೆ. ಸಂಪ್ ಅಳವಡಿಸಿದ್ದ ಮೋಟರ್​ನಿಂದ ಹೀಗೆ ಆಗಿರಬಹುದಾ? ಎಂದು ನೋಡಿದಾಗ ಆ ಮೋಟರ್ ಕೂಡಾ ಸುಟ್ಟು ಹೋಗಿತ್ತು. ಇದೀಗ ಅದನ್ನು ಸಹ ತೆಗೆದುಹಾಕಲಾಗಿದೆ ಆದರೆ ಸಂಪ್​ನಲ್ಲಿನ ನೀರು ಬಿಸಿಯಾಗುವುದು ಮಾತ್ರ ತಪ್ಪಿಲ್ಲ. ಬೆಳಿಗ್ಗೆಯಿಂದ ಸ್ವಲ್ಪ ಬಿಸಿಯಾಗುವ ನೀರು ಸಂಜೆಯ ವೇಳೆ ನೀರಿನ ಬಿಸಿ ಹೆಚ್ಚಾಗತೊಡಗುತ್ತದೆ.

ನೀರು ಬಿಸಿಯಾಗುತ್ತಿರೋದೇಕೆ ಅನ್ನೋ ಆತಂಕದಲ್ಲಿ ಗ್ರಾಮಸ್ಥರು
ಇಲ್ಲಿನ ಭೂಮಿಯ ತಾಪಮಾನ ಏನಾದರೂ ಹೆಚ್ಚಾಗುತ್ತಿದೆಯಾ ಎಂಬ ಆತಂಕ ಗ್ರಾಮಸ್ಥರಲ್ಲಿ ಮೂಡಿತ್ತು. ಹಾಗಾಗಿ ವೆಂಕಟರೆಡ್ಡಿ ಮನೆಯ ಅಕ್ಕ ಪಕ್ಕದ ಮನೆಯ ಸಂಪ್​ಗಳನ್ನು ಪರಿಶೀಲಿಸಿದಾಗ ಅದೆಲ್ಲಾ ಮಾಮೂಲಿ ಇತ್ತು. ಆದರೆ ಇವರ ಮನೆಯ ಸಂಪ್​ನಲ್ಲಿಯ ನೀರು ಮಾತ್ರ ಬಿಸಿಯಾಗುತ್ತಿದೆ. ಇನ್ನು ಯಾವುದಕ್ಕೂ ಇರಲಿ ಎಂದು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸುದ್ಡಿ ಮುಟ್ಟಿಸಲಾಗಿದ್ದು, ಗ್ರಾಮ ಪಂಚಾಯತ್ ಪಿಡಿಓ ಹಾಗೂ ಕೆಲವು ಅಧಿಕಾರಿಗಳು ಗ್ರಾಮಕ್ಕೆ ಬಂದು ಭೇಟಿ ನೀಡಿ ಹೋಗಿದ್ದಾರೆ. ಸೋಮವಾರದ ನಂತರ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಕರೆಸಿಕೊಂಡು ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೂ ಗ್ರಾಮದ ಜನರಿಗೆ ನೀರು ಬಿಸಿಯಾಗುತ್ತಿರುವುದು ಏಕೆ? ಆ ಬಿಸಿ ನೀರನ್ನು ಜನ ಜಾನುವಾರುಗಳು ಕುಡಿದರೆ ಏನಾದರೂ ತೊಂದರೆಯಾಗುತ್ತದೆಯೇ? ಅಥವಾ ಮುಂದಿನ ದಿನಗಳಲ್ಲಿ ಇದರಿಂದ ಏನಾದರೂ ಭೌಗೋಳಿಕವಾಗಿ ತೊಂದರೆಯಾಗುತ್ತದೆಯೇ? ಎಂಬ ಹಲವು ಅನುಮಾನ ಹಾಗೂ ಆತಂಕ ಶುರುವಾಗಿದೆ. ಶೀಘ್ರದಲ್ಲಿ ಈಕುರಿತು ವಿಜ್ಞಾನಿಗಳು ಪರಿಶೀಲಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಒಟ್ಟಾರೆ ವೆಂಕಟರೆಡ್ಡಿಯವರ ಮನೆಯ ಸಂಪ್​ನಲ್ಲಿಯ ನೀರು ಬಿಸಿಯಾಗುತ್ತಿದ್ದಂತೆ ಅಣ್ಣೇನಹಳ್ಳಿ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮದ ಜನರ ತಲೆ ಬಿಸಿಯಾಗುತ್ತಿದೆ. ಜೊತೆಗೆ ಜನ ತಲೆ ಕೆಡಿಸಿಕೊಂಡು ಏನಾಗುತ್ತದೆಯೋ ಏನೋ ಎಂಬ ಭಯದಲ್ಲೂ ಇದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಭೇಟಿ ನೀಡಿ ಇದಕ್ಕೆ ಕಾರಣ ಏನು ಎಂಬುದನ್ನು ಕಂಡುಹಿಡಿದು ಜನರ ಆತಂಕ ದೂರಮಾಡಬೇಕಿದೆ.

ವರದಿ: ರಾಜೇಂದ್ರ ಸಿಂಹ, ಕೋಲಾರ

ಇದನ್ನೂ ಓದಿ: 

ಕೋಲಾರ: ತಾಲಿಬಾನಿಗಳಿಗೆ, ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಬುದ್ಧಿ ಕಲಿಸುತ್ತಿರುವ ಪರಿಕಲ್ಪನೆಯಲ್ಲಿ ಗಣೇಶ

ನೆರವಿಗೆ ಕೋರಿಕೆ: ಅಪಘಾತಕ್ಕೆ ತುತ್ತಾದ 5ನೇ ತರಗತಿ ವಿದ್ಯಾರ್ಥಿಯ ಚಿಕಿತ್ಸೆಗೆ ಕೊಪ್ಪಳದ ಶಿಕ್ಷಕ ವೃಂದ ನೆರವಾಗಿದೆ, ನೀವೂ ಸಹಾಯ ಮಾಡಿ

(Kolar water heat without fire sunlight or power)

Read Full Article

Click on your DTH Provider to Add TV9 Kannada