Kolar News: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ಗಂಡನ ಸುತ್ತ ಅನುಮಾನಗಳ ಹುತ್ತ
ಅವರಿಬ್ಬರಿಗೂ ಮದುವೆಯಾಗಿ ನಾಲ್ಕು ವರ್ಷ ಕಳೆದಿತ್ತು, ಎರಡು ಮಕ್ಕಳಾಗಿದ್ರು. ಹೀಗಿರಬೇಕಾದ್ರೆ ಸುಂದರವಾಗಿ ಇರಬೇಕಾಗಿದ್ದ ಸಂಸಾರ, ಆತನ ವರದಕ್ಷಿಣೆ ಕಿರುಕುಳ ಹಾಗೂ ಆತನ ಕುಡಿತದ ಚಟ ಸುಂದರವಾಗಿದ್ದ ಆ ಪುಟ್ಟ ಸಂಸಾರವನ್ನೇ ಇವತ್ತು ಹಾಳು ಮಾಡಿದೆ. ಇನ್ನು ಪ್ರಪಂಚ ನೋಡದ ಮಕ್ಕಳನ್ನು ಅನಾಥವಾಗಿಸಿದೆ.
ಕೋಲಾರ: ಪೊಲೀಸ್ ಠಾಣೆ ಎದುರು ಹೆತ್ತವರ ಆಕ್ರೋಶ ಆಕ್ರಂಧನ, ಇನ್ನೊಂದೆಡೆ ಹೆತ್ತವರನ್ನು ಸಮಾದಾನ ಪಡಿಸುತ್ತಿರುವ ಪೊಲೀಸರು ಹಾಗೂ ಸಿಬ್ಬಂದಿಗಳು. ಮತ್ತೊಂದೆಡೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಮಹಿಳೆಯ ಶವ. ಇದೆಲ್ಲ ದೃಶ್ಯಗಳು ಕಂಡು ಬಂದಿದ್ದು, ಕೋಲಾರ (Kolar) ತಾಲೂಕಿನ ಖಾದ್ರಿಪುರ ಗ್ರಾಮದಲ್ಲಿ. ಹೌದು ಕಳೆದ ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡೂರು ಗ್ರಾಮದ ಅಂಬಿಕಾ ಎಂಬಾಕೆಗೂ, ಖಾದ್ರಿಪುರ ಗ್ರಾಮದ ಮಧು ಎಂಬುವರಿಗೆ ಮದುವೆ ಮಾಡಲಾಗಿತ್ತು. ಪ್ಲಂಬರ್ ಹಾಗೂ ವಾಟರ್ ಪಿಲ್ಟರ್ ರಿಪೇರಿ ಕೆಲಸ ಮಾಡುತ್ತಿದ್ದ ಮಧು ಮದುವೆಯಾದ ಸ್ವಲ್ಪ ದಿನಗಳ ಕಾಲ ಸಂಸಾರ ಚೆನ್ನಾಗಿಯೇ ಇತ್ತು. ಆದರೆ, ಮದುವೆಯಾಗಿ ಕೆಲವು ತಿಂಗಳು ಕಳೆದ ನಂತರ ಮಧು ಕುಡಿದು ಬಂದು ತನ್ನ ಹೆಂಡತಿಗೆ ಕಿರುಕುಳ ಕೊಡುವುದು ವರದಕ್ಷಿಣೆ ಕೊಡುವಂತೆ ಹೊಡೆದು ತವರು ಮನೆಗೆ ಕಳಿಸೋದು ಮಾಡುತ್ತಿದ್ದನಂತೆ.
ಈ ಕುರಿತು ಹತ್ತಾರು ಬಾರಿ ರಾಜಿ ಪಂಚಾಯ್ತಿ ನಡೆದಿದೆ. ಹಣ ಒಡವೆಗಳನ್ನು ಕೊಟ್ಟು ಸಮಾಧಾನ ಕೂಡ ಮಾಡಿದ್ದಾರೆ. ಇಷ್ಟಾದರೂ ಕೂಡ ಸಂಸಾರ ಮಾತ್ರ ಸರಿಹೋಗಿರಲಿಲ್ಲ. ಹೀಗಿರುವಾಗಲೇ ಇಬ್ಬರಿಗೆ ಎರಡನೇ ಮಗುವಾಗಿ ಒಂಬತ್ತು ತಿಂಗಳು ಕಳೆದಿತ್ತು. ಇತ್ತೀಚೆಗಷ್ಟೇ ಬಾಣಂತನ ಮುಗಿಸಿ ವಾಪಸ್ ಬಂದಿದ್ದ ಅಂಬಿಕಾಗೆ ಮತ್ತೆ ಮಧು ಕುಡಿದು ಬಂದು ಹೊಡೆಯೋದು, ಬಡಿಯೋದು, ಹಣ ತರುವಂತೆ ಹಿಂಸೆ ನೀಡೋದು ಶುರುಮಾಡಿದ್ದನಂತೆ. ಹೀಗಿರುವಾಗಲೇ ಕಳೆದ ರಾತ್ರಿಯೂ ಕೂಡ ಮನೆಯಲ್ಲಿ ಇಬ್ಬರೇ ಇದ್ದಾಗ ಎಂದಿನಂತೆ ಕುಡಿದು ಮನೆಗೆ ಬಂದ ಮಧು ಹಣ ತಂದಿಲ್ಲವೆಂದು ತನ್ನ ಹೆಂಡತಿಯನ್ನು ಕೊಂದು ನೇಣುಹಾಕಿದ್ದಾನೆ ಎನ್ನುವುದು ಅಂಬಿಕಾ ಕುಟುಂಬಸ್ಥರ ಆರೋಪ.
ಇದನ್ನೂ ಓದಿ:ಹಿಂದೂ ಮಹಿಳೆಯ ಶವ ಹೊತ್ತು ಸಾಗುವ ಮೂಲಕ ಸೌಹಾರ್ದತೆ ಮೆರೆದ ಮುಸ್ಲಿಮರು
ಅಷ್ಟಕ್ಕೂ ನಿನ್ನೆ(ಮೇ.22) ರಾತ್ರಿ ಆಗಿದ್ದಾದರೂ ಏನು ಅನ್ನೋದನ್ನ ನೋಡೋದಾದ್ರೆ. ಪ್ರತಿನಿತ್ಯ ಮನೆಗೆ ಕುಡಿದು ಬರೋದು, ಇಬ್ಬರ ನಡುವೆ ಜಗಳವಾಡೋದು ಹೊಡೆಯೋದು ಕಾಮನ್ ಆಗಿತ್ತು. ಅದರಂತೆ ನಿನ್ನೆ ರಾತ್ರಿ ಕೂಡ ಕುಡಿದು ಬಂದಿದ್ದ ಮಧು ಹಾಗೂ ಮನೆಯಲ್ಲಿದ್ದ ಅಂಬಿಕಾ ನಡುವೆ ಹಣ ತಂದಿಲ್ಲ ಎನ್ನುವ ವಿಷಯವಾಗಿಯೇ ಗಲಾಟೆಯಾಗಿದೆ. ಆಗ ಗಲಾಟೆಯಾದಾಗ ಅಂಬಿಕಾ ಮನೆಯ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ, ಅಷ್ಟೇ ಬೆಳಿಗ್ಗೆ ಹೊತ್ತಿಗೆ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮುಂಜಾನೆ ಹೊತ್ತಿಗೆ ಮನೆಯಲ್ಲಿದ್ದ ಗಂಡ ಮಧು ಅಕ್ಕಪಕ್ಕದ ಮನೆಯವರನ್ನು ಕರೆತಂದು ತನ್ನ ಹೆಂಡತಿ ನೇಣುಹಾಕಿಕೊಂಡಿದ್ದಾಳೆಂದು ಹೇಳಿ ಆಕೆ ಇದ್ದ ರೂಮಿನ ಬಾಗಿಲು ಮುರಿದು ಶವ ಕೆಳಗಿಳಿಸಿ ನೋಡಿದ್ದಾರೆ.
ಆದರೆ ಅಷ್ಟೊತ್ತಿಗೆ ಅಂಬಿಕಾ ಪ್ರಾಣ ಪಕ್ಷಿ ಹಾರಿಹೋಗಿತ್ತು. ನಂತರ ಸ್ಥಳೀಯರು ಕೋಲಾರ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಂಬಿಕಾ ಕುಟುಂಬಸ್ಥರು ಹೇಳೋದೆ ಬೇರೆ ಕುಡಿದು ಬಂದಿರುವ ಮಧು ವರದಕ್ಷಿಣೆ ಹಣ ತರುವಂತೆ ಹೇಳಿ ಗಲಾಟೆ ಮಾಡಿ ಆಕೆಯನ್ನು ಮೊಬೈಲ್ ವೈಯರ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ನಂತರ ನೇಣು ಹಾಕಿಕೊಂಡಂತೆ ಬಿಂಬಿಸಿ ನಾಟಕವಾಡುತ್ತಿದ್ದಾನೆ. ಅಂಬಿಕಾಳನ್ನು ಆಕೆಯ ಗಂಡನೇ ಕೊಲೆ ಮಾಡಿದ್ದಾನೆ ಅನ್ನೋದು ಅಂಬಿಕಾ ಪೊಷಕರ ಆರೋಪ.
ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ; ಅತ್ಯಾಚಾರ ಎಸಗಿ ಕೊಂದಿರುವ ಶಂಕೆ
ಒಟ್ಟಾರೆ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪದಡಿಯಲ್ಲಿ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರಿಗೆ ಪೊಷಕರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಆರೋಪಿ ಮಧುವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಾರೆ ಸುಂದರ ಸಂಸಾರದಲ್ಲಿ ವರದಕ್ಷಿಣೆ ಅನ್ನೋ ಪಿಡುಗು ಹಾಗೂ ಕುಡಿತದ ಚಟ ಸುಂದರ ಸಂಸಾರವನ್ನು ಸ್ಮಶಾನ ಮಾಡಿ, ಇನ್ನು ಪ್ರಪಂಚವನ್ನೇ ನೋಡದ ಮಕ್ಕಳನ್ನು ಅನಾಥರನ್ನಾಗಿಸಿದೆ.
ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ