ಸಿದ್ದರಾಮಯ್ಯ ಕೋಲಾರದಿಂದ ಸ್ವರ್ಧೆ ವಿಷಯ ತಿಳಿದು ಅಭಿಮಾನಿಗಳಿಗೆ ದಿಲ್ಖುಷ್
ಸಿದ್ದರಾಮಯ್ಯ ಕೋಲಾರದಿಂದ ಸ್ವರ್ಧಿಸುವುದಾಗಿ ಘೋಷಣೆ ಮಾಡುತ್ತಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೋಲಾರ: ಸಿದ್ದರಾಮಯ್ಯ (Siddaramaiah) ಅವರನ್ನು ರಾಜಕೀಯವಾಗಿ ಸೋಲಿಸಲು ಎಲ್ಲಿಲ್ಲದ ಕಸರತ್ತು ನಡೆಸಲಾಗುತ್ತಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯರಿಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ (Viral News) ಆಗಿದ್ದು, ಇದನ್ನು ನೋಡಿದ ಅಭಿಮಾನಿಗಳಲ್ಲಿನ ಸಂತಸ ಇಮ್ಮಡಿಗೊಂಡಿದೆ. ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರ (Kolar Assembly Constituency)ದಿಂದಲೇ ಸ್ಪರ್ಧಿಸುತ್ತಿದ್ದಾರೆ, ಈ ಬಗ್ಗೆ ಜನವರಿ 9ರಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದು, ಸಿದ್ದು ಆಪ್ತ ವಲಯ ಹಾಗೂ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಜನವರಿ 9ರಂದು ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರವನ್ನು ಕೋಲಾರದಲ್ಲೇ ಘೋಷಣೆ ಮಾಡಲಿದ್ದಾರೆ ಎಂದು ಸಿದ್ದರಾಮಯ್ಯ ಆಪ್ತ ವಲಯದ ಮಾಹಿತಿ ನೀಡಿವೆ.
ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ದಿಷ್ಟವಾದ ಕ್ಷೇತ್ರವಿಲ್ಲ. ಅವರಿನ್ನೂ ಕ್ಷೇತ್ರ ಹುಡುಕಾಟದಲ್ಲೇ ಇದ್ದಾರೆ. ಮತ್ತೊಂದೆಡೆ ಮುಂದಿನ ಸಿಎಂ ಘೋಷಣೆ ಕೂಗು ನಿಂತಿಲ್ಲ. ಕೋಲಾರದ ರಾಜಕೀಯ ಸಮಸ್ಯೆ ಕೊನೆಯಾಗಿಲ್ಲ. ವರುಣದಲ್ಲಿ ನಿಲ್ಲಲು ಅಡ್ಡಿಯಿಲ್ಲ. ಆದರೂ ಮಗನ ರಾಜಕೀಯ ಭವಿಷ್ಯ ಹಿನ್ನೆಲೆಯಲ್ಲಿ ಸಿದ್ದುಗೆ ವರುಣಾದಿಂದ ಸ್ಪರ್ಧಿಸಲು ಮನಸ್ಸಿಲ್ಲ. ಇಷ್ಟೆಲ್ಲಾ ಗೊಂದಲದ ಮಧ್ಯೆ ಸಿದ್ದರಾಮಯ್ಯ ಮತ್ತೆ ವರುಣಾದ ಕಡೆಯೇ ಹೆಜ್ಜೆ ಹಾಕ್ತಾರಾ ಅನ್ನೋ ಚರ್ಚೆಯೂ ಆಗುತ್ತಿದೆ.
ಸದ್ಯ ಕ್ಷೇತ್ರ ಹುಡುಕಾಟದಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎಲ್ಲಿ ನಿಂತರೆ ಗೆಲ್ಲಬಹುದು ಎಂದು ರಣತಂತ್ರ ರೂಪಿಸುತ್ತಿದ್ದಾರೆ. ಆದರೆ ಕ್ಷೇತ್ರದ ಗುಟ್ಟು ಬಿಟ್ಟುಕೊಡದ ಸಿದ್ದು, ಸ್ಪರ್ಧೆ ಬಗ್ಗೆ ಕೇಳಿದರೆ ಹೈಕಮಾಂಡ್ ಹೇಳಿದಂತೆ ನಿಲ್ಲುತ್ತೇನೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರೇನೋ, ಹೈಕಮಾಂಡ್ ಹೇಳಿದಂತೆ ಎಂದು ದೆಹಲಿ ಅಂಗಳಕ್ಕೆ ಚೆಂಡು ಎಸೆದು ಕ್ಷೇತ್ರಾನ್ವೇಷಣೆಯಲ್ಲಿ ತೊಡಗಿದ್ದಾರೆ. ಸದ್ಯ ಯಾವ ಕ್ಷೇತ್ರ ಫಿಕ್ಸ್ ಅನ್ನೋದು ಇನ್ನೂ ಪಕ್ಕಾ ಆಗಿಲ್ಲ. ಹೀಗಿದ್ದರೂ ಸಿದ್ದು ಅಭಿಮಾನಿಗಳು ಮಾತ್ರ ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯ ಮುಂದಿನ ಸಿಎಂ ಅಂತಾ ಘೋಷಣೆ ಕೂಗುತ್ತಿದ್ದಾರೆ.
ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:21 am, Thu, 22 December 22