
ಕೋಲಾರ, (ನವೆಂಬರ್ 10): ಸುಪ್ರೀಂಕೋರ್ಟ್ ಆದೇಶದಂತೆ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಗೆ ಮುಹೂರ್ತ ಫಿಕ್ಸ್ ಆಗಿದ್ದು, ನಾಳೆ (ನವೆಂಬರ್ 11) ಕೋಲಾರದ ಟಮಕಾ ಬಳಿ ಇರುವ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಮರುಮತ ಎಣಿಕೆ ಕಾರ್ಯ ನಡೆಯಲಿದೆ. ಒಟ್ಟು 18 ಸುತ್ತು ಮರುಮತ ಎಣಿಕೆ ಕಾರ್ಯ ನಡೆಯಲಿದ್ದು, ಒಂದೇ ಕೊಠಡಿಯಲ್ಲಿ 14 ಟೇಬಲ್ ಹಾಕಿ ಮರು ಎಣಿಕೆ ಮಾಡಲಾಗುತ್ತಿದೆ. ಇನ್ನು ಪ್ರತಿ ಟೇಬಲ್ಗೆ ಸಿಸಿಟಿವಿ, 360 ಡಿಗ್ರಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಇನ್ನೊಂದೆಡೆ ಗೆದ್ದ ಕಾಂಗ್ರೆಸ್ನ ನಂಜೇಗೌಡ ಹಾಗೂ ಜೆಡಿಎಸ್ನ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡಗೆ ಢವ ಢವ ಶುರುವಾಗಿದೆ.
2023 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಕೆ.ವೈ.ನಂಜೇಗೌಡ 248 ಮತಗಳಿಂದ ಗೆದ್ದಿದ್ದರು. ಆದ್ರೆ, ಮತ ಎಣಿಕೆಯಲ್ಲಿ ಲೋಪವಾಗಿದ್ದು, ಈ ಸಂಬಂಧ ನಂಜೇಗೌಡ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಹೈಕೋರ್ಟ್, ಸುಪ್ರೀಂಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿವೆ. ಇದರಿಂದಾಗಿ ಈಗ ನಾಳೆ ಮಾಲೂರು ವಿಧಾನಸಭಾ ಕ್ಷೇತ್ರದ ಮತಗಳನ್ನು ಮರು ಎಣಿಕೆ ಮಾಡಲು ಕೋಲಾರ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಕೋಲಾರದ ಟಕಮದಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಮತಗಳ ಮರು ಎಣಿಕೆ ನಡೆಯಲಿದೆ. ಮರು ಮತಎಣಿಕೆಗೆ ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್. ಮೈತ್ರಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇನ್ನೂ ಕೋಲಾರ, ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು ತಹಸೀಲ್ದಾರ್ ಗಳನ್ನು ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳಾಗಿ ನೇಮಿಸಲಾಗಿದೆ. ಜಿಲ್ಲಾಧಿಕಾರಿ ಎಂ.ಆರ್.ರವಿ ಸಿದ್ದತೆಗಳನ್ನು ಪರಿಶೀಲಿಸಿದ್ದಾರೆ.
ನಾಳೆ ಮರು ಮತಎಣಿಕೆ ಹಿನ್ನೆಲೆಯಲ್ಲಿ ಇಂದು (ನವೆಂಬರ್ 10) ಕೋಲಾರ ಜಿ್ಲ್ಲಾಧಿಕಾರಿ ಕಚೇರಿ ಬಳಿಯ ಸ್ಟ್ರಾಂಗ್ ರೂಂನಲ್ಲಿ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಯಿತು. ಕಳೆದ ಎರಡು ವರೆ ವರ್ಷದ ಹಿಂದೆ ಚುನಾವಣೆ ನಡೆದ ನಂತರದಲ್ಲಿ ಇವಿಎಂ ಯಂತ್ರಗಳನ್ನು ಸ್ಟ್ರಾಂಗ್ ರೂಂ ನಲ್ಲಿ ಸುರಕ್ಷಿತವಾಗಿರಿಸಲಾಗಿತ್ತು. ಈಗ ನಾಳಿನ ಎಣಿಕಾ ಕಾರ್ಯಕ್ಕೆ ಸ್ಟ್ರಾಂಗ್ ರೂಂ ಓಪನ್ ಮಾಡಿ ಅಭ್ಯರ್ಥಿಗಳಿಗೆ ಇವಿಎಂ ಮತ ಯಂತ್ರಗಳನ್ನು ತೋರಿಸಲಾಯಿತು.
ಈ ವೇಳೆ ಬಿಜೆಪಿ ಅಭ್ಯರ್ಥಿ ಹಾಗೂ ದೂರುದಾರ ಬಿಜೆಪಿ ಮಂಜುನಾಥಗೌಡ ಅವರು ಸುಮಾರು 252 ಇವಿಎಂ ಮತಯಂತ್ರಗಳ ಬಾಕ್ಸ್ ತೆರೆಯಲಾಗಿದೆ. ಮತ ಎಣಿಕೆ ಮುಗಿದ ಮೇಲೆ ಅದನ್ನು ಇವಿಎಂ ಬಾಕ್ಸ್ ನಲ್ಲಿ ಹಾಕಿ ಸೀಲ್ ಮಾಡಬೇಕು. ಆದರೆ ಅಲ್ಲಿ ಸೀಲ್ ಮಾಡಿಲ್ಲ ಇಲ್ಲಿ ಅದಿಕಾರಿಗಳ ನಿರ್ಲ್ಯಕ್ಷ ಇದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ನಾಳಿನ ಮತ ಎಣಿಕೆ ವೇಳೆ ನಮ್ಮ ಮನವಿಯಂತೆ ಮೊದಲು ವಿವಿ ಪ್ಯಾಟ್ ಹಾಗೂ ಇವಿಎಂ ಎಣಿಕೆ ಮಾಡಿ ಎರಡೂ ಹೊಂದಾಣಿಕೆಯಾದ ನಂತರದಲ್ಲಿ ಮತ ಎಣಿಕೆ ಕಾರ್ಯ ಮಾಡಬೇಕು ಎಂದು ಬಿಜೆಪಿಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಸೇರಿದಂತೆ ಹಲವು ಮುಖಂಡರು ಜಿಲ್ಲಾಧಿಕಾರಿ ಎಂ.ಆರ್.ರವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಅಳವಡಿಸಲಾಗಿದೆ. ಅಲ್ಲದೆ ಇಡೀ ಕೊಠಡಿಗೆ 360 ಡಿಗ್ರಿ ಕ್ಯಾಮರಾ ಅಳವಡಿಸಲಾಗಿದೆ. ಇದರ ಜೊತೆಗೆ ಮ್ಯಾನುಯಲ್ ಕ್ಯಾಮರಾ ಮೂಲಕವೂ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.ಇನ್ನು ಮತ ಎಣಿಕೆ ಕೇಂದ್ರದ ಸುತ್ತಲೂ 144 ಸೆಕ್ಷನ್ ಜಾರಿ ಮಾಡಿದ್ದು ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತಕೇಂದ್ರದ ಒಳಗೆ ಅಭ್ಯರ್ಥಿ ಹಾಗೂ ಅವರ ಏಜೆಂಟ್ ಗಳನ್ನು ಹೊರತು ಪಡಿಸಿ ಮತ್ಯಾರಿಗೂ ಪ್ರವೇಶವಿಲ್ಲ. ಇಡೀ ಕ್ಯಾಂಪಸ್ ನ್ನು ಸಿಸಿಟಿವಿ ಹಾಗೂ ಪೊಲೀಸ್ ಕಣ್ಗಾವಲಿನಲ್ಲಿ ಇರಿಸಲಾಗಿದೆ.
ಇನ್ನು ಈಗಾಗಲೇ ಮತ ಎಣಿಕೆ ಕೇಂದ್ರಕ್ಕೆ ಸ್ಟ್ರಾಂಗ್ ರೂಂ ನಿಂದ ಅಭ್ಯರ್ಥಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಇವಿಎಂ ಮೆಷನ್ ಗಳನ್ನು ಸಾಗಾಣೆ ಮಾಡಲಾಗಿದೆ. ಬಿಗಿ ಭದ್ರತೆಯಲ್ಲಿ ಜೀರೋ ಟ್ರಾಫಿಕ್ ನಲ್ಲಿ ಸಾಗಾಣೆ ಮಾಡಲಾಗಿದೆ. ನಾಳೆ ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಕಾರ್ಯ ಆರಂಭವಾಗಲಿದೆ. ಇನ್ನು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮತ ಎಣಿಕೆ ಕಾರ್ಯ ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಒಟ್ಟಾರೆ ಇಡೀ ದೇಶದ ಗಮನ ಸೆಳೆದಿರುವ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆಯ ಫಲಿತಾಂಶ ಕೇವಲ ಜಿಲ್ಲೆಯಷ್ಟೇ ಅಲ್ಲಾ ದೇಶದಲ್ಲಿ ಸಾಕಷ್ಟು ಸದ್ದು ಮಾಡಿದ್ದು, ಹೀಗಾಗಿ ನಾಳೆ ನಡೆಯುವ ಮರು ಎಣೆಕೆ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.