Analysis: ಕೋಟ್ಯಾಂತರ ರೂಪಾಯಿ ಖರ್ಚು ಕಂಡ ಮುಳಬಾಗಿಲು ನಗರಸಭೆ ಉಪಚುನಾವಣೆಯಲ್ಲಿ ಗೆದ್ದೋರು ಯಾರು, ಸೋತಿದ್ಯಾರು?

| Updated By: ಸಾಧು ಶ್ರೀನಾಥ್​

Updated on: Oct 31, 2022 | 12:02 PM

Mulbagal Municipal Corporation: ತಲಾ ಮತಕ್ಕೆ 4-5 ಸಾವಿರ ರೂ ಹಣ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಯಾವ ಪಕ್ಷ ಹೆಚ್ಚು ಯಾವ ಪಕ್ಷ ಕಡಿಮೆ ಎನ್ನುವ ಹಾಗಿಲ್ಲ, ಪೈಪೋಟಿಗೆ ಬಿದ್ದು ಖರ್ಚು ಮಾಡಿದ್ದಾರೆ. ಕೇವಲ ಇದೊಂದು ವಾರ್ಡ್​​ ಚುನಾವಣೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆ ಎನ್ನಲಾಗುತ್ತಿದೆ.

Analysis: ಕೋಟ್ಯಾಂತರ ರೂಪಾಯಿ ಖರ್ಚು ಕಂಡ ಮುಳಬಾಗಿಲು ನಗರಸಭೆ ಉಪಚುನಾವಣೆಯಲ್ಲಿ ಗೆದ್ದೋರು ಯಾರು, ಸೋತಿದ್ಯಾರು?
ಕೋಟ್ಯಾಂತರ ರೂಪಾಯಿ ಖರ್ಚು ಕಂಡ ಮುಳಬಾಗಿಲು ನಗರಸಭೆ ಉಪಚುನಾವಣೆ ಗೆದ್ದೋರು ಯಾರು, ಸೋತಿದ್ಯಾರು?
Follow us on

ಬಹಳಷ್ಟು ಜಿದ್ದಾಜಿದ್ದಿನ ಕಣಕ್ಕೆ ವೇದಿಕೆಯಾಗಿದ್ದ ಕೋಲಾರ ಜಿಲ್ಲೆ ಮುಳಬಾಗಿಲು ನಗರಸಭೆಯ ಮುತ್ಯಾಲಪೇಟೆ-2ನೇ ವಾರ್ಡ್​ನ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಜೆಡಿಎಸ್​ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ತಾರಕಕ್ಕೇರಿತ್ತು. ಅಂತಿಮವಾಗಿ ಕಾಂಗ್ರೆಸ್​ 14 ಮತಗಳ ಅಂತರದಿಂದ ಗೆಲುವು ಸಾಧಿಸಿದೆ.

ಅವಿರೋಧ ಆಯ್ಕೆಗೆ ಮಾಡಿದ ಪ್ರಯತ್ನ ವಿಫಲವಾಗಿತ್ತು..!

2023 ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಕ್ಷೇತ್ರ ಸಿದ್ದವಾಗುತ್ತಿದ್ದು ಈ ನಡುವೆಯೇ ಮುಳಬಾಗಿಲು ನಗರಸಭೆ ಸದಸ್ಯರಾಗಿದ್ದ ಜಗನ್​ ಮೋಹನ್​ ರೆಡ್ಡಿ ಜೂನ್​-7 ರಂದು ಕೊಲೆಯಾದ ನಂತರ, ಜಗನ್​ ಮೋಹನ್​ ರೆಡ್ಡಿಯಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು. ಈವೇಳೆ ಜಗನ್​ ಮೋಹನ್​ ರೆಡ್ಡಿ ಪತ್ನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಜೆಡಿಎಸ್​ ಅಭ್ಯರ್ಥಿ ಅವಿರೋಧ ಆಯ್ಕೆಗೆ ಒಪ್ಪದ ಕಾರಣದಿಂದಾಗಿ ಅಂತಿಮವಾಗಿ ಚುನಾವಣಾ ಕಣಕ್ಕೆ ಇಳಿಯಲಾಯಿತು. ಕಾಂಗ್ರೆಸ್ ನಿಂದ ಜಗನ್​ ಮೋಹನ್​ ರೆಡ್ಡಿ ಪತ್ನಿ ನಿರುಪಮಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ರೆ, ಜೆಡಿಎಸ್​ನಿಂದ ಮಾಜಿ ನಗರಸಭೆ ಸದಸ್ಯ ಎಂ.ಆರ್​.ಮುರಳಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಯಿತು. (ಫಲಿತಾಂಶ ವಿಶ್ಲೇಷಣೆ- ರಾಜೇಂದ್ರ ಸಿಂಹ, ಟಿವಿ9 ಹಿರಿಯ ವರದಿಗಾರ, ಕೋಲಾರ)

ವಿಧಾನಸಭೆ ಚುಣಾವಣೆಯ ದಿಕ್ಸೂಚಿ ಎನ್ನಲಾಗಿದ್ದ ಚುನಾವಣೆ..!

ನಗರಸಭೆ ಸದಸ್ಯನ ಕೊಲೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ, ಹಂತಕ ಆರೋಪಿಯ ಪತ್ನಿಯೂ ಕಣದಲ್ಲಿ

ಇನ್ನು ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಈ ಉಪಚುನಾವಣೆ ಎಂದುಕೊಂಡೇ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಇಳಿಯಲಾಗಿತ್ತು. ಕಾಂಗ್ರೆಸ್​ ಮುಖಂಡ ಹಾಗೂ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ತಮ್ಮ ಕಾಂಗ್ರೆಸ್​ ಅಭ್ಯರ್ಥಿ ನಿರುಪಮ ಪರವಾಗಿ ಪ್ರಚಾರಕ್ಕೆ ಇಳಿದರೆ, ಮುಳಬಾಗಿಲು ಜೆಡಿಎಸ್​ ಅಭ್ಯರ್ಥಿ ಸಮೃದ್ದಿ ಮಂಜುನಾಥ್​ ಜೆಡಿಎಸ್​ ಅಭ್ಯರ್ಥಿ ಎಂ.ಆರ್​ ಮುರಳಿ ಪರವಾಗಿ ಪ್ರಚಾರಕ್ಕೆ ಇಳಿದಿದ್ದರು, ನಾಮಪತ್ರ ಸಲ್ಲಿಕೆ ನಂತರ ಪ್ರಚಾರದ ವೇಳೆ ವಾರ್ಡ್​ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಕಾಂಗ್ರೆಸ್​ ಮತ್ತು ಜೆಡಿಎಸ್​ ಮುಖಂಡರ ನಡುವೆ ಇದು ಬಹಳ ಪ್ರತಿಷ್ಠೆಯ ಕಣವಾಗಿ ಮಾರ್ಪಾಟಾಗಿದ್ದು, ಇದು ಕೇವಲ ನಗರಸಭೆ ವಾರ್ಡ್​ ಚುನಾವಣೆ ಅಲ್ಲ ಇದು ಎರಡು ಪಕ್ಷಗಳ ಹಾಗೂ ಇಬ್ಬರು ಮುಖಂಡರುಗಳ ನಡುವಿನ ಪ್ರತಿಷ್ಠೆಯ ಚುನಾವಣೆ ಎನ್ನುವಷ್ಟರ ಮಟ್ಟಿಗೆ ಬಿಂಬಿತವಾಗಿತ್ತು. ಇಬ್ಬರೂ ಮುಖಂಡರುಗಳು ಕೂಡಾ ಇದು ಬರೀ ವಾರ್ಡ್ ಚುನಾವಣೆಯಲ್ಲ.

ಇದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಯಾರು ಗೆಲ್ತಾರೆ ಅನ್ನೋದರ ದಿಕ್ಸೂಚಿ ಎಂದು ಹೇಳಿಕೊಂಡೇ ಪ್ರಚಾರಕ್ಕೆ ಇಳಿಯಲಾಗಿತ್ತು, ಅಂತಿಮವಾಗಿ ಸಾಕಷ್ಟು ಜಿದ್ದಾಜಿದ್ದಿನ ಕಣವಾಗಿ ಮಾರ್ಪಾಟಾಗಿದ್ದ ಚುನಾವಣೆಯಲ್ಲಿ ಕಾಂಗ್ರೇಸ್​ ಅಭ್ಯರ್ಥಿ 14 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ​. ಮುಳಬಾಗಿಲು ನಗರಸಭೆ ವಾರ್ಡ್​ ನಂ-2 ರಲ್ಲಿ ಒಟ್ಟು 1189 ಮತದಾರರಿದ್ದು, 1012 ಮತಗಳು ಚಲಾವಣೆಯಾಗಿದ್ದವು.

ಮತದಾರರ ಮನೆಗೆ ಹಣದ ಜೊತೆಗೆ ಭರ್ಜರಿ ಗಿಫ್ಟ್​​​ಗಳು ಸೇರಿವೆಯಂತೆ..!

ಇನ್ನು ಚುನಾವಣೆಯಲ್ಲಿ ಹಣ ಹಾಗೂ ಭರ್ಜರಿ ಗಿಪ್ಟ್​ಗಳು ಮತದಾರರ ಮನವೊಲಿಸುವಲ್ಲಿ ಯಶಸ್ಸಿಯಾಗಿವೆ ಎಂದು ಹೇಳಲಾಗುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಎರಡೂ ಪಕ್ಷಗಳು ಬೆಳ್ಳಿಯ ವಿಗ್ರಹಗಳು, ಪಟಾಕಿ ಹಬ್ಬದ ಸಾಮಗ್ರಿಗಳನ್ನು ಮತರದಾರರಿಗೆ ವಿತರಣೆ ಮಾಡಿದ್ದರು ಎನ್ನಲಾಗಿದೆ. ಅಷ್ಟ ಅಲ್ಲದೆ ಚುನಾವಣೆ ಮುನ್ನಾದಿನ ಮತದಾರರನ್ನು ಅಂತಿಮವಾಗಿ ತಮ್ಮತ್ತ ಸೆಳೆಯಲು ಚಿನ್ನದ ಕಾಯಿನ್​, ದುಬಾರಿ ಮೊಬೈಲ್​, ಬೈಕ್​ಗಳು, ಲ್ಯಾಪ್​ ಟ್ಯಾಪ್​ಗಳು, ಸೇರಿದಂತೆ ಒಂದು ಮತಕ್ಕೆ ನಾಲ್ಕರಿಂದ ಐದು ಸಾವಿರ ರೂಪಾಯಿ ಹಣವನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಯಾವ ಪಕ್ಷ ಹೆಚ್ಚು ಯಾವ ಪಕ್ಷ ಕಡಿಮೆ ಎನ್ನುವ ಹಾಗಿಲ್ಲದ ಪೈಪೋಟಿಗೆ ಬಿದ್ದು ಖರ್ಚು ಮಾಡಿದ್ದಾರೆ. ಕೇವಲ ಇದೊಂದು ವಾರ್ಡ್​​ ಚುನಾವಣೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆ ಎನ್ನಲಾಗುತ್ತಿದೆ.

Published On - 11:58 am, Mon, 31 October 22