ಕೋಲಾರ: ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ (Murder) ಪ್ರಕರಣ ಹಿನ್ನೆಲೆ ಬೆಳ್ಳಂಬೆಳಿಗ್ಗೆ ಕೊಲೆ ಆರೋಪಿ ಮೇಲೆ ಜಿಲ್ಲೆಯ ಚಲುವನಹಳ್ಳಿ ಬಳಿ ಪೊಲೀಸರಿಂದ ಫೈರಿಂಗ್ ಮಾಡಲಾಗಿದೆ. ಪ್ರಮುಖ ಆರೋಪಿ ಹಾಗೂ ಸುಫಾರಿ ಕಿಲ್ಲರ್ ಬಾಲಾಜಿ ಸಿಂಗ್ ಮೇಲೆ ಮುಳಬಾಗಿಲು ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ಫೈರಿಂಗ್ ಮಾಡಿದ್ದಾರೆ. ಮಾಹಿತಿ ಮೇರೆಗೆ ಆರೋಪಿಯನ್ನ ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಆರೋಪಿ ಬಾಲಾಜಿ ಸಿಂಗ್ ಮೇಲೆ ಗುಂಡು ಹಾರಿಸಲಾಗಿದೆ. ಸದ್ಯ ಆರೋಪಿಯನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆ ಹಿನ್ನೆಲೆ:
ಜೂನ್ 7ರಂದು ಜಿಲ್ಲೆಯ ಮುಳಬಾಗಿಲು ನಗರಸಭೆ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಜಗನ್ ಮೋಹನ್ ಹತ್ಯೆ ನಡೆದಿದೆ. ಅಂದು ಬೆಳಿಗ್ಗೆ ಮುತ್ಯಾಲಪೇಟೆಯ ಗಂಗಮ್ಮ ದೇವಾಲಯಕ್ಕೆ ಹೋಗುವಾಗ ಅಪರಿಚಿತ ಗುಂಪೊಂದು ಜಗನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಜಗನ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣ ಬಿಟ್ಟಿದ್ದಾರೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗ ಮೋಹನ್ ಮೇಲೆ ನಡೆದ ದಾಳಿಯಿಂದ ಕೋಲಾರ ಬೆಚ್ಚಿಬಿದ್ದಿದೆ. ಮುಳಬಾಗಿಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೊಲೆಯ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ. ಈ ದೃಶ್ಯದಲ್ಲಿ ಆರೋಪಿಗಳು ಕೊಲೆ ಮಾಡಿ ಪರಾರಿಯಾಗುವ ದೃಶ್ಯಗಳು ಸೆರೆಯಾಗಿದೆ. ಕೋಲಾರದ ಮೆಡಿಕಲ್ ಕಾಲೇಜು ಶವಾಗಾರದಲ್ಲಿ ಜಗನ್ ಮೋಹನ್ ಮೃತ ದೇಹ ಇರಿಸಲಾಗಿತ್ತು. ಶವಾಗಾರದ ಬಳಿ ರಾಜಕೀಯ ಮುಖಂಡರು, ಕಾಂಗ್ರೆಸ್ ಹಾಗೂ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸೇರಿ ಹಲವು ಮುಖಂಡರು ಜಮಾಯಿಸಿದ್ದರು. ಕೊಲೆ ನಡೆದ ಸ್ಥಳಕ್ಕೆ ಕೋಲಾರ ಎಸ್ಪಿ ದೇವರಾಜ್ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಸ್ಥಳೀಯರ ವಿಚಾರಣೆ ನಡೆಸಿದರು.
ಕಣ್ಣೀರು ಹಾಕಿದ ಜಗನ್ ಮೋಹನ್ ಪುತ್ರ
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹತ್ಯೆಯಾದ ಜಗನ್ ಮೋಹನ್ ಪುತ್ರ ಮಿಥುನ್ ಸಾಯಿಕೃಷ್ಣ ಪ್ರತಿಕ್ರಿಯೆ ನೀಡಿದ್ದು, ನಮ್ಮ ತಂದೆ ಜಗನ್ ಮೋಹನ್ ರೆಡ್ಡಿ ಯಾರಿಗೂ ಅನ್ಯಾಯಮಾಡಿಲ್ಲ. ನಮ್ಮ ತಂದೆ ಹತ್ತಾರು ಜನರಿಗೆ ಸಹಾಯ ಮಾಡುತ್ತಿದ್ದರು. ನಮ್ಮ ತಂದೆ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಿಸಬೇಕು. ನಮ್ಮ ತಂದೆ ಯಾರಿಗೂ ಮೋಸ ಮಾಡಿಲ್ಲ, ಜನರಿಗೋಸ್ಕರ ಬದುಕಿದ್ರು. ಎಂದಿನಂತೆಯೇ ಗಂಗಮ್ಮ ದೇವಸ್ಥಾನದ ಬಾಗಿಲು ತೆಗೆಯುತ್ತಿದ್ದರು. ದೇವಸ್ಥಾನದ ಬಾಗಿಲು ತೆಗೆಯಲು ಹೋದಾಗ ಕೊಲೆ ಮಾಡಿದ್ದಾರೆ. ನಮ್ಮ ತಂದೆ ಕೊಂದವರನ್ನು ಪೊಲೀಸರು ಹಿಡಿದು ಶಿಕ್ಷೆ ಕೊಡಿಸಬೇಕು ಎಂದು ಹತ್ಯೆಯಾದ ಜಗನ್ ಮೋಹನ್ ಪುತ್ರ ಮಿಥುನ್ ಸಾಯಿಕೃಷ್ಣ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: KS Bharat: ಭಾರತದ ಮಾನ ಉಳಿಸಿದ ಭರತ್: ಕೊಹ್ಲಿ-ರೋಹಿತ್ ವೈಫಲ್ಯದ ನಡುವೆ ತೊಡೆತಟ್ಟಿನಿಂತ ಶ್ರೀಕರ್