ಲೈಂಗಿಕ ಕಿರುಕುಳದ ಗಂಭೀರ ಆರೋಪ ಹೊತ್ತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯಗೆ ಜಾಮೀನು; ಏನಿದು ಕೇಸ್?
Choreographer Ganesh Acharya: ಅಂಬೋಲಿ ಪೊಲೀಸ್ ಠಾಣೆಯಲ್ಲಿ ಗಣೇಶ್ ಆಚಾರ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ ತಮ್ಮ ಮೇಲಿನ ಎಲ್ಲ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.
ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ (Sexual Harassment) ನೀಡಿದ ಆರೋಪ ಹೊತ್ತಿರುವ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ (Ganesh Acharya) ಅವರಿಗೆ ಜಾಮೀನು ಸಿಕ್ಕಿದೆ. ಮುಂಬೈನ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಅವರಿಗೆ ಜಾಮೀನು ನೀಡಲಾಗಿದೆ. ಬಾಲಿವುಡ್ನಲ್ಲಿ ಹಲವು ವರ್ಷಗಳಿಂದ ಕೊರಿಯೋಗ್ರಾಫರ್ (Choreographer) ಆಗಿ ಗುರುತಿಸಿಕೊಂಡಿರುವ ಗಣೇಶ್ ಆಚಾರ್ಯ ಅವರಿಗೆ ಸಖತ್ ಬೇಡಿಕೆ ಇದೆ. ಆದರೆ ಈ ಆರೋಪದಿಂದಾಗಿ ಅವರ ವೃತ್ತಿಜೀವನದಲ್ಲಿ ಕಪ್ಪು ಚುಕ್ಕಿ ಬಿದ್ದಂತಾಗಿದೆ. ಸಹಾಯಕ ನೃತ್ಯ ನಿರ್ದೇಶಕಿಯೊಬ್ಬರು ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೂ ಈವರೆಗೆ ಗಣೇಶ್ ಆಚಾರ್ಯ ಬಂಧನ ಆಗಿಲ್ಲ. ಗುರುವಾರ (ಜೂನ್ 23) ನ್ಯಾಯಾಲಯದ ಮುಂದೆ ಹಾಜರಾದ ಅವರಿಗೆ ಜಾಮೀನು ನೀಡಲಾಗಿದೆ.
ನೂರಾರು ಸೂಪರ್ ಹಿಟ್ ಗೀತೆಗಳಿಗೆ ನೃತ್ಯ ನಿರ್ದೇಶನ ಮಾಡಿದ ಖ್ಯಾತಿ ಗಣೇಶ್ ಆಚಾರ್ಯ ಅವರಿಗೆ ಸಲ್ಲುತ್ತದೆ. ಹಲವು ವರ್ಷಗಳಿಂದ ಅವರು ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ. ನಟನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. 2020ರ ಫೆಬ್ರವರಿಯಲ್ಲಿ ಸಹಾಯಕ ನೃತ್ಯ ನಿರ್ದೇಶಕಿಯ ಜೊತೆ ಅವರು ಅನುಚಿತವಾಗಿ ನಡೆದುಕೊಂಡರು ಎಂಬ ಆರೋಪ ಇದೆ.
2020ರ ಜನವರಿ 26ರಂದು ‘ಭಾರತೀಯ ಸಿನಿಮಾ ಮತ್ತು ಕಿರುತೆರೆ ನೃತ್ಯ ನಿರ್ದೇಶಕರ ಸಂಘ’ದ ಸಮಾರಂಭ ನಡೆದಾಗ ಗಣೇಶ್ ಆಚಾರ್ಯ ಮತ್ತು ಇನ್ನಿಬ್ಬರು ಸೇರಿಕೊಂಡು ಮಹಿಳೆಗೆ ಕಿರುಕುಳು ನೀಡಿದರು. 2009 ಮತ್ತು 2010ರ ಸಮಯದಲ್ಲಿ ಆ ಮಹಿಳೆ ಗಣೇಶ್ ಆಚಾರ್ಯ ಅವರ ಕಚೇರಿಗೆ ಭೇಟಿ ನೀಡಿದಾಗಲೆಲ್ಲ ಅಶ್ಲೀಲ ಸಿನಿಮಾ ವೀಕ್ಷಿಸುವಂತೆ ಒತ್ತಾಯಿಸುತ್ತಿದ್ದರು. ಅಸಭ್ಯ ಸಂದೇಶ ಕಳಿಸುತ್ತಿದ್ದರು. ಬೇರೆ ಮಹಿಳೆಯರಿಗೂ ಈ ರೀತಿ ಮಾಡಲಾಗಿದೆ ಎಂದು ಗಣೇಶ್ ಆಚಾರ್ಯ ವಿರುದ್ಧ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಐಪಿಸಿ ಸೆಕ್ಷನ್ 354-ಎ, 354-ಸಿ, 354-ಡಿ, 506 ಮತ್ತು 509ರ ಅಡಿಯಲ್ಲಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತಮ್ಮ ಮೇಲಿನ ಎಲ್ಲ ಆರೋಪಗಳನ್ನು ಗಣೇಶ್ ಆಚಾರ್ಯ ಅವರು ತಳ್ಳಿಹಾಕಿದ್ದಾರೆ.
ಇದನ್ನೂ ಓದಿ: ‘ಪುಷ್ಪ’ ಚಿತ್ರದಲ್ಲಿ ನಟಿ ಸಮಂತಾಗೆ ಐಟಂ ಡ್ಯಾನ್ಸ್ ಹೇಳಿಕೊಡಲು ಬಂದ ಗಣೇಶ್ ಆಚಾರ್ಯ
ಸಮಂತಾಗೆ ಡ್ಯಾನ್ಸ್ ಸ್ಟೆಪ್ ಹೇಳಿಕೊಟ್ಟಿದ್ದ ಖ್ಯಾತ ಕೊರಿಯೋಗ್ರಾಫರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ