ETCM Hospital: 100 ವರ್ಷ ಇತಿಹಾಸವಿರುವ ಮಿಷನ್ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿ ಜಾನ್ಸನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಜಾನ್ಸನ್ ಪರ ಸಮುದಾಯದ ಕೆಲವು ಮುಖಂಡರು ಬ್ಯಾಟಿಂಗ್ ಮಾಡುತ್ತಿದ್ದು, ಜಾನ್ಸನ್ ಇಟಿಸಿಎಂ ಆಸ್ಪತ್ರೆಗೆ ಆಡಳಿತಾಧಿಕಾರಿಯಾಗಿ ಬಂದ ನಂತರ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ, ಅದನ್ನು ಸಹಿಸದೆ ಕೆಲವು ಹಿರಿಯರು ಭಾರತೀಯ ಮೆಥೋಡಿಸ್ಟ್ ಚರ್ಚ್ ಗೆ ಸಂಬಂಧಿಸಿದ ಆಸ್ತಿಪಾಸ್ತಿಯನ್ನು ನುಂಗಿ ಹಾಕಲು ಸಂಚು ಇದಾಗಿದೆ ಎಂಬ ಮಾತು ಕೇಳಿಬಂದಿದೆ.
ಕೋಲಾರದ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವೊಂದು ಕೇಳಿಬಂದಿದೆ. ವಿದ್ಯಾರ್ಥಿನಿಯರ ವಾರ್ಷಿಕ ಶುಲ್ಕದ ಮೊತ್ತವನ್ನು ಕಡಿಮೆ ಮಾಡಲು ಕಾಲೇಜಿನ ಆಡಳಿತಾಧಿಕಾರಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿರುವ ಕುರಿತು ಸದ್ಯ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೂರು ವರ್ಷಗಳ ಇತಿಹಾಸ ಹೊಂದಿರುವ ಮಿಷನ್ ಆಸ್ಪತ್ರೆ..!
ಕೋಲಾರದ ಮಿಷನ್ ಆಸ್ಪತ್ರೆ ಎಂದೇ ಹೆಸರಾಗಿರುವ ಭಾರತೀಯ ಮೆಥೋಡಿಸ್ಟ್ ಚರ್ಚ್ನ ಒಡೆತನದ ಇಟಿಸಿಎಂ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜಿಗೆ ಬಹಳ ಪುರಾತನ ಇತಿಹಾಸ ಇದೆ, ಕೋಲಾರ ನಗರದಲ್ಲಿ ಸುಮಾರು ನೂರು ವರ್ಷಗಳಿಂದ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿರುವ ಕೊಲಾರದ ಮಿಷನ್ ಆಸ್ಪತ್ರೆ ಲಕ್ಷಾಂತರ ಜನರಿಗೆ ವೈದ್ಯಕೀಯ ಸೇವೆ ನೀಡಿದೆ. ಇಂದಿಗೂ ಅದೇ ಹೆಸರಿನೊಂದಿಗೆ ಕೋಲಾರ ನಗರದಲ್ಲಿ ವೈದ್ಯಕೀಯ ಸೇವೆ ನೀಡುತ್ತಾ ಬಂದಿರುವ ಇಟಿಸಿಎಂ ಆಸ್ಪತ್ರೆಯಲ್ಲಿ ಹೆಚ್ಚಾಗಿ ಬಡವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಸ್ಪತ್ರೆ ಕೆಲಸ ಮಾಡಿಕೊಂಡು ಬಂದಿದೆ.
ಅಷ್ಟೇ ಅಲ್ಲದ ಇದೇ ಆಸ್ಪತ್ರೆಯಲ್ಲಿ ಒಂದು ಭಾಗವಾಗಿ ನರ್ಸಿಂಗ್ ಕಾಲೇಜು ಕೂಡಾ ನಡೆಸಿಕೊಂಡು ಬರಲಾಗುತ್ತಿದೆ. ಈ ನರ್ಸಿಂಗ್ ಕಾಲೇಜಿನಲ್ಲಿ ಕೋಲಾರ ಜಿಲ್ಲೆಯಷ್ಟೇ ಅಲ್ಲಾ, ರಾಜ್ಯದ ಮೂಲೆ ಮೂಲೆಯಿಂದ ಹಾಗೂ ಕೇರಳ ಸೇರಿದಂತೆ ಅಕ್ಕ ಪಕ್ಕದ ರಾಜ್ಯದ ವಿದ್ಯಾರ್ಥಿಗಳು ಇಟಿಸಿಎಂ ಆಸ್ಪತ್ರೆಯಲ್ಲಿ ನರ್ಸಿಂಗ್ ತರಬೇತಿ ಪಡೆಯುತ್ತಾ ಬಂದಿದ್ದಾರೆ. ಇಷ್ಟೇಲ್ಲಾ ಇತಿಹಾಸ ಹೊಂದಿರುವ ಇಟಿಸಿಎಂ ಆಸ್ಪತ್ರೆಯ ಆಡಳಿತಾಧಿಕಾರಿಯೊಬ್ಬರ ವಿರುದ್ದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.
ಆಡಳಿತಾಧಿಕಾರಿಯಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ..!
ಇಟಿಸಿಎಂ ಆಸ್ಪತ್ರೆಯಲ್ಲಿ ಕಳೆದ ಹಲವು ವರ್ಷಗಳಿಂದ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಜಾನ್ಸನ್ ಕುಂದರ್ ಅವರು ವಿದ್ಯಾರ್ಥಿನಿಯರ ಮೇಲೆ ಮೇ 26 ರಂದು ಇಬ್ಬರು ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತನೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆ.30 ರಂದು ದೂರು ದೂರು ನೀಡಿದ ಹಿನ್ನಲೆಯಲ್ಲಿ ಕೋಲಾರ ಮಹಿಳಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇನ್ನು ದೂರು ದಾಖಲಾಗುತ್ತಿದ್ದಂತೆ ಜಾನ್ಸನ್ ಕುಂದರ್ ಪರಾರಿಯಾಗಿದ್ದಾರೆ. ಜೊತೆಗೆ ಜಾನ್ಸನ್ ಅವರ ಮೇಲೆ ಈಗಾಗಲೇ ಹಲವಾರು ಆರೋಪಗಳು ಕೇಳಿ ಬಂದಿವೆ.
ಆಡಳಿತಾಧಿಕಾರಿ ಹುದ್ದೆಯಿಂದ ವಜಾ….
ಇತ್ತೀಚಿಗೆ ಜಾನ್ಸನ್ ಅವರನ್ನು ಆಡಳಿತಾಧಿಕಾರಿ ಹುದ್ದೆಯಿಂದಲೂ ವಜಾ ಮಾಡಲಾಗಿದೆ. ಹಣದ ವ್ಯವಹಾರದಲ್ಲಿ ಸಹ ಅವ್ಯವಹಾರ ಮಾಡಿದ್ದಾರೆಂಬ ಆರೋಪ ಕೇಳಿ ಬಂದ ಕಾರಣ ಅವರನ್ನು ಈ ಹುದ್ದೆಯಿಂದ ವಜಾ ಮಾಡಿ ಕಳೆಗೆ ಇಳಿಸಲಾಗಿದೆ. ಇನ್ನು ನರ್ಸಿಂಗ್ ವಿದ್ಯಾರ್ಥಿಗಳ ಶುಲ್ಕ ಕಡಿಮೆ ಮಾಡುವ ವಿಷಯವನ್ನೇ ಬಂಡವಾಳ ಮಾಡಿಕೊಂಡು ಇಬ್ಬರು ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತನೆ ಮಾಡಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತಲೆಮಾರಿಸಿಕೊಂಡಿರುವ ಜಾನ್ಸನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಜಾನ್ಸನ್ ಪರ ಕೆಲವರ ಬ್ಯಾಟಿಂಗ್..!
ಜಾನ್ಸನ್ ಪರ ಸಮುದಾಯದ ಕೆಲವು ಮುಖಂಡರು ಬ್ಯಾಟಿಂಗ್ ಮಾಡುತ್ತಿದ್ದು, ಜಾನ್ಸನ್ ಇಟಿಸಿಎಂ ಆಸ್ಪತ್ರೆಗೆ ಆಡಳಿತಾಧಿಕಾರಿಯಾಗಿ ಬಂದ ನಂತರ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ, ಅದನ್ನು ಸಹಿಸದೆ ಕೆಲವು ಹಿರಿಯರು ಭಾರತೀಯ ಮೆಥೋಡಿಸ್ಟ್ ಚರ್ಚ್ ಗೆ ಸಂಬಂಧಿಸಿದ ಆಸ್ತಿಪಾಸ್ತಿಯನ್ನು ನುಂಗಿ ಹಾಕಲು ಸಂಚು ಮಾಡಿದ್ದು, ಜಾನ್ಸನ್ ಅವರನ್ನು ಹೊರಹಾಕಲು ಈರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಪೊಲೀಸರ ತನಿಖೆ ನಂತರವಷ್ಟೇ ಇದರಲ್ಲಿನ ಸತ್ಯಾಸತ್ಯತೆಗಳು ಹೊರಬರಲಿವೆ. ವರದಿ : ರಾಜೇಂದ್ರ ಸಿಂಹ