Srinivaspur mango market: ಮಾರುಕಟ್ಟೆಯಲ್ಲಿ ಓಲಾಡುತಿವೆ ಮಾವಿನ ಹಣ್ಣುಗಳು! ಮಾವಿನ ನಗರಿಯಲ್ಲಿ ಮಾವಿನ ಸುಗ್ಗಿ ಹಬ್ಬಕ್ಕೆ ಕ್ಷಣಗಣನೆ
ಕೊರೊನಾ ಮಹಾಮಾರಿ ಮಾವು ಬೆಳೆಗಾರರು ಹಾಗೂ ವ್ಯಾಪಾರಸ್ಥರನ್ನು ಸಂಕಷ್ಟಕ್ಕೆ ದೂಡಿತ್ತು, ಈ ವರ್ಷ ಧರ್ಮ ದಂಗಲ್ ಆತಂಕ ಸೃಷ್ಟಿಸಿತ್ತು, ಆದರೆ ಶ್ರೀನಿವಾಸಪುರದಲ್ಲಿ ಯಾವುದೇ ಭೇದ ಭಾವ ಇಲ್ಲದೆ ವ್ಯಾಪಾರಸ್ಥರು ನಿರಾತಂಕವಾಗಿ ವ್ಯಾಪಾರ ಆರಂಭ ಮಾಡುತ್ತಿದ್ದೇವೆ ಅಂತಾರೆ ಮಂಡಿ ಮಾಲೀಕ ಅಬುಬಕಾರ್.
ಮಾವಿನ ನಗರಿಯಲ್ಲಿ ಹಣ್ಣುಗಳ ರಾಜನ ದರ್ಭಾರ್ಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ, ಹಿಂದು ಮುಸ್ಲಿಂ ಹಾಗೂ ಧರ್ಮ ಯುದ್ದದ ನಡುವೆ ಶುರುವಾಗುತ್ತಿರುವ ವಿಶ್ವದ ದೊಡ್ಡ ಮಾವಿನ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಮಾವಿನ ನಗರಿಯಲ್ಲಿ ಹೇಗಿದೆ ಹಣ್ಣುಗಳ ರಾಜನ ವೆಲ್ಕಮ್ಗೆ ಸಿದ್ದತೆ ಇಲ್ಲಿದೆ ಡೀಟೇಲ್ಸ್.
ಮಾವಿನ ನಗರಿಯಲ್ಲಿ ಮಾವಿನ ಸುಗ್ಗಿ ಹಬ್ಬಕ್ಕೆ ಕ್ಷಣಗಣನೆ..!ರಾಜ್ಯದ ಮಾವಿನ ನಗರಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರವನ್ನು ಮಾವಿನ ನಗರಿ ಮಾವಿನ ತವರು ಎಂದೆಲ್ಲಾ ಕೆರೆಯಲಾಗುತ್ತದೆ. ಇಂಥ ಮಾವಿನ ನಗರಿಯಲ್ಲಿ ಈವರ್ಷದ ಮಾವಿನ ಸುಗ್ಗಿಕಾಲ ಶುರುವಾಗುತ್ತಿದೆ ಅದಕ್ಕಾಗಿ ಶ್ರೀನಿವಾಸಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವಿನ ಮಾರುಕಟ್ಟೆಗೆ ಶುರುವಾಗುತ್ತಿದೆ, ಅದಕ್ಕಾಗಿ ವ್ಯಾಪಾರಸ್ಥರು ಮಂಡಿ ಮಾಲೀಕರುಗಳು ಬೇಕಾದ ಸಿದ್ದತೆಗಳನ್ನು ಮಾಡುತ್ತಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ಕೊರೊನಾ ಕಾಲದಲ್ಲಿ ಸರಿಯಾದ ವ್ಯಾಪಾರ ವಹಿವಾಟು ನಡೆದಿಲ್ಲ ವರ್ಷಕ್ಕೊಂದೇ ಬೆಳೆಯಲ್ಲಿ ಜೀವನ ಕಟ್ಟಿಕೊಳ್ಳುವ ಮಾವು ಬೆಳೆಗಾರ ಹಲವು ನಿರೀಕ್ಷೆಯಲ್ಲಿ ಮಾರುಕಟ್ಟೆಯತ್ತ ಹೆಜ್ಜೆ ಹಾಕುತಿದ್ದಾನೆ.
ಈ ವರ್ಷ ಮಾವಿನ ಫಸಲೇ ಕಡಿಮೆ ಅದರಲ್ಲಿ ಆಲಿಕಲ್ಲು ಮಳೆಗೆ ಉದುರಿದ ನಿರೀಕ್ಷೆ..! ಈ ವರ್ಷ ಮಾವಿನ ಫಸಲೇ ಕಡಿಮೆ ಅದರ ಜೊತೆಗೆ ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಇದ್ದ ಶೇ50 ರಷ್ಟು ಮಾವಿನ ಫಸಲಲ್ಲಿ ಶೇ 20 ರಷ್ಟು ನೆಲಕ್ಕುದುರಿ ಹಾಳಾಗಿದೆ ಇನ್ನು ಉಳಿದ ಅಷ್ಟೋ ಇಷ್ಟು ಬೆಳೆಯನ್ನು ಈಗ ರೈತರು ಮಾರುಕಟ್ಟೆಗಳತ್ತ ತರುತ್ತಿದ್ದಾರೆ. ಸದ್ಯ ಈಗಷ್ಟೇ ಮಾರುಕಟ್ಟೆ ಆರಂಭವಾಗುತ್ತಿದ್ದು ಈಬಾರಿ ಮಾವಿಗೆ ಉಳ್ಳೆಯ ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದೇವೆ ಅನ್ನೋದು ಶ್ರೀನಿವಾಸಪುರದ ಮಾವು ಬೆಳೆಗಾರ ಜೈರಾಮರೆಡ್ಡಿಯವರ ಮಾತು.
ಹಿಂದೂ-ಮುಸ್ಲಿಂ ಧರ್ಮ ದಂಗಲ್ ಆತಂಕವಿತ್ತು..! ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿ ಮಾವು ಬೆಳೆಗಾರರು ಹಾಗೂ ವ್ಯಾಪಾರಸ್ಥರನ್ನು ಸಂಕಷ್ಟಕ್ಕೆ ದೂಡಿತ್ತು ಆದರೆ ಈವರ್ಷ ಧರ್ಮ ದಂಗಲ್ ಆತಂಕ ಸೃಷ್ಟಿಸಿತ್ತು, ಕಳೆದ ಕೆಲವು ದಿನಗಳಿಂದ ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ನಡುವೆ ನಡೆಯುತ್ತಿದ್ದ ಕೆಲವು ವಿವಾದಗಳ ಹಿನ್ನೆಲೆ ಏನಾಗುತ್ತೋ ಅನ್ನೋ ಆತಂಕ ಇತ್ತು ಆದರೆ ಶ್ರೀನಿವಾಸಪುರದಲ್ಲಿ ಯಾವುದೇ ಹಿಂದೂ ಮುಸ್ಲಿಂ ಧರ್ಮದ, ಬೇದ ಬಾವ ಇಲ್ಲದೆ ವ್ಯಾಪಾರಸ್ಥರು ಕೂಡಾ ನಿರಾತಂಕವಾಗಿ ವ್ಯಾಪಾರ ವಹಿವಾಟು ಆರಂಭ ಮಾಡುತ್ತಿದ್ದೇವೆ ಅಂತಾರೆ ಮಂಡಿ ಮಾಲೀಕ ಅಬುಬಕಾರ್.
ಶ್ರೀನಿವಾಸಪುರದ ಮಾವಿನ ಟೇಸ್ಟೇ ಬೇರೆ ಇಲ್ಲಿನ ಗುಣಮಟ್ಟದ ಹಣ್ಣಿಗೆ ವಿಶ್ವದೆಲ್ಲೆಡೆ ಬೇಡಿಕೆ..! ಶ್ರೀನಿವಾಸಪುರದಲ್ಲಿ ಬೆಳೆಯುವ ಮಾವಿನ ಹಣ್ಣನ್ನು ದೇಶದ ಎಲ್ಲಾ ರಾಜ್ಯಗಳಿಗೆ ಹಾಗೂ ವಿದೇಶಗಳಿಗೂ ಸಹ ರಪ್ತು ಮಾಡಲಾಗುತ್ತದೆ. ಹಾಗಾಗಿ ಇನ್ನು ಮುಂದಿನ ಒಂದು ವಾರಗಳ ನಂತರ ಮಾರುಕಟ್ಟೆಗೆ ಹೊರ ರಾಜ್ಯಗಳ ವ್ಯಾಪಾರಸ್ಥರು ಹಾಗೂ ಜ್ಯೂಸ್ ಪ್ಯಾಕ್ಟರಿಗಳ ಮಾಲೀಕರು ಬರುತ್ತಾರೆ ಆಗ ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ಪೂರ್ಣ ಪ್ರಮಾಣದ ಮಾವಿನ ಸುಗ್ಗಿಕಾಲ ಆರಂಭವಾಗುತ್ತದೆ. ಶ್ರೀನಿವಾಸಪುರದಲ್ಲಿ ಉತ್ತಮ ಗುಣಮಟ್ಟದ ತೋತಾಪುರಿ, ಸೇಂದೂರ, ಮಲ್ಲಿಕಾ, ಬಾದಾಮಿ, ರಸಪುರಿ, ಬೇನಿಷಾ, ಬೆಂಗಳೂರಾ, ಸಕ್ಕರೆಗುಟ್ಲೆ, ಮಲಗೋಬಾ ಸೇರಿದಂತೆ ಹತ್ತಕ್ಕೂ ಹೆಚ್ಚಿನ ಬಗೆಯ ಮಾವಿನ ವೆರೈಡಿಗಳು ಸಿಗುತ್ತವೆ ಹಾಗಾಗಿನೆ ಇಲ್ಲಿನ ಮಾವಿನ ಹಣ್ಣಿಗೆ ವಿಶ್ವದೆಲ್ಲೆಡೆಯಿಂದ ಬೇಡಿಕೆ ಇದೆ.
ಒಟ್ಟಾರೆ ಮಾವಿನ ನಗರದಲ್ಲಿ ಮಾವಿನ ಸುಗ್ಗಿಕಾಲ ಈಗಷ್ಟೇ ಆರಂಭವಾಗುತ್ತಿದ್ದು ಇನ್ನು ಎರಡು ತಿಂಗಳ ಕಾಲ ಶ್ರೀನಿವಾಸಪುರದಲ್ಲಿ ಮಾವಿನ ಹಬ್ಬವೇ ನಡೆಯಲಿದೆ, ಕಳೆದ ಮೂರು ವರ್ಷಗಳಿಂದ ಕೊರೊನಾ ಸಂಕಷ್ಟದಲ್ಲಿ ಸಿಲುಕಿ ನಷ್ಟ ಅನುಭವಿಸಿರುವ ರೈತರು ಹಾಗೂ ವ್ಯಾಪಾರಸ್ಥರು ಈವರ್ಷವಾದ್ರು ಮಾವಿನ ಹಣ್ಣಿಗೆ ಒಳ್ಳಯ ಬೇಡಿಕೆ ಬಂದು ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿರೋದಂತು ಸುಳ್ಳಲ್ಲ.
– ರಾಜೇಂದ್ರ ಸಿಂಹ
Published On - 5:04 pm, Tue, 17 May 22