Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಕೈಕೊಟ್ಟ ಮಳೆ, ಚಿಗುರಲ್ಲೇ ಒಣಗುತ್ತಿರೋ ರಾಗಿ ಬೆಳೆ; ರೈತ ಕಂಗಾಲು

ಅದು ನದಿ ನಾಲೆಗಳಿಲ್ಲದ ಮಳೆಯಾಶ್ರಿತ ಬಯಲು ಸೀಮೆ ಜಿಲ್ಲೆ, ಬರಗಾಲದ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯಲ್ಲಿ ರೈತನ ಒಪ್ಪತ್ತಿನ ಹೊಟ್ಟೆ ತುಂಬಿಸುವ ಬೆಳೆಯದು, ಒಳ್ಳೆಯ ಬೆಳೆಯಾಗಿ ರೈತನ ಮನೆಯ ಕಣಜ ಸೇರಿ ಇಡೀ ವರ್ಷ ಕುಟುಂಬದ ಹಸಿವು ನೀಗಿಸುತ್ತದೆ. ಅಂಥ ಬೆಳೆಯೇ ಈ ಬಾರಿ ಕೈಕೊಟ್ಟು ರೈತನ ಒಪ್ಪತ್ತಿನ ಗಂಜಿಗೂ ಪರದಾಡುವಂತೆ ಮಾಡುತ್ತಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಕೋಲಾರ: ಕೈಕೊಟ್ಟ ಮಳೆ, ಚಿಗುರಲ್ಲೇ ಒಣಗುತ್ತಿರೋ ರಾಗಿ ಬೆಳೆ; ರೈತ ಕಂಗಾಲು
ಕೈಕೊಟ್ಟ ಮಳೆಯಿಂದ ಚಿಗುರಲ್ಲೇ ಒಣಗುತ್ತಿರೋ ರಾಗಿ ಬೆಳೆ,
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 13, 2024 | 6:57 PM

ಕೋಲಾರ, ಅ.13: ಬರದ ನಾಡು ಕೋಲಾರ(Kolar) ಜಿಲ್ಲೆಯಲ್ಲಿ ಈ ಬಾರಿಯೂ ನಿರೀಕ್ಷಿತ ಪ್ರಮಾಣದ ಮಳೆ ಹಾಗೂ ಬಿತ್ತನೆ ಕಾರ್ಯ ಆಗಿಲ್ಲ, ಪರಿಣಾಮ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಆರಂಭದಲ್ಲಿ ಸುರಿದ ಅಲ್ಪ ಮಳೆ ನಂಬಿ ಒಣಬಿತ್ತನೆ ಮಾಡಿದ್ದ ರೈತರಿಗೆ ಜುಲೈನಲ್ಲಿ ಸುರಿದ ಒಂದಷ್ಟು ಮಳೆಯನ್ನು ಹೊರತು ಪಡಿಸಿದರೆ, ಜಿಲ್ಲೆಯಲ್ಲಿ ಮತ್ತೆ ಮಳೆರಾಯನ ದರ್ಶನವೇ ಇಲ್ಲ. ಪರಿಣಾಮ ರೈತನ ವರ್ಷದ ಕೂಳಿಗಾಗಿ ಬೆಳೆಯುವ ರಾಗಿ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದೆ. ರಾಗಿ ಬೆಳೆ ಬೆಳವಣಿಗೆಯಾಗದೆ ಚಿಗುರುವ ಹಂತದಲ್ಲೇ ಮಳೆ ಇಲ್ಲದೆ ಒಣಗುತ್ತಿದ್ದು, ಗಾಯದ ಮೇಲೆ ಬರೆ ಎಂಬಂತೆ ಬಂದಿರುವ ಅರ್ಧ ಅಡಿ ಉದ್ದದ ರಾಗಿ ಪೈರಿಗೂ ಈಗಾಗಲೇ ರೋಗ ಬಾದೆ ಕಾಡುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ಈ ಬಾರಿ ಸಂಪೂರ್ಣ ರಾಗಿ ಬೆಳೆ ಕೈಕೊಟ್ಟು ರೈತರ ವರ್ಷದ ಕೂಳು ಗಂಜಿಗೂ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಹೌದು, ಕಳೆದ ವರ್ಷ ಕೋಲಾರ ಜಿಲ್ಲೆಯ ಆರು ತಾಲ್ಲೂಕುಗಳು ಸಂಪೂರ್ಣ ಬರಪೀಡಿತ ಪ್ರದೇಶ ಎಂದು ಸರ್ಕಾರವೇ ಘೋಷಣೆ ಮಾಡಿತ್ತು. ಅದರಂತೆ ಈ ವರ್ಷವೂ ಮಳೆ ಕೈಕೊಟ್ಟಿರುವ ಪರಿಣಾಮ ರೈತನ ಜಾನುವಾರು, ತನ್ನ ಕುಟುಂಬದ ಹೊಟ್ಟೆಪಾಡಿನ ಹಸಿವು ನೀಗಿಸುವ ರಾಗಿ ಬೆಳೆ ಇಲ್ಲದೆ ರೈತ ಅಕ್ಷರಶ: ಕಂಗಾಲಾಗಿದ್ದಾನೆ. ಇನ್ನು ಜಿಲ್ಲೆಯಲ್ಲಿ 95,500 ಹೆಕ್ಟೇರು ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, 77,663 ಹೆಕ್ಟೇರ್​ನಲ್ಲಿ ಅಂದ್ರೆ ಶೇ 81 ರಷ್ಟು ಬಿತ್ತನೆ ಮಾಡಲಾಗಿತ್ತು. ಜಿಲ್ಲೆಯಲ್ಲಿ 65 ಸಾವಿರ ಹೆಕ್ಟೇರಿಗೆ ಬಿತ್ತನೆ ಗುರಿ ಹೊಂದಲಾಗಿತ್ತಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಜಿಲ್ಲೆಯಾಧ್ಯಂತ ಕೇವಲ 55 ಸಾವಿರ ಹೆಕ್ಟೇರ್​ನಲ್ಲಿ ಮಾತ್ರ ರಾಗಿ ಭಿತ್ತನೆಯಾಗಿತ್ತು.
ಜುಲೈ ಅಂತ್ಯದಲ್ಲಿ ದೇವರ ಮೇಲೆ ಬಾರ ಹಾಕಿ ಬಿತ್ತನೆ ಮಾಡಿದ್ದ ರೈತರಿಗೆ, ಅಲ್ಪ ಸ್ವಲ್ಪ ಮಳೆ ಬಂದ ಕಾರಣ ಬಿತ್ತನೆ ಮಾಡಿದ್ದ ಬೆಳೆ ಚಿಗುರೊಡೆದಿತ್ತು. ಆದಾದ ನಂತರ ಆಗಸ್ಟ್​, ಸೆಪ್ಟಂಬರ್​ ಎರಡು ತಿಂಗಳ ಕಾಲ ಒಂದು ಹನಿ ಮಳೆ ಬಂದಿಲ್ಲ. ಹಾಗಾಗಿ ಬಿತ್ತನೆ ಮಾಡಿದ ಎರಡು ತಿಂಗಳಲ್ಲಿ ಸುಮಾರು ಎರಡು ಅಡಿಯಷ್ಟು ಬೆಳೆಯಬೇಕಿದ್ದ ರಾಗಿ ಪೈರುಗಳು, ಈಗ ಕೇವಲ ಅರ್ಧ ಅಡಿಯಷ್ಟು ಎತ್ತರ ಬೆಳೆದಿದೆ. ಇಷ್ಟಾದರೂ ಮಳೆಯಾಗಿಲ್ಲ. ಹಾಗಾಗಿ ರಾಗಿ ತೆನೆಯೂ ಬಂದಿಲ್ಲ. ರಾಗಿ ಬೆಳೆ ಇರಲಿ ಜಾನುವಾರುಗಳ ಮೇವಿಗೂ ಪ್ರಯೋಜನಕ್ಕೆ ಬಾರದಂತಾಗಿದೆ ಎನ್ನುವ ಕಾರಣಕ್ಕೆ ಜಿಲ್ಲೆಯ ಹಲವೆಡೆ ರೈತರು ಟ್ರಾಕ್ಟರ್ ಮೂಲಕ ರಾಗಿ ಬೆಳೆಯನ್ನು ನಾಶ ಮಾಡಿದ್ದಾರೆ.
ಇಂಥ ಪರಿಸ್ಥಿತಿಯಲ್ಲಿ ಜಿಲ್ಲೆಯ ರೈತರ ನೆರವಿಗೆ ಸರ್ಕಾರ ಬರಬೇಕು ಎಂದು ಕೋಲಾರ ಜಿಲ್ಲೆಯ ರೈತರ ಆಗ್ರಹವಾಗಿದೆ. ಇನ್ನು ಜಿಲ್ಲೆಯಲ್ಲಿ ಕೃಷಿ ಇಲಾಖೆ ಬರ ಸಮೀಕ್ಷೆಯನ್ನು ಆರಂಭ ಮಾಡಿದೆ. ಒಟ್ಟಾರೆ ಬರದ ಹಣೆ ಪಟ್ಟಿಕೊಂಡಿರುವ ಕೋಲಾರಕ್ಕೆ ಮೇಲಿಂದ ಮೇಲೆ ಬರದ ಬರೆ ಬೀಳುತ್ತಿದೆ. ಪರಿಣಾಮ ಜಿಲ್ಲೆಯಲ್ಲಿ ರೈತರ ಹರ್ಷದ ಕೂಳಿರಲಿ ವರ್ಷದ ಕೂಗಳಿಗೂ ತಾಪತ್ರೆಯ ಶುರುವಾಗಿದ್ದು, ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕು, ವಿಶೇಷ ಪ್ಯಾಕೇಜ್​ ಮೂಲಕ ರೈತರಿಗೆ ಬರ ಪರಿಹಾರ ನೀಡಬೇಕು ಎಂದು ಜಿಲ್ಲೆಯ ರೈತರು ಮನವಿ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ