ಕೋಲಾರ: ಎರಡ್ಮೂರು ತಿಂಗಳ ಬಳಿಕ ಕುಸಿತ ಕಂಡ ಟೊಮ್ಯಾಟೊ! ನಷ್ಟದ ಸುಳಿಗೆ ಸಿಲುಕಿದ ರೈತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 03, 2023 | 4:08 PM

ಸತತ ಮೂರು ತಿಂಗಳ ಕಾಲ ತನ್ನ ಬೆಲೆ ಏರಿಕೆಯಿಂದ ಕಾಶ್ಮೀರಿ ಸುಂದರಿ ಆಫಲ್​ನನ್ನೇ ಹಿಂದಿಕ್ಕಿದ್ದ ಕೆಂಪು ಸುಂದರಿ ಟೊಮ್ಯಾಟೊ, ಕಾಲಚಕ್ರದಲ್ಲಿ ಸಿಲುಕಿ ಮತ್ತೆ ತನ್ನ ಬೆಲೆ ಕಳೆದುಕೊಂಡಿದೆ. ಬೆಲೆ ಏರಿಕೆ ವೇಳೆ ಒಂದು ಟೊಮ್ಯಾಟೊಗೆ ಇದ್ದ ಬೆಲೆ, ಈಗ ಒಂದು ಕೆಜಿ ಟೊಮ್ಯಾಟೋಗೆ ಮಾರಾಟವಾಗುತ್ತಿದೆ. ಈ ಮೂಲಕ ಮೂರು ತಿಂಗಳ ಟೊಮ್ಯಾಟೊ ಆಟಕ್ಕೆ ತೆರೆ ಬಿದ್ದಿದೆ.

ಕೋಲಾರ: ಎರಡ್ಮೂರು ತಿಂಗಳ ಬಳಿಕ ಕುಸಿತ ಕಂಡ ಟೊಮ್ಯಾಟೊ! ನಷ್ಟದ ಸುಳಿಗೆ ಸಿಲುಕಿದ ರೈತ
ಕೋಲಾರ ಮಾರುಕಟ್ಟೆ
Follow us on

ಕೋಲಾರ, ಸೆ.03: ನೂರು, ನೂರೈವತ್ತು, ಇನ್ನೂರು, ಇನ್ನೂರ ಮೂವತ್ತು, ರೂಪಾಯಿಗೆ ಮಾರುಕಟ್ಟೆಯಲ್ಲಿ ಹರಾಜಾಗುತ್ತಿರುವ ಟೊಮ್ಯಾಟೊ, ಇನ್ನೊಂದೆಡೆ ಟೊಮ್ಯಾಟೊ (Tomato) ಬೆಲೆ ಕಳೆದುಕೊಳ್ಳುತ್ತಿರುವ ಹಿನ್ನೆಲೆ ಬೇಸರಗೊಂಡಿರುವ ರೈತರು, ಈ ಎಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರದ (Kolar) ಎಪಿಎಂಸಿ ಮಾರುಕಟ್ಟೆಯಲ್ಲಿ. ಹೌದು, ಕಳೆದ ಮೂರು ತಿಂಗಳಿಂದ ನಿರಂತರವಾಗಿ ಗಗನಕ್ಕೇರಿದ್ದ ಟೊಮ್ಯಾಟೊ ಬೆಲೆ ಪಾತಾಳಕ್ಕೆ ಕುಸಿದಿದೆ. ಇತ್ತೀಚಿಗೆ ಟೊಮ್ಯಾಟೊ ಬೆಲೆ ಇಡೀ ದೇಶದಲ್ಲೇ ಸದ್ದು ಮಾಡಿತ್ತು. ನಿರಂತರ ಬೆಲೆ ಏರಿಕೆಯಿಂದ ದಾಖಲೆ ಬರೆದಿದ್ದ ಟೊಮ್ಯಾಟೊ ಈಗ ಅಷ್ಟೇ ವೇಗವಾಗಿ ಪಾತಾಳಕ್ಕೆ ಬಿದ್ದಿದೆ.

ಜುಲೈ ಕೊನೆಯ ವಾರದಲ್ಲಿ ಹದಿನೈದು ಕೆ.ಜಿ.ಯ ಬಾಕ್ಸ್​ ಟೊಮ್ಯಾಟೊ 2700 ರೂಪಾಯಿ ದಾಖಲೆ ಬೆಲೆಗೆ ಮಾರಾಟವಾಗಿತ್ತು. ಅಂದರೆ, ಕೆಜಿ ಟೊಮ್ಯಾಟೊಗೆ 150 ರಿಂದ 165 ರೂಪಾಯಿ ಬೆಲೆ ಇತ್ತು. ಇಂದು ಕೇವಲ 100ರಿಂದ230 ರೂಪಾಯಿಗೆ ಮಾರಾಟವಾಗಿದ್ದು, ಈಗ ಅದೇ ಟೊಮ್ಯಾಟೊ ಕೇವಲ‌ 12 ರಿಂದ 15 ರೂಪಾಯಿಗೆ ಕುಸಿಯುವ ಮೂಲಕ ಟೊಮ್ಯಾಟೊ ಬೆಳೆದ ರೈತನನ್ನು ಮತ್ತೆ ನಷ್ಟದ ಸುಳಿಗೆ ಸಿಲುಕಿಸುತ್ತಿದೆ. ಕೇವಲ‌ ಒಂದು ತಿಂಗಳಲ್ಲಿ ‌ಒಂದು ಟೊಮ್ಯಾಟೋ ಬ್ಯಾಕ್ಸ್ ಮೇಲೆ 2500 ರೂ. ಕಡಿಮೆಯಾಗಿದೆ.

ಇದನ್ನೂ ಓದಿ:ಮೊನ್ನೆ ಟೊಮ್ಯಾಟೊ ಲಾರಿ ಹೈಜಾಕ್​ ಆಗಿತ್ತು, ಇಂದು 12 ಲಕ್ಷ ಮೌಲ್ಯದ ವಸ್ತುಗಳಿದ್ದ ಲಾರಿ ಹೈಜಾಕ್​ ಮಾಡಿದ ಚಾಲಕ! ಎಲ್ಲಿ?

ಇನ್ನು ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ಉತ್ತರ ಭಾರತದ ರಾಜ್ಯಗಳಿಗೆ ಅಂಡಮಾನ್​ ನಿಕೋಬಾರ್​ ಹಾಗೂ ಹೊರ ದೇಶಗಳಾದ ಬಾಂಗ್ಲಾ, ಪಾಕಿಸ್ತಾನ, ದುಬೈಗೂ ಇಲ್ಲಿನ ಟೊಮ್ಯಾಟೋ ರಪ್ತಾಗುತ್ತಿತ್ತು. ಆದರೆ, ಮಹಾರಾಷ್ಟ್ರದ ನಾಸಿಕ್ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕೂಡ ಸ್ಥಳೀಯವಾಗಿ ಟೊಮ್ಯಾಟೊ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಟೊಮ್ಯಾಟೊಗೆ ಹೊರ ರಾಜ್ಯಗಳಿಂದ ಬೇಡಿಕೆ ಕಡಿಮೆಯಾಗಿದೆ. ಜೊತೆಗೆ ನಮ್ಮ ರಾಜ್ಯದಲ್ಲೂ ಹೆಚ್ಚಿನ ರೈತರು ಟೊಮ್ಯಾಟೊ ಬೆಳೆದಿದ್ದು ಮಾರುಕಟ್ಟೆಗಳಿಗೆ ಪೂರೈಕೆ ಹೆಚ್ಚಾಗಿದೆ. ಹಾಗಾಗಿ ಬೆಲೆ ಸಾಕಷ್ಟು ಕುಸಿತ ಕಂಡಿದೆ.

ಏಷ್ಯಾದಲ್ಲಿ ಎರಡನೇ‌ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಕೋಲಾರ, ಚಿಕ್ಕಬಳ್ಳಾಪುರ ಅಷ್ಟೇ ಅಲ್ಲದೆ, ಚಿತ್ರದುರ್ಗ, ಚಳ್ಳಕೆರೆ, ತುಮಕೂರು, ಪಾವಗಡ, ದಾವಣಗೆರೆ, ಚಾಮರಾಜನಗರ, ಮಂಡ್ಯ, ಜಿಲ್ಲೆಗಳ ರೈತರು ಬೆಳೆದ ಟೊಮ್ಯಾಟೊವನ್ನು ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ತರುತ್ತಿದ್ದಾರೆ. ಜೊತೆಗೆ ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಗಡಿಯ ರೈತರು ಕೂಡ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ತಾವು ಬೆಳೆದ ಟೊಮ್ಯಾಟೊ ತಂದು ಮಾರಾಟ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಟೊಮ್ಯಾಟೋ ಪೂರೈಕೆ ದಿನೇ‌ ದಿನೇ‌‌ ಹೆಚ್ಚಾಗುತ್ತಿದೆ.

ಇದನ್ನೂ ಓದಿ:ಗಗನಕ್ಕೇರಿದ ಟೊಮ್ಯಾಟೊ ಬೆಲೆ, ಕೋಟೀಶ್ವರರಾಗಲಿದ್ದಾರೆ ಕೋಲಾರದ ಈ ಬೆಳೆಗಾರರು

ಕಳೆದ ಮೂರು ತಿಂಗಳ ಹಿಂದೆ ರೈತರನ್ನು ಕೋಟ್ಯಾಧಿಪತಿಗಳು, ‌ಲಕ್ಷಾಧಿಪತಿಗಳನ್ನಾಗಿ ಮಾಡಿದ್ದ ಟೊಮ್ಯಾಟೊ, ಈಗ ಅದೇ ರೈತರನ್ನು ಈಗ ಸಂಕಷ್ಟಕ್ಕೀಡು ಮಾಡುತ್ತಿದೆ. ಸದ್ಯ ಬೆಲೆ ಏರಿಕೆ ನಡುವೆ ಮಾಡಿದ ಖರ್ಚು ಕೂಡ ಬಾರದ ರೀತಿಯಲ್ಲಿ ಟೊಮ್ಯಾಟೊ ಬೆಳೆದ ರೈತರು ನಷ್ಟಕ್ಕೆ ಸಿಲುಕುವ ಸ್ಥಿತಿ ಎದುರಾಗಿದೆ. ಇನ್ನು ದಿನ ಕಳೆದರೆ ಉತ್ತಮ ಮಳೆಯಾದರೆ ಒಂದಷ್ಟು ಬೆಲೆ ಏರಿಕೆಯಾಗುತ್ತದೆ. ಇಲ್ಲವಾದರೆ ಟೊಮ್ಯಾಟೊ ಬೆಲೆ ಕೆಜಿ ಒಂದಕ್ಕಿಗೆ ಜಾರುವ ಸಾಧ್ಯತೆ ಕೂಡ ತಳ್ಳಿ ಹಾಕುವಂತಿಲ್ಲ.

ಒಟ್ಟಾರೆ ಕಾಲಚಕ್ರ ತಿರುಗಲೇ ಬೇಕು, ಮೇಲೆ ಹೋದವನು ಕೆಳಗೆ ಬರಲೇ ಬೇಕು ಎನ್ನುವ ಮಾತು ಸರ್ವಕಾಲಿಕ ಸತ್ಯವಾಗಿದ್ದು, ಕಳೆದ ಮೂರು ತಿಂಗಳಲ್ಲಿ ಕಾಶ್ಮೀರಿ ಆ್ಯಪಲ್​ನ್ನು ತನ್ನ ಬೆಲೆ ಏರಿಕೆಯಿಂದ ಹಿಂದಿಟ್ಟಿದ್ದ ಟೊಮ್ಯಾಟೊ, ಈಗ ತನ್ನ ಬೆಲೆ ಕುಸಿತದಿಂದ ಅದೇ ಟೊಮ್ಯಾಟೊ ಬೆಳೆದವರಿಗೆ ಕಹಿಯಾಗಿ ಪರಿಣಮಿಸಿದ್ದು, ಸದ್ಯ ರೈತರ ಪರಿಸ್ಥಿತಿ ಬಿಸಿ ತುಪ್ಪ ಬಾಯಿಗೆ ಹಾಕಿಕೊಂಡಂತಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Sun, 3 September 23