ಉತ್ತರಾಖಂಡ್ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆಯಲ್ಲಿ ಕೋಲಾರದ ಎಂಜಿನಿಯರ್ ಭಾಗಿ
ಉತ್ತರಾಖಂಡ್ ರಾಜ್ಯದ ಸಿಲ್ಕ್ಯಾರಾ ಸುರಂಗ ಕುಸಿತಗೊಂಡ ಪರಿಣಾಮ ಕಳೆದ ಎರಡು ವಾರಗಳಿಂದ 41 ಮಂದಿ ಸಿಲುಕಿಕೊಂಡಿದ್ದರು. ಸತತ 17 ದಿನಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಎಂಜಿನಿಯರ್ ಸಹ ಭಾಗಿಯಾಗಿದ್ದರು.

ಕೋಲಾರ ಡಿ.01: ಉತ್ತರಾಖಂಡ್ ರಾಜ್ಯದ ಉತ್ತರಕಾಶಿ ಬಳಿ ಸಿಲ್ಕ್ಯಾರಾ ಸುರಂಗ (Silkyara tunnel)ದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಕೋಲಾರ ಜಿಲ್ಲೆಯ ಓರ್ವ ಎಂಜಿನಿಯರ್ (Engineer) ಕೂಡ ಭಾಗಿಯಾಗಿದ್ದರು. ಹೌದು ಬಂಗಾರಪೇಟೆ (Bangarpete) ಪಟ್ಟಣದ ಹೆಚ್.ಎಲ್.ಸುರೇಶ್ ಮತ್ತು ಕಲಾವತಿ ದಂಪತಿಯ ಪುತ್ರ ಹೆಚ್. ಎಸ್ ವೆಂಕಟೇಶ್ ಪ್ರಸಾದ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
ವೆಂಕಟೇಶ್ ಪ್ರಸಾದ್ 2015 ರಲ್ಲಿ ಮೈನಿಂಗ್ ಇಂಜನಿಯರ್ ಆಗಿ ಉತ್ತೀರ್ಣರಾಗಿದ್ದಾರೆ. ನಂತರ ಗುಜರಾತಿನ ಹಿಂದೂಸ್ಥಾನ್ ಜಿಂಕ್ ಲಿಮಿಟೆಡ್ನಲ್ಲಿ 6 ವರ್ಷ ಸೇವೆ ಸಲ್ಲಿಸಿದ್ದಾರೆ. ಸದ್ಯ ಬೆಂಗಳೂರಿನ ಸ್ಕ್ವಾಡ್ರೋನ್ ಇನ್ಫ್ರಾ ಅಂಡ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಉತ್ತರಕಾಶಿ ಸುರಂಗ ಕುಸಿತ; ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ, ರಕ್ಷಣಾ ಕಾರ್ಯಾಚರಣೆಯ ಟೈಮ್ಲೈನ್
ಉತ್ತರಕಾಶಿ ಬಳಿ ಸುರಂಗದಲ್ಲಿ 41 ಜನ ಕಾರ್ಮಿಕರು ಸಿಲುಕಿಕೊಂಡ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗುತ್ತದೆ. ಈ ವೇಳೆ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಹಾಗೂ ಭಾರತೀಯ ಸೇನಾ ಪಡೆಯ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಮೈನಿಂಗ್ ಇಂಜನಿಯರ್ ವೆಂಕಟೇಶ್ ಪ್ರಸಾದ್ ಸಹ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಕಾರ್ಮಿಕರನ್ನು ಹೊರತರಲು ಶ್ರಮಿಸಿದ್ದಾರೆ.
ನವೆಂಬರ್ 12 ರಂದು ಸಿಲುಕಿದ್ದ ಕಾರ್ಮಿಕರು
ನವೆಂಬರ್ 12 ರಂದು ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಭೂಕುಸಿತ ಸಂಭವಿಸಿ ಸುರಂಗದ ಒಂದು ಭಾಗ ಕುಸಿದು ನಲವತ್ತೊಂದು ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದರು. ರಕ್ಷಣಾ ಕಾರ್ಯಾಚರಣೆ ತಕ್ಷಣವೇ ಪ್ರಾರಂಭವಾಗಿತ್ತು. ಈ ರಕ್ಷಣಾ ಕಾರ್ಯಾಚರಣೆಗೆ ಅಂತರಾಷ್ಟ್ರೀಯ ಸುರಂಗ ತಜ್ಞನನ್ನು ಕರೆಸಲಾಗಿತ್ತು. ಸತತ 17 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ನವೆಂಬರ್ 28ರ ಸಂಜೆ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆ ತರಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ