ಕೊಪ್ಪಳ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದ ಮೊಟ್ಟೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 25, 2024 | 6:57 PM

ಕರ್ನಾಟಕದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ 6 ದಿನ ಮೊಟ್ಟೆ ವಿತರಿಸುವ ಯೋಜನೆ ಜಾರಿಯಲ್ಲಿದೆ. ಆದರೆ, ಏರಿರುವ ಮೊಟ್ಟೆ ಬೆಲೆಯಿಂದಾಗಿ ಶಾಲಾ ಮುಖ್ಯೋಪಾಧ್ಯಾಯರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿದ ಅನುದಾನ ಸಾಲದಾಗಿದೆ. ಹೀಗಾಗಿ, ಕೆಲವು ಶಾಲೆಗಳು ಮೊಟ್ಟೆಯ ಸಂಖ್ಯೆಯನ್ನು ಕಡಿಮೆ ಮಾಡಿ, ಬಾಳೆಹಣ್ಣು ನೀಡುತ್ತಿವೆ. ಸರ್ಕಾರ ಬೆಲೆ ಏರಿಕೆಗೆ ಅನುಗುಣವಾಗಿ ಅನುದಾನ ಹೆಚ್ಚಿಸುವಂತೆ ಒತ್ತಾಯಿಸಲಾಗಿದೆ.

ಕೊಪ್ಪಳ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದ ಮೊಟ್ಟೆ
ಕೊಪ್ಪಳ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದ ಮೊಟ್ಟೆ
Follow us on

ಕೊಪ್ಪಳ, ಡಿಸೆಂಬರ್ 25: ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ, ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ವಾರದಲ್ಲಿ ಆರು ದಿನ ಮೊಟ್ಟೆ (egg) ನೀಡುತ್ತಿದೆ. ಸರ್ಕಾರದ ಯೋಜನೆಯಿಂದ ಮಕ್ಕಳು ಖುಷಿಯಿಂದ ಮೊಟ್ಟೆ ಸೇವಿಸುತ್ತಿದ್ದರೆ, ಮುಖ್ಯೋಪಾಧ್ಯಾಯರಿಗೆ ಮಾತ್ರ ಮೊಟ್ಟೆ ಖರೀದಿ ಮಾಡುವ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಕಾರಣ ಮಾರುಕಟ್ಟೆಯಲ್ಲಿ ಮೊಟ್ಟೆ ದರ ಹೆಚ್ಚಾಗಿದ್ದರು ಕೂಡ ಸರ್ಕಾರ ಮಾತ್ರ ಅನುದಾನವನ್ನು ಹೆಚ್ಚಿಸದೇ ಇರುವುದು. ಹೀಗಾಗಿ ಮೊಟ್ಟೆ ಖರೀದಿ ಮುಖ್ಯೋಪಾಧ್ಯಾಯರ ತಲೆ ಬಿಸಿ ಹೆಚ್ಚಿಸುತ್ತಿದೆ.

ಶಾಲಾ ಮುಖ್ಯೋಪಾಧ್ಯಾಯರಿಗೆ ಆರ್ಥಿಕ ಸಂಕಷ್ಟ

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಈ ಮೊದಲು ವಾರದಲ್ಲಿ ಎರಡು ದಿನ ಮಾತ್ರ ಮೊಟ್ಟೆಗಳನ್ನು ನೀಡಲಾಗುತ್ತಿತ್ತು. ಆದರೆ ಕಳೆದ ಕೆಲ ತಿಂಗಳಿಂದ ಅಜೀಂ ಪ್ರೇಮ್ ಜಿ ಫೌಂಡೇಶನ್, ಸರ್ಕಾರದ ಜೊತೆ ಕೈಜೋಡಿಸಿದ್ದರಿಂದ, ಇದೀಗ ವಾರದಲ್ಲಿ ಆರು ದಿನ  ಕೂಡ ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ. ಬಹುತೇಕ ಮಕ್ಕಳು ಮೊಟ್ಟೆಯನ್ನು ಖುಷಿ ಖುಷಿಯಿಂದ ತಿನ್ನುತ್ತಿದ್ದಾರೆ. ಮೊಟ್ಟೆಗಳನ್ನು ತಿನ್ನದೇ ಇರುವ ಮಕ್ಕಳಿಗೆ ಬಾಳೆಹಣ್ಣು ಅಥವಾ ಚಿಕ್ಕಿ ನೀಡಲಾಗುತ್ತಿದೆ. ಮೊಟ್ಟೆಗಳನ್ನು ನೀಡುತ್ತಿರುವುದಕ್ಕೆ ಯಾರ ವಿರೋಧವು ಇಲ್ಲಾ. ಆದರೆ ಮೊಟ್ಟೆ ವಿತರಣೆ ಇದೀಗ ಶಾಲೆಯ ಮುಖ್ಯೋಪಾಧ್ಯಾಯರಿಗೆ ಆರ್ಥಿಕ ಸಂಕಷ್ಟ ತರುತ್ತಿದೆ. ಏಕೆಂದರೆ ಮಾರುಕಟ್ಟೆಯಲ್ಲಿ ಇರುವ ಮೊಟ್ಟೆ ದರವೇ ಬೇರೆ. ಸರ್ಕಾರ ನೀಡುತ್ತಿರುವುದೇ ಬೇರೆ.

ಇದನ್ನೂ ಓದಿ: ಮಕ್ಕಳಿಗೆ ಮೊಟ್ಟೆ ಕೊಟ್ಟು ಕಸಿದುಕೊಳ್ಳುವ ಅಂಗನವಾಡಿ ಕಾರ್ಯಕರ್ತರ ವಿಡಿಯೋ ವೈರಲ್; ಇಬ್ಬರು ಅಮಾನತು

ಸರ್ಕಾರ ಒಂದು ಮೊಟ್ಟೆಗೆ ಐದು ರೂಪಾಯಿ ಇಪ್ಪತ್ತು ಪೈಸೆ ನೀಡಿದರೆ, ಅದನ್ನು ಸುಲಿಯಲು ಮತ್ತು ಬೇಯಿಸಲು ಎಂಬತ್ತು ಪೈಸೆ ಸೇರಿದಂತೆ ಪ್ರತಿ ಮೊಟ್ಟೆಗೆ ಆರು ರೂ. ನೀಡುತ್ತದೆ. ಆದರೆ ಇದು ಸಾಲದು ಅಂತಿದ್ದಾರೆ ಶಾಲೆಯ ಮುಖ್ಯೋಪಾಧ್ಯಾಯರು.

ಸದ್ಯ ಮಾರುಕಟೆಯಲ್ಲಿ ಒಂದು ಮೊಟ್ಟೆ ಬೆಲೆ 6 ರಿಂದ 6.50 ಪೈಸೆಗೆ ಸಿಗುತ್ತಿದೆ. ಅದನ್ನು ಬೇಯಿಸಲು ಮತ್ತು ಸುಲಿಯುವ ಖರ್ಚು ಸೇರಿದರೆ ಒಂದು ಮೊಟ್ಟೆಗೆ 7ರಿಂದ 7.50 ಪೈಸೆ ಬೀಳ್ತಿದೆ. ಆದರೆ ಸರ್ಕಾರ ಆರು ರೂಪಾಯಿ ಮಾತ್ರ ನೀಡ್ತಿರೋದರಿಂದ, ಗುಣಮಟ್ಟದ ಮೊಟ್ಟೆಗಳನ್ನು ಖರೀದಿಸಿ ನೀಡಲು ತೊಂದರೆಯಾಗುತ್ತಿದೆಯಂತೆ. ಹೀಗಾಗಿ ಕೊಪ್ಪಳ ಜಿಲ್ಲೆಯ ಅನೇಕ ಶಾಲೆಯ ಮುಖ್ಯೋಪಾಧ್ಯಾಯರು, ಮೊಟ್ಟೆ ಬೆಲೆ ಹೆಚ್ಚಿಸುವಂತೆ ಡಿಡಿಪಿಐ ಮೂಲಕ ಸರ್ಕಾರಕ್ಕೆ ಮನವಿಯನ್ನು ಮೇಲಿಂದ ಮೇಲೆ ಸಲ್ಲಿಸುತ್ತಲೆ ಇದ್ದಾರೆ. ಆದರೆ ಸರ್ಕಾರ ಇದಕ್ಕೆ ಇದುವರೆಗೂ ಸ್ಪಂದಿಸಿಲ್ಲ.

ಹೀಗಾಗಿ ಜಿಲ್ಲೆಯ ಶಾಲೆಗಳಲ್ಲಿ ಆರು ದಿನ ಮೊಟ್ಟೆ ಬದಲಾಗಿ ನಾಲ್ಕು ದಿನ ಮಾತ್ರ ಮೊಟ್ಟೆಗಳನ್ನು ನೀಡಿ, ಉಳಿದ ಎರಡು ದಿನ ಕೇವಲ ಬಾಳೆಹಣ್ಣು ನೀಡುತ್ತಿದ್ದಾರೆ. ಮೊಟ್ಟೆಗೆ ಖರ್ಚು ಮಾಡುತ್ತಿರುವ ಹೆಚ್ಚುವರಿ ಹಣವನ್ನು ಬಾಳೆಹಣ್ಣು ನೀಡಿ ಸರಿದೂಗಿಸಿಕೊಳ್ಳುತ್ತಿದ್ದಾರೆ. ಇದರಿಂದ ವಾರದಲ್ಲಿ ಆರು ದಿನ ಮೊಟ್ಟೆ ತಿನ್ನಬೇಕು ಅನ್ನೋ ಕೆಲ ಮಕ್ಕಳಿಗೆ ನಿರಾಸೆಯಾಗುತ್ತಿದೆ.

ಇದನ್ನೂ ಓದಿ: ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಕಷ್ಟ; ಇತ್ತ ಸಂಬಳವೂ ಇಲ್ಲ, ಮೊಟ್ಟೆ, ತರಕಾರಿಗೂ ಸ್ವಂತ ಹಣ ಹಾಕಿ ಕಂಗಾಲು

ಮೊಟ್ಟೆಗಳನ್ನು ವಿತರಿಸುತ್ತಿರುವುದು ಮಕ್ಕಳ ಖುಷಿ ಹೆಚ್ಚಿಸಿದ್ದರೆ, ಮುಖ್ಯೋಪಾಧ್ಯಾಯರಿಗೆ ಮಾತ್ರ ಹಣ ಸರಿದೂಗಿಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ಮಾರುಕಟ್ಟೆಯಲ್ಲಿ ಏರಿಳಿತವಾಗುತ್ತಿರುವ ಬೆಲೆಗೆ ಅನುಗುಣವಾಗಿ ಮೊಟ್ಟೆ ಖರೀದಿ ಅನುದಾನವನ್ನು ಕೂಡ ನೀಡುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.