ಪೊಲೀಸರು ಹಣದ ಬೆನ್ನು ಹತ್ತಿದ್ದರಿಂದಲೇ ಹುಲಿಹೈದರ್​ನಲ್ಲಿ ಜಗಳಕ್ಕೆ ಕಾರಣ: ಆರೋಪ

ಪೊಲೀಸರು ಹಣದ ಬೆನ್ನು ಹತ್ತಿರುವುದೇ ಕೊಪ್ಪಳದ ಹುಲಿಹೈದರ್​ನಲ್ಲಿ ನಡೆದ ಜಗಳಕ್ಕೆ ಕಾರಣ, ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಬಗ್ಗೆ ಕಾಳಜಿಯೇ ಇಲ್ಲ ಎಂದು ದಲಿತ‌ಮುಖಂಡ ಮುಕುಂದರಾವ್ ಭವಾನಿ ಮಠ ಆರೋಪಿಸಿದ್ದಾರೆ.

ಪೊಲೀಸರು ಹಣದ ಬೆನ್ನು ಹತ್ತಿದ್ದರಿಂದಲೇ ಹುಲಿಹೈದರ್​ನಲ್ಲಿ ಜಗಳಕ್ಕೆ ಕಾರಣ: ಆರೋಪ
ಹುಲಿಹೈದರ್​ನಲ್ಲಿ ನಡೆದ ಗುಂಪು ಸಂಘರ್ಷದ ನಂತರದ ಕ್ಷಣಗಳು
Follow us
| Updated By: Rakesh Nayak Manchi

Updated on: Aug 13, 2022 | 8:33 AM

ಕೊಪ್ಪಳ: ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಜಿಲ್ಲೆಯಲ್ಲಿ ಅನ್ಯಕೋಮಿನ ನಡುವೆ ನಡೆದ ಚಾಕು ಇರಿತ ಪ್ರಕರಣದ ಬಗ್ಗೆ ದಲಿತ‌ಮುಖಂಡ ಮುಕುಂದರಾವ್ ಭವಾನಿ ಮಠ ಅವರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರು ಹಣದ ಬೆನ್ನು ಹತ್ತಿರುವುದೇ ಹುಲಿಹೈದರ್​ನಲ್ಲಿ ಜಗಳಕ್ಕೆ ಕಾರಣ, ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಬಗ್ಗೆ ಕಾಳಜಿಯೇ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಹುಲಿಹೈದರ್​ನಲ್ಲಿ ನಡೆದ ಗಲಾಟೆಗೆ ಪೊಲೀಸರೇ ನೇರ ಹೊಣೆಯಾಗಿದ್ದಾರೆ  ಅವರನ್ನು ಕರೆದುಕೊಂಡು ಬಂದ ಶಾಸಕರು ಕೂಡ ಇದರ ಹೊಣೆ ಹೊತ್ತುಕೊಳ್ಳಬೇಕು. ಗಂಗಾವತಿ ಹಾಗೂ ಕನಕಗಿರಿಯಲ್ಲಿ ಕಾನೂನು ಸುವ್ಯವಸ್ಥೆ ಕುಸದಿದೆ. ಗಂಗಾವತಿ ಹಾಡುಹಗಲೆ ಚೂರಿ ಹಾಕಲಾಗುತ್ತಿದೆ, ವಿದ್ಯಾರ್ಥಿಗಳ ಮೇಲೂ ಚೂರಿ‌ ಹಾಕುತ್ತಿದ್ದಾರೆ. ಹುಲಿಹೈದರ್​ನಲ್ಲಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ಜೀವನ್ಮರದ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಪೊಲೀಸರು ಸ್ಥಳೀಯ ಶಾಸಕರಿಗೆ ಹಣ ಕೊಟ್ಟು ಬಂದಿರೋ ಕಾರಣ ಪೊಲೀಸರು ಕೇವಲ ಹಣ ವಸೂಲಿ ಮಾಡಲು ಕಾಲ ಕಳಿಯುತ್ತಿದ್ದಾರೆ. ಇಲ್ಲಿನ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಬಗ್ಗೆ ಕಾಳಜಿಯೇ ಇಲ್ಲ. ದುಷ್ಕರ್ಮಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಹುಲಿಹೈದರ್ ಗಲಾಟೆಯಾದ ಬಳಿಕ ಸಚಿವರು ಜಿಲ್ಲಾಧಿಕಾರಿಗಳು ಭೇಟಿ ನೀಡಿಲ್ಲ. ಮಂಗಳೂರಿನಲ್ಲಿ ಗಲಾಟೆಯಾದರೆ ಮುಖ್ಯಮಂತ್ರಿಗಳು 24 ಗಂಟೆಯಲ್ಲಿ ಭೇಟಿ ಕೊಡುತ್ತಾರೆ. ಹುಲಿಹೈದರ್​ನಲ್ಲಿ ದಲಿತರು, ಅಲ್ಪ‌ಸಂಖ್ಯಾತರು ಸತ್ತಿರುವುದರಿಂದ  ಮುಖ್ಯಮಂತ್ರಿಗಳು ಭೇಟಿ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗಸ್ಟ್ 11ರಂದು ಹುಲಿಹೈದರ್​ನಲ್ಲಿ ನಡೆದಿದ್ದೇನು?

ಕನಕಗಿರಿ ತಾಲ್ಲೂಕಿನ ಹುಲಿಹೈದರ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಈ ಘಟನೆಯಲ್ಲಿ ಯಂಕಪ್ಪ ತಳವಾರ (60), ಭಾಷಾಸಾಬ್ (22) ಎಂಬವರು ಸಾವನ್ನಪ್ಪಿದ್ದರು. ಅಲ್ಲದೆ ಆರು ಮಂದಿ ಗಾಯಗೊಂಡಿದ್ದು, ಧರ್ಮಣ್ಣ ಹರಿಜನ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದವು. ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿಯ ಗೆಳೆತನವೇ ಈ ಘರ್ಷಣೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಘರ್ಷಣೆಯಲ್ಲಿ ಇಬ್ಬರ ಸಾವು ಪ್ರಕರಣ ಸಂಬಂಧ  58 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರಂತೆ 25ಕ್ಕೂ ಹೆಚ್ಚು ಜನರನ್ನು ಕನಕಗಿರಿ ಪೊಲೀಸರು ವಶಕ್ಕೆ ಪಡೆದಿದು ವಿಚಾರಣೆ ನಡೆಸುತ್ತಿದ್ದಾರೆ. ಎರಡು ಗುಂಪುಗಳ ನಡುವೆ ನಡೆದ ಗಲಾಟೆ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಿಸಿಕ್ಯಾಮರಾ ದೃಶ್ಯಗಳನ್ನಾಧರಿಸಿ 25ಕ್ಕೂ ಹೆಚ್ಚು ಜನರು ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ