ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋದ ಜೋಡಿ ಭೀಕರ ಅಪಘಾತದಲ್ಲಿ ದುರ್ಮರಣ! ಹಸೆಮಣೆ ಏರಬೇಕಿದ್ದವರ ದಾರುಣ ಅಂತ್ಯ
ಮದುವೆಗೆ ಎರಡು ವಾರ ಬಾಕಿ ಇದ್ದಾಗ ಪ್ರೀ ವೆಡ್ಡಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ಜೋಡಿ ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕೊಪ್ಪಳದಲ್ಲಿ ನಡೆದಿದೆ. ಮಂಡ್ಯ ಹಾಗೂ ಚಿಕ್ಕಮಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತಗಳೂ ಸೇರಿದಂತೆ ಭಾನುವಾರ ಕರ್ನಾಟಕದಲ್ಲಿ ಪ್ರತ್ಯೇಕ ಆ್ಯಕ್ಸಿಡೆಂಟ್ಗಳಲ್ಲಿ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ.

ಕೊಪ್ಪಳ, ಡಿಸೆಂಬರ್ 8: ಮದುವೆಗೆ ಎರಡು ವಾರ ಮಾತ್ರ ಬಾಕಿ ಉಳಿದಿತ್ತು. ಹೀಗಾಗಿ ಮದುವೆ ಸಿದ್ಧತೆಯಲ್ಲಿ ತೊಡಗಿದ್ದ ಜೋಡಿ, ಭಾನುವಾರ ಖುಷಿ ಖುಷಿಯಾಗಿ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಂಡಿತ್ತು. ಹೀಗೆ ಶೂಟ್ ಮುಗಿಸಿ ಮನೆಗೆ ವಾಪಸ್ ಆಗುವಾಗ ಭೀಕರ ಅಪಘಾತ ಸಂಭವಿಸಿದೆ. ಕೊಪ್ಪಳ (Koppal) ತಾಲೂಕಿನ ಗಂಗಾವತಿ ಬಳಿ ಬೈಕ್‌ಗೆ ಲಾರಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಕರಿಯಪ್ಪ ಮಡಿವಾಳ (26) ಬಾಗೂ ಕವಿತಾ ಪವಾಡೆಪ್ಪ ಮಡಿವಾಳ (19) ಮೃತಪಟ್ಟಿದ್ದಾರೆ.
ಕವಿತಾ ಹಾಗೂ ಕರಿಯಪ್ಪಗೆ ವಿವಾಹ ನಿಶ್ಚವಾಗಿದ್ದು, ಡಿಸೆಂಬರ್ 21 ಮದುವೆ ನಿಗದಿ ಆಗಿತ್ತು. ಹೀಗಾಗಿ ಭಾನುವಾರ ಇಬ್ಬರೂ ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋಗಿದ್ದರು. ಗಂಗಾವತಿ ತಾಲೂಕಿನ ಬೆಣಕಲ್ ಬಳಿ ಗುಡ್ಡ ಪ್ರದೇಶದಲ್ಲಿ ಶೂಟಿಂಗ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ, ಬೆಣಕಲ್ ಬಳಿಯೇ ಇವರ ಬೈಕ್ ಲಾರಿಗೆ ಡಿಕ್ಕಿಯಾಗಿದೆ. ಮದುವೆ ಆಗಬೇಕಿದ್ದ ಈ ಜೋಡಿ ಸ್ಥಳದಲ್ಲೇ ಮಸಣ ಸೇರಿದೆ. ಗಂಗಾವತಿ ಆಸ್ಪತ್ರೆ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಾರು-ಬೈಕ್ ಡಿಕ್ಕಿ: ಬಾಲಕಿ ಸಾವು, ತಂದೆ-ತಾಯಿ ಸ್ಥಿತಿ ಗಂಭೀರ
ಚಿಕ್ಕಮಗಳೂರು ತಾಲೂಕಿನ ಕಟ್ಟೆ ತಿಮ್ಮನಹಳ್ಳಿ ಕ್ರಾಸ್ ಬಳಿ ದಂಪತಿ, ಮಕ್ಕಳು ತೆರಳುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಆಗಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಓರ್ವ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ, ತಾಯಿ ಮತ್ತು ಸಹೋದರಿಯ ಸ್ಥಿತಿ ಗಂಭೀರವಾಗಿದೆ.
ಮತ್ತೊಂದೆಡೆ, ಗದಗ ತಾಲೂಕಿನ ಹರ್ತಿ ಗ್ರಾಮದ ಬಳಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಉಸಿರುಚೆಲ್ಲಿದ್ದಾರೆ. ಮದುವೆ ಆಮಂತ್ರಣ ನೀಡಿ ವಾಪಸ್ ಬರುತ್ತಿದ್ದ ಬಸವರಾಜ್ ಕಮ್ಮಾರ ಹಾಗೂ ಪ್ರಶಾಂತ ಬಡಿಗೇರ್ ಅಪಘಾತಕ್ಕೆ ಬಲಿ ಆಗಿದ್ದಾರೆ.
ಹಾಲಿನ ಟ್ಯಾಂಕರ್‌ಗೆ ಡಿಕ್ಕಿಯಾಗಿ ಕಾರು ಧಗಧಗ!
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಚಲಿಸುತ್ತಿದ್ದ ಹಾಲಿನ ಟ್ಯಾಂಕರ್‌ಗೆ ಹಿಂದಿನಿಂದ ಕಾರು ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಕಾರ್‌ನಲ್ಲಿದ್ದವರು ಬಚಾವ್ ಆಗಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತಿಹಳ್ಳಿ ಬಳಿ ಕಾರು ಅಪಘಾತದಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರೇಗೌಡ ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಮಂಡ್ಯ: ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಕಾರು; ಮೂವರು ದುರ್ಮರಣ
ಹೀಗೆ ಭಾನುವಾರ ಕರ್ನಾಟಕದ ವಿವಿಧೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 8 ಮಂದಿ ಮೃತಪಟ್ಟಿದ್ದಾರೆ.




