ಗಂಗಾವತಿಯ ಹಳೆಅಯೋಧ್ಯೆ ಗ್ರಾಮದಲ್ಲಿ ತುಂಗಭದ್ರಾ ಬಂಡೆಗಳ ಮೇಲಿದೆ 10 ಕಿಮೀ ಉದ್ದದ ಸೀತೆಯ ಸೆರಗು!

| Updated By: ಸಾಧು ಶ್ರೀನಾಥ್​

Updated on: Jan 20, 2024 | 9:23 AM

Sita Saree in Ayodhya in Gangavathi: ಕೊಪ್ಪಳದ ಗಂಗಾವತಿ ತಾಲೂಕಿನ ಕಿಷ್ಕಿಂದೆ ಭಾಗದಲ್ಲಿ ರಾಮನ ಅನೇಕ ಹೆಜ್ಜೆ ಗುರುತುಗಳಿವೆ. ವಾಲ್ಮೀಕಿ ರಾಮಾಯಣದಲ್ಲಿ ಅವೆಲ್ಲಾ ಉಲ್ಲೇಖ ಕೂಡಾ ಆಗಿವೆ. ಅದೇ ರೀತಿ ತುಂಗಭದ್ರಾ ನದಿಯಲ್ಲಿರುವ ಹತ್ತು ಕಿಲೋ ಮೀಟರ್​ ಪಟ್ಟಿ, ಸೀತೆಯ ಸೆರಗು ಅಂತಿದ್ದಾರೆ ಸ್ಥಳೀಯರು.

ಗಂಗಾವತಿಯ ಹಳೆಅಯೋಧ್ಯೆ ಗ್ರಾಮದಲ್ಲಿ ತುಂಗಭದ್ರಾ ಬಂಡೆಗಳ ಮೇಲಿದೆ 10 ಕಿಮೀ ಉದ್ದದ ಸೀತೆಯ ಸೆರಗು!
ಗಂಗಾವತಿಯ ಅಯೋಧ್ಯೆ ಗ್ರಾಮದಲ್ಲಿ ತುಂಗಭದ್ರಾ ಬಂಡೆಗಳ ಮೇಲೆ ಸೀತೆಯ ಸೆರಗು!
Follow us on

ಅಯೋಧ್ಯೆಯ ಶ್ರೀರಾಮನಿಗೂ, ಕರ್ನಾಟಕದ ಕಿಷ್ಕಿಂದೆಗೂ ಹತ್ತಿರದ ನಂಟಿದೆ. ಕಿಷ್ಕಿಂದೆಯಲ್ಲಿ ರಾಮನ ಅನೇಕ ಹೆಜ್ಜೆ ಗುರುತುಗಳಿವೆ. ಇನ್ನು ಸೀತೆಯನ್ನು ರಾವಣ ದರದರನೆ ಎಳೆದುಕೊಂಡು ಹೋಗುವಾಗ ತುಂಗಭದ್ರಾ ನದಿಯ ಕಲ್ಲು ಬಂಡೆಗಳಲ್ಲಿ ಸೀತೆಯ ಸೆರಗು ಮೂಡಿದೆ ಅನ್ನೋ ನಂಬಿಕೆ ಕೂಡಾ ಜನರಲ್ಲಿದೆ. ಅದಕ್ಕೆ ಸಾಕ್ಷಿ ಅನ್ನುವಂತೆ ಕಿಲೋ ಮೀಟರಗಟ್ಟಲೆ ಪಟ್ಟಿಯೊಂದು ಕಾಣುತ್ತದೆ. ಅದು ಸೀತೆಯ ಸೆರೆಗು ಅಂತಾರೆ ಸ್ಥಳೀಯರು.

ತುಂಗಭದ್ರಾ ನದಿಯಲ್ಲಿ ಎಲ್ಲಿ ನೋಡಿದ್ರು ಕಾಣ್ತಿರುವ ಕಲ್ಲು ಬಂಡೆಗಳು. ಇದೇ ಕಲ್ಲು ಬಂಡೆಗಳ ಮೇಲೆ, ಮೂಡಿರುವ ಪಟ್ಟಿ. ನೋಡಿದ್ರೆ ಯಾರೋ ಬಣ್ಣದಿಂದ ಪಟ್ಟಿಯನ್ನು ಹಾಕಿದ್ದಾರೆ. ಅಥವಾ ಯಾರೋ ಕೆತ್ತನೆ ಮಾಡಿದ್ದಾರೆ ಅನ್ನೋ ರೀತಿಯಿದೆ. ಆದ್ರೆ ಇದು ಸರಿಸುಮಾರು ಈ ರೀತಿಯಾಗಿ ಹತ್ತು ಕಿಲೋ ಮೀಟರ್​ ದೂರದವರಗೆ ಇದ್ದು, ಇದು ಸೀತೆಯ ಸೆರಗು ಅನ್ನೋ ನಂಬಿಕೆ ಕೂಡಾ ಜನರಲ್ಲಿದೆ. ಹೌದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಳೆಅಯೋಧ್ಯೆ ಅನ್ನೋ ಗ್ರಾಮದ ಹೊರವಲಯದಲ್ಲಿ ತುಂಗಭದ್ರಾ ನದಿ ಹಾದು ಹೋಗಿದ್ದು, ಇದೇ ನದಿಯಲ್ಲಿನ ಕಲ್ಲು ಬಂಡೆಗಳ ಮೇಲೆ ಮೂಡಿರುವ ಪಟ್ಟಿ ಸೀತೆಯ ಸೆರಗು ಅನ್ನೋದು ಜನರ ನಂಬಿಕೆ.

ಹಳೆಅಯೋಧ್ಯೆ ಗ್ರಾಮದಿಂದ ಆರಂಭವಾಗಿರುವ ಈ ಪಟ್ಟಿ, ಆನೆಗೊಂದಿವರಗೆ ಇದೇ ರೀತಿ ಕಾಣುತ್ತದೆ. ಸೀತೆಯನ್ನು ಅಪಹರಣ ಮಾಡಿಕೊಂಡು ಹೊರಟಿದ್ದ ರಾವಣ, ಕೆಲಕಾಲ ಕಿಷ್ಕಿಂದೆಯಲ್ಲಿ ಇಳದಿದ್ದ.ಆಗ ಮರಳಿ ಮತ್ತೆ ಸೀತೆಯನ್ನು ಕರೆದುಕೊಂಡು ಹೋಗಲು ಮುಂದಾಗಿದ್ದ. ಆದ್ರೆ ಸೀತೆ ಹೋಗದೆ ಇದ್ದಾಗ, ರಾವಣ ಸೀತೆಯನ್ನು ದರದರನೆ ಎಳೆದುಕೊಂಡು ಹೋದ.ಆಗ ಆಕೆಯ ಸೆರೆಗೂ ನದಿಯಲ್ಲಿ ಮೂಡಿದೆ. ನೂರಾರು ವರ್ಷಗಳಿಂದ ಈ ಪಟ್ಟಿ ಹಾಗೇ ಇದೆ. ಹೀಗಾಗಿ ಇದು ಸೀತೆಯ ಸೆರಗು ಅನ್ನೋದು ಸ್ಥಳೀಯರ ನಂಬಿಕೆಯಾಗಿದೆ.

ಇನ್ನು ಕಿಷ್ಕಿದೆಗೂ ರಾಮನಿಗೂ ಹತ್ತಿರದ ನಂಟಿದೆ. ರಾವಣ ಸೀತೆಯನ್ನು ಅಪರಹಣ ಮಾಡಿಕೊಂಡ ಕುರಹುಗಳು ರಾಮನಿಗೆ ಸಿಗೋದು ಕೂಡಾ ಇದೇ ಕಿಷ್ಕಿಂದೆಯಲ್ಲಿ. ರಾವಣ ಸೀತೆಯನ್ನು ಅಪಹರಣ ಮಾಡಿಕೊಂಡು ಹೋಗುವಾಗ, ಸೀತೆ ಪುಷ್ಪಕ ವಿಮಾನದಿಂದ ಬಂಗಾರದ ಆಭರಣದ ಗಂಟೊಂದನ್ನು ಇದೇ ಕಿಷ್ಕಿಂದೆಯಲ್ಲಿ ಎಸೆದಿರುತ್ತಾಳೆ. ಅದು ಸುಗ್ರೀವನಿಗೆ ಸಿಕ್ಕಿರುತ್ತದೆ.

ಇದನ್ನೂ ಓದಿ: ಹನುಮ ಜನ್ಮ ಸ್ಥಳ ಗಂಗಾವತಿ ತಾಲೂಕಿನಲ್ಲೂ ಇದೆ ಅಯೋಧ್ಯೆ ಗ್ರಾಮ; ಕುತೂಹಲ ಕೆರಳಿಸಿದೆ ಇಲ್ಲಿರುವ ಪುರಾತನ ರಾಮ ಮಂದಿರ

ರಾಮ, ಸೀತೆಯನ್ನು ಹುಡುಕಿಕೊಂಡು ಹೋಗುತ್ತಿದ್ದಾಗ, ಸುಗ್ರೀವನ ಭೇಟಿಯಾಗುತ್ತದೆ. ತಾನು ಸೀತೆಯನ್ನು ಹುಡುಕಿಕೊಂಡು ಹೊರಟಿರುವದಾಗಿ ಹೇಳಿದಾಗ, ಸುಗ್ರೀವ ಚಿನ್ನಾಭರಣದ ಗಂಟನ್ನು ರಾಮನಿಗೆ ತೋರಿಸುತ್ತಾನೆ. ಗಂಟಲ್ಲಿದ್ದ ಒಡವೆಗಳು ತನ್ನ ಪತ್ನಿಯದ್ದೇ ಅಂತ ರಾಮ ಗುರುತಿಸುತ್ತಾನೆ ಅನ್ನೋ ಉಲ್ಲೇಖ ಕೂಡಾ ವಾಲ್ಮೀಕಿ ರಾಮಾಯಣದಲ್ಲಿ ಇದೆ. ಹೀಗಾಗಿ ಬಂಡೆಗಲ್ಲಿನ ಮೇಲೆ ಮೂಡಿರುವ ಪಟ್ಟಿ ಸೀತೆಯ ಸೆರಗು ಅನ್ನೋದು ಸ್ಥಳೀಯರ ಮಾತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:17 am, Sat, 20 January 24