ಕೊಪ್ಪಳ: ಹೈಕೋರ್ಟ್​ ಆದೇಶ ಉಲ್ಲಂಘಿಸಿ ಕೆರೆ ಒತ್ತುವರಿ ಮಾಡಿದ ಖಾಸಗಿ ಕಂಪನಿ; ಆಕ್ರೋಶ ವ್ಯಕ್ತಪಡಿಸಿದ ರೈತರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 27, 2023 | 7:47 PM

ಅದು ಆ ಭಾಗದ ರೈತರ ಜೀವನಾಡಿಯಾಗಿರುವ ಕೆರೆ. ಆದ್ರೆ, ಕೆರೆಯನ್ನು ಸಧ್ಯ ಅಲ್ಲಿನ‌ ಖಾಸಗಿ ಫ್ಯಾಕ್ಟರಿ ಒತ್ತುವರಿ ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅಲ್ಲದೇ ಜನ ಜಾನುವಾರು ಒಳಗಡೆ ಬಾರದಂತೆ ಕಾಂಪೌಂಡ್ ನಿರ್ಮಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಪ್ಪಳ: ಹೈಕೋರ್ಟ್​ ಆದೇಶ ಉಲ್ಲಂಘಿಸಿ ಕೆರೆ ಒತ್ತುವರಿ ಮಾಡಿದ ಖಾಸಗಿ ಕಂಪನಿ; ಆಕ್ರೋಶ  ವ್ಯಕ್ತಪಡಿಸಿದ ರೈತರು
ಪ್ರಾತಿನಿಧಿಕ ಚಿತ್ರ
Follow us on

ಕೊಪ್ಪಳ, ಆ.27: ಕೆರೆಯನ್ನು ಒತ್ತುವರಿ ಮಾಡಿ ರಸ್ತೆ ನಿರ್ಮಾ‌ಣ ಮಾಡಿರುವ ಖಾಸಗಿ ಕಂಪನಿ. ಅತ್ತ ಕೆರೆ ಒತ್ತುವರಿ ಖಂಡಿಸಿ ಫ್ಯಾಕ್ಟರಿ ಸಿಬ್ಬಂದಿಗಳ ಜೊತೆ ಸ್ಥಳೀಯರ ವಾಗ್ವಾದ. ಹೌದು, ಈ ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳ (Koppala) ತಾಲೂಕಿನ ಬಸಾಪುರ ಗ್ರಾಮದಲ್ಲಿ. ಗ್ರಾಮಕ್ಕೆ ಹೊಂದಿಕೊಂಡಂತೆ ಎಂಎಸ್​ಪಿಎಲ್ ಎನ್ನುವ ಉಕ್ಕು ತಯಾರಿಕಾ ಕಾರ್ಖಾನೆಯಿದೆ. ಅದಕ್ಕಾಗಿ ಈಗಾಗಲೇ ರೈತರಿಂದ (Farmers) ಸಾಕಷ್ಟು ಜಮೀನನ್ನು ಕೂಡಾ ಫ್ಯಾಕ್ಟರಿ ಖರೀದಿಸಿದೆ. ಅವರು ಖರೀದಿ ಮಾಡಿರುವ ಜಮೀನಿನ ಹತ್ತಿರ 44 ಏಕರೆ ಪ್ರದೇಶದಲ್ಲಿ ಸಾರ್ವಜನಿಕ ಕೆರೆಯಿದೆ. ಇದೆ ಕೆರೆ ಇಡೀ ಗ್ರಾಮ ಹಾಗೂ ಸುತ್ತಮುತ್ತಲಿನ ಬಸಾಪೂರ, ಹಾಲವರ್ತಿ, ಕಿಡದಾಳ ಸೇರಿದಂತೆ ಐದಕ್ಕೂ ಹೆಚ್ಚು ಗ್ರಾಮಗಳ ಜಾನುವಾರುಗಳಿಗೆ ಜಲಮೂಲವಾಗಿತ್ತು.‌ ಆದರೆ, ಇದೀಗ ಕಾರ್ಖಾನೆಯವರು ಈ ಕೆರೆಯನ್ನು ಅತಿಕ್ರಮಿಸಿಕೊಳ್ಳುವ ಮೂಲಕ‌ ಜಾನುವಾರುಗಳಿಗೆ ನೀರಿನ‌ ಮೂಲವೇ ಇಲ್ಲದ ಹಾಗೆ ಮಾಡಿದ್ದಾರೆ.

ಸಧ್ಯ ಇದೇ ಕರೆಯನ್ನು ಸಂಪೂರ್ಣವಾಗಿ ತಮ್ಮ ಸುರ್ಪದಿಗೆ ತೆಗೆದುಕೊಳ್ಳುವುದಕ್ಕೆ ಫ್ಯಾಕ್ಟರಿಯವರು ಫ್ಲ್ಯಾನ್ ಮಾಡಿದ್ದಾರೆ. ತಾವು ಖರೀದಿ ಮಾಡಿರುವ ಜಮೀನಿಗೆ ಕಾಂಪೌಂಡ್ ಕಟ್ಟುತ್ತಿರುವ ಫ್ಯಾಕ್ಟರಿ ಆಡಳಿತ ಮಂಡಳಿ, ಕೆರೆಯನ್ನೂ ಕೂಡ ಕಾಂಪೌಂಡ್ ಒಳಗಡೆ ಸೇರಿಸಿ, ಜನ ಬರದಂತೆ ತಡೆಯುವ ಹುನ್ನಾರ ನಡೆಸಿದೆ. ಹೀಗಾಗಿಯೇ ಫ್ಯಾಕ್ಟರಿ ಕುತಂತ್ರ ಅರಿತ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಸಂಬಂಧಪಟ್ಟವರಿಗೆ ಎರಡು ವಾರ ಗಡುಗು ನೀಡಿದ್ದಾರೆ. ಕೆರೆ ಪ್ರದೇಶ ಬಿಟ್ಟು ಕಂಪೌಂಡ್ ಕಟ್ಟಬೇಕು ಮತ್ತು ಕೆರೆಯನ್ನು ಸಾರ್ವಜನಿಕವಾಗಿ ಬಳಕೆಗೆ ಮುಕ್ತ ಮಾಡಬೇಕು ಎನ್ನುವ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ:1 ರೂ ಕುಸಿದ ಕೊತ್ತಂಬರಿ ಬೆಲೆ: ರೈತರು ಕಂಗಾಲು, ನೂರಾರು ಎಕರೆಯಲ್ಲಿ ಬೆಳೆದ ಸೊಪ್ಪು ನಾಶ

ಹೈಕೋರ್ಟ್ ಮೆಟ್ಟಿಲು ಏರಿದ್ದ ರೈತರು

ಇನ್ನು 2006 ರಲ್ಲಿ KIDB, ಎಂಎಸ್​ಪಿಎಲ್​ನವರು 1200 ಕ್ಕೂ ಹೆಚ್ಚು ಎಕರೆ‌ ಭೂಮಿಯನ್ನು ಖರೀದಿಸಿದ್ದು. ಇದರಲ್ಲಿ ಸರ್ವೆ ನಂಬರ್ 134 ರಲ್ಲಿ 44 ಎಕರೆ 35 ಗುಂಟೆ‌ ಜಮೀನಿನಲ್ಲಿ ಕೆರೆ ಇತ್ತು. ಇದನ್ನು ಉಳಿಸಿಕೊಳ್ಳಲು ರೈತರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ರೈತರ ವಾದ ಪುರಸ್ಕರಿಸಿದ ಹೈಕೋರ್ಟ್, ಕೆರೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಮೂಲಕ ರೈತರಿಗೆ ಕೆರೆಯನ್ನು ಬಿಟ್ಟುಕೊಡಬೇಕು ಹಾಗೂ ಕೆರೆಯ ನೀರನ್ನು ಕಾರ್ಖಾನೆಯವರು ಬಳಸ ಬಾರದೆಂದು ಆದೇಶ ಮಾಡಿದೆ.

ಹೈಕೋರ್ಟ್​ ಆದೇಶ ಉಲ್ಲಂಘಿಸಿದ ಎಂಎಸ್​ಪಿಎಲ್

ಕಾರ್ಖಾನೆಯವರಿಗೆ ನೀರುಬೇಕಾದರೆ, ಬೇರೆ ಮೂಲದಿಂದ ಕೆರೆಗೆ ತುಂಬಿಸಿ ಪಡೆದುಕೊಳ್ಳಬೇಕೆಂದಿತ್ತು. ಆದರೆ, ಎಂಎಸ್​ಪಿಎಲ್ ನವರು ಮಾತ್ರ ಹೈಕೋರ್ಟ್ ಆದೇಶ ಉಲ್ಲಂಘಿಸಿ ಕೆರೆಯ ಜಾಗದಲ್ಲಿ ರಸ್ತೆ ನಿರ್ಮಿಸಿ, ಕೆರೆಯ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ.‌ ಕಾರ್ಖಾನೆಯ ಈ ನಡೆ ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಬಾರದ ಮಳೆ: ವರುಣದೇವನ ಮೊರೆ ಹೋದ ತುಮಕೂರು ರೈತರು

ಇನ್ನು ಕೆರೆಯ ಸುತ್ತಲೂ ಕಂಪೌಂಡ್ ನಿರ್ಮಾಣ ಮಾಡುವ ಮೂಲಕ ಕೆರೆಗೆ ಸಂಪರ್ಕ ಬಂದ್ ಮಾಡುವ ದುರಾಲೋಚನೆಯನ್ನು ಎಂ‌ಎಸ್​ಪಿಎಲ್ ಕಾರ್ಖಾನೆ ಹೊಂದಿದೆ. ಆದರೆ, ರೈತರು ಮಾತ್ರ ನಮಗೆ ಕೆರೆ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ ಜಾನುವಾರುಗಳ ಹಾಗೂ ರೈತರ ಜಲಮೂಲವಾಗಿದ್ದ ಕೆರೆಯನ್ನು ಎಂಎಸ್​ಪಿಎಲ್ ಕಾರ್ಖಾನೆಯವರು ಕಬಳಿಸಲು ಮುಂದಾಗಿರುವುದು ನಿಜಕ್ಕೂ ದುರಂತವೇ ಸರಿ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ