
ಕೊಪ್ಪಳ, ಡಿಸೆಂಬರ್ 02: ನಾಳೆ ನಡೆಯಲಿರುವ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಹನುಮದ್ ವ್ರತ ಆಚರಣೆ ಮಾಡಿದ ಹನುಮನ ಭಕ್ತರು ಅಂಜನಾದ್ರಿ ಬೆಟ್ಟದ 575 ಮೆಟ್ಟಿಲೇರಿ ಮಾಲೆಯನ್ನ ವಿಸರ್ಜನೆ ಮಾಡಲಿದ್ದಾರೆ. ಈ ಹಿನ್ನಲೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಪ್ರತಿ ವರ್ಷ ಚಾತುರ್ಮಾಸದಲ್ಲಿ ಹನುಮ ಭಕ್ತರು ಮಾಲೆ ಧಾರಣೆ ಮಾಡಿ, ವ್ರತ ಕೈಗೊಳ್ಳುತ್ತಾರೆ. ವ್ರತದ ಕೊನೆ ದಿನ ಅಂದರೆ ಈ ವರ್ಷ ಡಿ.3ರಂದು ಮಾಲಾಧಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ, ಮಾಲೆ ವಿಸರ್ಜನೆ ಮಾಡುತ್ತಾರೆ. ಈ ಚಾತುರ್ಮಾಸದಲ್ಲೇ ರಾಮ ಹಾಗೂ ಹನುಮಂತ ತಪ್ಪಸ್ಸು ಮಾಡಿದ್ದರು ಎಂಬ ನಂಬಿಕೆ ಭಕ್ತರಲ್ಲಿ ಇದೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ಹನುಮ ಮಾಲೆ ಧರಿಸಿ ವ್ರತ ಕೈಗೊಂಡಿರುವ ಲಕ್ಷಾಂತರ ಭಕ್ತರು, ಈಗಾಗಲೇ ಅಂಜನಾದ್ರಿಯ ಕಡೆ ಮುಖ ಮಾಡಿದ್ದಾರೆ. ಇಂದು ಸಂಜೆ ವೇಳೆಗೆ ಬಹುತೇಕ ಮಾಲಾಧಾರಿಗಳು ಗಂಗಾವತಿ, ಹುಲಿಗಿ ತಲುಪಲಿದ್ದಾರೆ.
ಇದನ್ನೂ ಓದಿ: ಅಂಜನಾದ್ರಿಯಲ್ಲಿ ಹನುಮ ಮಾಲೆ ವಿಸರ್ಜನೆಗೂ ಕಾರ್ಖಾನೆಗಳ ಸಹಯೋಗ? ಭುಗಿಲೆದ್ದ ಆಕ್ರೋಶ
ಹನುಮನ ಜನ್ಮಸ್ಥಳ ಎಂದು ನಂಬಲಾಗುವ ಅಂಜನಾದ್ರಿ ಬೆಟ್ಟದ ಮೇಲಿನ ದೇವಸ್ಥಾನದಲ್ಲಿನ ಹನುಮಂತನ ಮೂರ್ತಿಗೆ ನಾಳೆ (ಡಿ.3) ನವ ನದಿಗಳ ನೀರಿನ ಜಲಾಭಿಷೇಕ ನಡೆಯಲಿದೆ. ಜೊತೆಗೆ ಮೂರ್ತಿಗೆ ಪಂಚಾಮೃತ ಅಭಿಷೇಕ, ಸಹಸ್ರನಾಮ ಪಠಣ, ಕುಂಕುಮಾರ್ಚನೆ, ಮಹಾಮಂಗಳಾರತಿ, ಪವನ ಹೋಮ, ಶ್ರೀರಾಮನಾಮ ಪಠಣ, ಭಕ್ತರಿಂದ ಹನುಮಮಾಲೆ ವಿಸರ್ಜನೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಅಂಜನಾದ್ರಿಗೆ ಭಕ್ತರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳು 14 ಸಮಿತಿ ರಚಿಸಿ, ಅಧಿಕಾರಿಗಳಿಗೆ ಅದರ ನಿರ್ವಹಣೆಯ ಜವಾಬ್ದಾರಿ ನೀಡಿದ್ದಾರೆ. ರಸ್ತೆ ಮತ್ತು ಪಾರ್ಕಿಂಗ್ ಸ್ಥಳಗಳ ಸ್ವಚ್ಛತೆ, ಪಾದಚಾರಿ ಮಾರ್ಗದ ನಿರ್ಮಾಣ, ಭಕ್ತರಿಗೆ ಕುಡಿಯುವ ಮತ್ತು ಸ್ನಾನದ ನೀರಿಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ನೂರಾರು ನೀರಿನ ಟ್ಯಾಪ್ ಅಳವಡಿಸಲಾಗಿದೆ. ಪ್ರಸಾದ ವಿತರಣೆ ವ್ಯವಸ್ಥೆಯೂ ಇದೆ. ಉಪಹಾರ, ಊಟದ ಜೊತೆಗೆ ಪ್ರಾಥಮಿಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕೆ ಸಹಾಯವಾಣಿ ಕೂಡ ತೆರೆಯಲಾಗಿದೆ.
ಸುಗಮ ಸಂಚಾರಕ್ಕೆ ಸುಮಾರು 20 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆನೆಗೊಂದಿ, ಉತ್ಸವ ಬಯಲು, ಚಿಕ್ಕರಾಂಪೂರ, ಕಡೆಬಾಗಿಲು, ಹನುಮನಹಳ್ಳಿ, ಆನೆಗೊಂದಿ ಗ್ರಾಮದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ. ಬಾಗಲಕೋಟೆ, ಹುಬ್ಬಳ್ಳಿ, ಗದಗ, ಕೊಪ್ಪಳ, ಬೆಳಗಾವಿ ಭಾಗಗಳಿಂದ ಬೂದಗುಂಪ ಸರ್ಕಲ್, ಕೊಪ್ಪಳ ಮಾರ್ಗವಾಗಿ ಬರುವ ಮಾಲಾಧಾರಿಗಳು ಹಿಟ್ನಾಳ ಗ್ರಾಮದ ಮಾರ್ಗವಾಗಿ ಆಗಮಿಸಿ ಹನುಮನಹಳ್ಳಿ, ಸಣಾಪೂರ, ಕಲ್ಲಿನ ಸೇತುವೆ ಬಳಿಯ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಬೇಕು. ಇನ್ನೂ ಕಮಲಾಪೂರ, ಬುಕ್ಕಸಾಗರ, ಕಡೆಬಾಗಿಲು ಮಾರ್ಗವಾಗಿ ಹಾಗೂ ಕುಲಬುರಗಿ, ಯಾದಗಿರಿ, ರಾಯಚೂರು, ಸಿಂಧನೂರ, ಮಸ್ಕಿ, ಕನಕಗಿರಿ, ಗಂಗಾವತಿ ಮಾರ್ಗವಾಗಿ ಬರುವ ಮಾಲಾಧಾರಿಗಳಿಗೆ ಆನೆಗೊಂದಿ, ಕಡೆಬಾಗಿಲು, ಚಿಕ್ಕರಾಂಪೂರ ಗ್ರಾಮಗಳಲ್ಲಿ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಇರಲಿದೆ.
ಹನುಮಮಾಲೆ ವಿಸರ್ಜನೆ ಕಾರ್ಯಕ್ರಮದ ಹಿನ್ನೆಲೆ ಹಿಂದೂಪರ ಸಂಘಟನೆಗಳಿಂದ ಗಂಗಾವತಿಯಲ್ಲಿ ಶೋಭಾಯಾತ್ರೆ ಹಾಗೂ ಬಹಿರಂಗ ಸಭೆ ಆಯೋಜಿಸಲಾಗಿದೆ. ನಾಳೆ ಬೆಳಗ್ಗೆ ಎಪಿಎಂಸಿ ಆವರಣದಿಂದ ಆರಂಭವಾಗಲಿರುವ ಶೋಭಾಯಾತ್ರೆ, ಗಂಗಾವತಿಯ ಪ್ರಮುಖ ರಸ್ತೆಯಲ್ಲಿ ಸಾಗಲಿದೆ. ಬಳಿಕ ಬಾಬು ಜಗಜೀವನರಾವ್ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:12 pm, Tue, 2 December 25