ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳ ಇದನ್ನು ಸಾರಿ ಸಾರಿ ಹೇಳುವೆ, ಇಲ್ಲಿ ಸಮಗ್ರ ಅಭಿವೃದ್ಧಿ ಆಗಲಿದೆ -ಸಿಎಂ ಬೊಮ್ಮಾಯಿ ಘೋಷಣೆ

ಅಂಜಿನಾದ್ರಿಯಲ್ಲಿ ರೂಪ್ ವೆಗೆ ಮುಂದಿನ ಮುಂದಿನ ದಿನಗಳಲ್ಲಿ ಟೆಂಡರ್ ಕರೆಯಲು ಸೂಚನೆ‌ ನೀಡಿದ್ದೇನೆ. ಅಂಜನಾದ್ರಿಯ ಅಭಿವೃದ್ಧಿಗೆ ಈಗಾಗಲೆ ಮಾಸ್ಟರ್ ಪ್ಲಾನ್ ರೂಪಿಸಿದ್ದೇವೆ. ಅಂಜನಾದ್ರಿಯ ಜೊತೆಗೆ ಸುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿ ಮಾಡಲಾಗುವುದು.

ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳ ಇದನ್ನು ಸಾರಿ ಸಾರಿ ಹೇಳುವೆ, ಇಲ್ಲಿ ಸಮಗ್ರ ಅಭಿವೃದ್ಧಿ ಆಗಲಿದೆ -ಸಿಎಂ ಬೊಮ್ಮಾಯಿ ಘೋಷಣೆ
ಸಿಎಂ ಬಸವರಾಜ ಬೊಮ್ಮಾಯಿ
TV9kannada Web Team

| Edited By: Ayesha Banu

Aug 01, 2022 | 4:33 PM

ಕೊಪ್ಪಳ: ಅಂಜನಾದ್ರಿ ಬೆಟ್ಟ(Anjanadri Betta) ಹನುಮನ ಜನ್ಮ ಸ್ಥಳ. ಇದನ್ನು ಸಾವಿರ ಸಾವಿರ ಸಾರಿ ಒತ್ತಿ ಹೇಳುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅಂಜನಾದ್ರಿ ಬೆಟ್ಟದ ಮೇಲೆ ನಿಂತು ಹೇಳಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹನುಮಾನ್ ಚಾಲೀಸ ಪಠಣೆ ಮಾಡಿ ಪಾದಗಟ್ಟೆಗೆ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ.

ಬೆಟ್ಟಕ್ಕೆ ರೂಪ್ ವೆ ವ್ಯವಸ್ಥೆ ಮಾಡಿಸಲಾಗುವುದು

ಇನ್ನು ಇದೇ ವೇಳೆ ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮೆಲ್ಲರ ಆರಾಧ್ಯ ದೈವ ಅಂಜನಾದ್ರಿಯ ಹನುಮಂತನ ದರ್ಶನಕ್ಕೆ ಆಗಮಿಸಿದ್ದೇವೆ. ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ಈಗಾಗಲೆ ಬಜೆಟ್ ನಲ್ಲಿ 100 ಕೋಟಿ ರೂಪಾಯಿ ಅನುದಾನ‌ ಘೋಷಣೆ ಮಾಡಿದ್ದೇನೆ. ಅಂಜನಾದ್ರಿಗೆ ಪ್ರತಿವರ್ಷವೂ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವುದು ನಮ್ಮ ಕರ್ತವ್ಯ. ಬರುವ ದಿನಗಳಲ್ಲಿ ಯಾತ್ರಿಗಳು ಆಗಮಿಸುವ ಸಂಖ್ಯೆ ಹೆಚ್ಚಳವಾಗಲಿದೆ. ಹೀಗಾಗಿ ಅಂಜನಾದ್ರಿ ಬೆಟ್ಟದ ಮೇಲೂ ಮತ್ತು ಕೆಳಗೂ ಅಭಿವೃದ್ಧಿ ಆಗಬೇಕಾದ ಅಗತ್ಯವಿದೆ. ಈಗಾಗಲೇ ಸರ್ಕಾರದ ಆದೇಶದೊಂದಿಗೆ ಅಂಜನಾದ್ರಿಗೆ ಬಂದಿದ್ದೇನೆ. ಅಂಜನಾದ್ರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸುವ ದೊಡ್ಡ ಗುರಿ ನಮ್ಮದಾಗಿದೆ. ಇಲ್ಲಿ ಯಾತ್ರಿಕರಿಗೆ ಆಸ್ಪತ್ರೆ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಚಿಂತನೆಯಾಗಿದೆ. ಬೆಟ್ಟಕ್ಕೆ ರೂಪ್ ವೆ ವ್ಯವಸ್ಥೆ ಮಾಡಿ ವಯಸ್ಸಾದವರಿವೂ ಸಹ ಹನುಮಂತನ ದರ್ಶನ ಕಲ್ಪಿಸುವ ಚಿಂತನೆ ಇದೆ. ಬಜೆಟ್ ನಲ್ಲಿ ಜಿಲ್ಲೆಗೆ ನೀಡಿದ ಅನುದಾನದ ಕಾಮಗಾರಿಗಳಿಗೆ ಚಾಲನೆ ಕೊಡಲು ಬಂದಿದ್ದೇನೆ ಎಂದರು.

ಅಂಜಿನಾದ್ರಿಯಲ್ಲಿ ರೂಪ್ ವೆಗೆ ಮುಂದಿನ ಮುಂದಿನ ದಿನಗಳಲ್ಲಿ ಟೆಂಡರ್ ಕರೆಯಲು ಸೂಚನೆ‌ ನೀಡಿದ್ದೇನೆ. ಅಂಜನಾದ್ರಿಯ ಅಭಿವೃದ್ಧಿಗೆ ಈಗಾಗಲೆ ಮಾಸ್ಟರ್ ಪ್ಲಾನ್ ರೂಪಿಸಿದ್ದೇವೆ. ಅಂಜನಾದ್ರಿಯ ಜೊತೆಗೆ ಸುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿ ಮಾಡಲಾಗುವುದು. ಬಜೆಟ್ ನಲ್ಲಿ ಘೋಷಿಸಿದಂತೆ ಅಂತಾರಾಷ್ಟ್ರೀಯ ಮಟ್ಟದ ಹಂಪಿ ಟೂರಿಸಂ ಸರ್ಕಿಟ್ ನ್ನು ಮಾಡಲು ಯೋಜಿಸಲಾಗಿದೆ. ಹಂಪಿ ಮತ್ತು ಮೈಸೂರನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಂತಾರಾಷ್ಟ್ರೀಯ ಸರ್ಕಿಟ್ ಮಾಡಲು ಚಿಂತಿಸಿದ ಕಾರಣ ಯೋಜನೆ ರೂಪಿಸಲಾಗಿದೆ. ಪುರಾತತ್ವ ಇಲಾಖೆ ವ್ಯಾಪ್ತಿಯ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಲ್ಲವುಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಇದರ ಜೊತೆಗೆ ಅಂತಾರಾಷ್ಟ್ರೀಯ ಪ್ರವಾಸಿಗರಿಗೂ ವ್ಯವಸ್ಥೆ ಕಲ್ಪಿಸಲಾಗುವುದು. ಈ ಭಾಗದ ಐತಿಹಾಸಿಕ ಪ್ರವಾಸಿತಾಣಗಳ ಅಭಿವೃದ್ಧಿಗೆ ಒತ್ತುಕೊಡಲಿದ್ದೇವೆ ಎಂದರು.

ಹನುಮನ ಜನಿಸಿದ್ದು ಅಂಜನಾದ್ರಿಯಲ್ಲಿಯೇ ಎಂದು ನಾನು ಸಾವಿರ ಸಲ ಹೇಳುತ್ತೇನೆ. ಸಾವಿರಾರು ವರ್ಷಗಳಿಂದ ಇರುವ ಕಿಷ್ಕಿಂದ ಪುರಾವೆಗಳ ಪ್ರಕಾರ ಹನುಮ ಹುಟ್ಟಿದ್ದು ಇಲ್ಲೇ ಎಂದು ಸಾರಿ ಸಾರಿ ಹೇಳುತ್ತವೆ. ಇದನ್ನು ಬಿಟ್ಟು ಹೇಳಲು ಬೇರೆ ಪುರಾವೆಗಳು ಬೇಕಿಲ್ಲ. ಇತ್ತೀಚಿನ ದಿನಗಳಲ್ಲಿ ಆಂಜನೇಯ ಅಲ್ಲಿ ಜನಿಸಿದ್ದ ಇಲ್ಲಿ ಜನಸಿದ್ದ ಎಂಬ ವಿವಾದಗಳು ಕೇಳಿಬರುತ್ತಿವೆ. ಅಂಜನಾದ್ರಿಯೇ ಹನುಮಂತನು ಜನಿಸಿದ ಪ್ರದೇಶವಾಗಿದೆ ಎಂದು ಹೇಳುವುದುಕ್ಕೆ ಎರಡು ಮಾತಿಲ್ಲ. ಹಾಗಾಗಿ ಈ ಅಂಜನಾದ್ರಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ನಾವು ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟಿದ್ದೇವೆ.

ಹನುಮ ಜನ್ಮಭೂಮಿ ಅಂಜನಾದ್ರಿ ಎನ್ನುವ ನಮ್ಮ ನಂಬಿಕೆಯೆ ಘೋಷಣೆಯಾಗಿದೆ. ಕರ್ನಾಟಕ, ಆಂಧ್ರ ಅಥವಾ ಬೇರೆ ರಾಜ್ಯ ಎಂಬ ಮಾತೇ ಇಲ್ಲ. ಇಡೀ ಭಾರತಕ್ಕೆ ಗೊತ್ತಿದೆ ಅಂಜನಾದ್ರಿಯೆ ಹನುಮನ ಜನ್ಮಸ್ಥಳ ಎಂದು. ಅಂಜನಾದ್ರಿಯ ಅಭಿವೃದ್ಧಿಗೆ ಬೇಕಾದ ಜಮೀನು ಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಈಗಾಗಲೆ ಒಂದು ಸಭೆ ಮಾಡಿರುವೆ ಎಂದರು. ಬಿಜೆಪಿ ಸರ್ಕಾರದ ಆಡಳಿತ ವೈಖರಿ ಕುರಿತು ಟ್ವೀಟ್ ಮಾಡಿರುವ ಚಕ್ರವರ್ತಿ ಸೂಲಿಬೆಲೆ ನಮ್ಮ ಆತ್ಮೀಯರು. ಹಿಂದೂತ್ವದ ಪರ ಇರುವಂತವರು. ಹಿಂದೂಗಳ ಕೊಲೆಯಾದಾಗ ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ನಮ್ಮವರಾಗಿದ್ದು ಅವರೊಂದಿಗೆ ಮಾತನಾಡಿ ತನಿಖೆಯ ಪ್ರಗತಿ ತಿಳಿಸುತ್ತೇನೆ ಎಂದರು.

ಆಂಜಿನೇಯ ಮೂರ್ತಿಗೆ ಸಿಎಂ ಸಾಷ್ಟಾಂಗ ನಮಸ್ಕಾರ

ವಿಶ್ವ ಪ್ರಸಿದ್ದ ಅಂಜಿನಾದ್ರಿಯ ಅಭಿವೃದ್ಧಿ ಕೈಗೊಳ್ಳಲು ಕೊಪ್ಪಳ ಜಿಲ್ಲೆಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಕಿಷ್ಕಿಂದೆಯ ಅಂಜಿನಾದ್ರಿಗೆ ಆಗಮಿಸಿ ಬೆಟ್ಟದ ಕೆಳಗೆ ಹನುಮಂತನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಮಂತ್ರಗಳ ಪಠಣ ಮಾಡಿದರು.

ಸಾಷ್ಟಾಂಗ ನಮಸ್ಕಾರ ಹಾಕಿದ ಸಿಎಂ

ಸಿಎಂ ಬಸವರಾಜ ಬೊಮ್ಮಾಯಿ ಅವರು ಅಂಜನಾದ್ರಿ ಬೆಟ್ಟದ ಕೆಳಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರ ಹಾಕಿ ಗಮನ ಸೆಳೆದರು. ಅಂಜಿನಾದ್ರಿ ಆಡಳಿತ ಮಂಡಳಿಯಿಂದ ಸಿಎಂಗೆ ಸನ್ಮಾನ ಮಾಡಿ ಆಂಜಿನೇಯನ ಭಾವಚಿತ್ರ ಕಾಣಿಕೆಯಾಗಿ ನೀಡಿದರು.

ಸಿಎಂಗೆ ಬೆಳ್ಳಿ ಮೂರ್ತಿ ಕಾಣಿಕೆ

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಆಂಜಿನೇಯನ ಬೆಳ್ಳಿ ಮೂರ್ತಿ ಕಾಣಿಕೆಯಾಗಿ ನೀಡಿದರು.

8 ತಿಂಗಳೊಳಗೆ ಎಲ್ಲಾ ಅಭಿವೃದ್ಧಿ ಕೆಲಸ ಮುಗಿಸಲು ಸೂಚನೆ

ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕುರಿತು ಸಿಎಂ ಬೊಮ್ಮಾಯಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಸಭೆ ನಡೆಸಿದ್ದು 8 ತಿಂಗಳೊಳಗೆ ಅಭಿವೃದ್ಧಿ ಕೆಲಸ ಮುಗಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಎರಡು ತಿಂಗಳಲ್ಲಿ ಭೂಸ್ವಾಧೀನ ಸೇರಿ ಪ್ರಾಥಮಿಕ ಕೆಲಸಗಳನ್ನು ಮುಗಿಸಬೇಕು. 8 ತಿಂಗಳೊಳಗೆ ಎಲ್ಲಾ ಅಭಿವೃದ್ಧಿ ಕೆಲಸ ಮುಗಿಸಲು ತಿಳಿಸಿದ್ದಾರೆ. ಯಾತ್ರಿ ನಿವಾಸ, ಮೂಲಭೂತ ಸೌಕರ್ಯ,ರಸ್ತೆ ಅಭಿವೃದ್ಧಿ, ರೋಪ್ ವೇ ಕೆಲಸ ಮುಗಿಸಲು ಖಡಕ್ ಸೂಚನೆ ನೀಡಿದ್ದಾರೆ.

ವರದಿ: ಶಿವಕುಮಾರ್ ಪತ್ತರ್, ಟಿವಿ9 ಕೊಪ್ಪಳ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada