ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ವಿರೋಧಕ್ಕೆ ಸೆಡ್ಡು: ಬಲ್ಡೋಟಾ ಕಂಪನಿಗಾಗಿ ಪ್ರತಿಭಟನೆ
ಕೊಪ್ಪಳದ ಬಲ್ಡೋಟಾ ಸ್ಟೀಲ್ ಕಾರ್ಖಾನೆ ಸ್ಥಾಪನೆಗೆ ಗವಿ ಮಠದ ಶ್ರೀಗಳು ಸೇರಿ ಹಲವರಿಂದ ತೀವ್ರ ವಿರೋಧದ ನಡುವೆಯೂ ಭೂಮಿ ನೀಡಿದವರು ಉದ್ಯೋಗಕ್ಕಾಗಿ ಕಾರ್ಖಾನೆ ಪರ ಪ್ರತಿಭಟನೆ ನಡೆಸಿದ್ದಾರೆ. ಕಾರ್ಖಾನೆ ಸ್ಥಾಪಿಸಿ ಅಥವಾ ಸರ್ಕಾರಿ ಉದ್ಯೋಗ ನೀಡಬೇಕೆಂದು ಪ್ರತಿಭಟನಾಕಾರು ಆಗ್ರಹಿಸಿದ್ದಾರೆ. ಕಾರ್ಖಾನೆ ಪರವಾಗಿ ನಡೆದ ಈ ಹೋರಾಟ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕೊಪ್ಪಳ, ನವೆಂಬರ್ 13: ನಗರಕ್ಕೆ ಹೊಂದಿಕೊಂಡು ಬಲ್ಡೋಟಾ ಸ್ಟೀಲ್ ಕಾರ್ಖಾನೆಗೆ ಕೊಪ್ಪಳದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಬಂದಿದೆ. ಸ್ವತಃ ಗವಿ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಡಿಸಿದ್ದರು. ಈ ನಡುವೆ ಕಂಪನಿಗೆ ಜಾಗ ನೀಡಿದವರು ಇವರೆಲ್ಲರ ವಿರೋಧಕ್ಕೆ ಸೆಡ್ಡು ಹೊಡೆದಿದ್ದು, ಕಾರ್ಖಾನೆ ಬೇಕೆಂದು ಹೋರಾಟ ನಡೆಸಿದ್ದಾರೆ. ಕಾರ್ಖಾನೆ ಸ್ಥಾಪಿಸಿ, ಇಲ್ಲವೇ ಸರ್ಕಾರಿ ಉದ್ಯೋಗ ಕೊಡುವಂತೆ ಆಗ್ರಹಿಸಿ ಕೊಪ್ಪಳದ ಅಶೋಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ.
ಕಂಪನಿಗೆ ಜಾಗ ನೀಡಿದವ ಈ ಹೊಸ ಹೋರಾಟದ ಮೂಲಕ ಕೊಪ್ಪಳದಲ್ಲಿ ಬಲ್ಡೋಟಾ ಕಂಪನಿಗೆ ಪರ ಮತ್ತು ವಿರೋಧ ಎರಡೂ ಅಭಿಪ್ರಾಯಗಳು ವ್ಯಕ್ತವಾದಂತಾಗಿವೆ. ಕಳೆದ ಒಂದು ವರ್ಷದಿಂದಲೂ ಕಂಪನಿ ವಿರೋಧಿಸಿ ನಡೆಯುತ್ತಿದ್ದ ಹೋರಾಟಕ್ಕೆ ಇವರು ಸೆಡ್ಡು ಹೊಡೆದಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಗವಿ ಮಠದ ಸ್ವಾಮೀಜಿಯೇ ಕಂಪನಿಯನ್ನು ವಿರೋಧಿಸಿದ್ದರೂ ಈ ರೀತಿ ಪ್ರತಿಭಟನೆ ನಡೆಸಿರೋದೀಗ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಬಲ್ಡೋಟಾ ಸ್ಟೀಲ್ ಕಾರ್ಖಾನೆ ಸ್ಥಾಪನೆ ವಿರೋಧಿ ಹೋರಾಟಕ್ಕೆ ಗವಿಮಠದ ಸ್ವಾಮೀಜಿ ಬೆಂಬಲ
ಬಲ್ಡೋಟಾ ಕಾರ್ಖಾನೆ ವಿಚಾರವಾಗಿ ಈ ಹಿಂದೆ ಮಾತನಾಡಿದ್ದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಸಾಂಸ್ಕೃತಿಕ ರಾಜಧಾನಿ ಕೊಪ್ಪಳ ಇದೀಗ ಕರಿ ಅರಳಿಯಂತಾಗಿದೆ. ಬಲ್ಡೋಟಾ ಸೇರಿದಂತೆ ಕೊಪ್ಪಳದಲ್ಲಿ ಯಾವುದೇ ಕಾರ್ಖಾನೆ ಆರಂಭಕ್ಕೆ ನನ್ನ ವಿರೋಧವಿದೆ ಎಂದಿದ್ದರು. ದೇಶದ ಪ್ರಗತಿಗೆ ಕಾರ್ಖಾನೆಗಳು ಬೇಕು. ಆದರೆ, ಯಾವ ಭಾಗದಲ್ಲಿ ಎಷ್ಟು ಮುಖ್ಯ ಅಂತ ನೋಡಬೇಕು. ಕೊಪ್ಪಳ ತಾಲೂಕಿನಲ್ಲಿ 202 ಕಾರ್ಖಾನೆಗಳಿವೆ. ಬರೀ ಕಾರ್ಖಾನೆಗಳೇ ಇದ್ದರೆ ಜನ ಇರುವುದಾರೂ ಎಲ್ಲಿ? ಇದೇ ರೀತಿ ಕಾರ್ಖಾನೆ ಆರಂಭವಾದರೆ ಕೊಪ್ಪಳ ನರಕವಾಗುತ್ತದೆ. ತೊಟ್ಟಿಲಲ್ಲಿ ಹೋಗುವವರು ಕಡಿಮೆಯಾಗುತ್ತಾರೆ. ನರಕಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತದೆ. ಸದ್ಯ ಕೊಪ್ಪಳ ತಿಪ್ಪೆ ಆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸುತ್ತಮುತ್ತಲಿನ ಜನರ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ. ಸಣ್ಣ ಮಕ್ಕಳಿಗೆ ಕ್ಯಾನ್ಸರ್, ಅಸ್ತಮಾ ಬರುತ್ತಿದೆ. ಇರುವ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ನೀಡಬಾರದು. ಹೊಗೆ ಉಗಳುವ ಕಾರ್ಖಾನೆಗಳನ್ನು ನಮಗೆ ಕಳಿಸುವ ಕೆಲಸ ಸರ್ಕಾರ ಮಾಡಬಾರದು. ಸರ್ಕಾರ ಬಂಡವಾಳ ಶಾಹಿಗಳ ಪರವಾಗಿರದೆ, ಬಡವರ ಪರ ಇರಬೇಕು. ಸರ್ಕಾರ ತಾಯಿಯಿದ್ದಂತೆ. ವಿಷ ಹಾಕುತ್ತೀರೋ ಅಥವಾ ಅಮೃತ ಹಾಕುತ್ತಿರೋ ನಿಮಗೆ ಬಿಟ್ಟಿದ್ದು ಎಂದಿದ್ದರು. ಇದೇ ವಿಚಾರವಾಗಿ ಸ್ವಾಮೀಜಿ ಕಣ್ಣೀರು ಕೂಡ ಹಾಕಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



