ಬಸವರಾಜ ರಾಯರೆಡ್ಡಿ ಯೂಟರ್ನ್: ‘ಶರಣ ತತ್ವ ಈಸ್ ದಿ ಬೆಸ್ಟ್’! ಇಸ್ಲಾಂ ಧರ್ಮ ಕುರಿತ ಹೇಳಿಕೆ ವಿವಾದಕ್ಕೀಡಾದ ಬೆನ್ನಲ್ಲೇ ಸ್ಪಷ್ಟನೆ

Basavaraj Rayareddy Controversy: ಇಸ್ಲಾಂ ಧರ್ಮದ ಕುರಿತು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಸಚಿವ ಬಸವರಾಜ ರಾಯರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಎಲ್ಲ ಧರ್ಮಗಳೂ ಶ್ರೇಷ್ಠ, ಇಸ್ಲಾಂನಲ್ಲಿರುವ ಉತ್ತಮ ವಿಚಾರಗಳ ಬಗ್ಗೆ ಮಾತನಾಡಿದ್ದೇನೆ ಎಂದ ಅವರು, ಯಾವುದೇ ಧರ್ಮವನ್ನು ಕೀಳು ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಸವರಾಜ ರಾಯರೆಡ್ಡಿ ಯೂಟರ್ನ್: ‘ಶರಣ ತತ್ವ ಈಸ್ ದಿ ಬೆಸ್ಟ್’! ಇಸ್ಲಾಂ ಧರ್ಮ ಕುರಿತ ಹೇಳಿಕೆ ವಿವಾದಕ್ಕೀಡಾದ ಬೆನ್ನಲ್ಲೇ ಸ್ಪಷ್ಟನೆ
ಬಸವರಾಜ ರಾಯರೆಡ್ಡಿ
Image Credit source: tv9
Edited By:

Updated on: Aug 31, 2026 | 7:15 AM

ಕೊಪ್ಪಳ, ಆಗಸ್ಟ್ 31: ಇಸ್ಲಾಂ ಧರ್ಮದ ಕುರಿತು ತಾವು ನೀಡಿದ್ದ ಹೇಳಿಕೆ (Islam Remark) ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಸಚಿವ ಬಸವರಾಜ ರಾಯರೆಡ್ಡಿ (Basavaraj Rayareddy) ಸ್ಪಷ್ಟನೆ ನೀಡಿದ್ದಾರೆ. ಯಲಬುರ್ಗಾ ಪಟ್ಟಣದಲ್ಲಿ ಮಾತನಾಡಿದ ಅವರು, ತಾವು ಯಾವುದೇ ಧರ್ಮವನ್ನು ಕಡಿಮೆ ಎಂದು ಹೇಳಿಲ್ಲ. ಎಲ್ಲ ಧರ್ಮಗಳಲ್ಲಿರುವ ಉತ್ತಮ ವಿಚಾರಗಳನ್ನು ಗೌರವಿಸುವುದಾಗಿ ಹೇಳಿದ್ದಾರೆ. ಸಾಂದರ್ಭಿಕವಾಗಿ ಮಾತನಾಡುವ ವೇಳೆ ಇಸ್ಲಾಂ ಧರ್ಮದಲ್ಲಿರುವ ಕೆಲವು ಉತ್ತಮ ವಿಚಾರಗಳ ಬಗ್ಗೆ ಹೇಳಿದ್ದಾಗಿ ರಾಯರೆಡ್ಡಿ ತಿಳಿಸಿದ್ದಾರೆ. “ಎಲ್ಲ ಧರ್ಮಗಳೂ ಶ್ರೇಷ್ಠ ಎಂದು ನಾನು ಹೇಳಿದ್ದೇನೆ. ಇಸ್ಲಾಂ ಧರ್ಮದಲ್ಲೂ ಶ್ರೇಷ್ಠ ವಿಚಾರಗಳಿವೆ ಎಂದು ಹೇಳಿದ್ದೇನೆ. ಬೇರೆ ಧರ್ಮಗಳು ಕಡಿಮೆ ಎಂದು ಹೇಳಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯಾವುದೇ ನಿರ್ದಿಷ್ಟ ಧರ್ಮದ ಅನುಯಾಯಿ ಅಲ್ಲ ಎಂದಿರುವ ರಾಯರೆಡ್ಡಿ, ಇಸ್ಲಾಂ, ಕ್ರೈಸ್ತ ಮತ್ತು ಯಹೂದಿ ಧರ್ಮಗಳ ಕುರಿತು ಅಧ್ಯಯನ ಮಾಡುವುದಾಗಿ ಹೇಳಿದ್ದಾರೆ. ವಿವಿಧ ಧರ್ಮಗಳ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿರುವುದಾಗಿಯೂ ತಿಳಿಸಿದ್ದು, ಹಜ್ ಯಾತ್ರೆಗೆ ತೆರಳುವ ಆಸೆ ವ್ಯಕ್ತಪಡಿಸಿದ್ದರೂ ಸದ್ಯ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಶರಣ ತತ್ವವೇ ಶ್ರೇಷ್ಠ ಎಂದ ರಾಯರೆಡ್ಡಿ

ವಿವಾದದ ನಡುವೆ ಬಸವಣ್ಣನ ವಚನವನ್ನು ಉಲ್ಲೇಖಿಸಿದ ರಾಯರೆಡ್ಡಿ, “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ಎಂಬ ಶರಣ ತತ್ವವನ್ನು ಪ್ರಸ್ತಾಪಿಸಿದರು. ಮನುಷ್ಯತ್ವ ಮತ್ತು ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂಬ ನಿಲುವನ್ನು ಅವರು ವ್ಯಕ್ತಪಡಿಸಿದರು. ತಾವು ಮಠ-ಮಾನ್ಯಗಳಿಗೆ ನಿಯಮಿತವಾಗಿ ಹೋಗುವುದಿಲ್ಲ. ಆದರೆ ತಮ್ಮೊಂದಿಗೆ ಇರುವವರು ಅಥವಾ ಕುಟುಂಬದವರು ಆಹ್ವಾನಿಸಿದಾಗ ಅವರ ಒತ್ತಾಯದ ಮೇರೆಗೆ ಹೋಗುವುದಾಗಿ ಹೇಳಿದ್ದಾರೆ.

ಇದೇ ವೇಳೆ ಹಿಂದೂ ಧರ್ಮದ ಕುರಿತು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ರಾಯರೆಡ್ಡಿ, ಧರ್ಮಗಳ ಇತಿಹಾಸ ಮತ್ತು ಅವುಗಳ ವಿಚಾರಧಾರೆಗಳ ಬಗ್ಗೆ ತಾವು ಅಧ್ಯಯನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ವೇತನ, ಸೌಲಭ್ಯಗಳ ಕುರಿತು ಕೇಳಿಬಂದ ಟೀಕೆಗಳಿಗೂ ಪ್ರತಿಕ್ರಿಯೆ

ತಮ್ಮ ವೇತನ ಮತ್ತು ಸೌಲಭ್ಯಗಳ ಕುರಿತು ಕೇಳಿಬಂದ ಟೀಕೆಗಳಿಗೂ ರಾಯರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಇದುವರೆಗೆ ಶಾಸಕರ ವೇತನ ಪಡೆದಿಲ್ಲ, ಪ್ರಯಾಣ ಭತ್ಯೆಯನ್ನೂ ಪಡೆದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಜನರು ಮನೆಗೆ ಭೇಟಿ ನೀಡುವುದರಿಂದ ಸ್ವಚ್ಛತೆ ಸೇರಿದಂತೆ ಅಗತ್ಯ ನಿರ್ವಹಣೆಗೆ ಸಂಬಂಧಿಸಿದ ಹೌಸ್ ಮೆಂಟೆನೆನ್ಸ್ ಸೌಲಭ್ಯ ಪಡೆದಿರುವುದಾಗಿ ತಿಳಿಸಿದ್ದಾರೆ.

ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ರಾಯರೆಡ್ಡಿ, ನಾಗೇಂದ್ರ ರಾಜೀನಾಮೆ ನೀಡುವ ಪ್ರಮೇಯವೇ ಇರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ನಡೆದ ಗದ್ದಲದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಏನು ಹೇಳಿದ್ದರು ಬಸವರಾಜ ರಾಯರೆಡ್ಡಿ?

ಕುಕನೂರಿನಲ್ಲಿ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವ ಬಸವರಾಜ ರಾಯರೆಡ್ಡಿ, ಇಸ್ಲಾಂ ಧರ್ಮದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇಸ್ಲಾಂ ಮಾನವೀಯ ಮೌಲ್ಯಗಳನ್ನು ಒಳಗೊಂಡ ಶ್ರೇಷ್ಠ ಧರ್ಮವಾಗಿದ್ದು, ಕುರಾನ್ ಅಧ್ಯಯನಕ್ಕೂ ತಾವು ಸಿದ್ಧ ಎಂದು ಹೇಳಿದ್ದರು. ಹಜ್ ಯಾತ್ರೆಗೆ ತೆರಳುವ ಆಸೆಯನ್ನೂ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಬೇರೆ ಎಲ್ಲಾ ಧರ್ಮಗಳಿಗಿಂತಲೂ ಇಸ್ಲಾಂ ಧರ್ಮ ಶ್ರೇಷ್ಠ: ಹಜ್ ಯಾತ್ರೆಗೆ ಹೋಗುವ ಆಸೆ ಬಿಚ್ಚಿಟ್ಟ ರಾಯರೆಡ್ಡಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us