ಸಾಮರಸ್ಯ ಸಂದೇಶ ಸಾರಸಲು ಆನೆಗೊಂದಿಯಿಂದ ಅಂಜನಾದ್ರಿಗೆ ಕಾಂಗ್ರೆಸ್ಸಿಗರ ಪಾದಯಾತ್ರೆ; ವೀಣಾ ಕಾಶಪ್ಪನವರ್ ನೇತೃತ್ವ
ಹನುಮನ ಹುಟ್ಟಿದ ಸ್ಥಳ ಕೊಪ್ಪಳದಲ್ಲಿರುವ ಅಂಜನಾದ್ರಿ ಪರ್ವತವೋ, ತಿರುಪತಿಯಲ್ಲಿರುವ ಅಂಜನಾದ್ರಿ ಪರ್ವತವೋ ಎಂಬ ಗೊಂದಲ ಇದೆ. ತಿರುಪತಿಯ ತಿರುಮಲದಲ್ಲಿರುವ ಅಂಜನಾದ್ರಿ ಪರ್ವತವೇ ಹನುಮಂತನ ಜನ್ಮ ಸ್ಥಳ ಎಂಬುದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ವಾದವಾಗಿತ್ತು.
ಕೊಪ್ಪಳ: ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್ ನೇತೃತ್ವದಲ್ಲಿ ಇಂದು ಇಲ್ಲಿ ಸಾಮರಸ್ಯ ನಡಿಗೆ ಹೆಸರಿನ ಪಾದಯಾತ್ರೆ ನಡೆದಿದೆ. ಸೌಹಾರ್ದತೆ ಸಾರುವ ನಿಟ್ಟಿನಲ್ಲಿ ಇಂದು ಆನೆಗೊಂದಿಯಿಂದ-ಅಂಜನಾದ್ರಿವರೆಗೆ ನಡೆದ ಪಾದಯಾತ್ರೆಯಲ್ಲಿ ವೀಣಾ ಕಾಶಪ್ಪನವರ್ ಜತೆಗೆ ಸ್ಥಳೀಯ ಕಾಂಗ್ರೆಸ್ ನಾಯಕರೂ ಹೆಜ್ಜೆ ಹಾಕಿದರು. ಅವರ ಅನೇಕ ಬೆಂಬಲಿಗರು ಸಾಥ್ ನೀಡಿದರು. ಆನೆಗೊಂದಿಯಲ್ಲಿರುವ ದುರ್ಗಾದೇವಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಾದಯಾತ್ರೆ ಪ್ರಾರಂಭ ಮಾಡಿದ ಕಾಂಗ್ರೆಸ್ ನಾಯಕರು, ಆಂಜನೇಯ ದೇವರು ಹುಟ್ಟಿದ ಸ್ಥಳವೆಂದೇ ಪ್ರಸಿದ್ಧಿ ಪಡೆದ ಅಂಜನಾದ್ರಿವರೆಗೆ ಈ ಸಾಮರಸ್ಯ ನಡಿಗೆ ನಡೆದಿದ್ದಾರೆ. ಈ ಸಾಮರಸ್ಯ ನಡಿಗೆಯಲ್ಲಿ ಇಕ್ಬಾಲ್ ಅನ್ಸಾರಿ ಬೆಂಬಲಿಗ ಶ್ಯಾಮೀದ್ ಮನಿಯಾರ್ ಕೂಡ ಪಾಲ್ಗೊಂಡಿದ್ದರು. ಕೇಸರಿ ಶಾಲು ಧರಿಸಿ ಪಾದಯಾತ್ರೆ ನಡೆಸಿ, ಗಮನ ಸೆಳೆದರು. ಸದ್ಯ ರಾಜ್ಯದಲ್ಲಿ ಸೌಹಾರ್ದತೆ ಕದಡುವ ಒಂದಲ್ಲ ಒಂದು ಘಟನೆಗಳು, ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅದೆಲ್ಲ ನಿಯಂತ್ರಣವಾಗಬೇಕು ಎಂಬ ಸಂದೇಶವನ್ನು ಹೊತ್ತ ಪಾದಯಾತ್ರೆ ಇದಾಗಿದೆ.
ಪಾದಯಾತ್ರೆ ಬಗ್ಗೆ ಎರಡು ದಿನಗಳ ಹಿಂದೆ ಮಾಹಿತಿ ನೀಡಿದ್ದ ವೀಣಾ ಕಾಶಪ್ಪನವರ್, ನಾವು ಯಾವುದೇ ಪಕ್ಷದಿಂದ ಈ ಪಾದಯಾತ್ರೆ ನಡೆಸುತ್ತಿಲ್ಲ. ಸಮಾಜದಲ್ಲಿ ಸಾಮರಸ್ಯ ಮೂಡಬೇಕು ಎಂಬ ಆಶಯದಿಂದ, ಆ ಬಗ್ಗೆ ಸಂದೇಶ ಸಾರಲು ಈ ಸಾಮರಸ್ಯ ನಡಿಗೆ ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದ್ದರು. ಹಾಗೇ, ಕೊಪ್ಪಳದಲ್ಲಿರುವ ಅಂಜನಾದ್ರಿ ಪರ್ವತವೇ ಹನುಮನ ಜನ್ಮ ಸ್ಥಳ. ಈ ಬಗ್ಗೆ ದಾಖಲೆಗಳೂ ಇವೆ. ಸರ್ಕಾರ ಇದನ್ನೆಲ್ಲ ಪರಿಗಣಿಸಿ, ಸದ್ಯ ಇರುವ ವಿವಾದಕ್ಕೆ ಕೊನೆ ಹಾಡಬೇಕು ಎಂದೂ ಆಗ್ರಹಿಸಿದ್ದರು.
ಹನುಮನ ಹುಟ್ಟಿದ ಸ್ಥಳ ಕೊಪ್ಪಳದಲ್ಲಿರುವ ಅಂಜನಾದ್ರಿ ಪರ್ವತವೋ, ತಿರುಪತಿಯಲ್ಲಿರುವ ಅಂಜನಾದ್ರಿ ಪರ್ವತವೋ ಎಂಬ ಗೊಂದಲ ಇದೆ. ತಿರುಪತಿಯ ತಿರುಮಲದಲ್ಲಿರುವ ಅಂಜನಾದ್ರಿ ಪರ್ವತವೇ ಹನುಮಂತನ ಜನ್ಮ ಸ್ಥಳ ಎಂಬುದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ವಾದವಾಗಿತ್ತು. ಅಲ್ಲೊಂದು ಹನುಮನ ದೇಗುಲ ನಿರ್ಮಾಣಕ್ಕೂ ಅದು ಮುಂದಾಗಿತ್ತು. ಆದರೆ ಫೆಬ್ರವರಿಯಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಇದಕ್ಕೆ ತಡೆ ನೀಡಿದೆ. ಏಳುಬೆಟ್ಟಗಳಲ್ಲಿ ಯಾವುದೇ ದೇವರ ಪ್ರತಿಮೆ ನಿರ್ಮಾಣ ಮಾಡಲು ಅವಕಾಶವಿಲ್ಲ ಮತ್ತು ಇಲ್ಲಿರುವ ಅಂಜನಾದ್ರಿಯೇ ಹನುಮಂತನ ಹುಟ್ಟು ಎಂಬುದಕ್ಕೆ ಸರಿಯಾದ ಪುರಾವೆಯೇ ಇಲ್ಲ ಎಂದೂ ಹೈಕೋರ್ಟ್ ಹೇಳಿದೆ. ಇತ್ತ ಕೊಪ್ಪಳದಲ್ಲಿರುವ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ ಎಂದು ಇಲ್ಲಿನವರು ಪ್ರತಿಪಾದಿಸುತ್ತಿದ್ದಾರೆ.
ಇದನ್ನೂ ಓದಿ: ಜಿನ್ನಾ ಮನಸ್ಥಿತಿಯವರಿಂದ ಉಂಟಾಗುತ್ತಿರುವ ಗಲಭೆಗಳನ್ನು ಸಾವರ್ಕರ್ ಮನಸ್ಥಿತಿಯಿಂದಲೇ ಎದುರಿಸಬೇಕು: ಸಿ.ಟಿ.ರವಿ