ತುಂಗಭದ್ರಾ ಡ್ಯಾಂ ಕ್ರೆಸ್ಟ್​ ಗೇಟ್​ ಅಳವಡಿಕೆಗೆ ನೀಡಿದ್ದ 10 ಕೋಟಿ ರೂ. ವಾಪಸ್ ಪಡೆಯಿತಾ ಸರ್ಕಾರ? ಬಿಜೆಪಿ ಗಂಭೀರ ಆರೋಪ

ತುಂಗಭದ್ರಾ ಜಲಾಶಯ 4 ಜಿಲ್ಲೆಗಳ ಜನರ ಜೀವನಾಡಿ. ಡ್ಯಾಂಗೆ 32 ಕ್ರೆಸ್ಟ್​ ಗೇಟ್ ಅಳವಡಿಕೆ ಕಾಮಗಾರಿ ಆರಂಭವಾಗಿದೆ. ಆದರೆ ಗೇಟ್​ ಅಳವಡಿಕೆಗೆ ನೀಡಲಾಗಿದ್ದ 10 ಕೋಟಿ ರೂಪಾಯಿಯನ್ನು ವಾಪಸ್ ಪಡೆದಿರುವ ಆರೋಪ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿಬಂದಿದೆ. ಇದೇ ವಿಚಾರ ಇದೀಗ ಬಿಜೆಪಿ ಹಾಗೂ ಸರ್ಕಾರದ ನಡುವೆ ವಾಗ್ಯುದ್ಧ ಸೃಷ್ಟಿಸಿದೆ.

ತುಂಗಭದ್ರಾ ಡ್ಯಾಂ ಕ್ರೆಸ್ಟ್​ ಗೇಟ್​ ಅಳವಡಿಕೆಗೆ ನೀಡಿದ್ದ 10 ಕೋಟಿ ರೂ. ವಾಪಸ್ ಪಡೆಯಿತಾ ಸರ್ಕಾರ? ಬಿಜೆಪಿ ಗಂಭೀರ ಆರೋಪ
ತುಂಗಭದ್ರಾ ಡ್ಯಾಂ ಕ್ರೆಸ್ಟ್​ ಗೇಟ್​ ಅಳವಡಿಕೆ ಕಾಮಗಾರಿ
Edited By:

Updated on: Jan 27, 2026 | 7:53 AM

ಕೊಪ್ಪಳ, ಜನವರಿ 27: ತುಂಗಭದ್ರಾ ಜಲಾಶಯ (Tungabhadra Dam) 4 ಜಿಲ್ಲೆಯ ಜನರ ದಾಹ ನೀಗಿಸುವ, ಅನ್ನದಾತರ ಬದುಕನ್ನು ಹಸಿರಾಗಿಸುವ ಒಡಲು. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯ ಟಿಬಿ ಡ್ಯಾಮ್​ ಗೇಟ್ ಅಳವಡಿಕೆಯ ವಿಚಾರ ಮತ್ತೊಮ್ಮೆ ಸದ್ದು ಮಾಡಿದೆ. ಮಳೆಗಾಲದಲ್ಲಿ ಜಲಾಶಯದ 19ನೇ ಕ್ರೆಸ್ಟ್​ ಗೇಟ್ ಕೊಚ್ಚಿ ಹೋಗಿತ್ತು. ಅಲ್ಲದೇ, ಜಲಾಶಯದ 6 ಗೇಟ್​ಗಳಿಗೆ ಹಾನಿಯಾಗಿವೆ ಎಂಬುದು ತಿಳಿದುಬಂದಿತ್ತು. ಹೀಗಾಗಿ ರಾಜ್ಯ ಸರ್ಕಾರ 54 ಕೋಟಿ ರೂ. ವೆಚ್ಚದಲ್ಲಿ 33 ಕ್ರೆಸ್ಟ್ ಗೇಟ್​ಗಳ ಬದಲಾವಣೆಗೆ ಆದೇಶ ನೀಡಿತ್ತು. ಗುಜರಾತ್ ಮೂಲದ ಕಂಪನಿಗೆ ಗೇಟ್ ಅಳವಡಿಕೆಗೆ ಟೆಂಡರ್ ನೀಡಲಾಗಿದ್ದು ಡಿಸೆಂಬರ್​​​ನಲ್ಲಿ ಕಾಮಗಾರಿ ಆರಂಭವಾಗಿದೆ.

ಗೇಟ್ 18ಕ್ಕೆ ಮಾತ್ರ ಕ್ರೆಸ್ಟ್ ಗೇಟ್ ಅಳವಡಿಕೆ ಯಶಸ್ವಿಯಾಗಿದೆ. ಇನ್ನೂ 32 ಕ್ರೆಸ್ಟ್ ಗೇಟ್ ಅಳವಡಿಕೆ ಬಾಕಿ ಇದೆ. ಗೇಟ್ ಕಾಮಗಾರಿಗೆ ನೀಡಿದ್ದ 10 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಇದನ್ನೇ ಬಿಜೆಪಿ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ.

ಆಂಧ್ರ, ತೆಲಂಗಾಣದಿಂದಲೂ ಹಣ

ರಾಜ್ಯ ಸರ್ಕಾರ ಟಿಬಿ ಜಲಾಶಯದ ಕ್ರೆಸ್ಟ್ ಗೇಟ್ ಅಳವಡಿಕೆ ಕಾಮಗಾರಿಗೆ 10 ಕೋಟಿ ರೂ. ನೀಡಿತ್ತು. ಇನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರ 25 ಕೋಟಿ ರೂ. ನೀಡಿವೆ ಎನ್ನಲಾಗಿದೆ. ಆದರೆ ರಾಜ್ಯ ಸರ್ಕಾರ ಮಾತ್ರ 10 ಕೋಟಿ ರೂ. ವಾಪಸ್ ಪಡೆದಿದೆ ಎಂಬ ಆರೋಪವಿದೆ. ಅಧಿಕಾರಿಗಳು, ಎಲ್ಲವೂ ಟಿಬಿ ಬೋರ್ಡ್​​ಗೆ ಗೊತ್ತಿದೆ ಎನ್ನುತ್ತಿದ್ದಾರೆ.

ಏತನ್ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ಆರೋಪವನ್ನು
ತಳ್ಳಿಹಾಕಿದ್ದು ನಾವು ಹಣ ವಾಪಸ್ ಪಡೆದಿಲ್ಲ. ಆದರೆ ಖಜಾನೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಆಗಿದ್ದರೂ ಹಣ ಕೊಡಲೇಬೇಕು. ಫೆಬ್ರವರಿ ಅಂತ್ಯಕ್ಕೆ 6 ಕ್ರೆಸ್ಟ್ ಗೇಟ್​​ ಫಿಕ್ಸ್ ಮಾಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಮೊದಲ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ: ಅದರ ಭಾರ, ಅಗಲ-ಉದ್ದ ಎಷ್ಟು ಗೊತ್ತಾ?

ಈಗಾಗಲೇ 2ನೇ ಬೆಳೆಗೆ ಟಿಬಿ ಡ್ಯಾಮ್​ನಿಂದ ರೈತರಿಗೆ ನೀರು ಕೊಟ್ಟಿಲ್ಲ. ಹಣ ನೀಡದಿದ್ದರೆ ಕಾಮಗಾರಿ ವಿಳಂಬ ಆಗಲಿದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಹಣ ವಾಪಸ್ ಪಡೆದಿರುವ ಆರೋಪದಿಂದ ಇದೀಗ ರಾಜಕೀಯ ಕದನ ಏರ್ಪಟ್ಟಿದ್ದು, ಇದು ಇನ್ಯಾವ ಹಂತಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ