ಕೊಪ್ಪಳ: ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿ ಮುಸ್ಲಿಂ ವೃದ್ಧನಿಗೆ ಥಳಿತ, ದೂರು ದಾಖಲು
ಹುಸೇನ್ಸಾಬ್ ಎಂಬುವರು ನವೆಂಬರ್ 25ರ ರಾತ್ರಿ ಹೊಸಪೇಟೆಯಿಂದ ಗಂಗಾವತಿಗೆ ಬಂದಿದ್ದಾರೆ. ಒಂದು ಲೋಟ ಚಹಾ ಕುಡಿದು ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಎಲ್ಲಿಗೆ ಹೋಗಬೇಕೆಂದು ಹುಸೇನ್ಸಾಬ್ ಅವರನ್ನು ಪ್ರಶ್ನಿಸಿದ್ದಾರೆ. ನಂತರ ನಾವೇ ಡ್ರಾಪ್ ಮಾಡುವುದಾಗಿ ಹೇಳಿ ಬೈಕ್‌ನಲ್ಲಿ ಹತ್ತಿಸಿಕೊಂಡಿದ್ದಾರೆ. ಮುಂದೇನಾಯ್ತು ಸ್ಟೋರಿ ಓದಿ...
ಕೊಪ್ಪಳ ಡಿ.01: ಗಂಗಾವತಿ (Gangavati) ಪಟ್ಟಣದಲ್ಲಿ 65 ವರ್ಷದ ಮುಸ್ಲಿಂ (Muslim) ವ್ಯಕ್ತಿಗೆ ಅಪರಿಚಿತ ಇಬ್ಬರು ಮನಬಂತೆ ಥಳಿಸಿ, ಜೈ ಶ್ರೀರಾಮ (Sri Ram) ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ. ಹುಸೇನ್ಸಾಬ್ (65) ಹಲ್ಲೆಗೊಳಗಾದ ವೃದ್ಧ. ಸಂತ್ರಸ್ತ ಹುಸೇನ್ಸಾಬ್ ನವೆಂಬರ್ 30 ರಂದು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿದ್ದಾರೆ. ಹುಸೇನ್ಸಾಬ್ ಅವರು ನವೆಂಬರ್ 25ರ ರಾತ್ರಿ ಹೊಸಪೇಟೆಯಿಂದ ಗಂಗಾವತಿಗೆ ಬಂದಿದ್ದಾರೆ. ಒಂದು ಲೋಟ ಚಹಾ ಕುಡಿದು ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಎಲ್ಲಿಗೆ ಹೋಗಬೇಕೆಂದು ಹುಸೇನ್ಸಾಬ್ ಅವರನ್ನು ಪ್ರಶ್ನಿಸಿದ್ದಾರೆ.
ನಂತರ ನಾವೇ ಡ್ರಾಪ್ ಮಾಡುವುದಾಗಿ ಹೇಳಿ ಬೈಕ್‌ನಲ್ಲಿ ಹತ್ತಿಸಿಕೊಂಡಿದ್ದಾರೆ. ದಾರಿ ಮಧ್ಯೆ ಅಪರಿಚಿತ ಇಬ್ಬರೂ ಹುಸೇನ್‌ಸಾಬ್ ಅವರಿಗೆ ಥಳಿಸಲು ಆರಂಭಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಹುಸೇನ್ಸಾಬ್ ಅವರನ್ನು ಪಂಪಾನಗರ ಪ್ರದೇಶದ ಬಳಿ ಕರೆದೊಯ್ದು ಬೈಕ್ನಿಂದ ಕೆಳೆಗೆ ನೂಗಿ, ನಿಂದಿಸಲು ಪ್ರಾರಂಭಿಸಿದ್ದಾರೆ.
ನನಗೆ ಕಣ್ಣು ಕಾಣುವುದಿಲ್ಲ, ದಯವಿಟ್ಟ ನನ್ನನ್ನು ಬಿಟ್ಟುಬಿಡಿ. ನಾನು ಮನೆಗೆ ಹೋಗುತ್ತೇನೆ ಎಂದು ಹುಸೇನ್ಸಾಬ್ ಮನವಿ ಮಾಡಿದ್ದಾರೆ. ಈ ವೇಳೆ ಅಪರಿಚಿತ ಇಬ್ಬರು ವ್ಯಕ್ತಿಗಳು ಜೈ ಶ್ರೀರಾಮ್ ಎಂದು ಕೂಗುವಂತೆ ಒತ್ತಾಯಿಸಿದ್ದಾರೆ. ಹುಸೇನ್ಸಾಬ್ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಘೋಷಣೆ ಕೂಗಿದರೂ ಬಿಡದ ದುಷ್ಕರ್ಮಿಗಳು ಮತ್ತೆ ಹಲ್ಲೆ ಮಾಡಲು ಆರಂಭಿಸಿದ್ದಾರೆ.
ದುಷ್ಕರ್ಮಿಗಳು ಬಿಯರ್ ಬಾಟಲಿಯನ್ನು ಒಡೆದು ಗಾಜಿನ ತುಂಡಿನಿಂದ ಹುಸೇನ್ಸಾಬ್ ಅವರ ಗಡ್ಡವನ್ನು ಕತ್ತರಿಸಲು ಪ್ರಯತ್ನಿಸಿದರು. ಇದು ಸಾಧ್ಯವಾಗದಿದ್ದಾಗ ಓರ್ವ ದುಷ್ಕರ್ಮಿ ಬೆಂಕಿಕಡ್ಡಿಯನ್ನು ಗೀರಿ ಹುಸೇನ್ಸಾಬ್ ಅವರ ಗಡ್ಡವನ್ನು ಸುಟ್ಟಿದ್ದಾನೆ. ಆಗ ಹುಸೇನ್ಸಾಬ್ ಕಿರುಚಾಡಲು ಆರಂಭಿಸಿದರು. ಹುಸೇನ್ಸಾಬ್ ಅವರ ಕಿರುಚಾಟ ಕೇಳಿದ ಕೂಡಲೆ ಸ್ಥಳೀಯರು ಹುಸೇನ್ಸಾಬ್ ನೆರವಿಗೆ ಆಗಮಿಸಿದ್ದಾರೆ. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡ: ಮುಸ್ಲಿಂ ವ್ಯಕ್ತಿ ಜಾಗದಲ್ಲಿ ದೇವಸ್ಥಾನ ಪತ್ತೆ; ಅಲ್ಲಿಯೇ ನಾಗ ಸಾನಿಧ್ಯದ ಸುಳಿವು ಗೋಚರ
ಪ್ರಕರಣ ಸಂಬಂಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹುಸೇನ್ಸಾಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ನಿಲ್ದಾಣ, ಮುಖ್ಯರಸ್ತೆ, ಪಂಪಾನಗರದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಸಂತ್ರಸ್ತ ಹುಸೇನಸಾಬ್ ತನ್ನ ಮಗಳೊಂದಿಗೆ ಗಂಗಾವತಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದಾನೆ. ದೃಷ್ಟಿ ಹೀನವಾಗುತ್ತಿರುವುದರಿಂದ ಕಳೆದ ಕೆಲ ತಿಂಗಳಿಂದ ಕೊಪ್ಪಳ, ವಿಜಯನಗರ ಜಿಲ್ಲೆಗಳ ಹಲವೆಡೆ ಭಿಕ್ಷಾಟನೆ ನಡೆಸುತ್ತಿದ್ದಾರೆ.
ಹುಸೇನ್ಸಾಬ್ ಅವರ ಮೇಲಿನ ಹಲ್ಲೆ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸದಸ್ಯರು ಗಂಗಾವತಿಯಲ್ಲಿರುವ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಎಲ್ಲ ವರ್ಗದ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ವಯೋವೃದ್ಧರನ್ನು ಥಳಿಸಿ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಬಲವಂತ ಮಾಡಿರುವುದು ಕ್ರೂರತನ. ಹುಸೇನ್ಸಾಬ್ ಅವರ ಮೇಲೆ ಹಲ್ಲೆ ಮತ್ತು ಮಾನಸಿಕ ಹಿಂಸೆಗೆ ಕಾರಣರಾದ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಹುಸೇನ್ಸಾಬ್ ಅವರ ಚಿಕಿತ್ಸಾ ವೆಚ್ಚವನ್ನು ಎಸ್‌ಡಿಪಿಐ ಭರಿಸಲು ನಿರ್ಧರಿಸಿದೆ ಎಂದು ಕೊಪ್ಪಳದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸಲೀಂ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ